ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲಪುಷ್ಪ ಪ್ರದರ್ಶನ: ಕೊನೆ ದಿನ ನೂಕು ನುಗ್ಗಲು

Last Updated 15 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು:  ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ `ಸಸ್ಯ ಕಾಶಿ~ ಲಾಲ್‌ಬಾಗ್‌ನಲ್ಲಿ ಹಮ್ಮಿಕೊಂಡಿದ್ದ ಫಲಪುಷ್ಪ ಪ್ರದರ್ಶನ ಬುಧವಾರ ಅಂತ್ಯಗೊಂಡಿತು. ಕೊನೆ ದಿನ ಸುಮಾರು 1.75 ಲಕ್ಷ ಜನ ಉದ್ಯಾನಕ್ಕೆ ಭೇಟಿ ನೀಡಿದ್ದರು. ಇದು ಇದುವರೆಗಿನ ದಾಖಲೆ! ಒಟ್ಟಾರೆ ಏಳು ದಿನಗಳಲ್ಲಿ 4 ಲಕ್ಷ ಜನ ಫಲಪುಷ್ಪ ಪ್ರದರ್ಶನ ವೀಕ್ಷಿಸಿದ್ದಾರೆ.

ಕಳೆದ ಆರು ದಿನಗಳಲ್ಲಿ ಫಲಪುಷ್ಪ ಪ್ರದರ್ಶನ ವೀಕ್ಷಿಸಲು 1.75 ಲಕ್ಷ ಜನ ಆಗಮಿಸಿದರೆ, ಕೊನೇ ದಿನ ನಿರೀಕ್ಷೆಗೂ ಮೀರಿ ಸಾರ್ವಜನಿಕರು ಉದ್ಯಾನಕ್ಕೆ ಭೇಟಿ ನೀಡಿದ್ದರಿಂದ ನೂಕು ನುಗ್ಗಲು ಉಂಟಾಗಿತ್ತು. ಮಕ್ಕಳು ಹಾಗೂ ಉಚಿತ ಪಾಸ್ ಹೊಂದಿರುವ ನಾಗರಿಕರು ಸೇರಿ ಸುಮಾರು 50 ಸಾವಿರ ಮಂದಿ ಫಲಪುಷ್ಪ ಪ್ರದರ್ಶನ ವೀಕ್ಷಿಸಿರಬಹುದು ಎಂದು ಅಂದಾಜು ಮಾಡಲಾಗಿದೆ.

ಅಂತೆಯೇ, ತೋಟಗಾರಿಕಾ ಇಲಾಖೆಗೆ ಏಳು ದಿನಗಳ ಪ್ರದರ್ಶನದಲ್ಲಿ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ವರಮಾನ ಬಂದಿದೆ. ಸುಮಾರು ಒಂದು ಕೋಟಿ ರೂಪಾಯಿ ಆದಾಯ ಸಂಗ್ರಹವಾಗಬಹುದು ಎಂದು ಇಲಾಖೆ ಅಂದಾಜಿಸಿದ್ದರೆ, ಶುಲ್ಕದ ರೂಪದಲ್ಲಿ ಒಟ್ಟು 1.6 ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಜಗದೀಶ್ `ಪ್ರಜಾವಾಣಿ~ಗೆ ತಿಳಿಸಿದರು.

ತರಕಾರಿಗಳ ಕೆತ್ತನೆ, ಥಾಯ್‌ಆರ್ಟ್, ಬೋನ್ಸಾಯ್, ಇಕೆಬಾನ, ಜಾನೂರು, ಕುಂಡಗಳಲ್ಲೇ ಬೆಳೆಸಿದ ತರಕಾರಿ ಬಿಟ್ಟ ಗಿಡಗಳು, ಆಂಥೋರಿಯಂ, ಆರ್ಕಿಡ್, ವಿಂಕಾ, ಇಂಪೇಷನ್ಸ್, ಸೈಕ್ಲೊಮನ್, ಪೆಟೂನಿಯಾ, ಪಾಯಿನ್ಸಿಟಿಯಾ, ಪೇಟೊನೂನಿಯಾ ಸೇರಿದಂತೆ 200ಕ್ಕೂ ಹೆಚ್ಚು ಅಪರೂಪದ ಜಾತಿಯ ಹೂ ಗಿಡಗಳನ್ನು ಈ ಬಾರಿ ಪ್ರದರ್ಶನಕ್ಕಿಡಲಾಗಿತ್ತು.

`ಹೂ, ಗಿಡ, ಹಣ್ಣು ತರಕಾರಿಗಳನ್ನು ಬಳಸಿ ವಿವಿಧ ಪ್ರಾಣಿಗಳನ್ನು ನಿರ್ಮಿಸಿರುವ `ಟ್ರೀ ಹಟ್~ ಈ ಬಾರಿಯ ಪ್ರದರ್ಶನದ ವಿಶೇಷವಾಗಿತ್ತು. ಉದ್ಯಾನವನದ ಗಾಜಿನಮನೆಯಲ್ಲಿ ಮನುಷ್ಯ, ಪಾಣಿ ಹಾಗೂ ಪರಿಸರದ ನಡುವಿನ ಸಂಬಂಧವನ್ನು ಈ ಬೃಹತ್ ಕಲಾಕೃತಿಯ ಮೂಲಕ ಅನಾವರಣಗೊಳಿಸಿತ್ತು.
 
ಸುಮಾರು 40 ಸಾವಿರ ಅಲ್‌ಸ್ಟ್ರೋಮೆರಿಯನ್ ಲಿಲ್ಲಿ ಹೂಗಳನ್ನು ಬಳಸಿ ಮರದ ಮೇಲಿನ ಅಟ್ಟಣಿಗೆಯನ್ನು ನಿರ್ಮಿಸಲಾಗಿತ್ತು. ಒಂದು ಲಕ್ಷ ವಿವಿಧ ಹೂಗಳಿಂದ ಪ್ರಾಣಿಗಳ ಕಲಾಕೃತಿಗಳನ್ನು ನಿರ್ಮಿಸಲಾಗಿತ್ತು. ಶೀತವಲಯದಲ್ಲಿ ಬೆಳೆಯುವ ಈ ಹೂಗಳನ್ನು ಪ್ರದರ್ಶನಕ್ಕೆಂದು ವಿಶೇಷವಾಗಿ ಊಟಿಯಲ್ಲಿಯೇ ಬೆಳೆಸಿ ತರಿಸಲಾಗಿತ್ತು.
 

ವಾಹನ ಸಂಚಾರ ಅಸ್ತವ್ಯಸ್ತ
ಸ್ವಾತಂತ್ರ್ಯೋತ್ಸವ ದಿನ ಎಲ್ಲರಿಗೂ ರಜೆ ಇದ್ದುದರಿಂದ ಪ್ರವಾಹೋಪಾದಿಯಲ್ಲಿ ಜನ ಲಾಲ್‌ಬಾಗ್‌ನತ್ತ ಹರಿದು ಬಂದರು. ಇದರಿಂದ ಲಾಲ್‌ಬಾಗ್ ರಸ್ತೆ, ಕೆ.ಎಚ್. ರಸ್ತೆಗಳಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸರು ಹೆಣಗಾಡಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT