ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಸೆಡ್ಡು ಹೊಡೆದ ಪಾಲಿಕೆ

Last Updated 10 ಆಗಸ್ಟ್ 2012, 7:25 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅವಳಿನಗರದ ಜನತೆ ಬಳಸಿ ಬಿಸಾಡಿದ ಪ್ಲಾಸ್ಟಿಕ್ ಅವಶೇಷದ ಮರು ಬಳಕೆಗೆ ಪಾಲಿಕೆ ಮುಂದಾಗಿದ್ದು, ಈ ಸಂಬಂಧ ಖಾಸಗಿ ಸಂಸ್ಥೆ ಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ಉದ್ದೇಶಿ ಸಿದೆ. ಯೋಜನೆ ಪ್ರಕಾರ ಇನ್ನುಮುಂದೆ ಪಾಲಿಕೆ ಕಾರ್ಮಿಕರು ಪ್ಲಾಸ್ಟಿಕ್ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಿ, ಅದನ್ನು ಸಂಸ್ಕರಿಸಲು ಗೋಕುಲ ರಸ್ತೆಯ ಧಾರವಾಡ ಪ್ಲಾಸ್ಟಿಕ್ ಇಂಡಸ್ಟ್ರಿಗೆ ಸಾಗಿಸಲಿದ್ದಾರೆ.

ಪಾಲಿಕೆ ಆರೋಗ್ಯ ಶಾಖೆ ಅವಳಿನಗರದಲ್ಲಿ ದಾಳಿ ನಡೆಸಿ ಸಂಗ್ರಹಿಸುವ 40 ಮೈಕ್ರಾನ್‌ಗಿಂತ ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಬ್ಯಾಗ್‌ಗಳೂ ಇನ್ನು ಮುಂದೆ ಗೋಕುಲ ರಸ್ತೆಯತ್ತ ಹೊರಡ ಲಿವೆ. ಧಾರವಾಡ ಪ್ಲಾಸ್ಟಿಕ್ ಇಂಡಸ್ಟ್ರಿ ಸಂಸ್ಥೆ ಅವುಗಳನ್ನು ಕರಗಿಸಿ, ಪ್ಲಾಸ್ಟಿಕ್ ಬಿಲ್ಲೆಗಳ ನ್ನಾಗಿ ಮಾಡಿ, ಸಾಮಗ್ರಿ ಸಿದ್ಧಪಡಿಸಲು ಕಾರ್ಖಾನೆಗೆ ಕಳುಹಿಸಲಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಇದುವರೆಗೆ ಸಂಗ್ರಹ ವಾಗುತ್ತಿದ್ದ ಪ್ಲಾಸ್ಟಿಕ್ ತ್ಯಾಜ್ಯವನ್ನು ಡಂಪ್ ಯಾರ್ಡ್‌ನಲ್ಲೇ ಒಯ್ದು ಸುರಿಯಲಾಗುತ್ತಿದೆ. ಕರಗದ ಈ ತ್ಯಾಜ್ಯವನ್ನು ಸಿಬ್ಬಂದಿ ಒಟ್ಟುಗೂಡಿಸಿ ಬೆಂಕಿ ಇಟ್ಟಾಗ ರಾಸಾಯನಿಕಯುಕ್ತ ವಿಷಗಾಳಿ ಮೇಲೇಳುತ್ತಿದೆ. ಬೆಂಕಿಯಲ್ಲಿ ಕರಗಿದ ಪ್ಲಾಸ್ಟಿಕ್ ನೆಲದ ಮೇಲೆ ಸೋರಿ ಮಾಲಿನ್ಯದ ಪ್ರಮಾಣವನ್ನು ಹೆಚ್ಚಿಸುತ್ತಿದೆ. ಇತ್ತ ನಗರದ ಹಾದಿ-ಬೀದಿಗಳಲ್ಲಿ ಬಿದ್ದ ಪ್ಲಾಸ್ಟಿಕ್ ಚರಂಡಿ ಸೇರಿ, ಕೊಳಚೆ ನೀರು ಮುಂದೆ ಸಾಗದಂತೆ ತಡೆ ಒಡ್ಡುತ್ತಿದೆ. ಒಂದೇ ಏಟಿನಲ್ಲಿ ಎರಡೂ ಸಮಸ್ಯೆಗಳನ್ನು ಹೊಡೆದು ರುಳಿಸಲು ಪಾಲಿಕೆ ಉದ್ದೇಶಿಸಿದೆ.

ಪಾಲಿಕೆ ಹಾಕಿಕೊಂಡ ಈ ಯೋಜನೆಯಿಂದ ಆದಾಯವೂ ಬರುತ್ತದೆ. ಪ್ರತಿ ಕೆಜಿ ಪ್ಲಾಸ್ಟಿಕ್‌ಗೆ ಧಾರವಾಡ ಪ್ಲಾಸ್ಟಿಕ್ ಇಂಡಸ್ಟ್ರಿ ಸಂಸ್ಥೆ 40 ರೂಪಾಯಿ ನೀಡಲಿದೆ. `ರಸ್ತೆಯ ಮೇಲೆ ಬಿದ್ದ ಪ್ಲಾಸ್ಟಿಕ್ ತ್ಯಾಜ್ಯವನ್ನು ಪಾಲಿಕೆ ವತಿಯಿಂದಲೇ ಸಂಗ್ರಹಿಸಿ ಸಂಸ್ಕರಣಕ್ಕೆ ಸಾಗಿಸಲು ಉದ್ದೇಶಿಸಲಾಗಿದೆ~ ಎನ್ನುತ್ತಾರೆ ಪಾಲಿಕೆ ಆಯುಕ್ತ ವೈ.ಎಸ್. ಪಾಟೀಲ. ಗುರುವಾರವಷ್ಟೇ ಸಂಸ್ಕರಣಕ್ಕೆ ಭೇಟಿ ನೀಡಿ ಪರಿಶೀಲಿಸಿರುವ ಅವರು, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪರವಾನಗಿ ಪಡೆದ ಘಟಕ ಇದಾಗಿದ್ದರಿಂದ ಒಪ್ಪಂದ ಮಾಡಿಕೊಳ್ಳಲು ಯಾವ ತಾಪತ್ರಯವೂ ಇಲ್ಲ ಎಂದು ವಿವರಿಸುತ್ತಾರೆ.

ಧಾರವಾಡ ಪ್ಲಾಸ್ಟಿಕ್ ಇಂಡಸ್ಟ್ರಿ ಘಟಕದಲ್ಲಿ ಮೂರು ಹಂತದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಸ್ಕರಣಗೊಳ್ಳುತ್ತದೆ. ಹಿಟ್ಟಿನ ಗಿರಣಿಯಂತೆ ಕಾಣುವ ಇಲ್ಲಿಯ ಯಂತ್ರಗಳು ಮೊದಲ ಹಂತದಲ್ಲಿ ತ್ಯಾಜ್ಯವನ್ನು ಸಣ್ಣ ತುಂಡುಗಳನ್ನಾಗಿ ಕತ್ತರಿಸುತ್ತವೆ. ಎರಡನೇ ಹಂತದಲ್ಲಿ ಅವುಗಳನ್ನು ಕರಗಿ ಸುತ್ತದೆ. ಕೊನೆಯ ಹಂತದಲ್ಲಿ ಪ್ಲಾಸ್ಟಿಕ್ ಬಿಲ್ಲೆಗಳನ್ನಾಗಿ ಪರಿವರ್ತಿಸಿ ಹೊರಕ್ಕೆ ಕಳುಹಿಸುತ್ತದೆ.

ಹೈದರಾಬಾದ್ ಮೂಲದ ಸಂಸ್ಥೆಗಳು ಪ್ಲಾಸ್ಟಿಕ್ ನೆಲಹಾಸು, ಬಕೇಟ್ ಮತ್ತಿತರ ಸಾಮಗ್ರಿ ತಯಾರಿಸಲು ಈ ಬಿಲ್ಲೆಗಳನ್ನು ಖರೀದಿಸುತ್ತವೆ ಎಂದು ಮಾಹಿತಿ ನೀಡುತ್ತಾರೆ ಪಾಲಿಕೆ ಪರಿಸರ ವಿಭಾಗದ ಎಂಜಿನಿಯರ್ ಗಿರೀಶ ತಳವಾರ. ಪ್ರಾಯೋಗಿಕವಾಗಿ ಈಗಾಗಲೇ 500 ಕೆಜಿಯಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಸ್ಕರಣೆಗಾಗಿ ಕಳುಹಿಸಿ ಕೊಡಲಾಗಿದೆ. ಇನ್ನುಮುಂದೆ ಈ ಪ್ರಕ್ರಿಯೆ ಮುಂದುವರಿಯಲಿದೆ ಎಂದು ಅವರು ಹೇಳುತ್ತಾರೆ.

`ತ್ಯಾಜ್ಯವನ್ನು ಘಟಕಕ್ಕೆ ತಲುಪಿಸುವ ಹೊಣೆ ಮಾತ್ರ ಪಾಲಿಕೆಯದ್ದು. ಅದನ್ನು ಸಂಸ್ಕರಿಸಿ ಮಾರಾಟ ಮಾಡುವ ಹೊಣೆ ಖಾಸಗಿ ಸಂಸ್ಥೆಯದ್ದೇ~ ಎಂದು ತಳವಾರ ಸ್ಪಷ್ಟಪಡಿಸುತ್ತಾರೆ. ಮಾರುಕಟ್ಟೆ ಪ್ರದೇಶದಲ್ಲಿ ಅಧಿಕವಾಗಿರುವ ಪ್ಲಾಸ್ಟಿಕ್ ತ್ಯಾಜ್ಯದ ಮೂಲೋತ್ಪಾಟನೆಗೆ ಈ ಯೋಜನೆಯಿಂದ ಅನುಕೂಲವಾಗಲಿದೆ.

ಪರಿಸರ ಮಾಲಿನ್ಯವೂ ತಗ್ಗಲಿದೆ. ಸುಪ್ರೀಂ ಕೋರ್ಟ್ ಆದೇಶವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಸಾಧ್ಯವಾಗಲಿದೆ ಎಂದು ಅವರು ಲಾಭಗಳನ್ನು ಪಟ್ಟಿ ಮಾಡುತ್ತಾರೆ.

`ಈಗಾಗಲೇ ಪ್ಲಾಸ್ಟಿಕ್ ಪೂರೈಕೆ ಆರಂಭಿಸಲಾಗಿದ್ದು, ಶೀಘ್ರವೇ ಔಪಚಾರಿಕ ಒಪ್ಪಂದ ಮಾಡಿಕೊಳ್ಳಲಾಗುತ್ತದೆ~ ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT