ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಂಗಸ್ ಸೋಂಕಿಗೆ ಸ್ವಚ್ಛತೆ ಮಂತ್ರ

Last Updated 14 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಶಿಲೀಂಧ್ರ ಒಂದು ಬಗೆಯ ಸೂಕ್ಷ್ಮಾಣು ಜೀವಿ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಅನೇಕ ಬಗೆಯ ಶಿಲೀಂಧ್ರಗಳು ಇರುತ್ತವೆ. ಕೆಲ ಬಗೆಯ ಶಿಲೀಂಧ್ರಗಳು ಯಾವುದೇ ಅಪಾಯ ಮಾಡದೆ, ವ್ಯಕ್ತಿಯ ದೇಹದ ವಿವಿಧ ಭಾಗಗಳಲ್ಲಿ ನೆಲೆಸಿರುತ್ತವೆ. ಶರೀರದ ರೋಗ ನಿರೋಧಕ ಶಕ್ತಿ ಕುಂಠಿತಗೊಂಡಾಗ ಈ ಬಗೆಯ ಶಿಲೀಂಧ್ರಗಳು ಅವರಲ್ಲಿ ಅವಕಾಶವಾದಿ ಸೋಂಕುಗಳಿಗೆ ಎಡೆಮಾಡಿ ಕೊಡಬಹುದು. ಇನ್ನು ಕೆಲ ಬಗೆಯ ಶಿಲೀಂಧ್ರಗಳು ಗಾಳಿ, ನೀರು, ಮಣ್ಣು ಹಾಗೂ ಇತರ ಮೂಲಗಳಿಂದ ಹರಡುತ್ತವೆ.

ಯಾರಿಗೆ ಹೆಚ್ಚಾಗಿ ಬರುತ್ತದೆ?
ನಿಯಂತ್ರಣ ಇಲ್ಲದ ಮಧುಮೇಹಿಗಳಲ್ಲಿ ರಕ್ತದ ಸಕ್ಕರೆ ಅಂಶ ಹೆಚ್ಚಿರುವುದರಿಂದ ಶಿಲೀಂಧ್ರಗಳು ಬಹುಬೇಗನೇ ಸೋಂಕನ್ನು ಉಂಟು ಮಾಡುತ್ತವೆ.
ರೋಗನಿರೋಧಕ ಶಕ್ತಿಯು ಧಕ್ಕೆಗೊಳ್ಳುವುದರಿಂದ ಏಡ್ಸ್ ರೋಗಿಗಳಲ್ಲೂ ಶಿಲೀಂಧ್ರಗಳಿಂದ ಉಂಟಾಗುವ ಸೋಂಕುಗಳು ಸಾಮಾನ್ಯ. ದೀರ್ಘಕಾಲದ ಆ್ಯಂಟಿಬಯೋಟಿಕ್ ಅಥವಾ ಸ್ಟಿರಾಯ್ಡ ಬಳಕೆಯೂ ಶಿಲೀಂಧ್ರಗಳ ಸೋಂಕಿಗೆ ಕಾರಣ ಆಗಬಹುದು.

ಶಿಲೀಂಧ್ರಗಳು ಅತ್ಯಂತ ಸೌಮ್ಯ ಸ್ವರೂಪದ ಸೋಂಕಿನಿಂದ ಹಿಡಿದು ತೀವ್ರತರವಾದ, ಜೀವಕ್ಕೇ ಅಪಾಯ ಎನಿಸುವ ಸೋಂಕುಗಳಿಗೂ ಕಾರಣ ಆಗಬಹುದು. ಮೆದುಳಿನ ಮೇಲು ಕವಚಗಳು, ಅನ್ನನಾಳ, ಮಹಿಳೆಯರಲ್ಲಿ ಯೋನಿ, ಪುರುಷರಲ್ಲಿ ಮೂತ್ರ ದ್ವಾರ ಮುಂತಾದ ಯಾವುದೇ ಅಂಗಕ್ಕೂ ಶಿಲೀಂಧ್ರಗಳ ಸೋಂಕು ತಗುಲಬಹುದು. ಸೌಮ್ಯ ಸ್ವರೂಪದ ಶಿಲೀಂಧ್ರ ಸೋಂಕು ಸಾಮಾನ್ಯವಾಗಿ ಚರ್ಮ, ಕೂದಲು ಹಾಗೂ ಉಗುರುಗಳಲ್ಲಿ ಕಾಣಿಸಿಕೊಳ್ಳುತ್ತದೆ. ಆಡುಭಾಷೆಯಲ್ಲಿ ಉಳುಕಡ್ಡಿ, ಚಿಬ್ಬು ಎಂದೆಲ್ಲಾ ಕರೆಯಲಾಗುವ ಇದು ಆರೋಗ್ಯ ತೊಂದರೆ ಎನ್ನುವುದರ ಜೊತೆಗೆ ಸೌಂದರ್ಯ ದೃಷ್ಟಿಯಿಂದಲೂ ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆ ಎಂದರೆ ತಪ್ಪಾಗಲಾರದು.

ಗುಣ ಲಕ್ಷಣಗಳೇನು ?
ದೇಹದ ಯಾವುದೇ ಭಾಗದ ಚರ್ಮದ ಮೇಲೆ, ಮುಖ್ಯವಾಗಿ ಕುತ್ತಿಗೆ, ಭುಜ, ಬೆನ್ನು, ಮುಖದ ಮೇಲೆ ದುಂಡು ದುಂಡಾಗಿನ ಅಥವಾ ನಿರ್ದಿಷ್ಟ ಆಕಾರವಿಲ್ಲದ ಬಿಳಿ/ ಕೆಂಪು/ ಕಪ್ಪು/ ಕಂದು ಬಣ್ಣದ ಮಚ್ಚೆಗಳು. ಕೆಲವೊಮ್ಮೆ ಈ ಮಚ್ಚೆಗಳಲ್ಲಿ ಉರಿ ಅಥವಾ ತುರಿಕೆಯೂ ಇರಬಹುದು.
ತೊಡೆಗಳ ಸಂಧಿ, ಕಂಕುಳು, ಕೈ-ಕಾಲಿನ ಬೆರಳುಗಳ ಸಂಧಿ, ಮಹಿಳೆಯರ ಸ್ತನಗಳ ಕೆಳಭಾಗದಲ್ಲಿ, ಒಳ ಲಂಗಗಳನ್ನು ಕಟ್ಟುವ ಸೊಂಟದ ಭಾಗದಲ್ಲಿ ಚರ್ಮ ಕೆಂಪು/ ಕಪ್ಪು / ಅಥವಾ ಕಂದು ಬಣ್ಣಕ್ಕೆ ತಿರುಗುವುದು, ಉರಿ ಅಥವಾ ತುರಿಕೆ ಬರುವುದು.

ಕೈ- ಕಾಲುಗಳ ಉಗುರು ಕಪ್ಪು ಅಥವಾ ಕಂದು ಬಣ್ಣಕ್ಕೆ ತಿರುಗುವುದು, ಟೊಳ್ಳಾಗುವುದು, ಉಗುರುಗಳ ಮೇಲೆ ಆಳವಾದ ಗೀರುಗಳಾಗುವುದು, ತಲೆಗೂದಲಿನಲ್ಲಿ ಹೊಟ್ಟಾಗುವುದು, ಕೂದಲು ಉದುರುವುದು, ಮಹಿಳೆಯರಲ್ಲಿ ಬಿಳಿ ಮುಟ್ಟು, ಯೋನಿಯಲ್ಲಿ ತುರಿಕೆ, ಉರಿ ಕಾಣಿಸಿಕೊಳ್ಳಬಹುದು.
ಹಾಲು ಕುಡಿಯುವ ಎಳೆ ಮಕ್ಕಳಲ್ಲಿ ನಾಲಿಗೆಯ ಮೇಲೆ, ಬಾಯಿಯ ಒಳಭಾಗದಲ್ಲಿ ಮೊಸರಿನಂತಹ ಬಿಳಿ ಬಣ್ಣದ ಲೇಪನ ಕಂಡುಬರಬಹುದು.

ಮುಂಜಾಗ್ರತಾ ಕ್ರಮ
- ಸ್ನಾನವಾದ ಮೇಲೆ ಚರ್ಮದ ಯಾವುದೇ ಭಾಗದಲ್ಲೂ ತೇವಾಂಶ ಇರದಂತೆ ಒಣಗಿರುವ ವಸ್ತ್ರದಿಂದ (ಟವೆಲ್) ಒರೆಸಿಕೊಳ್ಳಿ, ಏಕೆಂದರೆ ತೇವಾಂಶ ಶಿಲೀಂಧ್ರಗಳ ಬೆಳವಣಿಗೆಗೆ ನೆರವಾಗುತ್ತದೆ.
- ಪ್ರತಿನಿತ್ಯವೂ ಸ್ವಚ್ಛಗೊಳಿಸಿರುವ ಟವೆಲ್, ಕಾಲುಚೀಲ, ಕರವಸ್ತ್ರಗಳನ್ನೇ ಉಪಯೋಗಿಸಿ.
- ನೀವು ಉಪಯೋಗಿಸುವ ಟವೆಲ್, ಸಾಬೂನು, ಬಾಚಣಿಗೆ ಪ್ರತ್ಯೇಕವಾಗಿರಲಿ. ಇತರರೊಂದಿಗೆ ಹಂಚಿಕೊಳ್ಳದಿರಿ.
- ಚೆನ್ನಾಗಿ ಒಣಗಿರುವ, ತೇವಾಂಶವಿಲ್ಲದ ಒಳ ಉಡುಪುಗಳನ್ನೇ ಧರಿಸಿ.
- ಮಹಿಳೆಯರು ಒಳ ಲಂಗಗಳನ್ನು ಅತಿ ಬಿಗಿಯಾಗಿ ಕಟ್ಟದಿರಿ.
- ಅತಿ ಬಿಗಿಯಾದ ಒಳ ಉಡುಪುಗಳು ಬೇಡ.
- ವಾರದಲ್ಲಿ ಕನಿಷ್ಠ ಎರಡು ಬಾರಿಯಾದರೂ ತಲೆಗೂದಲನ್ನು ಸ್ವಚ್ಛಗೊಳಿಸಿಕೊಳ್ಳಿ.
- ಹಾಲು ಕುಡಿಯುವ ಎಳೆ ಮಕ್ಕಳಿಗೆ ದಿನನಿತ್ಯ ಸ್ನಾನ ಮಾಡಿಸುವಾಗ ಬಾಯಿ, ನಾಲಿಗೆಯನ್ನು ಸ್ವಚ್ಛಗೊಳಿಸಿ.
- ಮಧುಮೇಹಿಗಳು ತಮ್ಮ ರಕ್ತದ ಸಕ್ಕರೆ ಅಂಶವನ್ನು ನಿಯಮಿತವಾಗಿ ತಪಾಸಣೆ ಮಾಡಿಸಿಕೊಂಡು ನಿಯಂತ್ರಣದಲ್ಲಿ ಇರುವುದನ್ನು ಖಾತ್ರಿ ಪಡಿಸಿಕೊಳ್ಳಿ.
- ದೀರ್ಘಕಾಲದ ಆ್ಯಂಟಿಬಯೋಟಿಕ್ ಅಥವಾ ಸ್ಟಿರಾಯ್ಡ ಬಳಕೆಯ ಮುನ್ನ ವೈದ್ಯರ ಸಲಹೆಯನ್ನು ಕಡ್ಡಾಯವಾಗಿ ಪಡೆಯಿರಿ.
- ಮುಖ್ಯವಾಗಿ, ಮೇಲೆ ಹೇಳಿದ ಯಾವುದೇ ಗುಣಲಕ್ಷಣಗಳು ಕಂಡುಬಂದಾಗ ಸ್ವಯಂ ಚಿಕಿತ್ಸೆಗೆ ಶರಣಾಗದೆ ಅಥವಾ ಔಷಧ ಅಂಗಡಿಯಿಂದ ಯಾವುದೋ ಮುಲಾಮು ಕೊಂಡು ಉಪಯೋಗಿಸದೆ, ಹತ್ತಿರದ ಚರ್ಮ ರೋಗ ತಜ್ಞರನ್ನು ಕಂಡು, ಸೂಕ್ತ ಸಲಹೆ ಪಡೆಯಿರಿ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT