ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ನಿಷೇಧ: ಸಂಕಷ್ಟದಲ್ಲಿ ಸಣ್ಣ ಕೈಗಾರಿಕೆ

ಉಡುಪಿ ನಗರಸಭೆ ವ್ಯಾಪ್ತಿ
Last Updated 14 ಡಿಸೆಂಬರ್ 2012, 12:58 IST
ಅಕ್ಷರ ಗಾತ್ರ

ಉಡುಪಿ: ಉಡುಪಿ ನಗರಸಭೆ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ನಿಷೇಧ ಮಾಡಿರುವ ಕಾರಣ ಜಿಲ್ಲೆಯಲ್ಲಿರುವ ಪ್ಲಾಸ್ಟಿಕ್ ಕೈಗಾರಿಕೆಗಳು ತೀವ್ರ ನಷ್ಟ ಎದುರಿಸುವಂತಾಗಿದೆ. ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ ಕೆಲಸ ಮಾಡುವ ಹಲವರಿಗೆ ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ.

ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಸೆ.15ರಿಂದ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ನಿಷೇಧಿಸಲಾಗಿದೆ. 40 ಮೈಕ್ರಾನ್ ಇರುವ ಕ್ಯಾರಿಬ್ಯಾಗ್ ಅನ್ನೂ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅಲ್ಲದೆ ಪ್ಲಾಸ್ಟಿಕ್ ಲೋಟ, ಸೂಪ್ ಬೌಲ್, ಟೇಬಲ್ ಹಾಸು, ಐಸ್ ಕ್ರೀಂ ಕಪ್‌ಗಳ ಬಳಕೆಗೂ ಕಡಿವಾಣ ಹಾಕಿದ್ದಾರೆ.

ದಶರಥ್ ಪ್ಲಾಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್, ಕಿಣಿ ಪ್ಲಾಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್, ಆನಂದ್ ಪಾಲಿಬ್ಯಾಗ್ಸ್, ಪ್ರಗತಿ ಪ್ಲಾಸ್ಟಿಕ್ಸ್, ಸಿದ್ಧಿ ಪ್ಲಾಸ್ಟಿಕ್ಸ್ (ಕುಂದಾಪುರ), ವಿಘ್ನೇಶ್ವರ ಪ್ಲಾಸ್ಟಿಕ್ಸ್, ವಿಘ್ನೇಶ್ವರ ಪಾಲಿ ಪ್ರಾಡಕ್ಟ್ಸ್ ಹೆಸರಿನ ಒಟ್ಟು ಎಂಟು ಪ್ರಮುಖ ಕೈಗಾರಿಕೆಗಳೂ ಸೇರಿ ಜಿಲ್ಲೆಯಲ್ಲಿ ಸುಮಾರು ಹದಿನೈದರಿಂದ ಇಪ್ಪತ್ತು ಕೈಗಾರಿಕೆಗಳು ಕ್ಯಾರಿಬ್ಯಾಗ್ ಮತ್ತು ಇತರೆ ಪ್ಲಾಸ್ಟಿಕ್ ಉತ್ಪನ್ನಗಳನ್ನು ಉತ್ಪಾದಿಸುತ್ತಿವೆ.

ಮೂರು ತಿಂಗಳಿನಿಂದ ಪ್ಲಾಸ್ಟಿಕ್ ನಿಷೇಧಿಸಿರುವುದರಿಂದ ಕಾರ್ಖಾನೆಗಳು ಸಂಕಷ್ಟಕ್ಕೀಡಾಗಿವೆ. ವರ್ಷವೊಂದಕ್ಕೆ ಸುಮಾರು ಎರಡೂವರೆ ಕೋಟಿ ರೂಪಾಯಿಯ ವಹಿವಾಟು ಖೋತಾ ಆಗಲಿದೆ ಎಂದು ಅಂದಾಜಿಸಲಾಗಿದೆ.
ಪ್ಲಾಸ್ಟಿಕ್‌ಗೆ ನಿಷೇಧ ಹೇರಿರುವುದು ಸರಿಯಲ್ಲ. ಇದನ್ನು ಹಿಂದಕ್ಕೆ ಪಡೆದು ಸಣ್ಣ ಕೈಗಾರಿಕೆಗಳಿಗೆ ಅನುಕೂಲ ಮಾಡಿಕೊಡಿ ಎಂದು ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘ ನಗರಸಭೆಗೆ ಮನವಿ ಮಾಡಿತ್ತು.
ಆದರೆ ನಗರಸಭೆ ಈ ಮನವಿಗೆ ಈ ವರೆಗೆ ಸ್ಪಂದಿಸಿಲ್ಲ.

ಓವನ್ ಫ್ಯಾಬ್ರಿಕ್‌ಗೆ ಅವಕಾಶ ಸರಿಯಲ್ಲ: `ಸಣ್ಣ ಕೈಗಾರಿಕೆಗಳಲ್ಲಿ ಪ್ರಮುಖವಾಗಿ ಕ್ಯಾರಿಬ್ಯಾಗ್‌ಗಳನ್ನು ಉತ್ಪಾದಿಸಲಾಗುತ್ತಿತ್ತು. ಈಗ ನಿಷೇಧ ಇರುವ ಕಾರಣ ನಮ್ಮ ಗ್ರೂಪ್‌ಗೆ ಸೇರಿದ ನಾಲ್ಕು ಕಾರ್ಖಾನೆಗಳಲ್ಲಿ ಪ್ರತಿ ವರ್ಷ ನೂರು ಟನ್ ಉತ್ಪಾದನೆ ಕಡಿಮೆ ಆಗಲಿದೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಲಿದೆ' ಎನ್ನುತ್ತಾರೆ ಪ್ಲಾಸ್ಟಿಕ್ ಕಾರ್ಖಾನೆಯ ಮಾಲೀಕ ಮತ್ತು ಸಣ್ಣ ಕೈಗಾರಿಕಾ ಸಂಘದ ಸಮಿತಿ ಸದಸ್ಯ ಮಟ್ಟಾರ್ ರಮೇಶ್ ಕಿಣಿ.
ಪ್ಲಾಸ್ಟಿಕ್‌ಗೆ ಬದಲಾಗಿ ಪಿ.ಪಿ. ನಾನ್ ಓವನ್ ಫ್ಯಾಬ್ರಿಕ್‌ನ ಕ್ಯಾರಿಬ್ಯಾಗ್‌ಗಳ ಬಳಕೆಗೆ ಅವಕಾಶ ನೀಡಲಾಗಿದೆ. ಆದರೆ ಓವನ್ ಫ್ಯಾಬ್ರಿಕ್‌ನಲ್ಲಿಯೂ ಶೇ 98.3ರಷ್ಟು ಪ್ಲಾಸ್ಟಿಕ್ ಅಂಶ ಇರುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ. ಈ ಹಿನ್ನೆಲೆಯಲ್ಲಿ ಮಾತನಾಡುವುದಾದರೆ ಕೇವಲ ಕ್ಯಾರಿ ಬ್ಯಾಗ್ ನಿಷೇಧ ಅವೈಜ್ಞಾನಿಕವಾಗಿದೆ ಎಂದು ಅವರು ಅಭಿಪ್ರಾಯಪಡುತ್ತಾರೆ.

ದಿನಸಿ, ತಿಂಡಿ- ತಿನಿಸು, ಗುಟ್ಕಾ ಮುಂತಾದವುಗಳನ್ನು ಪ್ಲಾಸ್ಟಿಕ್ ಕವರ್‌ನಲ್ಲಿಯೇ ತುಂಬಿರುತ್ತಾರೆ. ಜನರು ದಿನ ನಿತ್ಯ ಬಳಸುವ ಹಾಲನ್ನೂ ಪ್ಲಾಸ್ಟಿಕ್ ಪ್ಯಾಕೆಟ್‌ಗಳಲ್ಲಿ ತುಂಬಿ ಸರಬರಾಜು ಮಾಡಲಾಗುತ್ತದೆ. ಅಂದರೆ ಪ್ಲಾಸ್ಟಿಕ್ ಜನಜೀನವದ ಅಗತ್ಯ ವಸ್ತುಗಳಲ್ಲಿ ಒಂದಾಗಿದೆ. ಆದರೂ ಇದನ್ನು ನಿಷೇಧಿಸಲಾಗಿದೆ. ಇದಕ್ಕೆ ನಗರಸಭೆ ಕಸ ನಿರ್ವಹಣೆ ಮುಂತಾದ ಸಬೂಬು ನೀಡುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ನಲವತ್ತು ಮೈಕ್ರಾನ್‌ಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳನ್ನು ಮಾತ್ರ ಬಳಸಬಾರದು ಎಂದು ಕೇಂದ್ರ ಪರಿಸರ ಇಲಾಖೆ ಆದೇಶ ಮಾಡಿದೆ. ಆದರೆ ಉಡುಪಿಯಲ್ಲಿ ನಲವತ್ತು ಮೈಕ್ರಾನ್ ಇರುವ ಕ್ಯಾರಿ ಬ್ಯಾಗ್ ಬಳಕೆಗೂ ಅವಕಾಶ ನೀಡುತ್ತಿಲ್ಲ. ನಗರಸಭೆ ದ್ವಂದ್ವ ನಿಲುವು ತಳೆದಿದೆ ಎಂದು ಕಾರ್ಖಾನೆಗಳ ಮಾಲೀಕರು ದೂರುತ್ತಾರೆ.

ಫ್ಯಾಬ್ರಿಕ್ ಕ್ಯಾರಿಬ್ಯಾಗ್ ಉತ್ಪಾದನೆ ದುಬಾರಿ: `ಸರ್ಕಾರವೇ ಕೈಗಾರಿಕೆ ಆರಂಭಿಸಲು ಅನುಮತಿ ನೀಡಿತ್ತು. ಆದರೆ ಈಗ ಉತ್ಪಾದನೆ ಮಾಡಬೇಡಿ ಎಂದು ಹೇಳುತ್ತಿರುವುದು ಯಾವ ನ್ಯಾಯ. ಈಗಾಗಲೇ ತಯಾರಿಸಿರುವ ಕ್ಯಾರಿ ಬ್ಯಾಗ್ ಹಾಗೆಯೇ ಉಳಿದಿವೆ. ಈಗ ಬರುತ್ತಿರುವ ಆರ್ಡರ್‌ಗಳನ್ನು ಪಡೆಯಬೇಕೋ ಬೇಡವೋ ಎಂಬ ಗೊಂದಲವೂ ಉಂಟಾಗಿದೆ' ಎಂದು ವಿಘ್ನೇಶ್ ಪ್ಲಾಸ್ಟಿಕ್ ಇಂಡಸ್ಟ್ರೀಸ್‌ನ ಮಾಲೀಕ ಕೆ. ಮಹೇಶ್ ಹೇಳುತ್ತಾರೆ.

`ಸಾಲ ಮಾಡಿ ಬಂಡವಾಳ ಹೂಡಿ ನೂರಕ್ಕೂ ಅಧಿಕ ಮಂದಿಗೆ ಕೆಲಸ ನೀಡಲಾಗಿದೆ. ಆದರೆ ಈಗ ಪ್ಲಾಸ್ಟಿಕ್ ನಿಷೇಧ ಆಗಿರುವ ಕಾರಣ ಸಾಲ ಕಟ್ಟಲು ಕಷ್ಟವಾಗುತ್ತಿದೆ. ನಿಷೇಧ ಹೇರುವ ಬದಲು ಪ್ಲಾಸ್ಟಿಕ್ ಬಳಕೆ ಮತ್ತು ಮರು ಬಳಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು.

ಪ್ಲಾಸ್ಟಿಕ್ ಎಲ್ಲೆಂದರಲ್ಲಿ ಎಸೆಯುವವರಿಗೆ ದಂಡ ವಿಧಿಸಬೇಕು. ಆಗ, ಪರಿಸ್ಥಿತಿ ಸುಧಾರಣೆ ಆಗುತ್ತದೆ. ಇದನ್ನು ಬಿಟ್ಟು ಏಕಾಏಕಿ ನಿಷೇಧ ಎಂದರೆ ಹೇಗೆ ಎಂದು ಅವರು ಪ್ರಶ್ನಿಸುತ್ತಾರೆ. 

ಪಿ.ಪಿ. ನಾನ್ ಓವನ್ ಫ್ಯಾಬ್ರಿಕ್‌ನ ಕ್ಯಾರಿಬ್ಯಾಗ್‌ಗಳನ್ನು ಉತ್ಪಾದನೆ ಮಾಡೋಣ ಎಂದರೆ ಅದಕ್ಕೆ ಹೆಚ್ಚಿನ ಬಂಡವಾಳ ಬೇಕು. ಕನಿಷ್ಠ ಐದರಿಂದ ಆರು ಕೋಟಿ ರೂಪಾಯಿಗಳ ಬಂಡವಾಳವನ್ನು ಹೂಡಬೇಕಾಗುತ್ತದೆ. ಇಷ್ಟೊಂದು ಹಣವನ್ನು ಸಣ್ಣ ಕೈಗಾರಿಕೆಗಳ ಮಾಲೀಕರು ಹೂಡುವುದು ಕಷ್ಟಸಾಧ್ಯವಾಗಿದೆ. ಸರ್ಕಾರ ಇದನ್ನೂ ಮುಂದೊಂದು ದಿನ ನಿಷೇಧಿಸಿದರೆ ಏನು ಗತಿ ಎನ್ನುತ್ತಾರೆ ಮಹೇಶ್.

ನಗರಸಭೆ ಪ್ಲಾಸ್ಟಿಕ್ ನಿಷೇಧವನ್ನು ಕಟ್ಟುನಿಟ್ಟು ಮಾಡಿದ್ದ, ಅಂಗಡಿಗಳ ಮೇಲೆ ದಾಳಿ ನಡೆಸಿ ಕ್ಯಾರಿ ಬ್ಯಾಗ್‌ಗಳನ್ನು ವಶಪಡಿಸಿಕೊಳ್ಳುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT