ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫತ್ವಾ ಹೊರಡಿಸಲು ಇದು ಪಾಕಿಸ್ತಾನವೇ?

Last Updated 17 ಫೆಬ್ರುವರಿ 2012, 10:50 IST
ಅಕ್ಷರ ಗಾತ್ರ

ಗಂಗಾವತಿ: ಅನ್ಯ ಪಕ್ಷದ ಕಾರ್ಯಕರ್ತರು ಅಲ್ಲಿನ ನಾಯಕರ ಮತ್ತು ಪಕ್ಷದ ದುರಾಡಳಿತಕ್ಕೆ ಬೇಸತ್ತು ಜೆಡಿಎಸ್ ಸೇರುತ್ತಿದ್ದಾರೆ. ಆದರೆ ಇಲ್ಲಿನ ಮುಖಂಡರೊಬ್ಬರು ಜೆಡಿಎಸ್ ಸೇರದಂತೆ ಫತ್ವಾ ಹೊರಡಿಸಿದ್ದಾರೆ.
 
ಫತ್ವಾ ಹೊರಡಿಸಲು ಇದೇನು ಪಾಕಿಸ್ತಾನವೇ? ಎಂದು ಜೆಡಿಎಸ್ ಮುಖಂಡ ಪಿ. ಅಖ್ತರ್‌ಸಾಬ ಕಿಡಿಕಾರಿದರು.
ನಗರದ ಸಿಬಿಎಸ್ ಕಲ್ಯಾಣ ಮಂಟಪದಲ್ಲಿ ಗುರುವಾರ ಗಂಗಾವತಿ ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾದಳದ ಕಾರ್ಯಕರ್ತರಿಗೆ ಆಯೋಜಿಸಲಾಗಿದ್ದ ಸಮಾವೇಶ ಉದ್ಘಾಟಿಸಿದ ಬಳಿಕ ಪಾಡಗುತ್ತಿ ಅಖ್ತರ್‌ಸಾಬ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಜೆಡಿಎಸ್ ಕಾರ್ಯಕರ್ತರಿಗೆ ಧಮಕಿ ಹಾಕುವ ರಾಜಕಾರಣ ನಡೆದಿದೆ. ಬಲ ಪ್ರಯೋಗ ಎಷ್ಟು ದಿನ ನಡೆಯುತ್ತದೆಯೋ ನೋಡೋಣ. ಆ ರಾಜಕಾರಣಿಗೆ ತಾಕತ್ತಿದ್ದರೆ ಅಖಾಡಕ್ಕಿಳಿದು ಚುನಾವಣೆ ಎದುರಿಸಬೇಕೆ ವಿನಃ ಅಮಾಯಕ ಕಾರ್ಯಕರ್ತರ ಮೇಲೆ ಬಲ ಪ್ರಯೋಗಿಸುವುದು ಸಲ್ಲ ಎಂದರು.

`ಜೆಡಿಎಸ್-ಬಿಜೆಪಿ ಒಂದೇ ನಾಣ್ಯದ ಎರಡು ಮುಖ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮಾಡಿದ ಟೀಕಿಗೆ ಪ್ರತಿಕ್ರಿಯೆ ನೀಡಿದ ಅಖ್ತರ್‌ಸಾಬ, ರಾಜಕಾರಣಿಯಾದವರು ಹೇಳಿಕೆ ನೀಡುವ ಮುನ್ನ ಸ್ಥಿತಪ್ರಜ್ಞೆ ಮತ್ತು ಸ್ಥಿತಿಪ್ರಜ್ಞೆ ಹೊಂದಿರಬೇಕು ಎಂದು ಕಿಚಾಯಿಸಿದರು.

ಜೆಡಿಎಸ್‌ನ್ನು ಬಿಜೆಪಿಯಂತ ಕೋಮು ಪಕ್ಷಕ್ಕೆ ಹೋಲಿಸುವ ಮುನ್ನ ಅನ್ಸಾರಿ ತಮ್ಮ ಪೂರ್ವ ಇತಿಹಾಸದತ್ತ ಒಮ್ಮೆ ಹೊರಳಿ ನೋಡಿ ವಿಮರ್ಶೆ ಮಾಡಿಕೊಂಡು ಬಳಿಕ ಈ ಹೇಳಿಕೆ ನೀಡಬೇಕಿತ್ತು. ಸ್ಪರ್ಧಿಸುವ ಅವಕಾಶ, ಶಾಸಕ, ಸಚಿವರಾಗಿ ಅಧಿಕಾರ ಅನುಭವಿಸಲು ಜೆಡಿಎಸ್ ಬೇಕಿತ್ತು.

ಅಧಿಕಾರದ ರುಚಿ ಕಂಡ ಬಳಿಕ ಮಾಜಿ ಸಚಿವರಿಗೆ ಈಗ ಜೆಡಿಎಸ್ ಕೋಮು ಪಕ್ಷವಾಗಿ ಕಾಣುತ್ತಿದೆ. ರಾಜಕಾರಣಿಯಾದವ ಹೊಗಳು ಭಟ್ಟರನ್ನು ದೂರವಿಟ್ಟು, ನೈಜ ಘಟನೆಗಳನ್ನು ಕಿವಿಯಿಂದ ಕೇಳಿ, ಕಣ್ಣಾರೆ ನೋಡಬೇಕೆಂದು ಕಿವಿಮಾತು ಹೇಳಿದರು.

ಆದರೆ ಮುನ್ಸಿಪಾಲ್ಟಿಯಲ್ಲಿ ಅಧಿಕಾರ ಹಿಡಿದ ಬಹುತೇಕ ಸದಸ್ಯರು ಅಯೋಗ್ಯರಿದ್ದು, ಹೊಟ್ಟೆಪಾಡಿಗೆ ರಾಜಕಾರಣ ಮಾಡುತ್ತಿದ್ದಾರೆ.ಜಾತಿ-ಧರ್ಮಗಳು ಮನೆಗೆ ಸೀಮಿತವಾಗಿರಬೇಕು. ಮನೆಯಾಚೆ ನಾವೆಲ್ಲ ಅಣ್ಣ ತಮ್ಮಂದಿರು. ಚುನಾವಣೆ ಸಂದರ್ಭದಲ್ಲಿ ಜಾತಿ ಆಧಾರದ ಮೇಲೆ ಮತ ಕೇಳಲು ಬರುವ ರಾಜಕಾರಣಿಯನ್ನು ಚಪ್ಪಲಿಯಿಂದ ಹೊಡೆಯಿರಿ ಎಂದು ಅಖ್ತರ್‌ಸಾಬ ಅಕ್ರೋಶ ವ್ಯಕ್ತಪಡಿಸಿದರು.

ಇತ್ತಿಚೆಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆಗೊಳಗಾಗಿದ್ದರು ಎನ್ನಲಾದ ಬಾಬಾ ಸಾಹೇಬ್ ತಂಡ ಸೇರಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ತೊರೆದ ನೂರಾರು ಕಾರ್ಯಕರ್ತರು ಅಖ್ತರ್‌ಸಾಬ ಅವರ ಸಮ್ಮುಖದಲ್ಲಿ ಜೆಡಿಎಸ್ ಸೇರಿದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT