ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲಕೊಡದ ಜಿಲ್ಲಾಧಿಕಾರಿ ಯತ್ನ

Last Updated 18 ಮಾರ್ಚ್ 2011, 10:20 IST
ಅಕ್ಷರ ಗಾತ್ರ

ಶಿರಾ: ನಗರಕ್ಕೆ ಸಮೀಪದ ಮುದ್ದಿಗೆರೆಕಾವಲ್‌ನಲ್ಲಿ ಕೈಗಾರಿಕಾ ಉದ್ದೇಶಕ್ಕಾಗಿ ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆ ಕೈ ಬಿಡುವಂತೆ ಗುರವಾರ ಜಿಲ್ಲಾಧಿಕಾರಿ ಡಾ. ಸಿ, ಸೋಮಶೇಖರ್ ನೇತೃತ್ವದಲ್ಲಿ  ಭೂತೇಶ್ವರನಗರದಲ್ಲಿ ನಡೆದ ಸಭೆಯಲ್ಲಿ ಸಂತ್ರಸ್ತ್ರ ರೈತರು ಆಗ್ರಹಿಸಿದರು. ಕೈಗಾರಿಕೆ ಬಂದ್ದಲ್ಲಿ ತಾಲ್ಲೂಕು ಕೇಂದ್ರವಾಗಿರುವ ಶಿರಾ ಮುಂದೊಂದು ದಿನ ಜಿಲ್ಲಾ ಕೇಂದ್ರವಾಗಲಿದೆ. ಇದು ಸರ್ಕಾರದ ನಿಲುವಲ್ಲ ತಮ್ಮ ವೈಯಕ್ತಿಕ ನಿಲುವು ಎಂದು ಹೇಳಿದರು.

ಆದರೆ ರೈತರ ಮನವೊಸಲಿಸುವ ಜಿಲ್ಲಾಧಿಕಾರಿ ಯತ್ನ ಫಲಗೊಡಲಿಲ್ಲ. ಮುದ್ದಿಗೆರೆ ಕಾವಲು ಭಾಗದ ರೈತರು, ಭೂಸ್ವಾಧೀನ ಪ್ರಕ್ರಿಯೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಸಭೆ ಉದ್ದೇಶಿಸಿ ಮಾತನಾಡಿದ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಮುಖಂಡರಾದ ಮಾಲಿಸುರೇಶ್, ಬಂಡೇರಾಮಕೃಷ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ.ಎಸ್.ರವಿ, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಪರಮಶಿವಯ್ಯ, ಜಿಲ್ಲಾ ದಲಿತ ಸಂಘರ್ಷ ಸಮಿತಿ ಸಂಚಾಲಕ ಲಕ್ಷ್ಮಿಕಾಂತ್, ರೈತ ರೂಪನಾಯ್ಕ ಸೇರಿದಂತೆ ಹಲವರು ಭೂಸ್ವಾಧೀನ ಪ್ರಕ್ರಿಯೆ ಜೈಬಿಡುವಂತೆ ಒತ್ತಾಯಿಸಿದರು.

ಭೂ ಸ್ವಾಧೀನಕ್ಕೆ ಒಳಪಡುವ ಭೂಮಿಯಲ್ಲಿ ಶೇ.75ರಷ್ಟು ಎಸ್‌ಸಿ-ಎಸ್‌ಟಿ ಸಮುದಾಯದವರಿಗೆ ಸೇರಿದೆ. ಇಲ್ಲಿ ಜಮೀನನ್ನು ಭೂಸ್ವಾಧೀನ ಮಾಡಿಕೊಳ್ಳುತ್ತಿರುವುದರ ಹಿನ್ನೆಲೆ ಏನು ಎಂದು ಪ್ರಶ್ನಿಸಿದರು. ಈ ಪ್ರದೇಶದಲ್ಲಿ  ತೆಂಗು, ಅಡಿಕೆ, ಬಾಳೆ, ಮಾವು, ದಾಳಿಂಬೆ ಸೇರಿದಂತೆ ವೈವಿದ್ಯಮಯ ಫಸಲು ಬೆಳೆಯಲಾಗುತ್ತಿದೆ. ಆದರೂ ಈ ಭೂಮಿಯನ್ನು ಚೌಳು ಭೂಮಿ ಎಂದು ಸರ್ಕಾರಕ್ಕೆ ವರದಿ ನೀಡಿದ ಅಧಿಕಾರಿ ಹೆಸರನ್ನು ಬಹಿರಂಗಪಡಿಸುವಂತೆ ಒತ್ತಾಯಿಸಿದರು.

ಭೂಸ್ವಾಧೀನ ಪ್ರಕ್ರಿಯೆ ಮುಗಿದಿದ್ದು ಭೂಮಿಗೆ ಬೆಲೆ ನಿಗದಿಪಡಿಸಲಿದ್ದಾರೆ ಎಂದು ತಪ್ಪಾಗಿ ಅರ್ಥೈಸಿಕೊಂಡ ಸಭೆಯಲ್ಲಿದ್ದ ಕೆಲವು ರೈತರು ಎಕರೆಗೆ 40 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಬೇಡಿಕೆ ಮುಂದಿಟ್ಟರು. ರೈತರ ದ್ವಂದ್ವ ನಿಲುವುಗಳನ್ನು ಕೇಳಿದ ಜಿಲ್ಲಾಧಿಕಾರಿ ನಿಮ್ಮ ಭಾವನೆ, ಬೇಡಿಕೆಯನ್ನು ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದ ಆಯುಕ್ತರು, ಸಚಿವರಿಗೆ ತಿಳಿಸುವುದಾಗಿ ಹೇಳಿ ಸಭೆ ಮುಕ್ತಾಯಗೊಳಿಸಿದರು. ಮತ್ತೆ ಸಭೆ: ಮಾ. 26ರಂದು ಸಂಜೆ 4 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮತ್ತೊಂದು ಸಭೆ ನಡೆಸುವುದಾಗಿ ಜಿಲ್ಲಾಧಿಕಾರಿ ಇದೇ ವೇಳೆ ತಿಳಿಸಿದರು. ತಹಸೀಲ್ದಾರ್ ಪಾತರಾಜು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT