ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಯಸಿ ಆತ್ಮಹತ್ಯೆ: ನೇಣಿಗೆ ಶರಣಾದ ಪ್ರೇಮಿ

Last Updated 5 ಸೆಪ್ಟೆಂಬರ್ 2013, 19:51 IST
ಅಕ್ಷರ ಗಾತ್ರ

ಬೆಂಗಳೂರು: ಪ್ರೇಯಸಿಯ ಆತ್ಮಹತ್ಯೆಯಿಂದ ನೊಂದ ಯುವಕ ತಾನೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಲಹಂಕ ಉಪನಗರ ಸಮೀಪದ ಸೋಮೇಶ್ವರನಗರದಲ್ಲಿ ಬುಧವಾರ ರಾತ್ರಿ ನಡೆದಿದೆ.

ರಿಯಲ್ ಎಸ್ಟೇಟ್ ಉದ್ಯಮಿ ರವೀಂದ್ರ ಕುಮಾರ್ ಎಂಬುವರ ಮಗ ಸೂರಜ್ ಕುಮಾರ್ (26) ಆತ್ಮಹತ್ಯೆ ಮಾಡಿಕೊಂಡವರು. ಎಂಬಿಎ ಪದವೀಧರರಾಗಿದ್ದ ಅವರು, ಬಿಇಎಲ್ ರಸ್ತೆಯಲ್ಲಿ ಕಾಲ್‌ಸೆಂಟರ್ ನಡೆಸುತ್ತಿದ್ದರು. ಸಂಜೆ 4.30ರ ಸುಮಾರಿಗೆ ಮನೆಯಲ್ಲಿ ನೇಣು ಹಾಕಿಕೊಂಡಿದ್ದಾರೆ. ಈ ವೇಳೆ ಮೃತರ ತಾಯಿ ಬಟ್ಟೆ ಒಣಗಿಸಲು ಮಹಡಿಗೆ ಹೋಗಿದ್ದರು. ತಂದೆ ಹಾಗೂ ತಮ್ಮ ಅನಿಲ್‌ಕುಮಾರ್ ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

15 ನಿಮಿಷಗಳ ನಂತರ ತಾಯಿ ಮಹಡಿಯಿಂದ ಕೆಳಗೆ ಬಂದಾಗ ಮನೆಯ ಮುಂಬಾಗಿಲಿಗೆ ಒಳಗಿನಿಂದ ಚಿಲಕ ಹಾಕಿತ್ತು. ಎಷ್ಟೇ ಬಾಗಿಲು ಬಡಿದರೂ ಒಳಗಿನಿಂದ ಪ್ರತಿಕ್ರಿಯೆ ಇರಲಿಲ್ಲ. ಇದರಿಂದ ಅನುಮಾನಗೊಂಡ ತಾಯಿ, ಮಗನ ಕೋಣೆಯ ಕಿಟಕಿ ತೆರೆದು ನೋಡಿದಾಗ ಸೂರಜ್ ಸೀರೆಯಿಂದ ನೇಣು ಹಾಕಿಕೊಂಡಿದ್ದರು. ದಿಕ್ಕು ತೋಚದಂತಾದ ಅವರು ನೆರವಿಗಾಗಿ ಕೂಗಿಕೊಂಡಿದ್ದಾರೆ. ಚೀರಾಟ ಕೇಳಿದ ಸ್ಥಳೀಯರು ಕೂಡಲೇ ಮನೆಯ ಬಾಗಿಲು ಒಡೆದು ಸೂರಜ್‌ನನ್ನು ನೇಣಿನ ಕುಣಿಕೆಯಿಂದ ಕೆಳಗಿಳಿಸಿದರು. ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮಧ್ಯೆಯೇ ಸೂರಜ್ ಸಾವನ್ನಪ್ಪಿರುವುದನ್ನು ವೈದ್ಯರು ದೃಢಪಡಿಸಿದರು.

ಪ್ರೇಯಸಿ ಆತ್ಮಹತ್ಯೆ:  ನಗರದ ಮತ್ತೀಕೆರೆ ಐದನೇ ಅಡ್ಡರಸ್ತೆಯಲ್ಲಿ ಸೆ.2ರಂದು ಮೌನ (23) ಎಂಬ ಎಂ.ಟೆಕ್ ವಿದ್ಯಾರ್ಥಿನಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ವಿದ್ಯಾರ್ಥಿನಿಯ ತಂದೆ ನರಸಿಂಹಮೂರ್ತಿ, `ಮಗಳು ಹೊಟ್ಟೆ ನೋವು ತಾಳಲಾರದೆ, ನೇಣಿಗೆ ಶರಣಾಗಿದ್ದಾಳೆ' ಎಂದು ಯಶವಂತಪುರ ಠಾಣೆಗೆ ದೂರು ಕೊಟ್ಟಿದ್ದರು.

ಆದರೆ, ಇದೀಗ ಸೂರಜ್, `ನಾನು ಎಂಟು ವರ್ಷಗಳಿಂದ ಮೌನಳನ್ನು ಪ್ರೀತಿ ಮಾಡುತ್ತಿದ್ದೆ. ಆಕೆಯ ಪೋಷಕರು ಮದುವೆಗೆ ಒಪ್ಪದ ಕಾರಣ ಮೌನ ಆತ್ಮಹತ್ಯೆ ಮಾಡಿಕೊಂಡಳು. ಆಕೆಯನ್ನು ಕಳೆದುಕೊಂಡು ನಾನು ಜೀವಂತವಾಗಿರಲು ಸಾಧ್ಯವಿಲ್ಲ. ನಾನು ಯಾರೊಂದಿಗೂ ಸಾಲ ಮಾಡಿಕೊಂಡಿಲ್ಲ. ಸ್ನೇಹಿತರಾದ ರವಿ ಮತ್ತು ಸುನೀಲ್ ತುಂಬಾ ಕಷ್ಟದಲ್ಲಿದ್ದಾರೆ. ಅವರಿಗೆ ಸಾಲದ ರೂಪದಲ್ಲಿ ತಲಾ ಒಂದು ಲಕ್ಷ ರೂಪಾಯಿ ಕೊಡಿ' ಎಂದು ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

`ಸೂರಜ್ ಮತ್ತು ಮೌನಳ ವಿವಾಹಕ್ಕೆ ನಮ್ಮಿಂದ ಯಾವುದೇ ಅಡ್ಡಿ ಇರಲಿಲ್ಲ. ಆದರೆ, ಯುವತಿಯ ಪೋಷಕರಿಂದಲೇ ನಿರಾಕರಣೆ ಇತ್ತು. ಮೌನ ಆತ್ಮಹತ್ಯೆ ಮಾಡಿಕೊಂಡಾಗಿನಿಂದ ಮಗ ಖಿನ್ನತೆಗೆ ಒಳಗಾಗಿದ್ದ. ಆಕೆಯ ಸಾವನ್ನು ಸಹಿಸಿಕೊಳ್ಳುವ ಶಕ್ತಿ ಆತನಲ್ಲಿ ಕಾಣಲಿಲ್ಲ. ಈ ಹಂತದಲ್ಲಿ ಮಗನನ್ನು ಸಮಾಧಾನಪಡಿಸಲು ನಡೆಸಿದ ಪ್ರಯತ್ನಗಳೂ ವಿಫಲವಾಗಿದ್ದವು' ಎಂದು ಸೂರಜ್ ತಂದೆ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬಕ್ಕೆ ಒಪ್ಪಿಸಲಾಗಿದೆ. ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT