ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮ ವಿವಾಹಕ್ಕೆ ದುರಂತ ತಿರುವು

ಯುವಕನ ತಂದೆ ಹೃದಯಾಘಾತದಿಂದ ಸಾವು
Last Updated 5 ಸೆಪ್ಟೆಂಬರ್ 2013, 6:11 IST
ಅಕ್ಷರ ಗಾತ್ರ

ಮಡಿಕೇರಿ: ಬೆಂಗಳೂರಿನ ಯುವತಿಯ ಜೊತೆ ಪ್ರೇಮ ವಿವಾಹ ಮಾಡಿಕೊಂಡಿದ್ದ ಮಗನನ್ನು ಅಪಹರಣ ಪ್ರಕರಣದಡಿ ಪೊಲೀಸರು ಬಂಧಿಸಿ ಕರೆದುಕೊಂಡು ಹೋಗಿದ್ದರಿಂದ ತೀವ್ರವಾಗಿ ನೊಂದಿದ್ದ ವೃದ್ಧ ತಂದೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಬೆಳಗಿನ ಜಾವ ಹೃದಯಾಘಾತದಿಂದ ಮೃತಪಟ್ಟರು.

ಇಲ್ಲಿಗೆ ಸಮೀಪದ ಮೂರ್ನಾಡಿನ ನಿವಾಸಿ ದೇವಿಪ್ರಸಾದ್ ಅವರು ಬೆಂಗಳೂರಿನ ರಮ್ಯಾ ಅವರನ್ನು ಮದುವೆಯಾಗಿದ್ದರು. ಇದನ್ನು ವಿರೋಧಿಸಿದ್ದ ಯುವತಿಯ ಕುಟುಂಬದ ಸದಸ್ಯರು ಹಾಗೂ ಅವರ ಜೊತೆ ಬಂದಿದ್ದ ಬೆಂಗಳೂರಿನ ಸಿದ್ದಾಪುರ ಠಾಣೆಯ ಪೊಲೀಸರು ಸೋಮವಾರ ಯುವಕನ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದರು.

ಈ ತಳ್ಳಾಟದಲ್ಲಿ ಯುವಕನ ತಂದೆ ಸೋಮಶೇಖರ್ (73) ತೀವ್ರವಾಗಿ ಅಸ್ವಸ್ಥರಾದರು. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತು. ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆಯನ್ನೂ ಹೊಂದಿದ್ದ ಸೋಮಶೇಖರ್ ಅವರು, ಪುತ್ರನ ಬಂಧನದಿಂದ ಇನ್ನಷ್ಟು ಆಘಾತಕ್ಕೆ ಒಳಗಾದರು. ಬುಧವಾರ ರಾತ್ರಿ 1 ಗಂಟೆ ಸುಮಾರಿಗೆ ಮೃತಪಟ್ಟರು. `ಹೃದಯಾಘಾತದಿಂದ ಸಾವು ಸಂಭವಿಸಿದೆ' ಎಂದು ವೈದ್ಯರು ತಿಳಿಸಿದ್ದಾರೆ. 

ತೀವ್ರ ಪ್ರತಿಭಟನೆ:  ಘಟನೆ ತಿಳಿಯುತ್ತಿದ್ದಂತೆ ಯುವಕನ ಕುಟುಂಬದ ಸದಸ್ಯರು ಹಾಗೂ ಮೂರ್ನಾಡು ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಧಾವಿಸಿ ಬಂದರು. ಘಟನೆಗೆ ಕಾರಣರಾದ ಯುವತಿಯ ಕುಟುಂಬದ ಸದಸ್ಯರು ಹಾಗೂ ಬೆಂಗಳೂರಿನ ಸಿದ್ದಾಪುರ ಪೊಲೀಸರ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಬೇಕೆಂದು ಮೃತರ ಕುಟುಂಬದ ಸದಸ್ಯರು ಒತ್ತಾಯಿಸಿದರು.

ಹಿನ್ನೆಲೆ: ಮೂರ್ನಾಡಿನ ದೇವಿಪ್ರಸಾದ್ ಹಾಗೂ ಬೆಂಗಳೂರಿನ ರಮ್ಯಾ ಅವರು ಏಳೆಂಟು ತಿಂಗಳ ಹಿಂದೆ ಫೇಸ್‌ಬುಕ್ ಮೂಲಕ ಒಬ್ಬರಿಗೊಬ್ಬರು ಪರಿಚಯವಾಗಿದ್ದರು. ನಂತರ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಯುವತಿಯ ಕುಟುಂಬದವರ ವಿರೋಧದ ನಡುವೆಯೂ ಮಡಿಕೇರಿಯ ಅಶ್ವಿನಿ ದೇವಸ್ಥಾನದಲ್ಲಿ ಮೇ ತಿಂಗಳಲ್ಲಿ ಇವರಿಬ್ಬರ ಮದುವೆಯಾಗಿತ್ತು. ಜೂನ್ 7ರಂದು ವಿವಾಹ ನೋಂದಣಿ ಕೂಡ ಮಾಡಿಸಿದ್ದರು. 

`ಆ. 28ರಂದು ರಮ್ಯಾ ಕಾಣೆಯಾಗಿದ್ದಾರೆ ಹಾಗೂ ಅವರನ್ನು ಅವರ ಪೋಷಕರು ಅಪಹರಿಸಿರುವ ಸಾಧ್ಯತೆ ಇದೆ' ಎಂದು ದೇವಿಪ್ರಸಾದ್ ಅವರು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು.

ಯುವತಿಯ ತಂದೆಯು ಬೆಂಗಳೂರಿನಲ್ಲಿ ಪೊಲೀಸ್ ಇಲಾಖೆಯಲ್ಲಿ ಹಿರಿಯ ಅಧಿಕಾರಿಯ ಜೀಪ್ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸೆಪ್ಟೆಂಬರ್ 1ರಂದು ಬೆಂಗಳೂರಿನ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೇವೀಪ್ರಸಾದ್ ವಿರುದ್ಧ ರಮ್ಯಾ ಅಪಹರಣ ಪ್ರಕರಣವನ್ನು ದಾಖಲಿಸಿದ್ದರು ಎನ್ನಲಾಗಿದೆ.

ಈ ದೂರಿನ ಆಧಾರದ ಮೇಲೆ ಸೆ. 2ರಂದು ನಸುಕಿನ 4ರ ಸುಮಾರಿಗೆ ದೇವಿಪ್ರಸಾದ್ ಅವರ ಮನೆಗೆ ಯುವತಿಯ ಕುಟುಂಬದವರು ಹಾಗೂ ಕೆಲವು ಪೊಲೀಸರು ನುಗ್ಗಿದಾಗ ತಳ್ಳಾಟ ನಡೆಯಿತು. ವಿಷಯ ತಿಳಿದು ಸ್ಥಳಕ್ಕೆ ಬಂದ ಮಡಿಕೇರಿ ಗ್ರಾಮಾಂತರ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.

ಅಪಹರಣ ದೂರಿನ ಹಿನ್ನೆಲೆಯಲ್ಲಿ ದೇವಿಪ್ರಸಾದ್ ಅವರನ್ನು ಬೆಂಗಳೂರಿನ ಸಿದ್ದಾಪುರ ಪೊಲೀಸರು ಬಂಧಿಸಿ ಕರೆದೊಯ್ದರು. ನಂತರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ, ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ತಂದೆಯ ಸಾವಿನ ಹಿನ್ನೆಲೆಯಲ್ಲಿ ದೇವಿಪ್ರಸಾದ್ ಅವರನ್ನು ಪೆರೋಲ್ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ದೇವಿಪ್ರಸಾದ್ ಮೂರ್ನಾಡಿಗೆ ಬುಧವಾರ ಮಧ್ಯರಾತ್ರಿ ತಲುಪುವ ಸಾಧ್ಯತೆ ಇದ್ದು, ನಂತರವಷ್ಟೇ ತಂದೆಯ ಶವಸಂಸ್ಕಾರ ನಡೆಯಲಿದೆ.

ನಿಷ್ಪಕ್ಷಪಾತ ತನಿಖೆ: ಐಜಿಪಿ ಭರವಸೆ

ಮಡಿಕೇರಿ: `ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ತನಿಖೆ ಕೈಗೊಳ್ಳುತ್ತೇನೆ. ಬೆಂಗಳೂರಿನ ಪೊಲೀಸರಾಗಲೀ, ಬೇರೆ ಯಾರೇ ಆಗಿರಲಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ, ಮೇಲಧಿಕಾರಿಗೆ ವರದಿ ನೀಡುತ್ತೇನೆ' ಎಂದು ಮೈಸೂರು ವಲಯದ ಐಜಿಪಿ ರಾಮಚಂದ್ರರಾವ್ ಹೇಳಿದರು.

ಇಲ್ಲಿನ ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಬುಧವಾರ ಭೇಟಿ ನೀಡಿ, ಸೋಮಶೇಖರ್ ಅವರ ಶವವನ್ನು ವೀಕ್ಷಿಸಿದ ನಂತರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. `ಬೆಂಗಳೂರಿನ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಯುವಕನ ವಿರುದ್ಧ ಅಪಹರಣ ಪ್ರಕರಣ ದಾಖಲಾಗಿರುವ ವಿಷಯ ಗಮನಕ್ಕೆ ಬಂದಿದೆ. ಮೃತನ ಕುಟುಂಬಸ್ಥರು ಹೇಳಿದ್ದನ್ನು ಕೇಳಿದ್ದೇನೆ. ವಿಸ್ತೃತವಾಗಿ ತನಿಖೆ ಕೈಗೊಂಡು ವರದಿ ನೀಡುತ್ತೇನೆ' ಎಂದು ಭರವಸೆ ನೀಡಿದರು.

ಹೆಚ್ಚಿನ ಮಾಹಿತಿ ಇಲ್ಲ
(ಬೆಂಗಳೂರು ವರದಿ): `ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಘಟನೆ ಸಂಬಂಧ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತನಿಖೆ ನಡೆಸುತ್ತಿದ್ದಾರೆ' ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ರಾಘವೇಂದ್ರ ಔರಾದಕರ್ ಹೇಳಿದ್ದಾರೆ.

`ರಮ್ಯಾ ಅವರು ನೀಡಿದ ದೂರು ಆಧರಿಸಿ ಸಿದ್ದಾಪುರ ಪೊಲೀಸರು ಕಾನೂನು ಪ್ರಕಾರ ದೇವಿಪ್ರಸಾದ್‌ನನ್ನು ಬಂಧಿಸಿದ್ದರು. ದೇವಿಪ್ರಸಾದ್ ಕುಟುಂಬ ಸದಸ್ಯರು ಆರೋಪಿಸಿರುವಂತೆ ಸಿಬ್ಬಂದಿ, ಆತನ ತಂದೆ ಸೋಮಶೇಖರ್ ಅವರ ಮೇಲೆ ಯಾವುದೇ ದೌರ್ಜನ್ಯ ನಡೆಸಿಲ್ಲ. ಪ್ರಕರಣ ಸಂಬಂಧ ಸೋಮಶೇಖರ್ ಕುಟುಂಬದವರು ದೂರು ನೀಡಿದರೆ ತನಿಖೆ ನಡೆಸಲಾಗುತ್ತದೆ' ಎಂದು ದಕ್ಷಿಣ ವಿಭಾಗದ ಡಿಸಿಪಿ ಎಚ್.ಎಸ್.ರೇವಣ್ಣ `ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT