ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್ ಬಳಕೆ ತಡೆ: ಕಾರ್ಯಾಚರಣೆ ಶುರು

Last Updated 20 ಜೂನ್ 2012, 10:00 IST
ಅಕ್ಷರ ಗಾತ್ರ

ಯಾದಗಿರಿ: ನಗರದಾದ್ಯಂತ ಪ್ಲಾಸ್ಟಿಕ್ ಬಳಕೆ ತಡೆಗೆ ನಗರಸಭೆಯ ವತಿಯಿಂದ ಕಾರ್ಯಾಚರಣೆ ಆರಂಭವಾಗಿದ್ದು, ಒಂದೆಡೆ ನಗರಸಭೆಯ ಸದಸ್ಯರಿಂದಲೇ ಬಟ್ಟೆಯ ಚೀಲಗಳ ವಿತರಣೆ ನಡೆಯುತ್ತಿದ್ದರೆ, ಇನ್ನೊಂದೆಡೆ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಚೀಲಗಳ ಬಳಕೆ ಮಾಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ.

ಮಂಗಳವಾರ ನಗರದ ವಿವಿಧ ಬಡಾವಣೆಗಳಲ್ಲಿ ಮನೆ ಮನೆಗೆ ತೆರಳಿದ ನಗರಸಭೆ ಅಧ್ಯಕ್ಷೆ ಲಿಲಿತಾ ಅನಪೂರ ಹಾಗೂ ಸದಸ್ಯರಾದ ಸುರೇಶ ಮಡ್ಡಿ, ಅಬ್ದುಲ್ ಕರೀಮ್, ಅಲ್ಲಿನ ನಿವಾಸಿಗಳಿಗೆ ಬಟ್ಟೆಯ ಚೀಲಗಳನ್ನು ವಿತರಿಸಿದರು. ಅಲ್ಲದೇ ಮಾರುಕಟ್ಟೆಗೆ ಹೋಗುವಾಗ ಇದೇ ಚೀಲಗಳನ್ನು ಬಳಕೆ ಮಾಡಬೇಕು. ಪ್ಲಾಸ್ಟಿಕ್ ಚೀಲಗಳನ್ನು ಕೊಟ್ಟರೂ ತರಬಾರದು. ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ತಿಳಿವಳಿಕೆ ನೀಡಲಾಯಿತು.

ಇಲ್ಲಿಯ ಸ್ಟೇಶನ್ ಏರಿಯಾದ ಭವಾನಿ ದೇವಾಲಯದಿಂದ ಕಾರ್ಯಕ್ರಮ ಆರಂಭಿಸಿದ ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ, ಲಾಡಜ್‌ಗಲ್ಲಿ, ಸ್ಟೇಶನ್ ರಸ್ತೆಗಳಲ್ಲಿ ಮನೆ ಮನೆಗೆ ತೆರಳಿ, ಮಹಿಳೆಯರಿಗೆ, ರಸ್ತೆಯಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ತೆಗೆದುಕೊಂಡು ಹೋಗುತ್ತಿದ್ದವರಿಗೆ ಬಟ್ಟೆಯ ಚೀಲಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಗರದಾದ್ಯಂತ ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ನಿರ್ಬಂಧಿಸುವುದು ಅತ್ಯವಶ್ಯಕವಾಗಿದೆ. ಪರಿಸರ ಉಳಿಸುವುದಕ್ಕಾಗಿ ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ನಿಲ್ಲಿಸಬೇಕಾಗಿದೆ. ಮುಂದಿನ ಪೀಳಿಗೆಗೆ ಒಳ್ಳೆಯ ಪರಿಸರವನ್ನು ಬಿಟ್ಟು ಹೋಗುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಈಗಿನಿಂದಲೇ ಪ್ಲಾಸ್ಟಿಕ್ ಬಳಕೆಯನ್ನು ತಡೆಯಬೇಕಾಗಿದೆ ಎಂದು ತಿಳಿಸಿದರು.

ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ನಿಯಂತ್ರಿಸಲು ನಗರಸಭೆಯ ಸದಸ್ಯರು ತಮ್ಮ ಸ್ವಂತ ಖರ್ಚಿನಲ್ಲಿ ಬಟ್ಟೆಯ ಚೀಲಗಳನ್ನು ತಯಾರಿಸಿದ್ದು, ಸಾರ್ವಜನಿಕರಿಗೆ ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಈ ಚೀಲಗಳನ್ನು ತೆಗೆದುಕೊಂಡು ಮಾರುಕಟ್ಟೆಗೆ ಹೋಗುವುದರಿಂದ ಪ್ಲಾಸ್ಟಿಕ್ ಚೀಲಗಳನ್ನು ತರುವುದು ತಪ್ಪಲಿದೆ ಎಂದು ಹೇಳಿದರು.

ಅಂಗಡಿಗಳ ಮೇಲೆ ದಾಳಿ: ನಗರದ ಗಾಂಧಿ ವೃತ್ತದಲ್ಲಿರುವ ಕೆಲ ಅಂಗಡಿಗಳ ಮೇಲೆ ಮಂಗಳವಾರ ನಗರಸಭೆಯ ಅಧಿಕಾರಿಗಳು ದಾಳಿ ನಡೆಸಿದ್ದು, ಪ್ಲಾಸ್ಟಿಕ್ ಚೀಲಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ಲಾಸ್ಟಿಕ್ ಕಪ್‌ಗಳು, ಸೇರಿದಂತೆ ಹಲವಾರು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರಸಭೆಯ ಸಾಮಾನ್ಯ ಸಭೆಯಲ್ಲಿಯೇ ಪ್ಲಾಸ್ಟಿಕ್ ಬಳಕೆ ನಿಷೇಧಿಸುವ ನಿರ್ಣಯ ತೆಗೆದುಕೊಳ್ಳಲಾಗಿದ್ದು, ಪ್ಲಾಸ್ಟಿಕ್ ಚೀಲಗಳನ್ನು ಬಳಕೆ ಮಾಡದೇ ಇರಲು ನಾಗರಿಕರಲ್ಲಿ ತಿಳಿವಳಿಕೆ ಮೂಡಿಸಲಾಗುತ್ತಿದೆ. ಇದರ ಅಂಗವಾಗಿಯೇ ಅಂಗಡಿಗಳ ಮೇಲೆಯೂ ದಾಳಿ ನಡೆಸಲಾಗುತ್ತಿದ್ದು, ವರ್ತಕರಿಗೂ ಪ್ಲಾಸ್ಟಿಕ್ ಬಳಕೆ ಮಾಡದಂತೆ ತಿಳಿವಳಿಕೆ ನೀಡಲಾಗುತ್ತಿದೆ. ಇದರಿಂದಾಗಿ ಪ್ಲಾಸ್ಟಿಕ್ ಚೀಲಗಳ ಬಳಕೆ ನಿಲ್ಲಲಿ ಎಂಬುದು ತಮ್ಮ ಆಶಯವಾಗಿದೆ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೊಂದೆಡೆ ಅಂಗಡಿಗಳಲ್ಲಿಯೂ ಪ್ಲಾಸ್ಟಿಕ್ ಚೀಲಗಳಿಗೆ ಇದೀಗ ಹಣ ವಸೂಲಿ ಮಾಡಲಾಗುತ್ತಿದ್ದು, ಹೀಗಾದರೂ ಜನರು ಪ್ಲಾಸ್ಟಿಕ್ ಚೀಲಗಳನ್ನು ತೆಗೆದುಕೊಳ್ಳಲು ಹಿಂದೇಟು ಹಾಕಬಹುದು ಎಂದು ವರ್ತಕರು ಹೇಳುತ್ತಿದ್ದಾರೆ.

ಕೆಲವೆಡೆ ಒಂದೊಂದು ಪ್ಲಾಸ್ಟಿಕ್ ಚೀಲಗಳಿಗೆ ರೂ. 2 ಹಾಗೂ ರೂ. 5 ಅನ್ನು ತೆಗೆದುಕೊಳ್ಳಲಾಗುತ್ತಿದ್ದು, ಗ್ರಾಹಕರು ಇಷ್ಟೊಂದು ಹಣ ನೀಡಿ ಪ್ಲಾಸ್ಟಿಕ್ ಚೀಲಗಳನ್ನು ಖರೀಸುವುದಾದರೂ ಏತಕ್ಕೆ ಎಂದು ಕೇಳುವಂತಾಗಿದೆ. ಹೀಗಾಗಿ ಈಗಾಗಲೇ ಕೆಲವೆಡೆ ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ಗ್ರಾಹಕರು ನಿಲ್ಲಿಸಿದ್ದು, ನಗರಸಭೆಯಿಂದ ನಿರಂತರವಾಗಿ ಇಂತಹ ಕಾರ್ಯಕ್ರಮಗಳು ನಡೆದಲ್ಲಿ ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಾಗಲಿದೆ ಎಂದು ಕರವೇ ವಿದ್ಯಾರ್ಥಿ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಕರಬಸಪ್ಪ ಬಿರಾಳ ಹೇಳುತ್ತಾರೆ.

ನಗರದಾದ್ಯಂತ ಪ್ಲಾಸ್ಟಿಕ್ ಬಳಕೆ ತಡೆಯುವಲ್ಲಿ ನಗರಸಭೆಯಿಂದ ಕೈಗೊಳ್ಳಲಾದ ಕ್ರಮ ಸ್ವಾಗತಾರ್ಹವಾಗಿದ್ದು, ಪರ್ಯಾಯವಾಗಿ ನಾಗರಿಕರಿಗೆ ಚೀಲಗಳು ಸುಲಭ ದರದಲ್ಲಿ ದೊರೆಯುವಂತಹ ವ್ಯವಸ್ಥೆ ಮಾಡಬೇಕು ಎನ್ನುವುದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಯುವ ವಿಭಾಗದ ತಾಲ್ಲೂಕು ಘಟಕದ ಅಧ್ಯಕ್ಷ ನಿಂಗು ಜಡಿ ಅವರ ಸಲಹೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT