ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್ ಹಾವಳಿ ಕಡಿವಾಣಕ್ಕೆ ನಿರ್ಲಕ್ಷ್ಯ

Last Updated 23 ಜುಲೈ 2012, 5:50 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆ ಪ್ರಮಾಣ ಹೆಚ್ಚುತ್ತಿದ್ದು, ಪರಿಸರ ಮಾಲಿನ್ಯಕ್ಕೆ ದಾರಿ ಮಾಡಿಕೊಟ್ಟಿದೆ.

ನಗರದ ಅಂಗಡಿಗಳು, ಹೋಟೆಲ್‌ಗಳಲ್ಲಿ ದಿನಸಿ ಪದಾರ್ಥ, ಆಹಾರವನ್ನು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿಕೊಡುವುದು ಸಾಮಾನ್ಯವಾಗಿದೆ. ಪ್ಲಾಸ್ಟಿಕ್ ಬದಲಿಗೆ ಬಟ್ಟೆಬ್ಯಾಗ್ ಬಳಸುವ ಮನೋಧರ್ಮ ನಾಗರಿಕರಿಂದಲೂ ಪಾಲನೆಯಾಗುತ್ತಿಲ್ಲ. ಜತೆಗೆ, ಈ ಕುರಿತು ಅರಿವು ಮೂಡಿಸುವ ಕಾರ್ಯ ನಗರಸಭೆಯಿಂದಲೂ ನಡೆಯುತ್ತಿಲ್ಲ. ಹೀಗಾಗಿ, ರಸ್ತೆಬದಿ, ಬಡಾವಣೆಯ ಖಾಲಿ ಸ್ಥಳಗಳು, ಖಾಲಿ ನಿವೇಶನಗಳಲ್ಲಿ ಪ್ಲಾಸ್ಟಿಕ್ ವಸ್ತುಗಳು ರಾರಾಜಿಸುತ್ತಿವೆ.

ಈ ಹಿಂದೆಯೇ 40 ಮೈಕ್ರಾನ್‌ಗಿಂತಲೂ ಕಡಿಮೆ ಪ್ರಮಾಣ ಹೊಂದಿರುವ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಂತೆ ಜಿಲ್ಲಾ ಕೇಂದ್ರದ ವ್ಯಾಪ್ತಿ ನಿಷೇಧ ಹೇರಲಾಗಿದೆ. ಆದರೆ, ನಗರಸಭೆಯ ಈ ಆದೇಶ ಪಾಲನೆಯಾಗುತ್ತಿಲ್ಲ.
ಮರುಬಳಕೆಗೂ ಸಾಧ್ಯವಿಲ್ಲದಂತಹ ಪ್ಲಾಸ್ಟಿಕ್ ವಸ್ತುಗಳನ್ನು ಗ್ರಾಹಕರಿಗೆ ನೀಡುವಲ್ಲಿ ವ್ಯಾಪಾರಿಗಳು ಮುಂದಾಗಿದ್ದಾರೆ. ಇದು ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಪರಿಸರ ಸ್ನೇಹಿಯಾದ ಬಟ್ಟೆಬ್ಯಾಗ್ ಬಳಕೆ ಪ್ರಮಾಣ ಕಡಿಮೆ. ಸುಲಭವಾಗಿ ವಸ್ತುಗಳನ್ನು ಮನೆಗೆ ಸಾಗಿಸಲು ಗ್ರಾಹಕರು ಪ್ಲಾಸ್ಟಿಕ್ ಚೀಲಗಳನ್ನೇ ಅವಲಂಬಿಸಿದ್ದಾರೆ. ನಾಗರಿಕರ ಮನಸ್ಥಿತಿ ಅರಿತಿರುವ ವ್ಯಾಪಾರಿಗಳು ಎಗ್ಗಿಲ್ಲದೆ ಪ್ಲಾಸ್ಟಿಕ್ ಚೀಲಗಳನ್ನು ಬಳಸುತ್ತಿದ್ದಾರೆ. ಆದರೆ, ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲಾಗುವ ದುಷ್ಪರಿಣಾಮ ಕುರಿತು ಅರಿವು ಇಲ್ಲದಂತಾಗಿದೆ ಎಂಬುದು ಪರಿಸರವಾದಿಗಳ ಆತಂಕ.

ನಗರಸಭೆಯ ಅಧಿಕಾರಿಗಳು ಕೂಡ ವಾರಕ್ಕೊಮ್ಮೆ ಅಂಗಡಿಗಳು, ಹೋಟೆಲ್‌ಗಳಿಗೆ ಭೇಟಿ ನೀಡಿ ಪ್ಲಾಸ್ಟಿಕ್ ಬಳಕೆ ಪ್ರಮಾಣವನ್ನು ಪರಿಶೀಲಿಸುವ ಕಾರ್ಯಕ್ಕೆ ಮುಂದಾಗಿಲ್ಲ.

ಹೀಗಾಗಿ, ವ್ಯಾಪಾರಿಗಳು ತಲೆಕೆಡಿಸಿಕೊಳ್ಳುವ ಗೋಜಿಗೆ ಹೋಗುತ್ತಿಲ್ಲ. ಕಲ್ಯಾಣ ಮಂಟಪಗಳಲ್ಲೂ ಊಟದ ಟೇಬಲ್‌ಗೆ ತೆಳುವಾದ ಪ್ಲಾಸ್ಟಿಕ್ ಪೇಪರ್ ಬಳಸುವ ಪದ್ಧತಿ ಇದೆ. ಭೋಜನ ಮುಗಿದ ನಂತರ ಪ್ಲಾಸ್ಟಿಕ್ ಪೇಪರ್ ಸಮೇತ ಎಂಜಲು ಎಲೆಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡುವುದು ಕಡಿಮೆ. ಎಂಜಲು ಎಲೆಗಳ ರಾಶಿಗೆ ಬಿಡಾಡಿ ದನಗಳು ದಾಳಿ ಇಡುವುದರಿಂದ ಸದ್ದಿಲ್ಲದೆ ಪ್ಲಾಸ್ಟಿಕ್ ಜಾನುವಾರುಗಳ ಹೊಟ್ಟೆಗೂ ಸೇರುತ್ತಿದೆ.

ಕೆಲವೊಮ್ಮೆ ಬೀದಿಬದಿ, ಚರಂಡಿಯಲ್ಲಿ ಸಂಗ್ರಹವಾಗಿರುವ ಪ್ಲಾಸ್ಟಿಕ್ ವಸ್ತುಗಳನ್ನು ಹೊರತೆಗೆಯುವ ಪೌರ ಕಾರ್ಮಿಕರು ರಾಶಿ ಹಾಕಿ ಬೆಂಕಿ ಹಚ್ಚುವುದು ಉಂಟು. ಇದರ ಪರಿಣಾಮ ಪರಿಸರ ಮಾಲಿನ್ಯ ಹೆಚ್ಚುತ್ತಿದೆ.

ಪ್ಲಾಸ್ಟಿಕ್ ವಸ್ತುಗಳು ವಿಷಕಾರಿಯಾಗಿದ್ದು, ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಈ ಕುರಿತು ನಾಗರಿಕರು ಕೂಡ ಜಾಗೃತರಾಗುವ ಅವಶ್ಯಕತೆಯಿದೆ.

ನಗರಸಭೆ ಆಡಳಿತ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ವಾರಕ್ಕೊಮ್ಮೆ ಅಂಗಡಿ, ಹೋಟೆಲ್‌ಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಬೇಕು.

ಸಮರ್ಪಕವಾಗಿ ಪ್ಲಾಸ್ಟಿಕ್ ವಸ್ತುಗಳನ್ನು ವಿಲೇವಾರಿ ಮಾಡಲು ಕ್ರಮಕೈಗೊಳ್ಳಬೇಕಿದೆ~ ಎಂಬುದು ಹಿರಿಯ ನಾಗರಿಕ ಪರಮೇಶ್ ಅವರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT