ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್‌ಗೆ ಪರ್ಯಾಯ : ವುಡ್ ಪಾಲಿಮರ್

Last Updated 4 ಡಿಸೆಂಬರ್ 2012, 19:40 IST
ಅಕ್ಷರ ಗಾತ್ರ

ದಿನದಿಂದ ದಿನಕ್ಕೆ ಪ್ಲಾಸ್ಟಿಕ್ ಬಳಕೆ ಹೆಚ್ಚುತ್ತಿದೆ. ಮಣ್ಣಿನಲ್ಲಿ ಕರಗದೆ ಹಾಗೇ ಉಳಿಯುವುದರಿಂದ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಆಗುತ್ತಿದೆ.  ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಮರ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆಯ ವಿಜ್ಞಾನಿಗಳು ಮರದ ಹೊಟ್ಟು ಹಾಗೂ ಪ್ಲಾಸ್ಟಿಕ್ ಮಿಶ್ರಣದ ಉತ್ಪನ್ನ ಕಂಡು ಹಿಡಿದಿದ್ದಾರೆ. ಇದಕ್ಕೆ `ವುಡ್ ಪಾಲಿಮರ್ ಕಾಂಪೋಸಿಟ್ಸ್' ಎಂಬ ಹೆಸರು ಇಟ್ಟಿದ್ದಾರೆ. 

ಶೇ.50ರಷ್ಟು ಮರದ ಹೊಟ್ಟು ಹಾಗೂ ಶೇ.50ರಷ್ಟು ಪ್ಲಾಸ್ಟಿಕ್ ಬಳಸಿ ಹ್ಯಾಂಗರ್, ಪೆನ್ನು, ಕಿಟಕಿ ಫ್ರೇಮ್‌ಗಳು, ಹೂವಿನ ಕುಂಡ ಇನ್ನಿತರೆ ಉತ್ಪನ್ನಗಳನ್ನು ತಯಾರಿಸಬಹುದು. ಕಾರಿನ ಡಿಕ್ಕಿ ಹಾಗೂ ಆಟೋಮೊಬೈಲ್‌ಗಳಲ್ಲಿ ಬಳಕೆಯಾಗುವ ಪ್ಲಾಸ್ಟಿಕ್ ಜಾಗದಲ್ಲೂ ಈ ಉತ್ಪನ್ನಗಳನ್ನು ಬಳಸಬಹುದು. `ಮಾರುಕಟ್ಟೆಯಲ್ಲಿ ಒಂದು ಕಿಲೋ ಪ್ಲಾಸ್ಟಿಕ್‌ಗೆ 80ರಿಂದ 100ರೂಪಾಯಿಯಿದೆ. ಆದರೆ ಮರದ ಹೊಟ್ಟಿಗೆ 2 ರಿಂದ 5 ರೂಪಾಯಿ ಬೆಲೆಯಿದೆ. ಹಾಗಾಗಿ ಉತ್ಪಾದನೆ ವೆಚ್ಚವೂ ಕಡಿಮೆಯಾಗಲಿದ್ದು, ಈ ತಂತ್ರಜ್ಞಾನವನ್ನು ಬೃಹತ್ ಕೈಗಾರಿಕೆಗಳಲ್ಲಿ ಉಪಯೋಗಿಸುವುದರಿಂದ ಹೆಚ್ಚು ಆದಾಯಗಳಿಸಬಹುದು' ಎಂದು ಸಲಹೆ ನೀಡುತ್ತಾರೆ ವಿಜ್ಞಾನಿ ಡಾ. ಅಜಯ್ ಕರ್ಮಾಕರ್.

ವುಡ್ ಪಾಲಿಮರ್ ಕಾಂಪೋಸಿಟ್ಸ್ ಉತ್ಪನ್ನಗಳು ಪರಿಸರ ಸ್ನೇಹಿಯಾಗಿದ್ದು, ಹಗುರವಾಗಿವೆ. ಪ್ಲಾಸ್ಟಿಕ್ ಉತ್ಪನ್ನಗಳಿಗಿಂತ ಹೆಚ್ಚು ಗಟ್ಟಿಯಾಗಿರುತ್ತವೆ. ತೆಂಗಿನ ನಾರು, ಬಿದಿರು, ಮರದ ರೆಂಬೆಕೊಂಬೆಗಳು ಹಾಗೂ ಸಾಮಿಲ್‌ಗಳಲ್ಲಿ ಉಳಿಯುವ ಮರದ ಹೊಟ್ಟು ಬಳಸಿಕೊಳ್ಳಬಹುದು. ಹಾಗಾಗಿ ಕಡಿಮೆ ಖರ್ಚಿನಲ್ಲಿ ಉತ್ಪನ್ನಗಳನ್ನು ಉತ್ಪಾದಿಸಬಹುದು. ಬಾಗಿಲು, ಕಿಟಕಿ ಸೇರಿದಂತೆ ವಾಹನದ ಬಿಡಿ ಭಾಗಗಳು ಅಂದರೆ ಪ್ಲಾಸ್ಟಿಕ್, ಫೈಬರ್ ಬಳಕೆ ಜಾಗದಲ್ಲಿ ಈ ವುಡ್ ಪಾಲಿಮರ್ ಕಾಂಪೋಸಿಟ್ಸ್ ಬಳಕೆ ಮಾಡಬಹುದು. ಈ ವಿಧಾನ ಪ್ಲಾಸ್ಟಿಕ್‌ಗಿಂತ ಶೇ30ರಿಂದ 40ರಷ್ಟು ಅಗ್ಗವಾಗಿದೆ ಎಂದು ಮಾಹಿತಿ ನೀಡುತ್ತಾರೆ ಮರ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆ ನಿರ್ದೇಶಕ ಎಸ್.ಸಿ.ಜೋಶಿ.

ಮರಗಳ ಬಗ್ಗೆ ವಿವಿಧ ಸಂಶೋಧನೆಗಳನ್ನು ನಡೆಸುವ ಈ ಸಂಸ್ಥೆಯಲ್ಲಿ ವಿಜ್ಞಾನಿಗಳಾಗಿರುವ ಡಾ.ಅಜಯ್ ಕರ್ಮಾಕರ್ ಹಾಗೂ ಡಾ.ಶಕ್ತಿ ಸಿಂಗ್ ಚೌಹಾಣ್ ಅವರು ಬಹುದಿನಗಳ ಸಂಶೋಧನೆಯ ಪ್ರಯೋಗದಿಂದ ಮರದ ಹೊಟ್ಟು ಹಾಗೂ ಪ್ಲಾಸ್ಟಿಕ್ ಬಳಸಿ ಉತ್ಪನ್ನ ಮಾಡುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದ್ದಾರೆ. ಆದರೆ ಕೆಲ ತೊಂದರೆಯೂ ಅದರಲ್ಲಿತ್ತು. ಪ್ಲಾಸ್ಟಿಕ್ ಹಾಗೂ ಮರದ ಹೊಟ್ಟು ಸೇರ್ಪಡೆ ಕಷ್ಟವಾಯಿತು. ಈ ಸಮಸ್ಯೆಗೆ ಪರಿಹಾರವಾಗಿ ಇವರೇ ಒಂದು ರಾಸಾಯನಿಕ ವಸ್ತುವನ್ನು ಕಂಡು ಹಿಡಿದರು. ಅದು `ಕಪ್ಲಿಂಗ್ ಏಜೆಂಟ್'.

ಇದು ಮರದ ಹೊಟ್ಟು ಹಾಗೂ ಪ್ಲಾಸ್ಟಿಕ್ ಅನ್ನು ಒಂದುಗೂಡಿಸುವಲ್ಲಿ ಯಶಸ್ವಿಯಾಯಿತು. ಮರದ ಹೊಟ್ಟು ಹಾಗೂ ಪ್ಲಾಸ್ಟಿಕ್ ಸಮಪ್ರಮಾಣದಲ್ಲಿ ಮಿಶ್ರಣ ಮಾಡುವ ಯಂತ್ರವು ಎರಡನ್ನೂ ಸೇರಿಸಿ ಸಣ್ಣ ಸಣ್ಣ ಕಾಳುಗಳ ರೀತಿಯಾಗಿ ಮಾರ್ಪಡಿಸುತ್ತದೆ. ಅದುವೇ ವುಡ್ ಪಾಲಿಮರ್ ಕಾಂಪೋಸಿಟ್. ಆ ಕಚ್ಚಾವಸ್ತುವಿನಿಂದ ನಮಗೆ ಬೇಕಾದ ವಿನ್ಯಾಸದ ಹಾಗೂ ಆಕಾರದ ಉತ್ಪನ್ನಗಳನ್ನು ಉತ್ಪಾದಿಸಿಕೊಳ್ಳಬಹುದು.

ಪ್ಲಾಸ್ಟಿಕ್ ಹಾಗೂ ಸ್ಟೀಲ್ ಉತ್ಪನ್ನಗಳನ್ನು ಬಳಕೆ ಮಾಡಿಕೊಳ್ಳುವ ಜಾಗದಲ್ಲಿ ಈ ವುಡ್ ಪಾಲಿಮರ್ ಕಾಂಪೋಸಿಟ್ಸ್ ಉತ್ಪನ್ನಗಳು ಹೆಚ್ಚು ಬಳಕೆಯಾಗಲಿವೆ. ಇವು ಪ್ಲಾಸ್ಟಿಕ್‌ನಂತೆ ಬಳುಕುವುದಿಲ್ಲ. ಹೆಚ್ಚು ಬಾಳಿಕೆ ಬರುತ್ತವೆ. ಒಂದು ಗಂಟೆಗೆ ಇಪ್ಪತ್ತು ಕಿ.ಲೋ ಉತ್ಪಾದಿಸಬಹುದು. ಯಂತ್ರಕ್ಕೆ ಒಂದೂವರೆಯಿಂದ ಎರಡು ಕೋಟಿ ವೆಚ್ಚವಾಗಲಿದೆ. ಈ ತಂತ್ರಜ್ಞಾನವನ್ನು ಬೃಹತ್ ಕೈಗಾರಿಕೋದ್ಯಮಿಗಳು ಕೊಂಡುಕೊಳ್ಳಬಹುದು. ಈ ನೂತನ ತಂತ್ರಜ್ಞಾನ ಬಳಸಿಕೊಳ್ಳುವ ಮೂಲಕ ಮಣ್ಣಿನ ಮಾಲಿನ್ಯ ಹೆಚ್ಚಳ ತಡೆಗಟ್ಟಬಹುದು ಎಂಬುದು ಸಂಸ್ಥೆಯ ನಿಲುವಾಗಿದೆ. ಮಾಹಿತಿಗೆ: 080 22190100/ 178

`ಬಾಗಿಲು, ಕಿಟಕಿ ಸೇರಿದಂತೆ ವಾಹನದ ಬಿಡಿ ಭಾಗಗಳು ಅಂದರೆ ಪ್ಲಾಸ್ಟಿಕ್, ಫೈಬರ್ ಬಳಕೆ ಜಾಗದಲ್ಲಿ ಈ ವುಡ್  ಪಾಲಿಮರ್ ಕಾಂಪೋಸಿಟ್ಸ್ ಬಳಕೆ   ಮಾಡಬಹುದು.ಈ ವಿಧಾನ ಪ್ಲಾಸ್ಟಿಕ್‌ಗಿಂತ ಶೇ.30ರಿಂದ 40ರಷ್ಟು ಅಗ್ಗವಾಗಿದೆ'

ಎಸ್.ಸಿ.ಜೋಶಿ
ನಿರ್ದೇಶಕ, ಮರ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆ  ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT