ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲದೊರೆಯದ ಕಾರ್ಯ

Last Updated 16 ಜೂನ್ 2018, 9:20 IST
ಅಕ್ಷರ ಗಾತ್ರ

ರೈಲು ಹೊರಡುವುದಕ್ಕೆ ಸಿದ್ಧವಾಗಿತ್ತು. ಅದು ರಾತ್ರಿ ಅಮೃತಸರದಿಂದ ಹೊರಟು ಬೆಳಿಗ್ಗೆ ಆರು ಗಂಟೆಗೆ ದೆಹಲಿ ತಲುಪುವುದು. ಒಬ್ಬ ಮನುಷ್ಯ ಟಿಕೆಟ್ ಇನ್ಸಪೆಕ್ಟರ್ (ಟಿ.ಸಿ) ಹತ್ತಿರ ಅವಸರವಸರವಾಗಿ ಬಂದ. ಅವನ ಮುಖದಲ್ಲಿ ಆತಂಕ ತುಂಬ ಕಾಣುತ್ತಿತ್ತು. ಬಂದವನೇ, ‘ಸಾರ್, ನನಗೊಂದು ಉಪಕಾರವಾಗಬೇಕು. ನಾನು ಗಾಜಿಯಾಬಾದ್‌ನಲ್ಲಿ ಇಳಿಯಬೇಕು.

ರೈಲು ರಾತ್ರಿ ಒಂದೂವರೆಗೆ ಅಲ್ಲಿ ತಲುಪುತ್ತದೆ. ನನಗೆ ತುರ್ತು ಕೆಲಸವಿರುವುದರಿಂದ ನಾನು ಇಳಿಯಲೇಬೇಕು. ದಯವಿಟ್ಟು ನನ್ನನ್ನು ಗಾಜಿಯಾಬಾದ್‌ನಲ್ಲಿ ಇಳಿಸಿ ಬಿಡ್ತೀರಾ? ನನ್ನ ಬರ್ತ್ ನಂಬರ 46’ ಎಂದು ಕೇಳಿಕೊಂಡ. ಟಿ.ಸಿ.ಗೆ ಅವನದೇ ಕೆಲಸದ ಒತ್ತಡ. ಆದರೂ ಹೇಳಿದ, ‘ಸರಿ ಸ್ವಾಮಿ, ನಿಮ್ಮನ್ನು ಗಾಜಿಯಾಬಾದ್‌ನಲ್ಲಿ ಇಳಿಸುತ್ತೇನೆ. ಹೋಗಿ ಮಲಗಿಕೊಳ್ಳಿ.’

ಮತ್ತೆ ಎರಡು ಕ್ಷಣಗಳಲ್ಲಿ ವ್ಯಕ್ತಿ ಹಾಜರ್, ‘ಸಾರ್, ದಯವಿಟ್ಟು ಮರೆತು ಬಿಡಬೇಡಿ. ನಾನು ಅರ್ಜೆಂಟಾಗಿ ಗಾಜಿಯಾಬಾದ್‌ನಲ್ಲಿ ಇಳಿಯಲೇಬೇಕು. ಆದರೆ ಒಂದು ತೊಂದರೆ ಇದೆ ಸರ್. ನನಗೆ ಬಹಳ ಗಾಢವಾದ ನಿದ್ರೆ ಬಂದು ಬಿಡುತ್ತದೆ. ಬೇಗನೇ ಎಚ್ಚರವಾಗುವುದಿಲ್ಲ. ದಯವಿಟ್ಟು ನನ್ನನ್ನು ಚೆನ್ನಾಗಿ ಅಲುಗಾಡಿಸಿ ಎಬ್ಬಿಸಿಬಿಡಿ ಸರ್. ನಾನು ಕೂಗಿದ ತಕ್ಷಣ ಏಳಲಿಲ್ಲ ಎಂದು ಬಿಟ್ಟುಬಿಡಬೇಡಿ’ ಎಂದು ಗೋಗರೆದ. ಮೊದಲೇ ಸುಸ್ತಾಗಿದ್ದ ಟಿ.ಸಿ ‘ಆಯ್ತಪ್ಪ, ನೀವು ಹೋಗಿ ಮಲಗಿ ನಾನು ನಿಮ್ಮನ್ನು ಎಬ್ಬಿಸದೇ ಬಿಡುವುದಿಲ್ಲ.’

ಐದು ನಿಮಿಷಕ್ಕೆ ಮತ್ತೆ ಆ ಪ್ರವಾಸಿ ಟಿ.ಸಿ ಹತ್ತಿರ ಬಂದು ಕೈಕೈ ಹಿಸುಕುತ್ತಾ ನಿಂತರು. ‘ಮತ್ತೇನಪ್ಪಾ ನಿಮ್ಮ ತಕರಾರು? ನಿಮ್ಮನ್ನು ಎಬ್ಬಿಸುವುದು ತಾನೇ? ಚಿಂತೆ ಬೇಡ; ಎಂದರು ಟಿ.ಸಿ. ‘ಹಾಗಲ್ಲ ಸಾರ್, ನನ್ನ ನಿದ್ರೆ ಗಾಢ ಎಂದು ಹೇಳಿದೆ. ಆದರೆ ನಿದ್ರೆಯಲ್ಲಿ ಭಂಗವಾದರೆ ನನಗೆ ಅಸಾಧ್ಯ ಕೋಪಬರುತ್ತದೆ. ಬಾಯಿಗೆ ಬಂದ ಹಾಗೆ ಬೈದು ಬಿಡುತ್ತೇನೆ. ಯಾರಿದ್ದಾರೆ, ಯಾರಿಲ್ಲ ಎಂಬುದು ಮನಸ್ಸಿಗೆ ಬರುವುದೇ ಇಲ್ಲ. ಇದನ್ನೇಕೆ ಹೇಳಿದೆ ಎಂದರೆ ನೀವು ನನ್ನನ್ನು ಎಬ್ಬಿಸಿದಾಗ ನಿದ್ದೆಗಣ್ಣಿನಲ್ಲಿ ನಿಮ್ಮನ್ನು ಬೈಯಬಹುದು. ಬೇಜಾರುಮಾಡಿಕೊಳ್ಳಬೇಡಿ ಎಂದು ಹೇಳುವುದಕ್ಕೆ ಬಂದೆ’ ಎಂದರು ಪ್ರವಾಸಿ. ‘ಆಯ್ತು ಅದೂ ಆಗಲಿ. ನಿಮ್ಮ ಬೈಗಳನ್ನು ಗಮನಕ್ಕೆ ತೆಗೆದುಕೊಳ್ಳದೇ ನಿಮ್ಮನ್ನು ಎಬ್ಬಿಸುತ್ತೇನೆ. ಈಗ ನನಗೆ ಕೆಲಸ ಮಾಡಲು ಬಿಡಿ’ ಎಂದು ಟಿ.ಸಿ. ತಮ್ಮ ಕೆಲಸ ಪ್ರಾರಂಭಿಸಿದರು.

ಮತ್ತೊಂದು ಕ್ಷಣದಲ್ಲಿ ಯಾರೋ ಅವರ ಬೆನ್ನು ತಟ್ಟಿದಂತಾಯಿತು. ತಿರುಗಿ ನೋಡಿದರೆ ಅದೇ ಬರ್ತ್ ನಂಬರ್ 46! ‘ಮತ್ತೇನು ಸ್ವಾಮಿ ನಿಮ್ಮ ಸಮಸ್ಯೆ?’ ಕೇಳಿದರು ಟಿ.ಸಿ. ‘ಹ್ಯಾಗೆ ಹೇಳುವುದೋ ತಿಳಿಯುತ್ತಿಲ್ಲ ಸರ್. ನಾನು ಕುಂಭಕರ್ಣನ ವಂಶದವನೇ ಇರಬೇಕು. ನಿದ್ರೆಯಿಂದ ಎಚ್ಚರಗೊಳ್ಳುವುದು ಬಹಳ ಕಷ್ಟ. ಯಾರಾದರೂ ನಡುವೆ ಎಬ್ಬಿಸಿದರೆ ಬರೀ ಬೈಯುವುದು ಮಾತ್ರವಲ್ಲ ನಾನು ಹೊಡೆದೇ ಬಿಡಬಹುದು. ತಮಗೂ ಎಲ್ಲಿ ಹಾಗೆಯೇ ಮಾಡಿಬಿಡುತ್ತೇನೋ ಎಂಬ ಹೆದರಿಕೆ. ತಾವು ದಯವಿಟ್ಟು ಯಾವುದನ್ನು ಮನಸ್ಸಿನಲ್ಲಿಟ್ಟುಕೊಳ್ಳದೇ ನನ್ನನ್ನು ಸಾಮಾನು ಸಮೇತ ಗಾಜಿಯಾಬಾದ್ ಸ್ಟೇಷ್‌ನ್ ಮೇಲೆ ಎಸೆದುಬಿಡಿ ಸರ್. ನಾನು ಹೇಳಿದ್ದನ್ನು, ಬೈದದ್ದನ್ನು ಕೇಳಿಸಿಕೊಳ್ಳಲೇಬೇಡಿ.’ ‘ಹೋಗಿ ಸ್ವಾಮಿ. ನಿಮ್ಮನ್ನು ಎತ್ತಿ ಪ್ಲಾಟ್‌ಫಾರ್‌ಂ ಮೇಲೆ ಹಾಕಿಬಿಡುತ್ತೇನೆ. ಆಯ್ತೋ?’ ಎಂದರು ಬೇಜಾರಿನಿಂದ ಟಿ.ಸಿ. ಪ್ರವಾಸಿ ನಿಶ್ಚಿಂತೆಯಿಂದ ಹೋದ.

ಮರುದಿನ ಬೆಳಿಗ್ಗೆ ಆರು ಗಂಟೆಗೆ ರೈಲು ದೆಹಲಿ ಸೇರಿತು. ಪ್ರವಾಸಿಗೆ ಎಚ್ಚರವಾಗಿ ನೋಡುತ್ತಾನೆ. ತಾನು ರೈಲಿನಲ್ಲೇ ಇದ್ದಾನೆ. ಅಂದರೆ ಗಾಜಿಯಾಬಾದ್ ನಲ್ಲಿ ಇಳಿಯಲೇ ಇಲ್ಲ. ಟಿ.ಸಿ. ತನ್ನನ್ನು ಇಳಿಸಲಿಲ್ಲ, ಕೋಪ ನೆತ್ತಿಗೇರಿತು. ಸರಸರನೇ ಹೋಗಿ ಟಿ.ಸಿಯನ್ನು ಕಂಡು ತನ್ನ ಶಬ್ದಭಂಡಾರದಲ್ಲಿದ್ದ ಎಲ್ಲ ಬೈಗುಳಗಳನ್ನು ಪ್ರಯೋಗಿಸಿದ. ನೂರಾರು ಜನ ಸೇರಿದರು.

ಇವನು ಬೈದ, ಬೈದ. ಆದರೆ ಟಿ.ಸಿ ಮಾತ್ರ ಮಾತನ್ನೇ ಆಡುತ್ತಿಲ್ಲ. ಜನ ಗಮನಿಸಿದರು. ಒಬ್ಬ ಹೇಳಿದ. ‘ಏನು ಸ್ವಾಮಿ, ಈ ವ್ಯಕ್ತಿ ನಿಮಗೆ ಇಷ್ಟೊಂದು ಬೈಯುತ್ತಿದ್ದಾನೆ, ಅಪಮಾನ ಮಾಡುತ್ತಿದ್ದಾನೆ, ನೀವು ಒಂದು ಮಾತೂ ಆಡುತ್ತಿಲ್ಲ?’ ಆಗ ಟಿ.ಸಿ. ಹೇಳಿದ, ‘ಇವನೇನು ಬೈದಾನು ಸ್ವಾಮಿ? ಯಾರನ್ನು ನಾನು ಗಾಜಿಯಾಬಾದ್‌ನಲ್ಲಿ ಸಾಮಾನು ಸಹಿತ ಹೊರಗೆ ಎಸೆದುಬಿಟ್ಟೆನೋ ಅವನು ಇವನಿಗಿಂತ ಹೆಚ್ಚು ಬೈದಿದ್ದ, ಹೊಡೆದಿದ್ದ ಕೂಡ.’ ಟಿ.ಸಿ. 46ನೇ ನಂಬರಿನ ಬರ್ತ್‌ನಲ್ಲಿರುವ ಪ್ರವಾಸಿಯ ಬದಲು 56ನೇ ಬರ್ತ್‌ನ ಪ್ರವಾಸಿಯನ್ನು ಅನಾಮತ್ತಾಗಿ ಎತ್ತಿ ಹೊರಗೆ ಹಾಕಿಬಿಟ್ಟಿದ್ದ. ಕೆಲಸ ಮಾಡಿದ್ದೇನೋ ಸರಿ ಆದರೆ ಅದು ಸರಿಯಾದ ವ್ಯಕ್ತಿಗೆ ಆಗಿರಲಿಲ್ಲ.

ಬಹಳಷ್ಟು ಬಾರಿ ನಮಗೆ ಹಾಗೆಯೇ ಆಗುತ್ತದೆ. ಕೆಲಸವನ್ನು ಮಾಡುತ್ತೇವೆ. ಶ್ರಮಪಡುತ್ತೇವೆ, ಆದರೆ ಫಲ ಮಾತ್ರ ಸರಿಯಾಗಿ ದೊರಕುವುದಿಲ್ಲ. ಯಾಕೆಂದರೆ ನಾವು ಮಾಡುವ ಕೆಲಸವನ್ನು ಸರಿಯಾಗಿ ಬರೆದುಕೊಂಡು ಯೋಜಿಸಿ ಮಾಡುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT