ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಪಾತ್ ಪ್ರಾಬ್ಲಂ: ಬಿದ್ದೀರಾ ಜೋಕೆ?

Last Updated 4 ಜೂನ್ 2012, 5:25 IST
ಅಕ್ಷರ ಗಾತ್ರ

ಹಾಸನ: ಯಾವ ನಗರದಲ್ಲೂ ಪಾದಚಾರಿಗಳು ಸುರಕ್ಷಿತರಲ್ಲ. ನಮ್ಮ ಅನೇಕ ನಗರಗಳಲ್ಲಿ ಫುಟ್‌ಪಾತ್‌ಗಳೇ ಇಲ್ಲ. ಇದಕ್ಕೆ ಆಡಳಿತವನ್ನು ದೂಷಿಸಿ ಪ್ರಯೋಜನವಿಲ್ಲ. ಯಾಕೆಂದರೆ ಫುಟ್‌ಪಾತ್‌ಗಳು ಇದ್ದರೂ, ಜನರು ರಸ್ತೆ ಮೇಲೆಯೇ ನಡೆದಾಡುತ್ತ ಅಪಾಯವನ್ನು ತಾವಾಗಿಯೇ ಆಹ್ವಾನಿಸುತ್ತಿರುತ್ತಾರೆ. ಸಹಜವಾಗಿ ಫುಟ್‌ಪಾತ್‌ಗಳನ್ನು ಪಕ್ಕದ ಅಂಗಡಿಗಳವರು ಅಥವಾ ಫುಟ್‌ಪಾತ್ ವ್ಯಾಪಾರಿಗಳು ಆಕ್ರಮಿಸಿಕೊಂಡಿರುತ್ತಾರೆ.

ಈ ವ್ಯವಸ್ಥೆಗೆ ನಾವು ಹೊಂದಿಕೊಂಡಾಗಿದೆ. ಹಾಸನದ ಎಂ.ಜಿ ರಸ್ತೆಯಲ್ಲಿ ಒಮ್ಮೆ ಸಂಚರಿಸಿ ನೋಡಿ, ಜನರು ಮಕ್ಕಳು ಮರಿಗಳನ್ನು ಹಿಡಿದುಕೊಂಡು ರಸ್ತೆ ಮಧ್ಯೆ (ವಿಭಜಕ ಪಕ್ಕದಲ್ಲಿ) ಲೋಕವನ್ನೇ ಮರೆತು ನಡೆಯುತ್ತಿರುತ್ತಾರೆ. ರಸ್ತೆಯಲ್ಲೇ ವಾಹನ ನಿಲ್ಲಿಸಿ ಕುಶಲೋಪರಿ ಮಾತನಾಡುತ್ತಿರುತ್ತಾರೆ. ಇತರರಿಗೆ ಆಗುವ ತೊಂದರೆ ಬಗ್ಗೆಯಾಗಲಿ, ವಾಹನ ಚಾಲ ಕರು ಅನುಭವಿಸಬೇಕಾಗುವ ಸಮಸ್ಯೆಯಾಗಲಿ ಅವರಿಗೆ ಮುಖ್ಯವಲ್ಲ.

ಬಿ.ಎಂ. ರಸ್ತೆಯಲ್ಲಿ (ಮಧ್ಯದಲ್ಲಿ) ಜಿಲ್ಲಾಧಿಕಾರಿ ಕಚೇರಿ ಮುಂದೆಯೇ ಆಟೋ ನಿಲ್ಲಿಸಿ ಮನೆ -ಮಕ್ಕಳ ಕುಶಲ ಸಮಾಚಾರ ಮಾತನಾಡುತ್ತಿದ್ದ ಘಟನೆ ಶನಿವಾರ ಕಾಣಿಸಿಕೊಂಡಿತ್ತು. ಆ ಬಗ್ಗೆ ಇತರ ವಾಹನ ಚಾಲಕರು ಕಿಡಿಕಿಡಿಯಾದದ್ದೂ ನಡೆದಿದೆ...

 ಪ್ರಶ್ನೆ ಇದಲ್ಲ, ಒಂದುವೇಳೆ ಜವಾಬ್ದಾರಿಯುತ ನಾಗರಿಕನೊಬ್ಬ ಇತರರಿಗೆ ತೊಂದರೆಯಾಗದಂತೆ ಫುಟ್‌ಪಾತ್ ಮೇಲೆ ನಡೆದಾಡಲು ಸಿದ್ಧನಿದ್ದರೆ ನಗರದ ಆತನ ಪಾಲಿಗೆ ಎಷ್ಟು ಸುರಕ್ಷಿತ ? ಹೆಚ್ಚು ಜನರು ಓಡಾಡುವ ಮತ್ತು ಪ್ರತಿಷ್ಠಿತ ಎನ್ನಿಸಿಕೊಂಡ ಕೆಲವು ಬಡಾವಣೆಗಳ ಸ್ಥಿತಿ ಹೇಗಿದೆ ಎಂಬುದನ್ನು ಇಲ್ಲಿರುವ ಚಿತ್ರಗಳು ತೋರಿಸುತ್ತಿವೆ. ನಿನ್ನೆ ಮೊನ್ನೆಯಿಂದಲ್ಲ ಕೆಲವೆಡೆ ವರ್ಷಗಳಿಂದ ಇನ್ನೂ ಕೆಲವವೆಡೆ ಹಲವು ತಿಂಗಳಿಂದ ಈ ಸ್ಥಿತಿ ಇದೆ.

ಪಾದಚಾರಿಗೆ ವಾಹನ ಡಿಕ್ಕಿ ಹೊಡೆದು ಗಾಯಗೊಂಡರೆ ಅಥವಾ ಸತ್ತರೆ ಸುದ್ದಿಯಾಗುತ್ತದೆ, ಚಾಲಕನ ವಿರುದ್ಧ ದೂರು ದಾಖಲಾಗುತ್ತದೆ. ಆದರೆ ಇಂಥ ರಸ್ತೆಗಳಲ್ಲಿ ಬಿದ್ದು ಗಾಯಗೊಂಡರೆ ತಾನೇ ಎದ್ದು ಆಸ್ಪತ್ರೆಗೆ ಹೋಗಬೇಕು, ದೂರು ಯಾರ ವಿರುದ್ಧ ದಾಖಲಿಸಬೇಕು ?

ತೆರೆದೇ ಇರುವ ಮ್ಯಾನ್‌ಹೋಲ್‌ಗಳು, ಫುಟ್‌ಪಾತ್ ಮೇಲೆ ಹಲವು ತಿಂಗಳಿಂದ ತೆರೆದುಕೊಂಡೇ ಇರುವ ಸ್ಲ್ಯಾಬ್‌ಗಳು, ರಸ್ತೆಯ ತಿರುವಿನಲ್ಲೇ ಹೊಂಚುಹಾಕಿ ಕುಳಿತಿರುವ ಗುಂಡಿಗಳು, ರಸ್ತೆಗಿಂದ ಕಿರಿದಾದ ಸ್ಲ್ಯಾಬ್‌ಗಳು... ಹೀಗೆ ನಗರದಲ್ಲಿ ಅಪಾಯಕ್ಕೆ ನೂರು ದಾರಿಗಳು ತೆರೆದುಕೊಂಡಿವೆ. ಈವರೆಗೆ ಬಿದ್ದವರೆಷ್ಟು ? ಎದ್ದು ಸರಿಯಾಗಿ ಮನೆಗೆ ಹೋದವರೆಷ್ಟು  ಲೆಕ್ಕ ಇಟ್ಟವರಿಲ್ಲ. ಆದರೆ ಅಪಾಯಗಳು ಎಲ್ಲೆಲ್ಲಿವೆ ಹೊಂಚು ಹಾಕಿ ಕುಳಿತಿವೆ ಎಂಬುದರ ಬಗ್ಗೆ ಇಲ್ಲಿ ಸಣ್ಣ ನೋಟವಿದೆ.

ನಗರದ ಜನನಿಬಿಡ ರಸ್ತೆಗಳಲ್ಲಿ ಒಂದಾದ ಸಂಪಿಗೆ ರಸ್ತೆಯಲ್ಲಿ ಮಂಗಳಾ ಆಸ್ಪತ್ರೆ ಸಮೀಪ ರಸ್ತೆ ಮತ್ತು  ಫುಟ್‌ಪಾತ್ ಮಧ್ಯದಲ್ಲಿ ಮ್ಯಾನ್‌ಹೋಲ್ ಅರ್ಧಂಬರ್ಧ ತೆರೆದುಕೊಂಡು ಹಲವು ದಿನಗಳಾಗಿವೆ. ಆಸ್ಪತ್ರೆ ಪರಿಸರ ಎಂದ ಮೇಲೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಾರೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

 ಆರ್.ಸಿ ರಸ್ತೆ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದಿನಿಂದ ಪಿ.ಬಿ. ರಸ್ತೆ ಕಡೆಗೆ ಫುಟ್‌ಪಾತ್ ಮೇಲೆಯೇ ನಡೆದುಕೊಂಡು ಹೋಗುತ್ತಿದ್ದರೆ, ವೈದ್ಯಕೀಯ ಕಾಲೇಜಿಗೆ ತಿರುವು ಪಡೆಯುವಲ್ಲಿ ಚರಂಡಿಯ ಒಂದೆರಡು ಸ್ಲ್ಯಾಬ್‌ಗಳನ್ನು ತೆಗೆದು ಕನಿಷ್ಠವೆಂದರೂ ಎರಡು ವರ್ಷಗಳಾಗಿವೆ.

ಈ ಸ್ಥಿತಿ ತಿರುವಿನಲ್ಲಿರುವುದರಿಂದ ಹತ್ತಿರ ಬರುವವರೆಗೂ ಕಾಣಿಸುವುದಿಲ್ಲ. ರಸ್ತೆಬದಿ ಬಾಳೆಹಣ್ಣು ಮಾರುವವರು, ಸಾರ್ವಜನಿಕರು ಇಲ್ಲಯೇ ಕಸವನ್ನು ಎಸೆಯುತ್ತಿದ್ದಾರೆ. ಇನ್ನೂ ಸ್ವಲ್ಪ ಮುಂದೆ ಹೋದರೆ ಅಂಬೇಡ್ಕರ್ ಪ್ರತಿಮೆ ಮುಂದೆ ಸರ್ಕಲ್‌ನಲ್ಲೂ ಇಂಥದ್ದೇ ಸ್ಥಿತಿ ಇದೆ.

ಶಂಕರ ಮಠ ರಸ್ತೆ, (ಇಲ್ಲಿಯ ಅವ್ಯವಸ್ಥೆ ಬಗ್ಗೆ ಹಲವು ಬಾರಿ ಬರೆದಾಗಿದೆ) ಶಂಕರ ಮಠದ ಸಮೀಪದಲ್ಲೇ ತೆರೆದಿದ್ದ ಮ್ಯಾನ್‌ಹೋಲ್ ಮೇಲೆ ಯಾರೋ ಕಲ್ಲುಗಳನ್ನಿಟ್ಟು ತೊಂದರೆಯಾಗದಂತೆ ನೋಡಿಕೊಂಡಿದ್ದಾರೆ.

 ಅತ್ಯಂತ ಜನನಿಬಿಡ ರಸ್ತೆಗಳ್ಲ್ಲಲೊಂದಾದ ಬಿ.ಎಂ. ರಸ್ತೆಯಲ್ಲಿ, ತಾಲ್ಲೂಕು ಕಚೇರಿಯಿಂದ ಮುಂದೆ ಸ್ಲ್ಯಾಬ್ ತೆರೆದುಕೊಂಡಿದ್ದಲ್ಲದೆ ಫುಟ್‌ಪಾತ್ ಮೇಲೆ ಮರಳನ್ನೂ ರಾಶಿ ಹಾಕಿದ್ದಾರೆ... ಒಂದೆರಡಲ್ಲ ನಗರದ ಪ್ರತಿ ರಸ್ತೆಯ ತಿರುವಿನಲ್ಲೂ ಇಂಥ ಒಂದೊಂದು ಸ್ಪಾಟ್ ಗೋಚರಿಸುತ್ತದೆ. 

 ಕಳೆದ ವರ್ಷ ಮಳೆಗಾಲದಲ್ಲಿ ಇಂಥ ಒಂದು ಗುಂಡಿಯಲ್ಲಿ ಬಾಲಕನೊಬ್ಬ ಬಿದ್ದು ಪ್ರಾಣ ಬಿಟ್ಟಿದ್ದನ್ನು ನಗರದ ಜನರು ಇನ್ನೂ ಮರೆತಿಲ್ಲ. ಈ ವರ್ಷವೂ ಮಳೆಗಾಲ ಸಮೀಪಿಸುತ್ತಿದೆ. ವರ್ಷಗ ಳಿಂದ ತೆರೆದಿಟ್ಟಿರುವ ಇಂಥ ಗುಂಡಿಗಳು, ಸ್ಲ್ಯಾಬ್‌ಗಳನ್ನು ಮುಚ್ಚದಿದ್ದರೆ ಇನ್ನಷ್ಟು ಅಪಾಯ ಸಂಭವಿ ಸುವ ಸಾಧ್ಯತೆ ಇದೆ. ನಗರಸಭೆಯವರು ಎಚ್ಚೆತ್ತು ಕೊಂಡು ಸೂಕ್ತ ಕ್ರಮ ಕೈಗೊಂಡರೆ ನಗರದಲ್ಲಿ ಪಾದಚಾರಿಗಳಿಗೆ ಸ್ವಲ್ಪ ನೆಮ್ಮದಿ ಸಿಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT