ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮಿಗಳಿಗೆ ಹತ್ತಿರವಾದ ಟೆಡ್ಡಿ!

Last Updated 15 ಫೆಬ್ರುವರಿ 2012, 8:20 IST
ಅಕ್ಷರ ಗಾತ್ರ

ರಾಯಚೂರು:   ಸುಂದರವಾಗಿ ಅರಳಿಕೊಂಡು ಪ್ರೇಮಿಗಳ ಬರುವಿಕೆಗೆ ಕಾಯ್ದು ಕುಳಿತ ಬಗೆ ಬಗೆ ಬಣ್ಣದ ಸುಂದರವಾದ ಸಾವಿರಾರು ಗುಲಾಬಿ ಹೂಗಳ ಆಸೆ ನಿರಾಸೆಯಾಯ್ತು!

ಮಧ್ಯಾಹ್ನದವರೆಗೂ ಮಾರುಕಟ್ಟೆಗೆ ಪ್ರೇಮಿಗಳು ಧಾವಿಸಿ ಬಂದು ತಮ್ಮನ್ನು ಕರೆದೊಯ್ಯುತ್ತಾರೆ ಎಂದು ಆಸೆ ಹೊತ್ತ ಗುಲಾಬಿ ಹೂಗಳು ಮಧ್ಯಾಹ್ನದ ಬಳಿಕ ಮಂದವಾಗ ತೊಡಗಿದವು. ದೂರದ ಊರಿಂದ ಸಾವಿರಾರು ರೂಪಾಯಿ ಕೊಟ್ಟು ತಂದ ಆ ಗುಲಾಬಿ ಹೂಗಳ ಮಾಲೀಕರ ಮೊಗದಲ್ಲೂ ಮಂದಹಾಸ ಕಾಣಲಿಲ್ಲ!

ಒಟ್ಟಿನಲ್ಲಿ ಗುಲಾಬಿಗಳಿಗೆ ಪ್ರೇಮಿಗಳು ಬಾರದೇ ನಿರಾಸೆ ಆದರೆ ಗುಲಾಬಿ ಹೂಗಳನ್ನು ಮಾರಾಟ ಮಾಡಲು ತಂದ ಮಾಲೀಕ ಗುಲಾಬಿ ಹೂಗಳು ಮಾರಾಟವಾಗದೇ ನಿರಾಸೆ ಕಾಣಬೇಕಾಯ್ತು!

ವಿಶ್ವ ಪ್ರೇಮಿಗಳ ದಿನ(ವ್ಯಾಲೆಂಟೈನ್ಸ್ ಡೇ) ಆಚರಣೆ ದಿನವಾದ ಮಂಗಳವಾರ ಪ್ರತಿ ವರ್ಷದಂತೆ ಈ ವರ್ಷವೂ ನಗರದಲ್ಲಿ ಪ್ರೇಮಿಗಳು ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಿದರು. ಅದೇಕೋ ಪ್ರೇಮಿಗಳ ದಿನದ ವಿಶೇಷ ಆಕರ್ಷಣೆಯಾದ ಗುಲಾಬಿ ಹೂ ಮಾರಾಟ ಮಾತ್ರ ಭರ್ಜರಿಯಾಗಿ ನಡೆಯಲಿಲ್ಲ. ಬೆಂಗಳೂರು, ಹೈದರಾಬಾದ್, ಗದ್ವಾಲ್ ಹಾಗೂ ಸುತ್ತಮುತ್ತಲಿನ ಪ್ರದೇಶದಿಂದ ಹೆಚ್ಚಿನ ಮೊತ್ತ ಕೊಟ್ಟು ಹೂವು ಮಾರಾಟಗಾರರು ತಂದಿದ್ದ ಗುಲಾಬಿ ಹೂವುಗಳು ಹಾಗೆಯೇ ಉಳಿದವು.

ಸಾಮಾನ್ಯ ದಿನಗಳಲ್ಲಿ ಒಂದು ಗುಲಾಬಿ ಹೂವು 2.3,4 ರೂಪಾಯಿಗೆ ಮಾರಾಟ ಆಗುತ್ತದೆ. ಪ್ರೇಮಿಗಳ ದಿನಾಚರಣೆ ಹಿನ್ನೆಲೆಯಲ್ಲಿ ಎಲ್ಲೆಡೆ ಬೇಡಿಕೆ. ಹೀಗಾಗಿ ಮಾರುಕಟ್ಟೆಯಲ್ಲೂ ಹೆಚ್ಚಿನ ದರಕ್ಕೆ ಖರೀದಿಸಿ ತಂದು ಮಾರಾಟ ಮಾಡಬೇಕು. ಹೀಗಾಗಿ ಇಂದು ಒಂದು ಗುಲಾಬಿ ಹೂವನ್ನು 7-8, 10 ರೂಪಾಯಿಗೆ ಒಂದರಂತೆ ಮಾರಾಟ ಮಾಡಲಾಗುತ್ತಿದೆ ಎಂದು ವ್ಯಾಪಾರಸ್ಥರು ತಿಳಿಸಿದರು.

ಇನ್ನು ಪ್ರೇಮಿಗಳ ದಿನಾಚರಣೆ, ಪ್ರೇಮಿಗಳಿಗಾಗಿಯೇ ರೂಪಗೊಂಡ ಹಲವು ಬಗೆಯ ಸಂದೇಶ ಹೊತ್ತ  ಗ್ರಿಟಿಂಗ್ಸ್, ಉಡುಗೊರೆಗಳು ಗಿಫ್ಟ್ ಸೆಂಟರ್‌ಗಳಲ್ಲಿ ಪ್ರೇಮಿಗಳನ್ನು ಆಕರ್ಷಿಸಿದವು. ಒಂದೊಂದು ಗ್ರಿಟಿಂಗ್ಸ್ ನೂರಾರು ರೂಪಾಯಿ ಮುಖ ಬೆಲೆ ಹೊತ್ತಿದ್ದವು. ಟೆಡ್ಡಿ ಬೀರ್‌ಗಳು ಲವ್ ಸಂದೇಶ ಹೊತ್ತು ಪ್ರೇಮಿಗಳ ಸ್ವಾಗತಕ್ಕೆ ಕಾದಿದ್ದವು. ಪ್ರೇಮಿಗಳಿಂದ ಹೆಚ್ಚು ಆಕರ್ಷಿತಗೊಂಡ ಈ ಟೆಡ್ಡಿಗಳನ್ನು ಪ್ರೇಮಿಗಳು ಸಾವಿರಾರು ರೂಪಾಯಿ ಕೊಟ್ಟು ಖರೀದಿಸಿದ್ದಾರೆ ಎಂದು ಗಿಫ್ಟ್ ಸೆಂಟರ್ ಮಾಲೀಕರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT