ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್ ತ್ಯಾಜ್ಯ ಮಾಲಿನ್ಯ: ಜಾಗೃತಿಗೆ ಗಣ್ಯರ ಸಹಕಾರ ಅಗತ್ಯ

Last Updated 19 ಡಿಸೆಂಬರ್ 2010, 11:25 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ಲಾಸ್ಟಿಕ್ ತ್ಯಾಜ್ಯದಿಂದಾಗುವ ದುಷ್ಪರಿಣಾಮಗಳು ಮತ್ತು ಪರಿಸರ ಮಾಲಿನ್ಯದಿಂದಾಗುವ ಅಪಾಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಎಲ್ಲ ಕ್ಷೇತ್ರದ ಗಣ್ಯರು ಕೈ ಜೋಡಿಸಬೇಕು’ ಎಂದು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಎ.ಎಸ್.ಸದಾಶಿವಯ್ಯ ಅಭಿಪ್ರಾಯಪಟ್ಟರು.

ಕೃಷಿ ತಂತ್ರಜ್ಞರ ಸಂಸ್ಥೆಯ ಸ್ಥಾಪನಾ ದಿನಾಚರಣೆ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ‘ಮಾಲಿನ್ಯ ನಿಯಂತ್ರಣ: ಪ್ಲಾಸ್ಟಿಕ್ ಬಳಕೆ ತಡೆಗಟ್ಟುವಿಕೆ’ ಕುರಿತು ಅವರು ಮುಖ್ಯ ಭಾಷಣ ಮಾಡಿದರು.

‘ಬೆಂಗಳೂರಿನಲ್ಲಿ ಪ್ರತಿ ದಿನ 3500 ಟನ್, ರಾಜ್ಯದಲ್ಲಿ 1.25 ಲಕ್ಷ ಟನ್ ಘನ ತ್ಯಾಜ್ಯ ಉತ್ಪಾದನೆ ಆಗುತ್ತಿದೆ. ಈ ಕಸದಲ್ಲಿ ಶೇಕಡಾ 10ರಷ್ಟು ಪ್ಲಾಸ್ಟಿಕ್ ತ್ಯಾಜ್ಯ ತುಂಬಿರುತ್ತದೆ.
‘ಹಾನಿಕಾರಕ ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು’ ಎಂದು ಹೇಳಿದ ಅವರು, ‘ನಿವೃತ್ತ ಕೃಷಿ ವಿಜ್ಞಾನಿಗಳು ತಾವಿರುವ ಕಡೆಯೇ ಮಾಲಿನ್ಯ ಮತ್ತು ಪ್ಲಾಸ್ಟಿಕ್‌ನಿಂದಾಗುವ ತೊಂದರೆಗಳ ಬಗ್ಗೆ ಅರಿವು ಮೂಡಿಸಲು ಯತ್ನಿಸಬೇಕು’ ಎಂದು ಹೇಳಿದರು.

‘ಬೆಲ್ಜಿಯಂ ದೇಶದಲ್ಲಿ ಎಲೆಕ್ಟ್ರಾನಿಕ್ ತ್ಯಾಜ್ಯ (ಇ-ವೇಸ್ಟ್) ವಸ್ತುಗಳಿಂದ ಚಿನ್ನ ಉತ್ಪಾದಿಸಲಾಗುತ್ತಿದೆ. ಅಲ್ಲಿನ ಒಂದು ಕಾರ್ಖಾನೆ ಇ- ತ್ಯಾಜ್ಯದಿಂದ ವರ್ಷಕ್ಕೆ 20 ಟನ್ ಚಿನ್ನ ಉತ್ಪಾದಿಸುತ್ತಿದೆ. ಭಾರತದಲ್ಲೂ ಇ- ತ್ಯಾಜ್ಯದ ಸಮಸ್ಯೆ ಬೃಹದಾಕಾರವಾಗಿ ಬೆಳೆಯುತ್ತಿದೆ. ಅವುಗಳ ಸೂಕ್ತ ವಿಲೇವಾರಿಗೆ ಕ್ರಮ ಕಂಡುಕೊಳ್ಳಬೇಕಾಗಿದೆ’ ಎಂದರು.

ಹಿರಿಯ ಸಾಹಿತಿ ಡಾ.ಹಂಪ ನಾಗರಾಜಯ್ಯ ಮಾತನಾಡಿ, ‘ಯಾವುದೇ ಒಂದು ದೇಶ ಮಹಾನ್ ಎಂದು ಕರೆಸಿಕೊಳ್ಳಬೇಕಾದರೆ ಅದರ ಜನರೂ ಗುಣ ಸಂಪನ್ನರಾಗಿರಬೇಕು. ಭೌಗೋಳಿಕ ವಿಸ್ತೀರ್ಣದಿಂದಾಗಲಿ ಜನಸಂಖ್ಯೆಯಿಂದಾಗಲಿ ದೇಶದ ದೊಡ್ಡಸ್ತಿಕೆ ನಿರ್ಧಾರವಾಗದು. ಕೃಷಿ ವಿಜ್ಞಾನಿಗಳನ್ನು ಸನ್ಮಾನಿಸುತ್ತಿರುವುದು ಸ್ತುತ್ಯರ್ಹ’ ಎಂದರು.

ಸಂಸ್ಥೆಗೆ ಸಲ್ಲಿಸಿರುವ ಸೇವೆಗಾಗಿ ವಿಶ್ವ ಬ್ಯಾಂಕ್‌ನ ಮಾಜಿ ಸಲಹೆಗಾರ ಡಾ.ಟಿ.ವಿ.ಸಂಪತ್ ಹಾಗೂ ಇಪ್ಪತ್ತಕ್ಕೂ ಹೆಚ್ಚು ಮಂದಿ ಹಿರಿಯ ಕೃಷಿ ತಂತ್ರಜ್ಞರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಕೆ.ವಿ.ಸರ್ವೇಶ್ ಅಧ್ಯಕ್ಷತೆ ವಹಿಸಿದ್ದರು. ಸ್ಥಾಪನಾ ದಿನಾಚರಣೆ ಕುರಿತು ಡಾ.ವಿ.ವೀರಭದ್ರಯ್ಯ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಕೆ.ಜೆ.ದೇವೇಂದ್ರಪ್ಪ ಸ್ವಾಗತಿಸಿದರು. ಕೆ.ಕೃಷ್ಣಪ್ಪ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT