ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮವೆನಲು ಹಾಸ್ಯವೆ?

Last Updated 8 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಹರಯದ ರುಚಿಯನ್ನು ಹೆಚ್ಚಿಸಿದ ಒಲುಮೆಯೇ, ‘ಪ್ರೇಮಿಗಳ ದಿನ’ಕ್ಕಾಗಿ ನಿನಗೊಂದು ಶುಭಾಶಯ ಪತ್ರ ಕೊಡಲಿಕ್ಕಾಗಿ ಎಷ್ಟೆಲ್ಲ ಹುಡುಕಾಟ ನಡೆಸಿದೆ ಗೊತ್ತಾ? ನಾಲ್ಕೈದು ಅಂಗಡಿಗಳನ್ನು ಎಡತಾಕಿ, ಗಂಟೆಗಟ್ಟಲೆ ಹುಡುಕಾಡಿದರೂ ನನ್ನ ಮನಸ್ಸಿಗೆ ಸಮಾಧಾನ ಕೊಡುವ ಗ್ರೀಟಿಂಗ್ ಕಾರ್ಡ್ ದೊರೆಯಲೇ ಇಲ್ಲ. (ನನಗೆಷ್ಟು ಬೇಸರವಾಯಿತೆಂದರೆ, ಮೂರು ತಿಂಗಳ ಹಿಂದೆ ನೀನು ನನ್ನ ಮೇಲೆ ಮುನಿಸಿಕೊಂಡು ವಾರಕಾಲ ಮಾತು ಬಿಟ್ಟಾಗಲೂ ಅಷ್ಟು ಬೇಸರವಾಗಿರಲಿಲ್ಲ). ಕೊನೆಗೆ, ಪುಸ್ತಕದ ಅಂಗಡಿಯೊಂದಕ್ಕೆ ಹೋಗಿ ಒಂದಷ್ಟು ಲೇಖನ ಸಾಮಗ್ರಿ ಕೊಂಡುಕೊಂಡು ಬಂದೆ. ಆಮೇಲಿನ ನನ್ನ ಅವಸ್ಥೆಯನ್ನು ನೀನು ನೋಡಿದ್ದರೆ ಅದೆಷ್ಟು ನಗುತ್ತಿದ್ದೆಯೊ?

ಕಾನ್ವೆಂಟ್ ಕಣ್ಮಣಿಗಳು ಅಪ್ಪ ಅಮ್ಮನನ್ನು ಕಾಡಿಬೇಡಿ ಕಾಗದ, ಕತ್ತರಿ ಹರಡಿಕೊಂಡು ಕೂರುತ್ತವೆಯಲ್ಲ, ಅದೇ ಹುಮ್ಮಸ್ಸಿನಲ್ಲಿ ಗ್ರೀಟಿಂಗ್ ಕಾರ್ಡ್ ತಯಾರಿಕೆಯಲ್ಲಿ ತೊಡಗಿಕೊಂಡೆ. ಶುಭಾಶಯ ಪತ್ರ ಎಂದಮೇಲೆ ನವಿಲುಗರಿಯೋ, ಗುಲಾಬಿಯೋ ಚಿತ್ರ ಇರಬೇಕು ತಾನೆ? ನಾನೇನು ಕುಂಚ ಕಲಾವಿದನೇ? ಹೊಳೆದಂತೆ ಗೆರೆ ಎಳೆದೆ. ನಾಲ್ಕೈದು ಪ್ರಯತ್ನಗಳ ನಂತರವೂ ಹೂ ಮುಗುಳು ನಗಲಿಲ್ಲ. ಕೊನೆಗೆ ಹೂಗೊಂಚಲಿನ ಬಣ್ಣದ ಚಿತ್ರವೊಂದನ್ನು ಕತ್ತರಿಸಿ ಅಂಟಿಸಿದೆ. ಕಾಗದದ ಹೂವಷ್ಟೇ ಅಲ್ಲ, ಕೆಂಗುಲಾಬಿಯ ಪಕಳೆಗಳನ್ನೂ ಅಂಟಿಸಿರುವೆ.

ಒಂದು ಗುಟ್ಟು ಹೇಳಲಾ- ಈ ಪಕಳೆಗಳನ್ನೆಲ್ಲ ನೀನು ಮುಡಿದ ಹೂಗಳಿಂದಲೇ ಹೆಕ್ಕಿ ಬಚ್ಚಿಟ್ಟುಕೊಂಡಿದ್ದವುಗಳು. ಹೀಗೆ ಕತ್ತರಿ ಪ್ರಯೋಗ, ಅಂಟಿಸುವ ಅವಾಂತರಗಳ ನಂತರ ಒಂದು ಶುಭಾಶಯ ಪತ್ರವೇನೊ ರೆಡಿಯಾಯಿತು. ಆದರೆ, ಇದು ಅಂಗಡಿಯಲ್ಲಿ ದೊರೆತ ಗ್ರೀಟಿಂಗ್ ಕಾರ್ಡ್‌ಗಳಿಗಿಂತ ಸುಂದರವಾಗಿತ್ತಾ? ಉಹುಂ, ಇದು ಸುಂದರವೇನೂ ಅಲ್ಲ. ಆದರೆ, ನನ್ನ ಕಣ್ಣಳತೆಯಲ್ಲಿ, ಕೈಚಳಕದಲ್ಲಿ ತಯಾರಾದ ಇದಕ್ಕೆ ನೀನು ಬೆಲೆ ಕಟ್ಟುವ ಹುಂಬತನ ಮಾಡಲಾರೆ ಎನ್ನುವುದು ನನಗೆ ತಿಳಿಯದ್ದೇನೂ ಅಲ್ಲ.

ಪ್ರಿಯ ಹೃದಯವೇ, ಶುಭಾಶಯ ಪತ್ರದ ಮೇಲ್ಮುಖವೇನೊ ಸಿದ್ಧ! ಮುಖ್ಯವಾಗುವುದು ಒಳಗಿನ ಹೂರಣವಲ್ಲವೇ? ಪ್ರೇಮ ನಿವೇದನೆ ಅಲ್ಲವೇ? ಆ ನಿವೇದನೆಯ ಸಾಲುಗಳಿಗಾಗಿ ಎಂದಿನಂತೆ ನನ್ನಿಷ್ಟದ ಕವಿ ಬೇಂದ್ರೆಯ ಕವಿತೆಗಳಲ್ಲಿ ಹುಡುಕಾಡಿದೆ. ಕೆ. ಎಸ್. ನರಸಿಂಹಸ್ವಾಮಿ ಅವರ ಸಂಪುಟಗಳಲ್ಲಿ ತಡಕಾಡಿದೆ. ಪ್ರೇಮದ ಕಾವ್ಯಮಾರ್ಗದಲ್ಲಿ ಅಲ್ಲಿಂದಿಲ್ಲಿಗೆ ಓಡಾಡಿ ದಣಿದೆ, ಮತ್ತೆ ಅಲೆದೆ. ಕೊನೆಗೆ ನನಗೆ ಬೇಕಾದ ಸಾಲುಗಳು ಸಿಕ್ಕವು ನೋಡು, ಮರಳುಗಾಡಲ್ಲಿ ನೀರು ಸಿಕ್ಕಂತೆ.

ನರಸಿಂಹಸ್ವಾಮಿ ಕವಿತೆಯೊಂದರಲ್ಲಿ ಬರೆದಿದ್ದಾರೆ: ‘ಒಂದು ಗಂಡಿಗೊಂದು ಹೆಣ್ಣು/ ಹೇಗೊ ಏನೊ ಹೊಂದಿಕೊಂಡು/ ದುಃಖ ಹಗುರ ಎನುತಿರೆ/ ಪ್ರೇಮವೆನಲು ಹಾಸ್ಯವೆ?’. ಈ ಸಾಲುಗಳನ್ನು ಓದುತ್ತಿದ್ದಂತೆ ಮೈ ಯಾಕೊ ನಡುಗಿತು. ಅದು ರೋಮಾಂಚನದ ನಡುಕ. ಉಹೂಂ, ಆ ಸಾಲುಗಳು ನನ್ನನ್ನು ಬೆಚ್ಚಿಬೀಳಿಸಿದ್ದವು. ಎಂಥ ಸತ್ಯದ ಮಾತುಗಳಲ್ಲವೇ? ಎಲ್ಲ ಪ್ರೇಮಿಗಳೂ ಮತ್ತೆಮತ್ತೆ ಮನನ ಮಾಡಬೇಕಾದ ಸತ್ಯ ಇದಲ್ಲವೇ?

ಗಂಡು ಹೆಣ್ಣಿನ ಬಂಧ, ಹೊಂದಾಣಿಕೆಯ ಅನಿವಾರ್ಯತೆ, ಸಹಚರ್ಯದಲ್ಲಿ ಹಗುರವಾಗುವ ದುಃಖ- ಪ್ರೇಮದ ಪರಿಣಾಮವನ್ನು,ಅದರ ಔನ್ನತ್ಯವನ್ನು ಇದಕ್ಕಿಂತಲೂ ಅರ್ಥವತ್ತಾಗಿ ವ್ಯಕ್ತಪಡಿಸಲು ಸಾಧ್ಯವಿದೆಯೇ? ಹಾಂ, ನಿನ್ನೊಂದಿಗೆ ಕೂತು ಈ ಸಾಲುಗಳನ್ನು ಮತ್ತೆ ಓದಬೇಕು. ನಿನ್ನಿಂದ ಗಟ್ಟಿಯಾಗಿ ಓದಿಸುತ್ತ- ‘ಪ್ರೇಮವೆನಲು ಹಾಸ್ಯವೆ?’ ಸಾಲಿನಲ್ಲಿ ನಾನೂ ದನಿಗೂಡಿಸಬೇಕು. ನಾವಷ್ಟೇ ಯಾಕೆ, ಪ್ರೇಮಿಗಳ ಜಗತ್ತಿಗೇ ಈ ಕವಿತೆಯನ್ನು ಓದಿ ಹೇಳಬೇಕು. ಈ ಸಾಲುಗಳು ಪ್ರೇಮಿಗಳೆಲ್ಲರ ಪಾಲಿಗೆ ಮಂತ್ರವಾದರೆ ಎಷ್ಟೊಂದು ಚೆನ್ನಾಗಿರುತ್ತದೆ ಅನ್ನಿಸುತ್ತಿದೆ.

ನರಸಿಂಹಸ್ವಾಮಿ ಅವರಷ್ಟೇ ಅಲ್ಲ- ಬೇಂದ್ರೆಯವರೂ ನನ್ನನ್ನು ತಡೆದುನಿಲ್ಲಿಸಿದರು. ವರಕವಿ ಹಾಡುತ್ತಾರೆ- ‘ನಾನು ಬಡವಿ ಆತ ಬಡವ/ ಒಲವೆ ನಮ್ಮ ಬದುಕು/ ಬಳಸಿಕೊಂಡೆವದನೆ ನಾವು/ ಅದಕು ಇದಕು ಎದಕು’. ಅರೆ, ನರಸಿಂಹಸ್ವಾಮಿ ಹಾಗೂ ಬೇಂದ್ರೆ ಇಬ್ಬರ ಕವಿತೆಗಳ ಅರ್ಥ ಒಂದೇ ಅಲ್ಲವೇ? ಇಬ್ಬರ ಕವಿತೆಗಳಲ್ಲೂ ಪ್ರೇಮ ಎನ್ನುವುದು ಲೌಕಿಕದ ಕಷ್ಟಗಳನ್ನು ಹಗುರಗೊಳಿಸುವ ಅಲೌಕಿಕ ಶಕ್ತಿ, ಮಾಂತ್ರಿಕ ಶಕ್ತಿ. ಅದೊಂದು ದೈವಿಕ ಮದ್ದು.

ಯಾಕೋ ಏನೋ, ಈ ಕ್ಷಣ ನಮ್ಮ ಕ್ಯಾಂಪಸ್‌ನಲ್ಲಿನ ಅನೇಕ ಪ್ರೇಮಿಗಳು, ಪ್ರೇಮಕಥೆಗಳು ನೆನಪಿಗೆ ಬರುತ್ತಿವೆ. ಈ ಎಲ್ಲ ಪ್ರೇಮದ ಹಿಂದಿನ ಪ್ರೇರಕ ಶಕ್ತಿಯಾದರೂ ಯಾವುದು? ಒಂದು ರಮ್ಯಭಾವನೆ, ಸೌಂದರ್ಯದ ಆರಾಧನೆ, ಹರಯದ ಪ್ರಚೋದನೆ- ಇವೇ ಅಲ್ಲವೇ? ಪ್ರಿಯ ಒಡನಾಡಿ, ಇವೆಲ್ಲವನ್ನೂ ಮೀರಿದಾಗಲೇ ತಾನೇ ನಿಜ ಪ್ರೇಮದ ಸಾಕ್ಷಾತ್ಕಾರ ಸಾಧ್ಯವಾಗುವುದು? ಇಂಥ ಸಾಕ್ಷಾತ್ಕಾರದ ಹೊಳೆಯಲ್ಲಿ ಮುನ್ನಡೆಸಲು ವರಕವಿ, ಮಲ್ಲಿಗೆಯ ಕವಿ ಕವಿತೆಗಳೇ ಅಲ್ಲವೇ ಹಾಯಿದೋಣಿ!

ಕವಿತೆಯ ಗುಂಗಿನಿಂದ ಹೊರಬಂದು ಗ್ರೀಟಿಂಗ್ ಕಾರ್ಡ್‌ನ ಒಳಮೈಯಲ್ಲಿ ಇಬ್ಬರೂ ಕವಿಗಳ ಸಾಲುಗಳನ್ನು ಬರೆದಿದ್ದೇನೆ. ಎಡಭಾಗದಲ್ಲಿ ಬೇಂದ್ರೆ, ಬಲತುದಿಯಲ್ಲಿ ನರಸಿಂಹಸ್ವಾಮಿ. ಈ ಗ್ರೀಟಿಂಗ್‌ಕಾರ್ಡ್ ಮಡಚಿದಾಗ ಇಬ್ಬರೂ ಕವಿಗಳ, ಕಾವ್ಯಗಳ ಸಂಗಮ. ಆ ಅಪೂರ್ವ ಸಂಗಮದ ಕಲ್ಪನೆಯೇ ನನ್ನಲ್ಲಿ ಪುಳಕ ಹುಟ್ಟಿಸುತ್ತಿದೆ. ನಿನ್ನಲ್ಲಿ?

ಶುಭಾಶಯ ಪತ್ರ ಬಿಚ್ಚಿನೋಡು- ಅಲ್ಲಿನ ಸಾಲುಗಳಿಂದ ಪ್ರೇಮದ ಪಾತರಗಿತ್ತಿಗಳು ರೆಕ್ಕೆಬಿಚ್ಚಿ ಹಾರುತ್ತವೆ. ಅವು ಹೃದಯದಿಂದ ಹೃದಯಕ್ಕೆ ಹಾರುತ್ತ ಪ್ರೇಮದ ಬಣ್ಣಗಳ ಹರಡುತ್ತವೆ. ಆ ಬಣ್ಣಗಳ ನೇವರಿಕೆಯಲ್ಲಿ ರಂಗಾದ ನಿನ್ನ ಮುಖವನ್ನು ಕಲ್ಪಿಸಿಕೊಳ್ಳುತ್ತ, ಪುಳಕಗೊಳ್ಳುತ್ತ... ಮತ್ತೆ ಕವಿತೆಯ ಸಾಲುಗಳಿಗೆ ಜಾರುತ್ತ...ಆ ಪುಳಕ, ಸುಖ ನಿನ್ನದೂ ಆಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT