ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಾರ್ಮುಲಾ ಒನ್ ಇಂಡಿಯನ್ ಗ್ರ್ಯಾನ್ ಪ್ರಿ: ಸುಟಿಲ್‌ಗೆ ಒಂಬತ್ತನೇ ಸ್ಥಾನ

Last Updated 30 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಗ್ರೇಟರ್ ನೊಯಿಡಾ: ಫಾರ್ಮುಲಾ ಒನ್ ಕನ್‌ಸ್ಟ್ರಕ್ಟರ್ ರ‌್ಯಾಂಕಿಂಗ್‌ನಲ್ಲಿ ಐದನೇ ಸ್ಥಾನಕ್ಕೇರುವ ಕನಸು ಕಂಡಿರುವ ಸಹಾರಾ ಫೋರ್ಸ್ ಇಂಡಿಯಾ ತಂಡವು ಆ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡಲು ಇಂಡಿಯನ್ ಫಾರ್ಮುಲಾ ಒನ್ ಗ್ರ್ಯಾನ್ ಪ್ರಿಯಲ್ಲಿಯೂ ಸಾಧ್ಯವಾಗಲಿಲ್ಲ.

ಹೆಚ್ಚು ಪಾಯಿಂಟುಗಳನ್ನು ಗಿಟ್ಟಿಸುವ ಮೂಲಕ ಪಾಯಿಂಟುಗಳ ಪಟ್ಟಿಯಲ್ಲಿ ಮೇಲೇರುವ ಆಸೆಗೆ ತಕ್ಕ ಫಲವಂತೂ ಭಾನುವಾರದಂದು ಬುದ್ಧ ಇಂಟರ್‌ನ್ಯಾಷನಲ್ ಟ್ರ್ಯಾಕ್‌ನಲ್ಲಿ ಹೊರಹೊಮ್ಮಲಿಲ್ಲ. ಅಡ್ರಿಯನ್ ಸುಟಿಲ್ ಅವರು ಚಾಂಪಿಯನ್ ರೆಡ್‌ಬುಲ್ ರೆನಾಲ್ಟ್ ತಂಡದ ಸೆಬಾಸ್ಟಿಯನ್ ವೆಟೆಲ್ (1:30:35.002 ಸೆ.) ಅವರಿಗಿಂತ ಒಂದು ಲಾಪ್‌ಗೂ ಹೆಚ್ಚು ಅಂತರದಿಂದ ಹಿನ್ನಡೆ ಅನುಭವಿಸಿದರು.

ಸುಟಿಲ್ ಒಂಬತ್ತನೇ ಸ್ಥಾನವನ್ನು ಪಡೆದರೂ ಅದು ಮೆಚ್ಚುವಂಥ ವೇಗವೇನಲ್ಲ. ಫೋರ್ಸ್ ಇಂಡಿಯಾ ತಂಡದ ಇನ್ನೊಬ್ಬ ಚಾಲಕ ಪಾಲ್ ಡಿ ರೆಸ್ಟಾ ಅವರಂತೂ ಈ ಟ್ರ್ಯಾಕ್‌ನಲ್ಲಿ ಮೊದಲ ಹತ್ತರ ಪಟ್ಟಿಯಲ್ಲಿ ಕಾಣಿಸುವ ಮಟ್ಟದಲ್ಲಿ ಮಿಂಚಿನಿಂದ ಮುನ್ನುಗ್ಗಲಿಲ್ಲ. ಅವರಿಗೆ ಸಿಕ್ಕಿದ್ದು ಹದಿಮೂರನೇ ಸ್ಥಾನ.

ವರ್ಷದುದ್ದಕ್ಕೂ ಹೆಚ್ಚಿನ ಗ್ರ್ಯಾನ್ ಪ್ರಿಗಳಲ್ಲಿ ಯಶಸ್ಸು ಪಡೆದಿರುವ ಜರ್ಮನಿಯ ಚಾಲಕ ವೆಟೆಲ್ ಮಾತ್ರ ತಮಗಾರೂ ಸರಿಸಾಟಿ ಇಲ್ಲವೆಂದು ವಿಜಯ ವೇದಿಕೆಯಲ್ಲಿ ಹೊಳೆದರು. ಮತ್ತೊಮ್ಮೆ ಶಾಂಪೇನ್ ಶವರ್ ಅದೃಷ್ಟವೂ ಅವರದ್ದಾಯಿತು. ಇದೇ ತಂಡದ ಮಾರ್ಕ್ ವೆಬ್ಬರ್ ಕೂಡ ತೀರ ನಿರಾಸೆಗೊಳ್ಳಲಿಲ್ಲ. ಅವರು ವೆಟೆಲ್‌ಗಿಂತ +25.5 ಸೆ. ಹಿಂದುಳಿದರೂ, 4ನೇ ಸ್ಥಾನ ತಮ್ಮದಾಗಿಸಿಕೊಂಡರು.

ವೆಟೆಲ್ ಹಾಗೂ ವೆಬ್ಬರ್ ಅವರ ಉತ್ತಮ ಪ್ರದರ್ಶನದ ಫಲವಾಗಿ ರೆಡ್‌ಬುಲ್ ರೆನಾಲ್ಟ್ ತಂಡವು ನ್‌ಸ್ಟ್ರಕ್ಟರ್ ಟ್ರೋಫಿಯ ಪೈಪೋಟಿಯಲ್ಲಿ ಅಗ್ರಸ್ಥಾನದಲ್ಲಿ ಗಟ್ಟಿಯಾಗಿದೆ. ಈ ಋತುವಿನಲ್ಲಿ ಇಲ್ಲಿಯವರೆಗೆ ಒಟ್ಟು 595 ಪಾಯಿಂಟುಗಳನ್ನು ಸಂಗ್ರಹಿಸಿರುವ ಅದು ಚಾಂಪಿಯನ್ ಆಗುವುದೂ ಸ್ಪಷ್ಟ. ಅಬು ಧಾಬಿ ಹಾಗೂ ಬ್ರೆಜಿಲ್ ರೇಸ್‌ಗಳು ಮಾತ್ರ ಬಾಕಿ ಇದ್ದು ಅಲ್ಲಿಯೂ ರೆಡ್‌ಬುಲ್ ಚಾಲಕರು ತಮ್ಮ ತಂಡಕ್ಕೆ ಹೆಚ್ಚಿನ         ಪಾಯಿಂಟ್ಸ್‌ಗಳನ್ನು ಗಿಟ್ಟಿಸಿಕೊಡುವ ಸಾಮರ್ಥ್ಯ ಹೊಂದಿದ್ದಾರೆ. ಫೋರ್ಸ್ ಇಂಡಿಯಾ 51 ಪಾಯಿಂಟುಗಳೊಂದಿಗೆ ಆರನೇ ಸ್ಥಾನದಲ್ಲಿಯೇ ಉಳಿದಿದೆ. ಐದನೇ ಸ್ಥಾನದಲ್ಲಿರುವ ರೆನಾಲ್ಟ್ (72 ಪಾ.) ತಂಡವನ್ನು ಇನ್ನೆರಡು ರೇಸ್‌ಗಳಲ್ಲಿ ಹಿಂದೆ ಹಾಕುವುದು ಕಷ್ಟದ ಮಾತು.

ಭಾರತದಲ್ಲಿ ನಡೆದ ಮೊಟ್ಟ ಮೊದಲ ಗ್ರ್ಯಾನ್ ಪ್ರಿಯಲ್ಲಿ ಗೆದ್ದ ಸಂಭ್ರಮದಲ್ಲಿ ವೆಟೆಲ್ `ಇದೊಂದು ಹೆಮ್ಮೆಯ ಕ್ಷಣ~ ಎಂದು ಹೇಳಿದರೂ ಇತ್ತೀಚೆಗೆ ರೇಸ್ ಅಪಘಾತದಲ್ಲಿ ಮೃತರಾದ ಚಾಲಕರನ್ನು ನೆನೆದರು.

`ಒಂದು ರೀತಿಯ ಆತಂಕದ ವಾತಾವರಣವಂತೂ ಇದೆ. ಪ್ರತಿಯೊಂದು ತಂಡವೂ ಯಾವುದೇ ಅವಘಡ ನಡೆಯದಿರಲಿ ಎಂದು ಪ್ರಾರ್ಥಿಸುತ್ತದೆ. ಮಾರ್ಕೊ ಸಿಮೊನ್‌ಚೆಲಿ ಹಾಗೂ ಡೆನ್ ವೆಲ್ಡನ್ ನಿಧನವೇ ಇದಕ್ಕೆ ಕಾರಣ~ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT