ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲಿತಾಂಶದ ಬಗ್ಗೆ ಗೊಂದಲ ಉಂಟಾಗಿತ್ತು

Last Updated 12 ಸೆಪ್ಟೆಂಬರ್ 2011, 19:00 IST
ಅಕ್ಷರ ಗಾತ್ರ

ಲಂಡನ್: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಏಕದಿನ ಕ್ರಿಕೆಟ್ ಪಂದ್ಯದ ಫಲಿತಾಂಶದ ಬಗ್ಗೆ ತಂಡದ ಕೆಲವು ಆಟಗಾರರು ಗೊಂದಲದಲ್ಲಿದ್ದರು ಎಂದು ನಾಯಕ ಮಹೇಂದ್ರ ಸಿಂಗ್ ದೋನಿ ಹೇಳಿದ್ದಾರೆ. ಮಾತ್ರವಲ್ಲ ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ ಪಂದ್ಯ `ಟೈ~ನಲ್ಲಿ ಕೊನೆಗೊಂಡದ್ದು ಅಚ್ಚರಿಗೆ ಕಾರಣವಾಯಿತು ಎಂದಿದ್ದಾರೆ.

ಲಾರ್ಡ್ಸ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿ 280 ರನ್ ಪೇರಿಸಿದ ಭಾರತ ಗೆಲುವಿನ ಕನಸು ಕಂಡಿತ್ತು. ಆದರೆ ಮರುಹೋರಾಟ ನಡೆಸಿದ ಇಂಗ್ಲೆಂಡ್ 48.5 ಓವರ್‌ಗಳಲ್ಲಿ 8 ವಿಕೆಟ್‌ಗೆ 270 ರನ್ ಗಳಿಸಲು ಯಶಸ್ವಿಯಾಗಿತ್ತು. ಪಂದ್ಯ ರೋಚಕ ಅಂತ್ಯ ಕಾಣುವ ಎಲ್ಲ ಸಾಧ್ಯತೆಗಳಿದ್ದರೂ, ಮಳೆರಾಯ ಅದಕ್ಕೆ ಅವಕಾಶ ನೀಡಲಿಲ್ಲ.

ಮಳೆ ನಿಲ್ಲದ ಕಾರಣ ಡಕ್ವರ್ಥ್ ಲೂಯಿಸ್ ನಿಯಮವನ್ನು ಅಳವಡಿಸಲಾಯಿತು. ಇದರಿಂದ ಪಂದ್ಯ `ಟೈ~ನಲ್ಲಿ ಕೊನೆಗೊಂಡಿತು. ಇಂಗ್ಲೆಂಡ್ ಇನಿಂಗ್ಸ್ ವೇಳೆ ಮಳೆ ಅಡ್ಡಿಪಡಿಸಿದ್ದು ನಿರಾಸೆ ಉಂಟುಮಾಡಿದೆ ಎಂದು ದೋನಿ ನುಡಿದಿದ್ದಾರೆ.

ಈ ಪಂದ್ಯ `ಟೈ~ನಲ್ಲಿ ಅಂತ್ಯಗೊಂಡ ಕಾರಣ ಐದು ಪಂದ್ಯಗಳ ಸರಣಿ 2-0 ರಲ್ಲಿ ಇಂಗ್ಲೆಂಡ್ ಗೆದ್ದುಕೊಂಡಿದೆ.
`ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ ಫಲಿತಾಂಶ ಯಾರ ಪರವಾಗಿರುತ್ತದೆ ಎಂಬುದರ ಬಗ್ಗೆ ತಂಡದ ಆಟಗಾರರಿಗೆ ಗೊಂದಲವಿತ್ತು. ನಾವೇ ಗೆದ್ದಿದ್ದೇವೆ ಎಂದು ಕೆಲವರು ಲೆಕ್ಕಾಚಾರ ಹಾಕಿದ್ದರು. ಮಳೆ ನಿಂತು ಆಟ ಮುಂದುವರಿಯಬಹುದು ಎಂದೂ ಭಾವಿಸಿದ್ದೆವು~ ಎಂದು ಪಂದ್ಯದ ಬಳಿಕ `ಮಹಿ~ ಪ್ರತಿಕ್ರಿಯಿಸಿದ್ದಾರೆ.
`ಡ್ರೆಸಿಂಗ್ ಕೊಠಡಿಯಲ್ಲಿದ್ದಾಗ ನಮಗೆ ಅಂತಿಮ ಫಲಿತಾಂಶ ದೊರೆಯಿತು. ಪಂದ್ಯ `ಟೈ~ ಎಂದು ತಿಳಿದಾಗ ಅಲ್ಪ ಅಚ್ಚರಿ ಉಂಟಾಯಿತು~ ಎಂದರು.

ಮಳೆ ಅಡ್ಡಿಪಡಿಸಿ ಪಂದ್ಯ `ಟೈ~ನಲ್ಲಿ ಅಂತ್ಯಗೊಂಡದ್ದು ದೋನಿಗೆ ನಿರಾಸೆ ಉಂಟುಮಾಡಿದ್ದು ನಿಜ. ಅವರ ಮುಖಭಾವ ಎಲ್ಲವನ್ನೂ ಹೇಳುತ್ತಿತ್ತು. `ಈ ಸರಣಿಯಲ್ಲಿ ನಮಗೆ ದುರದೃಷ್ಟ ಕಾಡಿದ್ದು ಇದೇ ಮೊದಲಲ್ಲ. ಮೊದಲ ಪಂದ್ಯದಲ್ಲೂ ಗೆಲುವು ಪಡೆಯುವ ಅವಕಾಶವಿತ್ತು. ಅಲ್ಲೂ ವರುಣನ ಅಡ್ಡಿ ಉಂಟಾಗಿತ್ತು. ಆದರೆ ಮಳೆಯನ್ನು ನಿಯಂತ್ರಿಸಲು ನಮಗೆ ಸಾಧ್ಯವಿಲ್ಲ~ ಎಂದಿದ್ದಾರೆ.

ಭಾನುವಾರ ಇಂಗ್ಲೆಂಡ್‌ನ ಇನಿಂಗ್ಸ್ ವೇಳೆ ಮೂರು ಸಲ ಮಳೆ ಅಡ್ಡಿಪಡಿಸಿತ್ತು. ಮೊದಲು ಮಳೆ ಸುರಿದಾಗ ಡಕ್ವರ್ಥ್ ಲೂಯಿಸ್ ನಿಯಮದಂತೆ ಭಾರತ ಮುಂದಿತ್ತು. ಎರಡನೇ ಬಾರಿ ಮಳೆ ಅಡ್ಡಿಪಡಿಸಿದಾಗ ಇಂಗ್ಲೆಂಡ್ ಮೇಲುಗೈ ಸಾಧಿಸಿತ್ತು. ಮೂರನೇ ಬಾರಿ ಸುರಿದ ಮಳೆ ಆಟ ಮುಂದುವರಿಯಲು ಅವಕಾಶವನ್ನೇ ನೀಡಲಿಲ್ಲ.

ಮಳೆ ಸುರಿದ ಸಂದರ್ಭ ಡಕ್ವರ್ಥ್ ನಿಯಮದಂತೆ ಮೇಲುಗೈ ಸಾಧಿಸಿದ್ದ ತಂಡದವರಿಗೆ ಮತ್ತೆ ಆಟ ಮುಂದುವರಿಸಲು ಇಷ್ಟವಿರಲಿಲ್ಲ. ಮೊದಲು ಭಾರತ ಹಾಗೂ ಆ ಬಳಿಕ ಇಂಗ್ಲೆಂಡ್‌ನ ಆಟಗಾರರು ಒಲ್ಲದ ಮನಸ್ಸಿನೊಂದಿಗೆ ಅಂಗಳಕ್ಕಿಳಿದಿದ್ದರು. ಇದರಿಂದ ಭಾನುವಾರ ಕ್ರಿಕೆಟ್‌ನ `ಕೊಳಕು ಮುಖ~ದ ದರ್ಶನವೂ ಆಯಿತು ಎಂದರು ದೋನಿ.

ನ್ಯಾಯವಾದ ಫಲಿತಾಂಶ: ಪಂದ್ಯ `ಟೈ~ನಲ್ಲಿ ಅಂತ್ಯಗೊಂಡದ್ದು ಇಂಗ್ಲೆಂಡ್ ತಂಡದ ನಾಯಕ ಅಲಸ್ಟರ್ ಕುಕ್ ಅವರಿಗೆ ಸಂತಸ ಉಂಟುಮಾಡಿದೆ. ಇದು `ನ್ಯಾಯವಾದ ಫಲಿತಾಂಶ~ ಎಂದು ಪ್ರತಿಕ್ರಿಯಿಸಿದ್ದಾರೆ. `ನಮಗೆ ಡಕ್ವರ್ಥ್ ಲೂಯಿಸ್ ನಿಯಮಕ್ಕೆ ಅನುಗುಣವಾಗಿ ಬ್ಯಾಟ್ ಮಾಡುವ ಪರಿಸ್ಥಿತಿ ಎದುರಾಗಿತ್ತು. ಎರಡೂ ತಂಡಗಳಿಗೆ ಇದು ಕಠಿಣ ಸವಾಲು ಉಂಟುಮಾಡಿದ್ದು ನಿಜ. ಅಂತಿಮ ಫಲಿತಾಂಶ ತೃಪ್ತಿ ನೀಡಿದೆ~ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT