ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೌಢಶಾಲಾ ಸಹಶಿಕ್ಷಕರ ಆಗ್ರಹ-ಧರಣಿ

Last Updated 20 ಫೆಬ್ರುವರಿ 2011, 13:25 IST
ಅಕ್ಷರ ಗಾತ್ರ


ಕೊಪ್ಪಳ: ಪ್ರತಿ ತಿಂಗಳು 1ನೇ ತಾರೀಖಿಗೆ ವೇತನ ನೀಡಬೇಕು. ಜಿಲ್ಲಾ ಪಂಚಾಯಿತಿ ಬದಲಾಗಿ ಸರ್ಕಾರವೇ ನೇರವಾಗಿ ವೇತನ ಅನುದಾನ ನೀಡಬೇಕು ಎಂಬುದು ಸೇರಿದಂತೆ ಇತರ ಬೇಡಿಕೆಗಳನ್ನು ಈಡೇರಿಸುವಂತೆ  ಆಗ್ರಹಿಸಿ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾ ಘಟಕದ ಸದಸ್ಯರು ನಗರದಲ್ಲಿ ಶನಿವಾರ ಜಿಲ್ಲಾಡಳಿತ ಭವನದ ಮುಂದೆ ಸಾಂಕೇತಿಕ ಧರಣಿ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾ ಅಧ್ಯಕ್ಷ ಝಾಕೀರ್ ಹುಸೇನ್ ಕುಕನೂರು, ಜಿಲ್ಲಾ ಪಂಚಾಯಿತಿಯಿಂದ ಅನುದಾನ ಬಿಡುಗಡೆ ವಿಳಂಬವಾಗಿ ತೊಂದರೆ ಅನುಭವಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವೇ ವೇತನ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.

ಪ್ರೌಢಶಾಲಾ ಶಿಕ್ಷಕರ ವೇತನ ತಾರತಮ್ಯವನ್ನು ನಿವಾರಣೆ ಮಾಡಬೇಕು. ಪ್ರೌಢಶಾಲೆಗಳ ಸಹಶಿಕ್ಷಕರಿಗೆ 10,800-20,025 ಶ್ರೇಣಿಯ ವೇತನ ನೀಡುವಂತೆ 5ನೇ ವೇತನ ಆಯೋಗ ಶಿಫಾರಸು ಮಾಡಿದ್ದರೂ, ತಾರತಮ್ಯ ಮುಂದುವರಿದಿದೆ ಎಂದು ವಿಷಾದಿಸಿದರು.ಸಹಶಿಕ್ಷಕರ ತತ್ಸಮಾನ ವೃಂದದ ತಾಂತ್ರಿಕ ಕಾಲೇಜುಗಳು ಉಪನ್ಯಾಸಕರು, ವಲಯ ಅರಣ್ಯಾಧಿಕಾರಿಗಳು, ಪಿ.ಐ. ಈಗಾಗಲೇ 11,400-21,600 ರೂಪಾಯಿ ಶ್ರೇಣಿಯ ವೇತನ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಮಗಾಗಿರುವ ಈ ವೇತನ ತಾರತಮ್ಯವನ್ನು ನಿವಾರಣೆ ಮಾಡಬೇಕು ಎಂದು ಅವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.

ಪ್ರೌಢಶಾಲಾ ಸಹಶಿಕ್ಷಕರಿಗೆ ನೀಡುವ ಬಡ್ತಿಯ ಪ್ರಮಾಣವನ್ನು ಶೇ 75ರಿಂದ 100ಕ್ಕೆ ಹೆಚ್ಚಿಸಬೇಕು, ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರಿಗೆ ವೈದ್ಯಕೀಯ ಭತ್ಯೆ, ಕನ್ನಡ ತೇರ್ಗಡೆ, ವಿಶೇಷ ಬಡ್ತಿ, ಕಾಲಮಿತಿ ಬಡ್ತಿ, ಮತ್ತಿತರ ಸೌಲಭ್ಯಗಳನ್ನು ನೀಡಬೇಕು, ವರ್ಗಾವಣೆಗಾಗಿ ನಡೆಯುವ  ಕೌನ್ಸೆಲಿಂಗ್ ವ್ಯವಸ್ಥೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸಬೇಕು, ಎಸ್.ಎಸ್.ಎಲ್.ಸಿ. ಮೌಲ್ಯಮಾಪನ ದರ, ಪರೀಕ್ಷಾ ದರ, ದಿನಭತ್ಯೆಗಳನ್ನು ಪದವಿಪೂರ್ವ ಕಾಲೇಜು ಉಪನ್ಯಾಸಕರಿಗೆ ತತ್ಸಮಾನವಾಗಿ ನೀಡಬೇಕು ಎಂಬುದು ಸೇರಿದಂತೆ ಒಟ್ಟು 19 ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಪ್ರತಿಭಟನಾಕಾರರು, ಧರಣಿ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರಿಗೆ ಸಲ್ಲಿಸಿದರು.

ಸಂಘದ ರಾಜ್ಯ ಕಾರ್ಯದರ್ಶಿ ಮಲ್ಲನಗೌಡ ಗೌಡರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಣ್ಣ ತಳವಾರ, ನಾಲ್ಕು ತಾಲ್ಲೂಕು ಘಟಕಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಈ ಧರಣಿಯಲ್ಲಿ ಪಾಲ್ಗೊಂಡಿದ್ದರು.ಭೇಟಿ-ಬೆಂಬಲ: ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಲಲಿತಾರಾಣಿ ಶ್ರೀರಂಗದೇವರಾಯಲು, ಜಿಲ್ಲಾ ಪಂಚಾಯಿತಿ ಸದಸ್ಯ ನಾಗನಗೌಡ ಮಾಲಿಪಾಟೀಲ ಅವರು ಧರಣಿ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ, ಶಿಕ್ಷಕರ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT