ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಾರೂಕ್‌ ಕ್ಷಮೆಯಾಚನೆ

Last Updated 6 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ಮಹಿಳೆ­­ಯರನ್ನು ಕಾರ್ಯ­ದರ್ಶಿ­ಗಳ­ನ್ನಾಗಿ ನೇಮಿಸಿ­ಕೊ­ಳ್ಳುವ ಮುನ್ನ ಪುರುಷರು ಹತ್ತು ಸಲ ಯೋಚಿಸ­ಬೇಕಾಗುತ್ತದೆ’ ಎಂದು ಶುಕ್ರವಾರ ಹೇಳಿಕೆ ನೀಡಿ ವಿವಾದ­ಕ್ಕೊಳ­ಗಾಗಿದ್ದ ಕೇಂದ್ರ ಇಂಧನ ಸಚಿವ ಫಾರೂಕ್‌ ಅಬ್ದುಲ್ಲಾ, ನಂತರ ತೀವ್ರ ಪ್ರತಿಭಟನೆಗೆ ಮಣಿದು ಕೆಲವೇ ಗಂಟೆಗಳಲ್ಲಿ ಕ್ಷಮೆ­ಯಾಚಿಸಿದರು.

‘ಇತ್ತೀಚಿನ ದಿನಗಳಲ್ಲಿ ಹುಡುಗಿಯರ ಜೊತೆ ಮಾತನಾಡಲೂ ಹೆದರುವ ಪರಿ­ಸ್ಥಿತಿಯಿದೆ. ಮಹಿಳೆ ಯಾವುದೇ ಲೈಂಗಿಕ ಕಿರು­ಕುಳದ ದೂರು ನೀಡಿ­ದರೂ, ಪುರುಷ ಜೈಲಿಗೆ ಹೋಗ­ಬೇಕಾದ ಸನ್ನಿ­ವೇಶ ನಿರ್ಮಾಣವಾಗಿದೆ. ಹೀಗಾಗಿ ಮಹಿಳಾ ಕಾರ್ಯದರ್ಶಿ­ಗಳನ್ನು ನೇಮಿಸಿ­ಕೊಳ್ಳಬಾರದು’ ಎಂದು ಸಂಸತ್‌ ಭವನದ ಎದುರು ಅವರು ಪತ್ರಕರ್ತರ ಜತೆ ಮಾತನಾಡುವಾಗ ನೀಡಿದ ಹೇಳಿಕೆಗೆ ಭಾರಿ ಆಕ್ಷೇಪ ವ್ಯಕ್ತವಾಗಿತ್ತು,

‘ನನ್ನಪ್ಪ ಲಘು ಧಾಟಿಯಲ್ಲಿ ಈ ಮಾತು ಹೇಳಿರಬಹುದು. ಆದರೆ ಇದು ಸರಿಯಲ್ಲ. ಇದರಿಂದ ಮಹಿಳೆಯರ ಸುರಕ್ಷತೆಯ ವಿಷಯ ಗೌಣವೂ ಆಗುವುದಿಲ್ಲ. ಅವರು ಕ್ಷಮೆ ಕೇಳುತ್ತಾರೆ ಎಂಬ ಭಾವನೆ ನನಗಿದೆ’ ಎಂದು ಫಾರೂಕ್‌ ಅವರ ಮಗ, ಕಾಶ್ಮೀರ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಟ್ವಿಟ್ಟರ್‌ನಲ್ಲಿ ಬರೆದಿದ್ದರು. ಇದರ ಬೆನ್ನಲ್ಲೇ ಫಾರೂಕ್‌ ಕ್ಷಮೆ ಕೇಳಿದರು.

‘ನಾನು ಹೆಣ್ಣುಮಕ್ಕಳ ಮೇಲೆ ಆರೋಪ ಮಾಡುತ್ತಿಲ್ಲ. ಬದಲಾಗಿ ಸಮಾಜವನ್ನು ದೂಷಿಸಬೇಕಿದೆ. ದೂರು­ಗಳು ಆ ರೀತಿ­ ಬರುತ್ತಿವೆ. ಅತ್ಯಾ­ಚಾರ ನಡೆ­ಯ­ಬಾರದು. ಅದು ಮಹಿಳೆಯರನ್ನು ಕುಗ್ಗಿಸಿಬಿಡುತ್ತದೆ.  ಗಂಡುಮಗು ಹುಟ್ಟಿ­ದಾಗ ಖುಷಿಪಡುತ್ತೇವೆ. ಆದರೆ ಹೆಣ್ಣು­ಮಗು ಜನಿಸಿದಾಗ ಅಳುತ್ತೇವೆ’ ಎಂದು ಫಾರೂಕ್‌ ಇದಕ್ಕೂ ಮುನ್ನ ಹೇಳಿದ್ದರು.

ನಂತರ ತಪ್ಪೊಪ್ಪಿಗೆ ಧಾಟಿಯಲ್ಲಿ ಮಾತನಾಡಿ, ‘ಜನ ನನ್ನ  ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು, ಅನೇಕ ವಿಧ­ದಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಯಾರನ್ನೂ ಕುಗ್ಗಿಸು­ವಂತ­ಹ ಹೇಳಿಕೆ ನೀಡಿಲ್ಲ. ಮಹಿಳೆ­ಯ­ರಿಗೆ ನ್ಯಾಯ ಸಿಗಬೇಕಾದ ಮತ್ತು ಸಂಸತ್‌ನಲ್ಲಿ ಆದಷ್ಟು ಬೇಗ ಶೇ 33ರಷ್ಟು ಮೀಸ­ಲಾತಿ ಕಲ್ಪಿಸಬೇಕಾದ ಸಂದರ್ಭ ಒದಗಿ­ಬಂದಿದೆ’ ಎಂದರು.

ಮಹಿಳಾ ಆಪ್ತ ಕಾರ್ಯ­ದ­ರ್ಶಿ­ಗಳನ್ನು ನೇಮಿಸಿಕೊಳ್ಳದಂತೆ ಸಚಿವ ಫಾರೂಕ್‌ ನೀಡಿದ ಸಲಹೆ­ಯನ್ನು ಮಹಿಳಾ ನಾಯಕಿ­ಯರು ಪಕ್ಷಭೇದ ಮರೆತು ಖಂಡಿಸಿದ್ದಾರೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ರಾಜ್ಯ ಸಚಿವೆ ಕೃಷ್ಣಾ ತೀರಥ್‌, ಬಿಜೆಪಿ ನಾಯಕಿ ಸ್ಮೃತಿ ಇರಾನಿ, ಸಿಪಿಎಂ ನಾಯಕಿ ಬೃಂದಾ ಕಾರಟ್‌ ಮತ್ತಿತರರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT