ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮೋತ್ಸವ

Last Updated 11 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ನಿಜದ ಸಂತಸದಲ್ಲಿ ಬಿರಿದ ಮಲ್ಲಿಗೆಯಿಂದಬರುವ ಕಂಪಿನ ಹೆಸರು ಪ್ರೇಮವೆಂದು
ನೀಲಾಂತರಿಕ್ಷದಲಿ ಹೊಳೆವ ನಕ್ಷತ್ರಗಳ
ಕಣ್ಣಸನ್ನೆಯ ಹೆಸರು ಪ್ರೇಮವೆಂದು
ಪ್ರೇಮಕವಿ ಕೆ.ಎಸ್. ನರಸಿಂಹಸ್ವಾಮಿ ಅವರು ನಭೋಮಂಡಲದ ಎಲ್ಲೆಯೊಳಗೆ ಎಲ್ಲಿಯೇ ನೋಡಿದರೂ ಪ್ರೇಮ ಕಣ್ ಮಿಟುಕಿಸುತ್ತದೆ ಎಂದಿದ್ದಾರೆ. ಧಮನಿಗಳಲ್ಲಿ ಪ್ರೇಮ, ಉಸಿರಲ್ಲಿ ಪ್ರೇಮ, ಅಲ್ಲಿ ಇಲ್ಲಿ ಎಲ್ಲೆಲ್ಲೂ ಪ್ರೇಮ ಎಂದು ಕನವರಿಸುವ ವ್ಯಾಲೆಂಟೈನ್‌ಗಳೂ ಇದಕ್ಕೆ ಜೈ ಅಂದಿದ್ದಾರೆ.

ಪ್ರೇಮಿಗಳ ದಿನಾಚರಣೆಯನ್ನು ಅವಿಸ್ಮರಣೀಯವಾಗಿ ಕಳೆಯಲು ಹವಣಿಸುತ್ತಿರುವ ಜೋಡಿಗಳಿಗೆ ಕಣ್ ಹಾಯಿಸಿದಲ್ಲೆಲ್ಲ ಪ್ರೇಮಿಯೇ ಕಣ್ಣಿಗೆ ಕಟ್ಟುವುದು ಸಹಜ ಬಿಡಿ. ಪ್ರೇಮಿಗಳ ದಿನ ಎಂಬ ಪರಿಕಲ್ಪನೆಯೇ ನಮ್ಮದಲ್ಲ, ಪಾಶ್ಚಾತ್ಯ ನೆಲದ್ದು. ನಮ್ಮ ಹೈಕಳು ಅದನ್ನೆಲ್ಲ ಆವಾಹಿಸಿಕೊಳ್ಳುವುದು ಎಂದರೆ ಪಶ್ಚಿಮದ ಸಂಸ್ಕೃತಿಯನ್ನು, ಆಚಾರಗಳನ್ನು ಮನೆಯೊಳಗೆ ಆಮದು ಮಾಡಿಕೊಂಡಂತೆ ಎಂದು ಮೂಗು ಮುರಿಯುವ ಮಂದಿ ಈ ವರ್ಷವೂ ಸಂಸ್ಕೃತಿ ರಕ್ಷಣೆಯ ಪಣತೊಟ್ಟಿದ್ದಾರೆ. ಹೀಗಿರುವಾಗಲೇ ‘ಪ್ರೇಮಿಗಳ ಸಪ್ತಾಹ’ಕ್ಕೆ ಮೊನ್ನೆ ಸೋಮವಾರ  ಚಾಲನೆ ದೊರೆತೇಬಿಟ್ಟಿದೆ.

ಇದೇನು ಹೊಸ ಸುದ್ದಿ ಎಂದು ಹುಬ್ಬೇರಿಸಬೇಡಿ. ಒಂದೇ ದಿನ ಪ್ರೇಮಿಗಳ ದಿನವನ್ನು ಆಚರಿಸುವುದಕ್ಕಿಂತ ಒಂದು ವಾರ, ಸಪ್ತಾಹದ ರೀತಿ ಆಚರಿಸುವುದು ಹೆಚ್ಚು ಸೂಕ್ತ ಎಂದು ಪ್ರೇಮಿ ಪ್ರಪಂಚ ನಿರ್ಣಯ ಮಂಜೂರು ಮಾಡಿದ ಹಿನ್ನೆಲೆ ಯಲ್ಲಿ ಸಿಲಿಕಾನ್ ಸಿಟಿಯ ಪ್ರೇಮಿಗಳೂ ಜೀ ಹುಹೂರ್ ಅಂದಿದ್ದಾರಂತೆ. ಹೌದು, ಒಂದು ದಿನಕ್ಕಷ್ಟೇ ಸೀಮಿತವಾಗಿದ್ದ ಪ್ರೇಮಿಗಳ ದಿನ ಯಾನೆ ವ್ಯಾಲೆಂಟೈನ್ಸ್ ಡೇಗೆ ಈಗ ಸಪ್ತಾಹದ ಖದರು.
ಹಾಗಾಗಿ ಕಳೆದ ಸೋಮವಾರದಿಂದ ಬರುವ ಸೋಮವಾರದ (ಫೆ. 7 ರಿಂದ 14) ವರೆಗೆ ಪ್ರೇಮಿಗಳ ವಾರ. ಫೆಬ್ರುವರಿ 14, ಪ್ರೇಮಿಗಳ ದಿನಕ್ಕೆ ಮೀಸಲು. ಅದಕ್ಕೂ ಏಳು ದಿನ ಮೊದಲೇ ಗುಲಾಬಿ ಸಮರ್ಪಣೆಯೊಂದಿಗೆ ಪ್ರೇಮೋತ್ಸವಕ್ಕೆ ಚಾಲನೆ ದೊರೆತಿದೆ. ಇಲ್ಲಿ ಎಲ್ಲರೂ ಪ್ರೇಮಪೂಜಾರಿಗಳು! ಪ್ರೇಮಪೂಜೆಯೇ ಸರ್ವಸೇವೆಯ ಪ್ರತೀಕ!

ಇಷ್ಟಕ್ಕೂ ಪ್ರೇಮಿಗಳಿಗೆ ತಮ್ಮ ಇರವನ್ನು ಪ್ರಕಟಪಡಿಸಲು ಅಂಥಾದ್ದೊಂದು ದಿನದ ಆಚರಣೆ ಬೇಕೆ? ಅದಕ್ಕೆ ವ್ಯಾಲೆಂಟೈನ್ಸ್ ಡೇ ಎಂಬ ಲೇಬಲ್ ಬೇಕೆ? ವರ್ಷದುದ್ದಕ್ಕೂ ತನ್ನ ಪಾಡಿಗೆ ಸಾಗುವ ಅವರ ಪ್ರೀತಿಗೆ ಒಂದು ದಿನದ, ಒಂದು ಸಪ್ತಾಹದ ಚೌಕಟ್ಟು ಏಕೆ? ಅಂದು ಪ್ರೇಮವನ್ನು ಜಗಜ್ಜಾಹೀರು ಮಾಡಿದರೆ ಬದುಕು ಸಾರ್ಥಕವೆ?

‘ಅಂತಹ ಪ್ರದರ್ಶನದ ಜರೂರತ್ತಿಲ್ಲ. ಪರಸ್ಪರ ನಂಬಿಕೆ, ವಿಶ್ವಾಸ, ಗೌರವ, ಆತ್ಮಾಭಿಮಾನದ ತಳಪಾಯದಲ್ಲಿ ನಿಂತರಷ್ಟೇ ಪ್ರೇಮಸೌಧ ಸುಭದ್ರ. ಒಂದು ಸ್ತಂಭ ದುರ್ಬಲವಾದರೂ ಬದುಕು ದುರ್ಲಭವಾಗುವುದು ಖಚಿತ. ಒಲವೇ ನಮ್ಮ ಬದುಕು ಎಂಬ ಗಟ್ಟಿ ಸಂಕಲ್ಪ ನಮ್ಮದಾಗಬೇಕು. ಉತ್ಕಟ ಅಭಿಮಾನ ನಮ್ಮ ನಡುವಿರಬೇಕು. ಆಗಲೇ ಪ್ರೇಮ ನಿಜದ ಬೆಸುಗೆಯಾಗುವುದು’ ಎನ್ನುತ್ತದೆ, ಪ್ರಜ್ಞಾವಂತ ಯುವಜೋಡಿ.ನಿಮಗೂ ಹಾಗನ್ನಿಸಿದರೆ 14ರಂದು ರಸ್ತೆ ರಸ್ತೆಗಳಲ್ಲಿ, ಉದ್ಯಾನಗಳಲ್ಲಿ ನಿಮ್ಮ ಪ್ರೀತಿಯನ್ನು ಹರಾಜಿಗಿಡಲಾರಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT