ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಪಾತ್ ಅತಿಕ್ರಮಣ: ಪಾದಚಾರಿಗಳಿಗೆ ಸಂಕಟ

Last Updated 5 ಆಗಸ್ಟ್ 2013, 6:59 IST
ಅಕ್ಷರ ಗಾತ್ರ

ಮಂಡ್ಯ:  ನಗರದ ವಿವಿಧೆಡೆ ಫುಟ್‌ಪಾತ್ ಅತಿಕ್ರಮಣ ಜೋರಾಗಿಯೇ ಇದೆ. ಪರಿಣಾಮ ಪಾದಚಾರಿಗಳು ತಿರುಗಾಡಲು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ನಗರದ ಕೆಲವೇ ಕೆಲವು ಪ್ರಮುಖ ರಸ್ತೆಗಳಲ್ಲಿ ಫುಟ್‌ಪಾತ್ ನಿರ್ಮಾಣ ಮಾಡಲಾಗಿದೆ. ಇಲ್ಲಿ ಸದಾ ಜನಜಂಗುಳಿ ಇರುತ್ತದೆ. ಫುಟ್‌ಪಾತ್‌ನಲ್ಲಿ ಜಾಗ ಸಿಗದ್ದರಿಂದಾಗಿ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಚರಿಸುತ್ತಿರುತ್ತಾರೆ.

ನಗರದ ವಿ.ವಿ. ರಸ್ತೆ, ನೂರಡಿ ರಸ್ತೆ, ಬೆಂಗಳೂರು-ಮೈಸೂರು ರಸ್ತೆ, ಕೆ.ಆರ್. ರಸ್ತೆ, ಜಿಲ್ಲಾಧಿಕಾರಿ ಕಚೇರಿಗೆ ಹೋಗುವ ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಫುಟ್‌ಪಾತ್ ನಿರ್ಮಾಣ ಮಾಡಲಾಗಿದೆ.

ಕೆಲವು ರಸ್ತೆಗಳ ಫುಟ್‌ಪಾತ್ ಮೇಲೆ ವಾಹನಗಳು ನಿಂತಿದ್ದರೆ, ಇನ್ನು ಕೆಲವು ರಸ್ತೆಗಳಲ್ಲಿ ಅಂಗಡಿಗಳವರು ಸಾಮಾನುಗಳನ್ನು ಇಟ್ಟಿದ್ದಾರೆ. ಇನ್ನು ಕೆಲವು ಕಡೆಗಳಲ್ಲಿ ತರಕಾರಿ, ತಿಂಡಿ ಮಾರಾಟ ಮಾಡುವವರು ಸಂಜೆ ವೇಳೆ ವ್ಯಾಪಾರ ಮಾಡುತ್ತಾರೆ.

ನಗರದ ಹೃದಯ ಭಾಗದಲ್ಲಿರುವ ವಿ.ವಿ. ರಸ್ತೆಯಲ್ಲಿರುವ ಫುಟ್‌ಪಾತ್‌ಗಳ ಮೇಲೆ ಅಂಗಡಿಗಳವರು, ವಿವಿಧ ಸಾಮಗ್ರಿಗಳನ್ನು ಇಟ್ಟಿರುತ್ತಾರೆ. ಪರಿಣಾಮ ಪಾದಚಾರಿಗಳು ಅಲ್ಲಲ್ಲಿ, ಕೆಳಗೆ ಇಳಿದು ಮತ್ತೆ ಫುಟ್‌ಪಾತ್ ಹತ್ತಬೇಕಾಗುತ್ತದೆ.

ಬೆಂಗಳೂರು-ಮೈಸೂರು ರಸ್ತೆಯಲ್ಲಿ ಬರುವ ರೈಲ್ವೆ ನಿಲ್ದಾಣ ಎದುರಿನ ಫುಟ್‌ಪಾತ್ ಮೇಲೆ ಅಡ್ಡಾ ದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸಲಾಗಿರುತ್ತದೆ. ಕೆಲವೊಮ್ಮೆ ದ್ವಿಚಕ್ರ ವಾಹನಗಳು ಫುಟ್‌ಪಾತ್ ಮೇಲೆಯೇ ಸಂಚರಿಸುತ್ತವೆ.

ನೂರಡಿ ರಸ್ಯೆಯಲ್ಲಿಯೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಫುಟ್‌ಪಾತ್ ಮೇಲೆ ಅಲ್ಲಲ್ಲಿ ಅಂಗಡಿಗಳವರು ಸಾಮಗ್ರಿಗಳನ್ನು ಇಟ್ಟಿರುವುದು ಕಾಣಬಹುದಾಗಿದೆ. ಪಾದಚಾರಿಗಳ ಗೋಳನ್ನು ಕೇಳುವವರು ಇಲ್ಲವಾಗಿದೆ.

ಫುಟ್‌ಪಾತ್ ಅತಿಕ್ರಮಣವನ್ನು ತೆರವುಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ಸಂಚಾರಿ ಪೊಲೀಸರು ಅನುವು ಮಾಡಿಕೊಡಬೇಕು. ಆದರೆ, ಇತ್ತ ಪೊಲೀಸ್ ಇಲಾಖೆ ಲಕ್ಷ್ಯವನ್ನೇ ಹರಿಸಿಲ್ಲ. ಫುಟ್‌ಪಾತ್ ಅತಿಕ್ರಮಣವನ್ನು ನೋಡಿಯೋ ನೋಡದಂತೆ ತಿರುಗಾಡುತ್ತಾರೆ ಪೋಲಿಸರು.

`ಫುಟ್‌ಪಾತ್ ಅತಿಕ್ರಮಣದಿಂದಾಗಿ ರಸ್ತೆ ಮೇಲೆ ತಿರುಗಾಡುವಂತಾಗಿದೆ. ವಾಹನಗಳನ್ನು ನಿಲ್ಲಿಸಿರುವುದರಿಂದ ರಸ್ತೆಯ ಮಧ್ಯ ಭಾಗಕ್ಕೆ ಬರುತ್ತೇವೆ. ಆಗಾಗ ವಾಹನ ಅಪಘಾತಗಳು ನಡೆಯುತ್ತಲೇ ಇರುತ್ತವೆ. ಪಾದಚಾರಿಗಳಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಪೊಲೀಸರು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸುತ್ತಾರೆ ಮಂಡ್ಯ ನಿವಾಸಿ ಪ್ರಶಾಂತ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT