ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮದ ಚಿಗುರು, ಅಲ್ಲಲ್ಲಿ ಒಗರು!

Last Updated 11 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಚಿತ್ರ: ಪಾರಿಜಾತ
ಸಮುದ್ರ ಮಥನದ ಕಾಲಕ್ಕೆ ಹುಟ್ಟಿದ ಐದು ಕಲ್ಪವೃಕ್ಷಗಳಲ್ಲಿ ಪಾರಿಜಾತವೂ ಒಂದು ಎನ್ನುತ್ತದೆ ಪುರಾಣ. ತಮಿಳು ಚಿತ್ರರಂಗದಲ್ಲಿ ನಡೆದ ಕಥನ ಮಥನದ ಕಾಲಕ್ಕೆ ಹುಟ್ಟಿದ್ದು `ಬಾಸ್ ಎಂಗಿರ ಭಾಸ್ಕರನ್~. ಕನ್ನಡ `ಪಾರಿಜಾತ~ದ ಬೇರು ಇರುವುದು ಇದೇ ತಮಿಳು ಚಿತ್ರದಲ್ಲಿ.

ಭಾಸ್ಕರ (ದಿಗಂತ್)ನಿರುದ್ಯೋಗಿ, ಉಡಾಳ. ಮದುವೆಯಾಗುವವಳೇ ತನ್ನನ್ನು ಸಾಕಲಿ ಎಂಬ ನಿಲುವು ಹೊಂದಿದ ನಿರಾತಂಕವಾದಿ! ಉಪನ್ಯಾಸಕಿ ಚಂದ್ರಿಕಾಳಿಗೆ (ಐಂದ್ರಿತಾ ರೇ) ಆತನ ಮನ ಸೋಲುತ್ತದೆ. ಆಕೆಗೂ ಅವನೆಂದರೆ ಇಷ್ಟ. ವಿಶೇಷ ಎಂದರೆ ಆ ಹುಡುಗಿ ತನ್ನ ಅತ್ತಿಗೆಯ ತಂಗಿ. ಆದರೆ ಆತನ ನಿರುದ್ಯೋಗವೇ ಇಬ್ಬರಿಗೂ ಶತ್ರು.
 
ಹುಡುಗ ಮನೆ ಬಿಟ್ಟು ತೆರಳುತ್ತಾನೆ. ಸ್ವಂತ ಕಾಲ ಮೇಲೆ ನಿಲ್ಲಲು ಏನೆಲ್ಲಾ ಮಾಡುತ್ತಾನೆ. ಕೊನೆಗೆ ಅದರಲ್ಲಿ ಯಶ ಕಾಣುತ್ತಾನೆಯೇ, ಪ್ರೇಮಿಗಳು ಒಂದಾಗುತ್ತಾರೆಯೇ ಎಂಬುದು ಕತೆ.
`ಮನಸಾರೆ~ ಚಿತ್ರದ ಬಳಿಕ ದಿಗಂತ್, ಐಂದ್ರಿತಾ ರೇ ರಸಾಯನ ಮತ್ತೊಮ್ಮೆ ಕ್ಲಿಕ್ ಆಗಿದೆ. ದೂದ್‌ಪೇಡಾ ಇಮೇಜಿನ ದಿಗಂತ್, ಬಟ್ಟಲುಗಣ್ಣಿನ ಚೆಲುವೆ ಐಂದ್ರಿತಾ ನೋಡುಗರನ್ನು ಪ್ರೇಮಲೋಕದಲ್ಲಿ ತೇಲಿಸಬಲ್ಲರು. ಬಣ್ಣಬಣ್ಣದ ಕನಸುಗಳನ್ನು ಉಣಿಸಬಲ್ಲರು.

ಈ ಕನಸುಗಳಿಗೆ ಇಂಬು ನೀಡುವುದು ಜಯಂತ್ ಕಾಯ್ಕಿಣಿ ಮತ್ತು ಕವಿರಾಜ್ ಬರೆದಿರುವ ಹಾಡುಗಳು. `ನೀ ಮೋಹಿಸು~, `ಹೇ ಚಂದ್ರಿಕಾ~, `ಹುಡುಗಿ...~, `ಓ ಪಾರಿಜಾತ~ ಹಾಡುಗಳು ಮಾಧುರ್ಯದಿಂದ ಮನ ತಟ್ಟಿದರೆ `ಹೋಗಲೊ ನೋಡ್ತೀನಿ~ ಹಾಡು ನಿರುದ್ಯೋಗಿ ಹೃದಯಗಳನ್ನು ತಣಿಸಬಲ್ಲದು. ಎಲ್ಲಾ ಹಾಡುಗಳಲ್ಲಿ ಮನೋಮೂರ್ತಿ ಸಂಗೀತದ ವರ್ಚಸ್ಸಿದೆ.

ಪ್ರೀತಿ ಪ್ರೇಮಕ್ಕೆ ಐಂದ್ರಿತಾ ರೇ ಇರುವಂತೆ ಹಾಸ್ಯದ ಹೊನಲು ಹರಿಸಲು ಶರಣ್ ಹಾಗೂ ಸಾಧುಕೋಕಿಲಾ, ದಿಗಂತ್‌ಗೆ ಜೋಡಿಯಾಗಿದ್ದಾರೆ. ಸಂದರ್ಭೋಚಿತವಾಗಿ ಹಾಸ್ಯರಸ ಉಕ್ಕುವುದರಿಂದ ನಗೆಯ ಬುಗ್ಗೆ ನಿಸರ್ಗದತ್ತವಾಗಿ ಚಿಮ್ಮಿದೆ. ದ್ವಂದ್ವಾರ್ಥಗಳಿಗೆ ಅವಕಾಶವಿಲ್ಲದೆ ಹಾಸ್ಯವನ್ನು ನಿರೂಪಿಸಿರುವುದು ಚಿತ್ರದ ಹೆಗ್ಗಳಿಕೆ. ಆದರೆ ಪಾತ್ರಗಳ ಕಿರುಚಾಟ ಕಡಿಮೆಯಾಗಿದ್ದರೆ ಸಂಭಾಷಣೆಗಳನ್ನು ಸಾವಧಾನವಾಗಿ ಮಂಡಿಸಿದ್ದರೆ ಹಾಸ್ಯ ಮಿಶ್ರಿತ ಪ್ರೇಮಕತೆಯನ್ನು ಇನ್ನಷ್ಟು ಚಂದಗೊಳಿಸಬಹುದಿತ್ತು.

ಚಂದ್ರಿಕಾಳ ತಂದೆಯಾಗಿ ಮುಖ್ಯಮಂತ್ರಿ ಚಂದ್ರು, ಭಾಸ್ಕರನ ತಾಯಿಯಾಗಿ ಪದ್ಮಜಾ ರಾವ್, ಪ್ರೇಮಕ್ಕೆ ಪೈಪೋಟಿ ಒಡ್ಡುವ ರಘು ಮುಖರ್ಜಿ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಹಾಡು ಕತೆ ಎರಡರಲ್ಲೂ ವೈಭವ ತಂದು ಛಾಯಾಗ್ರಾಹಕ ಶ್ರೀನಿವಾಸ್ ದೇವಸಂ ಸೈ ಎನಿಸಿಕೊಂಡಿದ್ದಾರೆ. ನಾಯಕ `ಟ್ಯುಟೋರಿಯಲ್~ ನಡೆಸುವ ಭಾಗವನ್ನು ನಿರ್ದೇಶಕ ಪ್ರಭು ಶ್ರೀನಿವಾಸ್ ಅನಗತ್ಯವಾಗಿ ಹಿಂಜಿದ್ದಾರೆ. ಒಂದು ಹಾಡಿನಲ್ಲಿ ಮುಗಿಸಬಹುದಾಗಿದ್ದ ಕತೆಯನ್ನು ವಿನಾಕಾರಣ ಎಳೆದಿದ್ದಾರೆ.
 
ಇದರಿಂದ ರಾತ್ರಿ ಅರಳಿ ಹಗಲು ಬಾಡುವ ಪಾರಿಜಾತ ಹೂವಿನ ಅಸಹಾಯಕ ಸ್ಥಿತಿಯೇ ಚಿತ್ರಕ್ಕೂ ಒದಗಿದೆ. ನಾಯಕನ ಉಂಡಾಗುಂಡಿ ಸ್ವಭಾವವನ್ನು ಮನಬಂದಂತೆ ಹರಿಯಲು ಬಿಟ್ಟಿರುವುದು ಕೂಡ ಒಂದು ಕಪ್ಪು ಚುಕ್ಕಿ. ಪ್ರೀತಿ ಪ್ರೇಮದ ನವಿರು ಕತೆಯಲ್ಲಿ ಸಾಹಸ ದೃಶ್ಯಗಳನ್ನು ತುರುಕಿದಂತೆ ಭಾಸವಾಗುತ್ತದೆ. ಖಳನಾಯಕನಂತೆ ಬಿಂಬಿಸಲಾಗಿರುವ ಕಾದಲ್ ದಂಡಪಾಣಿ, ಪಾಠ ಹೇಳಲು ಬರುವ ಶಕೀಲಾ ಅವರ ಪಾತ್ರಗಳು ಪ್ರೇಕ್ಷಕರನ್ನು ಅಷ್ಟೇನೂ ಪ್ರಭಾವಿಸಲಾರವು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT