ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲಿತಾಂಶ ವಿಳಂಬಕ್ಕೆ ಕಾಲೇಜುಗಳ ಲೋಪವೇ ಕಾರಣ

Last Updated 5 ಫೆಬ್ರುವರಿ 2012, 19:15 IST
ಅಕ್ಷರ ಗಾತ್ರ

ಬೆಂಗಳೂರು:  `ಪರೀಕ್ಷೆಗಳ ಫಲಿತಾಂಶ ವಿಳಂಬಕ್ಕೆ ಕಾಲೇಜುಗಳ ಹೊಣೆ ಶೇಕಡಾ 80ರಷ್ಟಿದೆ. ಕಾಲೇಜುಗಳು ವಿದ್ಯಾರ್ಥಿಗಳ ಪ್ರವೇಶಾತಿಯಲ್ಲಿ ವಿಶ್ವವಿದ್ಯಾಲಯದ ನೀತಿ ನಿಯಮಗಳನ್ನು ಸರಿಯಾಗಿ ಅಳವಡಿಸಿಕೊಳ್ಳದೇ ಇರುವುದು ಹಾಗೂ ಸಮಯಕ್ಕೆ ಸರಿಯಾಗಿ ಆಂತರಿಕ ಮೌಲ್ಯಮಾಪನದ ಅಂಕಗಳನ್ನು ಕಳುಹಿಸದೇ ಇರುವುದು ಫಲಿತಾಂಶ ವಿಳಂಬಕ್ಕೆ ಮುಖ್ಯ ಕಾರಣಗಳು~ ಎಂದು ಬೆಂಗಳೂರು ವಿ.ವಿ ಕುಲಪತಿ ಡಾ.ಎನ್.ಪ್ರಭುದೇವ್ ಅಭಿಪ್ರಾಯಪಟ್ಟಿದ್ದಾರೆ.

ಕುಲಪತಿಯಾಗಿ ಮೂರು ವರ್ಷಗಳನ್ನು (ಫೆ. 3ಕ್ಕೆ) ಪೂರೈಸಿದ ಹಿನ್ನೆಲೆಯಲ್ಲಿ ಭಾನುವಾರ ಮೂರು ಪುಟಗಳ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, `ವಿ.ವಿ ಅಭಿವೃದ್ಧಿಗಾಗಿ ನಾನು ಅವಿರತವಾಗಿ ಶ್ರಮಿಸಿದ್ದು, ಸಾಕಷ್ಟು ಸುಧಾರಣೆಗಳನ್ನು ತಂದಿದ್ದೇನೆ. ನನ್ನ ಅವಧಿಯಲ್ಲಿ ಎಲ್ಲಾ ಪರೀಕ್ಷೆಗಳ ಫಲಿತಾಂಶ ಹಾಗೂ ಅಂಕಪಟ್ಟಿಗಳ ವಿತರಣೆಯಲ್ಲಿ ಯಾವುದೇ ಲೋಪಗಳಾಗಿಲ್ಲ. ನನ್ನ ಅವಧಿಗೂ ಮುನ್ನ ಉಂಟಾಗಿದ್ದ ಅನೇಕ ಸಮಸ್ಯೆಗಳಿಗೆ ನನ್ನನ್ನೇ ಗುರಿಮಾಡಲಾಯಿತು~ ಎಂದು ದೂರಿದ್ದಾರೆ.

`ಈ ಕ್ಷಣಕ್ಕೆ ವಿ.ವಿ.ಯಲ್ಲಿ ಎಲ್ಲವೂ ಸರಿಯಾಗಿದೆ ಎಂದು ಹೇಳಲಾರೆ. ಆದರೆ ಸಮಸ್ಯೆಗಳ ನಿವಾರಣೆಗೆ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ~ ಎಂದು ಅವರು ತಿಳಿಸಿದ್ದಾರೆ.
`ಪರೀಕ್ಷಾ ಸಮಸ್ಯೆಗಳ ನಿವಾರಣೆಗಾಗಿ ಪರೀಕ್ಷಾ ಅದಾಲತ್‌ಗಳನ್ನು ನಡೆಸಲಾಗುತ್ತಿದೆ. ಅಂಕ ಪಟ್ಟಿ, ಪದವಿ ಪ್ರಮಾಣ ಪತ್ರ ಸಮಸ್ಯೆಗಳೂ ಸೇರಿದಂತೆ ಈ ವರೆಗೆ ಸುಮಾರು 4 ಸಾವಿರ ದೂರುಗಳು ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಬಾಕಿ ಉಳಿದಿವೆ. ಇದನ್ನು ಸರಿಪಡಿಸಲು ವಿವಿಯ ಅಧಿಕಾರಿಗಳಿಗೆ ತರಬೇತಿ ಹಾಗೂ ಕಾರ್ಯಾಗಾರಗಳನ್ನು ನಡೆಸುತ್ತಾ ಬರಲಾಗಿದೆ.
 
ತಂತ್ರಜ್ಞಾನವನ್ನು ವಿವಿಯ ಆಡಳಿತಕ್ಕೆ ಸಹಕಾರಿಯಾಗುವಂತೆ ಬಳಸಿಕೊಂಡು ಬರಲಾಗಿದೆ. ಫಲಿತಾಂಶ ಪ್ರಕಟಣೆ, ಪ್ರವೇಶ ಪತ್ರಗಳು, ಉತ್ತರ ಪತ್ರಿಕೆಗಳು ಹಾಗೂ ಓಎಂಆರ್ ಶೀಟ್‌ಗಳ ಡೌನ್‌ಲೋಡ್ ಸೇರಿದಂತೆ ವಿವಿಧ ಆನ್‌ಲೈನ್ ಸೇವೆಗಳನ್ನು ಒದಗಿಸಲಾಗಿದೆ~ ಎಂದು ಅವರು ವಿವರಿಸಿದ್ದಾರೆ.

`ಅಂಕಪಟ್ಟಿಗಳಲ್ಲಿ `ಅನುತ್ತೀರ್ಣ~ ಪದದ ಬದಲು `ಪುನರ್ ಅವಕಾಶ~ ಪದದ ಬಳಕೆಯನ್ನು ತಂದ ನಂತರ ಪರೀಕ್ಷಾ ಫಲಿತಾಂಶಗಳ ಕಾರಣದಿಂದ ಉಂಟಾಗುತ್ತಿದ್ದ ವಿದ್ಯಾರ್ಥಿಗಳ ಆತ್ಯಹತ್ಯೆ ಪ್ರಮಾಣ ಕಡಿಮೆಯಾಗಿದೆ. ಪರೀಕ್ಷೆ ನಡೆದ 25 ದಿನದೊಳಗೇ ಫಲಿತಾಂಶ ನೀಡುವ ಮೂಲಕ ಸಾವಿರಾರು ವಿದ್ಯಾರ್ಥಿಗಳ ವೃತ್ತಿ ಜೀವನಕ್ಕೆನ ಅನುಕೂಲವಾಗುವಂತೆ ನೋಡಿಕೊಳ್ಳಲಾಗಿದೆ. ಸ್ನಾತಕೋತ್ತರ ಶಿಕ್ಷಣ ಕ್ರಮಗಳಲ್ಲಿ ಮೌಲ್ಯಮಾಪನ ಕಾರ್ಯ ವಿಳಂಬವಾಗುತ್ತಿದ್ದ ಕಾರಣ ಫಲಿತಾಂಶವೂ ವಿಳಂಬವಾಗುತ್ತಿತ್ತು~ ಎಂದು ಅವರು ತಿಳಿಸಿದ್ದಾರೆ.

`ನೆಲ್ಸನ್ ಸರ್ವೆ ಪ್ರಕಾರ 2010 ರಲ್ಲಿ ಬೆಂಗಳೂರು ವಿವಿ ದೇಶದಲ್ಲಿ 13 ನೇ ಸ್ಥಾನ ಹಾಗೂ 2011 ರಲ್ಲಿ 9 ನೇ ಸ್ಥಾನಕ್ಕೆ ಏರಿದೆ. ಇದು ವಿವಿಯ ಸಾಧನೆಗಳಲ್ಲಿ ಪ್ರಮುಖವಾದುದು. ಯುಜಿಸಿಯಿಂದ ಪಡೆಯುವ ಸಾಧನೆಯ ಉತ್ಕೃಷ್ಟ ಪ್ರಶಸ್ತಿಯು ವಿವಿಗೆ ಸಿಗದಿರುವುದು ಬೇಸರ ತಂದಿದೆ. ಈ ಸೋಲಿಗೆ ನಾನೇ ಜವಾಬ್ದಾರಿ ಹೊರುವೆ.

ಲಂಡನ್ ಹಾಗೂ ದೆಹಲಿ ಮಾದರಿಯಲ್ಲಿ ವಿವಿಯಲ್ಲಿ ಅರ್ಥಶಾಸ್ತ್ರ ಶಾಲೆ ತರುವ ಕನಸು ನನ್ನದಾಗಿತ್ತು. ಆದರೆ ಇದು ರಿಯಲ್ ಎಸ್ಟೇಟ್ ದಂಧೆ ಎಂದು ಆರೋಪಿಸಲಾಯಿತು. ಹಾಗೆಯೇ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕಾರ್ಡ್ ವಿತರಣೆಯ ಯೋಜನೆಯನ್ನೂ ಅನವಶ್ಯಕವಾಗಿ ವಿರೋಧಿಸಲಾಯಿತು~ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

`ವಿವಿಯ ಇತಿಹಾಸದಲ್ಲಿಯೇ ಪೊಲೀಸರು, ಸಿಂಡಿಕೇಟ್ ಸದಸ್ಯರು ಹಾಗೂ ರಿಜಿಸ್ಟ್ರಾರ್ ಎದುರಲ್ಲಿಯೇ ನನ್ನ ಮೇಲೆ ಹಲ್ಲೆಯಾಯಿತು. ದೂರ ಶಿಕ್ಷಣ ನಿರ್ದೇಶಕರ ಕಚೇರಿಯ ಮೇಲೆ ಶ್ರೀ ರಾಮ ಸೇನೆಯ ದಾಳಿಯಾಯಿತು. ಈ ಘಟನೆಗಳನ್ನು ನನ್ನನ್ನು ಬಹುವಾಗಿ ಕಾಡಿವೆ~ ಎಂದು ಪ್ರಭುದೇವ್ ಅವರು ವಿಷಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT