ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಟ್‌ನೆಸ್‌ಗಾಗಿ ಮಾಂಸಾಹಾರಿಯಾದೆ...

Last Updated 1 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಶರ್ಮದಾ ಬಾಲು 11ರ ಹರೆಯದಲ್ಲೇ 18 ವರ್ಷದ ಒಳಗಿನವರ ರಾಷ್ಟ್ರ ಮಟ್ಟದ ಟೂರ್ನಿಯಲ್ಲಿ ಪಾಲ್ಗೊಂಡು ಚಾಂಪಿಯನ್ ಆಗಿ ಸಂಚಲನ ಮೂಡಿಸಿದವರು. ಭಾರತದ ಟೆನಿಸ್‌ನ ಭರವಸೆ ಎನಿಸಿರುವ ಶರ್ಮದಾಗೆ ಈಗ 18 ವರ್ಷ. ಈಗಲೂ ಸೀನಿಯರ್ ವಿಭಾಗದಲ್ಲಿ ಸ್ಪರ್ಧಿಸಿ ಚಾಂಪಿಯನ್ ಆಗುತ್ತಿದ್ದಾರೆ.

`ಈ ನನ್ನ ಯಶಸ್ಸಿಗೆ ಉತ್ತಮ ಫಿಟ್‌ನೆಸ್ ಕಾಯ್ದುಕೊಂಡಿರುವುದು ಪ್ರಮುಖ ಕಾರಣ. ಪುಟ್ಟ ವಯಸ್ಸಿನಿಂದಲೇ ನಾನು ವ್ಯಾಯಾಮ ಮಾಡುತ್ತಿದ್ದೆ. ಅದೀಗ ಫಲ ನೀಡುತ್ತಿದೆ. ಸೀನಿಯರ್ ವಿಭಾಗದಲ್ಲಿ ಗೆಲ್ಲಲು ಸಾಧ್ಯವಾಗುತ್ತಿದೆ' ಎನ್ನುತ್ತಾರೆ ಬೆಂಗಳೂರಿನ ಹುಡುಗಿ ಶರ್ಮದಾ.

ಶರ್ಮದಾ ಮೂಲತಃ ಸಸ್ಯಾಹಾರಿಯಂತೆ. ಆದರೆ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿರುವ ಕಾರಣ ಅವರು ಮಾಂಸಾಹಾರಿಯಾಗಿ ಪರಿವರ್ತನೆಯಾಗಿದ್ದಾರೆ. 'ಹೌದು, ಕ್ರೀಡೆಯಲ್ಲಿ ಉತ್ತಮ ಫಿಟ್‌ನೆಸ್ ಕಾಯ್ದುಕೊಳ್ಳಲು ಮಾಂಸಾಹಾರ ಅಗತ್ಯ ಎಂಬುದು ನನ್ನ ಅಭಿಪ್ರಾಯ. ಇದರಿಂದ ನನ್ನ ಆಟಕ್ಕೆ ಸಹಾಯವಾಗುತ್ತಿದೆ' ಎಂದು ಹೇಳುತ್ತಾರೆ.

ಶರ್ಮದಾ ಸ್ಪೇನ್5 ಅಕಾಡೆಮಿಯೊಂದರಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಹಾಗಾಗಿ ಅವರು ತಿಂಗಳುಗಟ್ಟಲೇ ಅಲ್ಲಿ ನೆಲೆಸಿರಬೇಕಾಗುತ್ತದೆ. `ನಾನು ಸ್ಪೇನ್‌ನ ಎನ್ರಿಕ್ ಗುಲ್ಬರ್ಗ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದೇನೆ.

ಅಲ್ಲಿನ ಆ್ಯಂಡ್ರಿಯಸ್ ಗಿಮೆನೊ ಕ್ಲಬ್ ಪರ ಕೆಲ ಟೂರ್ನಿಗಳಲ್ಲಿ ಆಡುತ್ತೇನೆ. ಅಲ್ಲಿನ ಫಿಟ್‌ನೆಸ್ ಸಲಕರಣೆಗಳು ಉತ್ತಮ ದರ್ಜೆಯಿಂದ ಕೂಡಿವೆ. ಹಾಗಾಗಿ ಅಲ್ಲಿನ ವ್ಯಾಯಾಮ ಪದ್ಧತಿ ತುಂಬಾ ಬದಲಾವಣೆಯಿಂದ ಕೂಡಿದೆ. ಆದರೆ ಭಾರತದಲ್ಲಿದ್ದಾಗ ನನ್ನ ವ್ಯಾಯಾಮ ಶೈಲಿಯಲ್ಲಿ ಬದಲಾವಣೆ ಇರುತ್ತದೆ. ಇಲ್ಲಿ ಬಾಲಚಂದ್ರನ್ ಅವರು ನನ್ನ ಕೋಚ್' ಎಂದು ಶರ್ಮದಾ ವಿವರಿಸುತ್ತಾರೆ.

`ದಿನಕ್ಕೆ ಎರಡು ಬಾರಿ ವ್ಯಾಯಾಮ ಮಾಡುತ್ತೇನೆ. ಬೆಳಿಗ್ಗೆ ಏಳು ಗಂಟೆಗೆ ನನ್ನ ದೈಹಿಕ ಕಸರತ್ತು ಶುರುವಾಗುತ್ತದೆ. ಮೊದಲು 30 ನಿಮಿಷ ಓಡುತ್ತೇನೆ. ಬಳಿಕ ಜಿಮ್‌ನಲ್ಲಿ ವರ್ಕ್‌ಔಟ್ ಮಾಡುತ್ತೇನೆ. ಆ್ಯಬ್ಸ್, ಪುಷ್‌ಅಪ್ಸ್, ಪುಲ್‌ಅಪ್ಸ್‌ಗೆ ಸಂಬಂಧಿಸಿದ ವರ್ಕ್‌ಔಟ್‌ಗೆ ಹೆಚ್ಚು ಒತ್ತು ನೀಡುತ್ತೇನೆ. ಹೀಗೆ ಬೆಳಿಗ್ಗೆ ಒಂದೂವರೆ ಗಂಟೆ ಅಭ್ಯಾಸ ನಡೆಸುತ್ತೇನೆ. ಬಳಿಕ ಎರಡು ಗಂಟೆ ಟೆನಿಸ್ ಆಡುತ್ತೇನೆ. ಸಂಜೆ ಮತ್ತೆ ಜಿಮ್‌ಗೆ ತೆರಳಿ ಕಸರತ್ತು ನಡೆಸುತ್ತೇನೆ' ಎಂದು ಅವರು ತಮ್ಮ ದೈನಂದಿನ ವ್ಯಾಯಾಮದ ಮಾಹಿತಿ ನೀಡುತ್ತಾರೆ. 

ಟೆನಿಸ್ ಕ್ರೀಡೆಯನ್ನು ಕನಸು, ಉಸಿರಾಗಿಸಿಕೊಂಡಿರುವ ಶರ್ಮದಾ ವಿದ್ಯಾಭ್ಯಾಸಕ್ಕಿಂತ ಆಟಕ್ಕೆ ಹೆಚ್ಚು ಮಹತ್ವ ನೀಡಿದ್ದಾರೆ. ಇದಕ್ಕೆ ತಂದೆ ಬಾಲು ಅವರ ಪೂರ್ಣ ಬೆಂಬಲವಿದೆ. ಏಳನೇ ವಯಸ್ಸಿನಲ್ಲೇ ಟೆನಿಸ್ ಆಡಲು ಶುರು ಮಾಡಿದ ಕಾರಣ ಶಾಲೆಗೆ ತೆರಳಲು ಶರ್ಮದಾಗೆ ಸಾಧ್ಯವಾಗಲಿಲ್ಲ. ಹಾಗಾಗಿ ಅವರು ನ್ಯಾಷನಲ್ ಓಪನ್ ಸ್ಕೂಲ್ (ಎನ್‌ಒಎಸ್) ಮೂಲಕ ಎಸ್ಸೆಸ್ಸೆಲ್ಸಿ ಪೂರೈಸಿದರು. ಎನ್.ಒ.ಎಸ್ ವಿಧಾನದ ಶಿಕ್ಷಣ ಪದ್ಧತಿಯಲ್ಲಿ ಶಾಲೆಗೆ ಹೋಗುವಂತಿಲ್ಲ. ಬದಲಾಗಿ ಮನೆಯಲ್ಲಿಯೇ ಓದಿ ಪರೀಕ್ಷೆ ಮಾತ್ರ ಬರೆಯುವುದು.

ಆಹಾರ ಪದ್ಧತಿಯ ಬಗ್ಗೆ ಶರ್ಮದಾ ಪೂರ್ಣ ಗುಟ್ಟು ಬಿಟ್ಟುಕೊಡಲಿಲ್ಲ. ಅದಕ್ಕೆ ಕಾರಣ ರಿಯಾನ್ ಫರ್ನಾಂಡೊ ಅವರ ನಿರ್ದೇಶನ. `ನಾನು ಪೋಷಕಾಂಶ ತಜ್ಞ ರಿಯಾನ್ ಸರ್ ಹೇಳಿದಂತೆ ಕೇಳುತ್ತೇನೆ. ಅವರು ಚಾರ್ಟ್ ರೂಪಿಸಿದ್ದಾರೆ. ಅದರಂತೆ ನಾನು ಆಹಾರ ತೆಗೆದುಕೊಳ್ಳುತ್ತೇನೆ. ಬೆಳಿಗ್ಗೆ ಹಾಲು, ಮೊಟ್ಟೆ ಹಾಗೂ ಹಸಿ ಕಾಳು ಸೇವಿಸುತ್ತೇನೆ. ಮಧ್ಯಾಹ್ನ ಅನ್ನ ಹಾಗೂ ಮಾಂಸ ತಿನ್ನುತ್ತೇನೆ. ರಾತ್ರಿ ಅನ್ನ ಊಟ ಮಾಡುವುದಿಲ್ಲ. ಬದಲಾಗಿ ಚಪಾತಿ ಸೇವಿಸುತ್ತೇನೆ. ಪ್ರೊಟೀನ್, ಕಾರ್ಬೋಹೈಡ್ರೇಟ್ಸ್ ಇರುವ ಆಹಾರಕ್ಕೆ ಹೆಚ್ಚು ಮಹತ್ವ ನೀಡುತ್ತೇನೆ' ಎಂದು ತಿಳಿಸುತ್ತಾರೆ. 

ಶರ್ಮದಾ ಅವರು ಹೋದ ವರ್ಷ ಭಾರತ ಫೆಡ್ ಕಪ್ ಟೆನಿಸ್ ತಂಡದಲ್ಲಿ ಸ್ಥಾನ ಪಡೆದ್ದ್ದಿದರು. 2010ರಲ್ಲಿ ಮಹಿಳೆಯರ ವಿಭಾಗದಲ್ಲಿ ಪಾಲ್ಗೊಂಡು ಹ್ಯಾಟ್ರಿಕ್ ಚಾಂಪಿಯನ್ ಪಟ್ಟ ಪಡೆದಿದ್ದರು. ಕಳೆದ ವರ್ಷ 10 ಸಾವಿರ ಡಾಲರ್ ಮೊತ್ತದ `ಲಖನೌ ಓಪನ್' ಐಟಿಎಫ್ ಟೆನಿಸ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದರು. ಈ ಸಾಧನೆ ಮಾಡಿದ ಭಾರತದ ಕಿರಿಯ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾಗಿದ್ದರು.

`ಯಾವುದೇ ಕ್ರೀಡೆಯಲ್ಲಿ ಫಿಟ್‌ನೆಸ್ ತುಂಬಾ ಅಗತ್ಯ. ಅದರಲ್ಲೂ ಭಾರತದ ಕ್ರೀಡಾಪಟುಗಳು ಫಿಟ್‌ನೆಸ್‌ನಲ್ಲಿ ತುಂಬಾ ಹಿಂದೆ. ಹಾಗಾಗಿ ನಾವು ಹೆಚ್ಚು ಫಿಟ್‌ನೆಸ್‌ಗೆ ಮಹತ್ವ ನೀಡಬೇಕು. ಆಗ ಮಾತ್ರ ವಿದೇಶಿ ಆಟಗಾರ್ತಿಯರ ಸವಾಲು ಮೆಟ್ಟಿ ನಿಲ್ಲಲು ಸಾಧ್ಯ' ಎನ್ನುತ್ತಾರೆ ಶರ್ಮದಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT