ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಮ್‌ ‘ಮೊಹಬ್ಬತ್’

Last Updated 11 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಆಗಷ್ಟೇ ಚಿಗುರೊಡೆದ ಪ್ರೀತಿಯಲ್ಲಿ ಮೀಯುತ್ತಿರುವ ತರುಣನಂತೆ ಕಾಣುತ್ತಿದ್ದರು ನಟ ಪ್ರೇಮ್. ಅವರ ಸಿನಿಮಾ ಬದುಕು ಶುರುವಾಗಿದ್ದೇ ಪ್ರೇಮಕಥೆಯ ಮೂಲಕ. ಏಕರೂಪದ ಕಥನದ ಸಿನಿಮಾಗಳು ಹಲವು ಬಂದರೂ ಅವರ ಪ್ರೇಮಕಥಾಯಾನ ಅಬಾಧಿತ. ‘ಮಸ್ತ್‌ ಮೊಹಬ್ಬತ್‌’ ಅದಕ್ಕೆ ಹೊಸ ಸೇರ್ಪಡೆ.

‘ಏಕತಾನತೆ ಕಾಡುತ್ತಿಲ್ಲ, ಪ್ರತಿಯೊಂದರಲ್ಲಿಯೂ ವೈವಿಧ್ಯವಿದೆ. ಈ ಕಥನದಲ್ಲಿಯೂ ಹೊಸತನವಿದೆ. ನಿರೂಪಣೆಯ ಶೈಲಿಯಲ್ಲಿ ವಿಭಿನ್ನತೆ ಇದೆ’– ಹೀಗೆ ವಿವರಣೆಗಳನ್ನು ನೀಡಿದರು ಪ್ರೇಮ್‌. ‘ಮಸ್ತ್‌ ಮೊಹಬ್ಬತ್‌’ನ ಪ್ರೇಮಪರ್ವಕ್ಕೆ ಅದ್ದೂರಿ ಮುಹೂರ್ತ ನಡೆಸಿದ್ದರು ನಿರ್ಮಾಪಕ ವಿ. ಶೇಖರ್‌. ವೃತ್ತಿಯಲ್ಲಿ ಡೆವಲಪರ್‌ ಆಗಿರುವ ಅವರು ಬಾಮೈದ ವೇಣು ಬರೆದ ಕಥೆಯನ್ನು ಮೆಚ್ಚಿ ಈ ಚಿತ್ರ ನಿರ್ಮಿಸಲು ಮುಂದಾಗಿದ್ದಾರೆ. ಬಜೆಟ್‌ ಎಷ್ಟಾದರೂ ತೊಂದರೆಯಿಲ್ಲ ಎಂಬ ಗಟ್ಟಿ ನಿರ್ಧಾರ ಅವರದು. ಅವರಂತೆಯೇ ನಿರ್ದೇಶಕ ಮೋಹನ ಮಾಳಗಿ ಅವರಿಗೂ ಇದು ಪದಾರ್ಪಣೆಯ ಚಿತ್ರ. ಇಪ್ಪತ್ತು ವರ್ಷಗಳಿಂದ ದೊರೆ ಭಗವಾನ್, ರಾಜೇಂದ್ರಬಾಬು ಮುಂತಾದವರ ಬಳಿ ಕೆಲಸ ಮಾಡುತ್ತಿದ್ದ ಅವರ ಸ್ವತಂತ್ರವಾಗಿ ಆ್ಯಕ್ಷನ್‌ ಕಟ್‌ ಹೇಳುವ ಸಾಹಸಕ್ಕೆ ಕೈಹಾಕಿದ್ದಾರೆ.

ಸ್ವಂತ ಸಾಫ್ಟ್‌ವೇರ್‌ ಕಂಪೆನಿಯ ಸಿಇಓ ಆಗಿ ತನ್ನದೇ ಲೋಕದಲ್ಲಿ ಮುಳುಗಿರುವ ಯುವಕ ತನ್ನ ಖಾಸಗಿ ಬದುಕನ್ನೇ ಮರೆತಿರುತ್ತಾನೆ. ಮನಶ್ಶಾಂತಿಗೆಂದು ಊಟಿಗೆ ತೆರಳುವ ಆತನಿಗೆ ನಾಯಕಿ ಎದುರಾಗುತ್ತಾಳೆ. ಅಲ್ಲಿ ಮುಂದೆ, ಪ್ರೀತಿ ಪ್ರೇಮ, ಗೊಂದಲ, ಸಮಸ್ಯೆಗಳು ಇತ್ಯಾದಿ... ಸಿನಿಮಾದ ತಿರುಳನ್ನು ಮೋಹನ್‌ ತೆರೆದಿಟ್ಟರು. ‘ಮೊಹಬ್ಬತ್‌’ ಎಂಬ ಶೀರ್ಷಿಕೆ ಈಗಾಗಲೇ ನೋಂದಣಿ ಆಗಿರುವುದರಿಂದ ಚಿತ್ರತಂಡ ಅದರೊಟ್ಟಿಗೆ ‘ಮಸ್ತ್‌’ ಸೇರಿಸಿದೆ. ಚಿತ್ರದಲ್ಲಿನ ಪ್ರೇಮಕಥೆ ಮಸ್ತ್‌ ಆಗಿರಲಿದೆ ಎಂಬ ಭರವಸೆ ನೀಡಿತು ಚಿತ್ರತಂಡ.

ಅಂದಹಾಗೆ, ಮೊಹಬ್ಬತ್‌ ಹಾಡಿನ ಮಳೆಯನ್ನೇ ಸುರಿಸಲಿದೆಯಂತೆ. ಒಂಬತ್ತು ಹಾಡುಗಳಿಗೆ ಮಟ್ಟು ಹಾಕುತ್ತಿದ್ದಾರೆ ಸಂಗೀತ ನಿರ್ದೇಶಕ ಮನೋಮೂರ್ತಿ.

ದೆಹಲಿ ಮೂಲದ ವಂದನಾ ಗುಪ್ತಾ ಮೊಹಬ್ಬತ್‌ನ ನಾಯಕಿ. ತೆಲುಗು ಚಿತ್ರವೊಂದರಲ್ಲಿ ನಟಿಸಿರುವ ವಂದನಾ ಅವರಿಗೆ ಚಿತ್ರದಲ್ಲಿ ಸಾಂಪ್ರದಾಯಿಕ ಮತ್ತು ಆಧುನಿಕ ಎರಡನ್ನೂ ಅನುಕರಿಸುವ ಯುವತಿಯ ಪಾತ್ರವಂತೆ.

ಶೇಕಡಾ 20ರಷ್ಟು ಕಥನ ಮೈಸೂರಿನಲ್ಲಿ ನಡೆದರೆ ಉಳಿದರ್ಧ ಸಾಗುವುದು ಊಟಿಯಲ್ಲಿ. ಸುಮಾರು 45–50 ದಿನಗಳ ಚಿತ್ರೀಕರಣದ ಯೋಜನೆ ಹಾಕಿಕೊಂಡಿದ್ದಾರೆ ಮೋಹನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT