ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮಿಗಳ ಮುಡಿಗೆ ಪಾರಿಜಾತ

Last Updated 9 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಇದು ಪ್ರೇಮಿಗಳ ದಿನಾಚರಣೆಗೆ ನಾವು ನೀಡುತ್ತಿರುವ ಉಡುಗೊರೆ ಎಂದರು ನಿರ್ಮಾಪಕ ಪರಮೇಶ್ವರ್. ಅವರ ದನಿಯಲ್ಲಿ ಆ ಉಡುಗೊರೆಯ ಬಗ್ಗೆ ಇನ್ನೂ ಖಚಿತತೆ ಇರಲಿಲ್ಲ. ಕಾರಣ ಥಿಯೇಟರ್ ಸಮಸ್ಯೆ. ವಾರಗಳ ಹಿಂದೆಯಷ್ಟೇ ಹಿರಿಯ ನಟರ ಚಿತ್ರಗಳು ತೆರೆಕಂಡಿವೆ. ಈ ವಾರ ತೆರೆಕಾಣುತ್ತಿರುವುದು ಅವರ ಚಿತ್ರವೂ ಸೇರಿದಂತೆ ಒಟ್ಟು ನಾಲ್ಕು ಚಿತ್ರಗಳು. ಹೀಗಾಗಿ ಥಿಯೇಟರ್ ಕೊರತೆ ಕಾಡುತ್ತಿದೆ ಎಂಬ ಕಳವಳ ಅವರದು.
ಏನಾದರೂ ಚಿತ್ರಬಿಡುಗಡೆ ಮಾತ್ರ ಇದೇ ವಾರ ಎಂಬ ಭರವಸೆಯನ್ನೂ ನೀಡಿದರು.

ಚಿತ್ರ ತಡವಾಗಿ ಬರುತ್ತಿದೆ. ಆದರೆ ಸೂಕ್ತ ಸಮಯದಲ್ಲಿ ಬಿಡುಗಡೆಯಾಗುತ್ತಿದೆ ಎಂಬ ಅಭಿಪ್ರಾಯ ಅವರದು. ಇದು ಕೇವಲ ದುಡ್ಡು ಗಳಿಕೆಯ ಉದ್ದೇಶಕ್ಕೆ ಮಾಡಿದ ಚಿತ್ರವಲ್ಲ. ಎಲ್ಲಾ ಬಗೆಯ ಜನರಿಗೂ ಇಷ್ಟವಾಗುತ್ತದೆ. ಚಿತ್ರ ಫಾಸ್ಟ್‌ಫುಡ್ ಆಗದೆ ಹಬ್ಬದೂಟದಂತೆ ಜನರು ಸವಿಯಬೇಕು ಎಂಬುದು ಪರಮೇಶ್ವರ ಮಾತು.

ಮೂಲತಃ ತಮಿಳಿನವರಾದ ಪ್ರಭು ಶ್ರೀನಿವಾಸ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಕಥೆ ತಮಗೆ ಇಷ್ಟವಾಗಿದೆ. ಇದೇ ಥೀಮ್ ಮೇಲೆ ಮತ್ತೊಂದು ಚಿತ್ರಕಥೆ ಹೆಣೆಯುವ ಬಯಕೆಯನ್ನು ಅವರು ಹೊರಗೆಡವಿದರು. ಚಿತ್ರ ಆರಂಭದಿಂದಲೂ ಕೊನೆಯವರೆಗೂ ನಗಿಸುತ್ತಲೇ ಇರುತ್ತದೆ. ಅದರ ಜೊತೆ ಜೊತೆಯಲ್ಲೇ ಮಧುರ ಪ್ರೇಮಕಥೆಯೂ ಇದೆ ಎಂದು ಚಿತ್ರದ ಮೂಲ ಎಳೆಯನ್ನು ಬಿಡಿಸಿಟ್ಟರು.

ಇನ್ನೂ ಜೀವನದಲ್ಲಿ ಸೆಟ್ಲ್ ಆಗದೇ ಇರೋ ಹುಡುಗ ಪ್ರೀತಿಯಲ್ಲಿ ಬಿದ್ದರೆ ಹುಡುಗಿಯೇ ಅವನ ಜೀವನ ಸೆಟ್ಲ್ ಆಗುವ ಹಾಗೆ ಮಾಡುತ್ತಾಳೆ ಎಂಬ ವ್ಯಾಖ್ಯಾನ ನೀಡಿದರು ನಟ ದಿಗಂತ್. ಶರಣ್ ಮತ್ತು ತಮ್ಮ ಕಾಂಬಿನೇಶನ್‌ನ ಹಾಸ್ಯದೃಶ್ಯಗಳು ತುಂಬಾ ಚೆನ್ನಾಗಿ ಮೂಡಿಬಂದಿದೆ. ಇದು ಕುಟುಂಬವಿಡೀ ಕುಳಿತು ನೋಡಬಹುದಾದ ಉತ್ತಮ ಮನರಂಜನಾ ಚಿತ್ರ ಎಂದು ಅವರು ಪ್ರಮಾಣ ಪತ್ರ ನೀಡಿದರು.

ಚಿತ್ರದ ಹಾಡುಗಳಿಗೆ ಒಳ್ಳೆ ಪ್ರತಿಕ್ರಿಯೆ ಸಿಕ್ಕಿದೆ ಎಂಬ ಖುಷಿ ಸಂಗೀತ ನಿರ್ದೇಶಕ ಮನೋಮೂರ್ತಿ ಅವರಿಗೆ. ಆದರೆ ಚಿತ್ರ ಗೆದ್ದಮೇಲೆಯೇ ತಮ್ಮ ಕೆಲಸ ಪೂರ್ಣಗೊಳ್ಳುವುದು ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT