ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಕುಶಿಮಾ ದುರಂತ: ಜೀವ ಪಣಕ್ಕಿಟ್ಟು ಹೋರಾಡಿದ್ದ ಮಾಜಿ ಮುಖ್ಯಸ್ಥ ನಿಧನ

Last Updated 9 ಜುಲೈ 2013, 19:59 IST
ಅಕ್ಷರ ಗಾತ್ರ

ಟೋಕಿಯೊ (ಎಫ್‌ಪಿ): ಫುಕುಶಿಮಾ ಪರಮಾಣು ಸ್ಥಾವರ ದುರಂತದ ವೇಳೆ ರಿಯಾಕ್ಟರ್‌ಗಳಿಂದ ಹೊರಹೊಮ್ಮುತ್ತಿದ್ದ ವಿಕಿರಣದ ಫೂತ್ಕಾರ ತಡೆಗಟ್ಟಲು ಜೀವ ಪಣಕ್ಕಿಟ್ಟು ಶ್ರಮಿಸಿದ್ದ ಸ್ಥಾವರದ ಮಾಜಿ ಮುಖ್ಯಸ್ಥ ಮಸಾಒ ಯೋಶಿದಾ (58) ಮಂಗಳವಾರ ಅನ್ನನಾಳ ಕ್ಯಾನ್ಸರ್‌ನಿಂದ ಮೃತಪಟ್ಟರು.

ಸುನಾಮಿಯ ರಕ್ಕಸ ಅಲೆಗಳಿಂದಾಗಿ 2011ರ ಮಾರ್ಚ್ 11ರಂದು ಸ್ಥಾವರದ ತಂಪುಕಾರಕ ವ್ಯವಸ್ಥೆ ಧ್ವಂಸಗೊಂಡು ವಿಕಿರಣ ಹೊರಹೊಮ್ಮಲು ಆರಂಭವಾದ ಸಂದರ್ಭದಲ್ಲಿ ಯೋಶಿದಾ ಸ್ಥಾವರದಲ್ಲೇ ಇದ್ದರು. ಆಗ ವಿಕಿರಣ ಹೊರಹೊಮ್ಮುವಿಕೆ ನಿಯಂತ್ರಿಸುವ ಕಾರ್ಯಾಚರಣೆಯನ್ನು ಯೋಶಿದಾ ಮುನ್ನಡೆಸಿದ್ದರು.

ಸ್ಥಾವರದ ಇತರೆ ಸಿಬ್ಬಂದಿ ಜೀವಭಯದಿಂದ ಓಡಿಹೋಗುವ ಮನಸ್ಥಿತಿಯಲ್ಲಿದ್ದಾಗ ಯೋಶಿದಾ ಜೀವ ಪಣಕ್ಕಿಟ್ಟು ಹೋರಾಡಿದ್ದರು.  ಸ್ಥಾವರದಲ್ಲಿ ವಿಕಿರಣದ ಫೂತ್ಕಾರ ನಿಯಂತ್ರಣ ಮೀರಿದ್ದರೆ ಸರಪಳಿ ಕ್ರಿಯೆಯಿಂದಾಗಿ ಸುತ್ತಮುತ್ತಲಿನ ಇನ್ನಿತರ ಸ್ಥಾವರಗಳೆಲ್ಲಾ ದುರಂತಕ್ಕೆ ತುತ್ತಾಗಿ ಇಡೀ ಟೋಕಿಯೊ ನಗರವನ್ನು ತೆರವು ಮಾಡಬೇಕಾದ ಪರಿಸ್ಥಿತಿ ಎದುರಾಗುವ ಅಪಾಯವಿತ್ತು.

ಯೋಶಿದಾ ಅವರು ವಿಕಿರಣ ನಿಯಂತ್ರಣ ಕಾರ್ಯಾಚರಣೆಯಲ್ಲಿ  ಭಾಗಿಯಾಗಿದ್ದಕ್ಕೂ ಅವರ ಕ್ಯಾನ್ಸರ್‌ಗೂ ಸಂಬಂಧವಿಲ್ಲ. ಒಂದೊಮ್ಮೆ ವಿಕಿರಣವೇ ಕ್ಯಾನ್ಸರ್‌ಗೆ ಕಾರಣವಾಗಿದ್ದರೆ, ಅದು ಈ ಮಟ್ಟಕ್ಕೆ ಬೆಳೆಯಲು 5-10 ವರ್ಷ ಹಿಡಿಯುತ್ತಿತ್ತು ಎಂದು ಸ್ಥಾವರದ ನಿರ್ವಾಹಕ ಕಂಪೆನಿಯಾದ `ಟೆಪ್ಕೊ' ಹೇಳಿದೆ.

ಅಂತರ್ಜಲದಲ್ಲಿ ವಿಕಿರಣ ದಿಢೀರ್ ಹೆಚ್ಚಳ
ಫುಕುಶಿಮಾ ಪರಮಾಣು ಸ್ಥಾವರದ ಆಸುಪಾಸಿನ ಅಂತರ್ಜಲದಲ್ಲಿ ಕಳೆದ ಮೂರು ದಿನಗಳಿಂದ ವಿಷಕಾರಕ ವಿಕಿರಣಕಾರಕ ವಸ್ತುಗಳ ಪ್ರಮಾಣ ದಿಢೀರ್ ಏರಿಕೆಯಾಗಿದೆ.

ಈ ಸೋರಿಕೆ ಎಲ್ಲಿಂದ ಆಗುತ್ತಿದೆ ಎಂಬುದನ್ನು ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ ಎಂದು ಟೆಪ್ಕೊ ಕಂಪೆನಿ ಸ್ಪಷ್ಟಪಡಿಸಿದೆ. ಇಲ್ಲಿನ ನೀರಿನ ಮಾದರಿಗಳನ್ನು ತೆಗೆದುಕೊಂಡು ಸೋಮವಾರ ಪರೀಕ್ಷಿಸಿದಾಗ ಕ್ಯಾನ್ಸರ್‌ಕಾರಕ ಸೀಸಿಯಂ-134 ಪ್ರಮಾಣವು ಶುಕ್ರವಾರದ ಪ್ರಮಾಣಕ್ಕೆ ಹೋಲಿಸಿದರೆ 90 ಪಟ್ಟು ಹೆಚ್ಚಿಗೆ ಇತ್ತು.

ಹಾಗೆಯೇ ಸೀಸಿಯಂ-137 ಪ್ರಮಾಣ 86 ಪಟ್ಟು ಹೆಚ್ಚಿಗೆ ಇತ್ತು. ಈ ವಿಕಿರಣಯುಕ್ತ ನೀರು ನೆಲದೊಳಗಡೆಯೇ ಹರಿದು ಸಮೀಪದ ಸಮುದ್ರಕ್ಕೆ ಸೇರಿ ಅಲ್ಲಿನ ಜಲಚರಗಳಿಗೆ ಮಾರಕವಾಗುವ ಜತೆಗೆ, ಅವನ್ನು ಸೇವಿಸುವ ಮಾನವ ಜೀರ್ಣಾಂಗ ವ್ಯವಸ್ಥೆಯನ್ನೂ ಪ್ರವೇಶಿಸುವ ಅಪಾಯವಿದೆ.

ಸರ್ಕಾರದ ನಿಯಮಾವಳಿ ಪ್ರಕಾರ, ಪ್ರತಿ ಲೀಟರ್ ನೀರಿನಲ್ಲಿ ಸೀಸಿಯಂ- 134ರ ಪ್ರಮಾಣ ಪ್ರತಿ ಲೀಟರ್‌ಗೆ 60 ಬೆಕ್ವೆರಲ್ ಹಾಗೂ ಸೀಸಿಯಂ -137 ಪ್ರಮಾಣ ಪ್ರತಿ ಲೀಟರ್‌ಗೆ 90 ಬೆಕ್ವೆರಲ್‌ವರೆಗೆ ಇರಬಹುದು. ಆದರೆ ಈಗ ಇದು ಕ್ರಮವಾಗಿ ಪ್ರತಿ ಲೀಟರ್‌ಗೆ 9000 ಬೆಕ್ವೆರಲ್ ಹಾಗೂ 18000 ಬೆಕ್ವೆರಲ್ ಇದೆ.

ಈಗ ಕೆಲವು ದಿನಗಳ ಹಿಂದೆ ಇಲ್ಲಿ ಜನರು ಕೈಗೆ, ಕಟ್ಟುವ ಕತ್ತಲೆಯಲ್ಲಿ ಮಿನುಗುವ ಗಡಿಯಾರಗಳಲ್ಲಿ ವಿಕಿರಣಕಾರಕವಾದ ಟ್ರೀಷಿಯಮ್ ಪ್ರಮಾಣ ನಿಗದಿತ ಮಟ್ಟಕ್ಕಿಂತ 10 ಪಟ್ಟು ಹೆಚ್ಚು ಪ್ರಮಾಣದಲ್ಲಿ ಕಂಡುಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT