ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಟಾಫಟ್ ಚಿತ್ರೀಕರಣ!

Last Updated 3 ಜುಲೈ 2012, 19:30 IST
ಅಕ್ಷರ ಗಾತ್ರ

`ಆ್ಯಕ್ಷನ್...~ ನಿರ್ದೇಶಕರು ಹೀಗೆ ಹೇಳಿದಾಗ ಮಂಗಳವಾರ ಬೆಳಿಗ್ಗೆ ಎಂಟು ಗಂಟೆ. ಅವರು `ಕಟ್~ ಎಂದಾಗ ಸಮಯ ಸುಮಾರು 9.45. ಅಲ್ಲಿ ಮರು ಟೇಕ್‌ಗೆ ಅವಕಾಶವೇ ಇರಲಿಲ್ಲ. ಒಮ್ಮೆ ಸಂಭಾಷಣೆ, ಮತ್ತೊಮ್ಮೆ ಹಾಡು, ಇನ್ನೊಮ್ಮೆ ಹೊಡೆದಾಟ... ಹೀಗೆ ಆ ಒಂದೂ ಮುಕ್ಕಾಲುಗಂಟೆ ಅವಧಿಯಲ್ಲಿ ಇಡೀ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿತ್ತು.

ಒಂದು ಟೇಕ್, ಒಂಬತ್ತು ಕ್ಯಾಮೆರಾ, ಎರಡು ಹಾಡುಗಳು, ಮೂರು ಹೊಡೆದಾಟದ ದೃಶ್ಯಗಳು, ನಾಲ್ವರು ನಾಯಕ ನಟರು. ಒಬ್ಬ ನಾಯಕಿ ಇವು ಚಿತ್ರದ ಹೈಲೈಟ್‌ಗಳು.
ಚಿತ್ರದ ಹೆಸರು `ನಮ್ ಏರಿಯಾಲಿ ಇನ್ನೊಂದಿನ~.

ಅರರೆ ಈ ಹೆಸರನ್ನು ಎಲ್ಲೋ ಕೇಳಿದ್ದೇವಲ್ಲಾ ಎಂದು ಅಚ್ಚರಿಪಡಬೇಕಿಲ್ಲ. `ನಮ್ ಏರಿಯಾಲ್ ಒಂದಿನ~ ಎಂಬ ಚಿತ್ರವನ್ನು ಈ ಹಿಂದೆ ನಿರ್ದೇಶಿಸಿದ್ದ ಅರವಿಂದ್ ಕೌಶಿಕ್ ಅವರೇ ಈ ಚಿತ್ರದ ನಿರ್ದೇಶಕರು ಕೂಡ. ಅದಕ್ಕಿಂತಲೂ ಭಿನ್ನವಾದ ಕತೆ ಈ ಚಿತ್ರದಲ್ಲಿದೆಯಂತೆ.

ಚಿತ್ರದ ಒಟ್ಟು ಅವಧಿ ಎರಡು ಗಂಟೆ ಹತ್ತು ನಿಮಿಷ.  ಒಂದೂಮುಕ್ಕಾಲು ಗಂಟೆ ಅವಧಿಯ ಚಿತ್ರೀಕರಣವಾಗಿರುವಾಗ 2.10 ಗಂಟೆ ಅವಧಿಯ ಚಿತ್ರ ಕೊಡಲು ಹೇಗೆ ಸಾಧ್ಯ ಎಂಬ ಅನುಮಾನ ಮೂಡುವುದು ಸಹಜ. ಅದಕ್ಕೆ ಉತ್ತರ ಚಿತ್ರದ ನಿರ್ಮಾಪಕ ಅಣಜಿ ನಾಗರಾಜ್ ಅವರ ಬಳಿ ಇದೆ. ಒಂಬತ್ತು ಕ್ಯಾಮೆರಾಗಳು ಒಂದೇ ದೃಶ್ಯವನ್ನು ಚಿತ್ರೀಕರಿಸಿರುತ್ತವೆ.

ಅಗತ್ಯವಿದ್ದ ಕಡೆ ಹೆಚ್ಚು ದೃಶ್ಯಗಳನ್ನು ಬಳಸಿಕೊಳ್ಳಲಾಗುವುದಂತೆ. ಅವರು ಈ ಹಿಂದೆ ಶಿವರಾಜ್‌ಕುಮಾರ್ ಅಭಿನಯದ `ಸುಗ್ರೀವ~ ಚಿತ್ರವನ್ನು 18 ಗಂಟೆಗಳಲ್ಲಿ ಚಿತ್ರೀಕರಿಸಿ ದಾಖಲೆ ನಿರ್ಮಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಅದಾದ ಮೇಲೆ 12 ಗಂಟೆಯಲ್ಲೇ ಚಿತ್ರವೊಂದು ಸಿದ್ಧವಾಗಿ ಸುದ್ದಿ ಮಾಡಿತ್ತು. ಈಗ ಆ ಎಲ್ಲ ದಾಖಲೆಗಳನ್ನು ಮುರಿಯುವ ಸಾಹಸ ಚಿತ್ರತಂಡದಿಂದ.

ಚಿತ್ರೀಕರಣ ನಡೆದಿದ್ದೇನೋ ಕೇವಲ ಒಂದೂ ಮುಕ್ಕಾಲು ಗಂಟೆ ಅವಧಿಯಲ್ಲಿ. ಆದರೆ ಅದಕ್ಕಾಗಿ ನಡೆಸಿದ ತಾಲೀಮು ಸುಮಾರು 40 ದಿನಗಳದ್ದು. ಮೊದಲು ಚಿತ್ರಕತೆಯನ್ನು ಓದಿಕೊಳ್ಳಲೆಂದೇ ಕೆಲವು ದಿನಗಳನ್ನು ಮೀಸಲಿಡಲಾಯಿತು. ನಂತರ ಅನೇಕ ದಿನಗಳ ಕಾಲ ನಟರು ಅಭಿನಯ ತಾಲೀಮು ನಡೆಸಿದರು. ನಂತರ ಒಂದು ದಿನ ಕ್ಯಾಮೆರಾದೊಂದಿಗೆ ಅಭ್ಯಾಸ ನಡೆಯಿತು. ಎಲ್ಲಾ ಸರಿಯಾದ ಮೇಲೆ ಚಿತ್ರಕ್ಕೆ `ಮುಹೂರ್ತ~ವಿಟ್ಟರು.

ಚಿತ್ರೀಕರಣ ನಡೆದಿದ್ದು ಹನುಮಾನ್‌ನಗರದ ಶಾಮಣ್ಣ ಗಾರ್ಡನ್ ಸಮೀಪ. ಚಿತ್ರದಲ್ಲಿ ವೈವಿಧ್ಯತೆ ತರುವ ಉದ್ದೇಶದಿಂದಲೇ ಈ ತಾಣವನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಕಾಫಿ ಶಾಪ್, ಮನೆ, ಬಯಲು, ರಸ್ತೆ, ಉದ್ಯಾನ ಎಲ್ಲವೂ ಒಟ್ಟಿಗೆ ದೊರೆತ ಪ್ರಶಾಂತ ತಾಣ ಅದು.
`ಇಡೀ ಚಿತ್ರತಂಡಕ್ಕೆ ದಾಖಲೆಯೊಂದನ್ನು ನಿರ್ಮಿಸಿದ ತೃಪ್ತಿ ಇದೆ. ಇಂಥ ಅಪರೂಪದ ಚಿತ್ರದಲ್ಲಿ ಪಾಲ್ಗೊಂಡದ್ದು ದೊಡ್ಡ ಹೆಮ್ಮೆ~ ಎನ್ನುತ್ತಾರೆ ನಟ ರವಿಶಂಕರ್. ಛಾಯಾಗ್ರಾಹಕರಾದ ಪ್ರಸಾದ್, ಸೇಫ್ಟಿ ಪ್ರಕಾಶ್ ಸೇರಿದಂತೆ ಒಂಬತ್ತು ಛಾಯಾಗ್ರಾಹಕರು ಸವಾಲಿನಂತೆ ಸ್ವೀಕರಿಸಿ ಚಿತ್ರೀಕರಣ ಪೂರ್ಣಗೊಳಿಸಿದ್ದಾರಂತೆ.

ಇಡೀ ಕತೆ ಒಂದು ಪ್ರದೇಶದಲ್ಲಿ ನಡೆಯುತ್ತದೆ. ಹಲವು ಯುವಕರ ಅನುಭವ ಕಥನವನ್ನು ಹೇಳುತ್ತಾ ಸಾಗುತ್ತದೆ. ಎರಡು ಟ್ರ್ಯಾಕ್‌ಗಳಲ್ಲಿ ಕತೆ ಸಾಗುತ್ತದೆ. ರವಿಶಂಕರ್ ಜತೆಗೆ ಸತ್ಯ, ರಘು, ಕೈಲಾಶ್ ನಟಿಸುತ್ತಿದ್ದಾರೆ. ನಿರ್ದೇಶನದ ಜತೆಗೆ ಕತೆ- ಚಿತ್ರಕತೆ- ಸಂಭಾಷಣೆಯ ಹೊಣೆಯೂ ಕೌಶಿಕ್ ಅವರದ್ದೇ. ಸಂಗೀತ ಅರ್ಜುನ್ ಜನ್ಯ ಅವರದ್ದು.
 
ಚಿತ್ರಕ್ಕೆ ಹಿನ್ನೆಲೆ ಹಾಡುಗಳಾಗಿ ಇನ್ನೂ ಮೂರು ಗೀತೆಗಳು ಸೇರ್ಪಡೆಯಾಗಲಿವೆಯಂತೆ. ಆದರೆ ಇದು ಕತೆಗೆ ಹಿನ್ನೆಲೆಯಾಗಿ ಬರುವುದರಿಂದ ಯಾವುದೇ ದೃಶ್ಯಗಳು ಹೆಚ್ಚುವರಿಯಾಗಿ ಸೇರಿಕೊಳ್ಳುವುದಿಲ್ಲ ಎಂಬ ಸ್ಪಷ್ಟನೆ ನಿರ್ದೇಶಕರದ್ದು. ಚಿತ್ರವನ್ನು ಕೆಲವು ಚಲನಚಿತ್ರೋತ್ಸವಗಳಿಗೆ ಕಳುಹಿಸುವ ಚಿಂತನೆಯೂ ನಡೆದಿದೆ.

ಒಂದಿನ ಸೋತರೇನಂತೆ ಇನ್ನೊಂದಿನ ಇದ್ದೇ ಇದೆ ಎಂಬ ಆತ್ಮವಿಶ್ವಾಸ ಕೌಶಿಕ್ ಅವರದ್ದು. `...ಒಂದಿನ~ ಗಲ್ಲಾ ಪೆಟ್ಟಿಗೆಯಲ್ಲಿ ಜಯಗಳಿಸಲು ಸಾಧ್ಯವಾಗದೇ ಇರಬಹುದು. ಆದರೆ ಅದು ಜನರ ಮನಸ್ಸನ್ನು ತಲುಪಿದ ಖುಷಿ ಇದೆ.

`...ಇನ್ನೊಂದಿನ~ಕ್ಕೆ ಕಮರ್ಷಿಯಲ್ ಆಗಿ ಗೆಲ್ಲಿಸುವ ಎಲ್ಲಾ ಅಂಶಗಳನ್ನು ಸೇರಿಸಲಾಗಿದೆ ಎನ್ನುತ್ತಾರೆ ಅವರು. ಚಿತ್ರವನ್ನೂ ಅಷ್ಟೇ ಬೇಗ ಚಿತ್ರಮಂದಿರಕ್ಕೆ ತರುವ ಉತ್ಸಾಹ ಚಿತ್ರತಂಡದ್ದು. ಇದೇ ತಿಂಗಳ ಅಂತ್ಯದ ಹೊತ್ತಿಗೆ ಅಥವಾ ಆಗಸ್ಟ್ ವೇಳೆಗೆ ಚಿತ್ರ ಬಿಡುಗಡೆಯಾಗುವ ಸೂಚನೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT