ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆ. 18ಕ್ಕೆ ಜಾಗೋ ಭಾರತ ಕಾರ್ಯಕ್ರಮ

Last Updated 16 ಫೆಬ್ರುವರಿ 2011, 11:20 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ದೇಶಭಕ್ತಿ ಜಾಗೃತಗೊಳಿಸುವ, ದೇಶಾಭಿಮಾನ ಮೂಡಿಸುವ ಉದ್ದೇಶದಿಂದ ಜಾಗೋ ಭಾರತ ಸಂಚಾಲನಾ ಸಮಿತಿಯು ಫೆ. 18ರಂದು ‘ಜಾಗೋ ಭಾರತ’ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದೆ.ಪಟ್ಟಣದ ವಾಸವಿ ವಿದ್ಯಾಸಂಸ್ಥೆ ಆವರಣದಲ್ಲಿ ಸಂಜೆ 5ರಿಂದ 9 ಗಂಟೆ ವರೆಗೆ ನಡೆಯಲಿದ್ದು, ದೇಶಭಕ್ತಿ ಜಾಗೃತಗೊಳಿಸುವ ಗೀತಗಾಯನ, ನೃತ್ಯ, ಸಂಗೀತ ಮುಂತಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಾಗೋ ಭಾರತ ಸಂಚಾಲನಾ ಸಮಿತಿ ಅಧ್ಯಕ್ಷ ಬಿ.ಸಿ.ನಂದೀಶ್ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ನಮ್ಮ ನೆಲ, ಜಲ, ಭಾಷೆ, ಸಂಸ್ಕೃತಿಯ ಹಿರಿಮೆಯನ್ನು ಸಾರುವುದು, ದೇಶಭಕ್ತಿಯನ್ನು ಜಾಗೃತಗೊಳಿಸುವುದು, ದೇಶಕ್ಕಾಗಿ ಹೋರಾಡಿದ ದೇಶಭಕ್ತರನ್ನು ನೆನೆಯುವುದು, ವಿದ್ಯಾರ್ಥಿ, ಯುವಜನರಲ್ಲಿ ಸಾಮಾಜಿಕ ಜವಾಬ್ದಾರಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶ. ಮುಂದಿನ ದಿನಗಳಲ್ಲಿ ಸಾಂಸ್ಕೃತಿಕ ಭಾರತಿ ತಾಲ್ಲೂಕು ಘಟಕದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಹೇಳಿದರು.

ಜಾಗೋ ಭಾರತ್ ಸಂಚಾಲನಾ ಸಮಿತಿ ಸಂಚಾಲಕ ಶ್ರೀಕಾಂತ್ ಮಾತನಾಡಿ, ‘ಜಾಗೋ ಭಾರತ’ ಕಾರ್ಯಕ್ರಮದಲ್ಲಿ ಪಟ್ಟಣದ 45 ಸಂಘಟನೆಗಳು, ಸಂಘ ಸಂಸ್ಥೆಗಳು ಸಕ್ರಿಯವಾಗಿ ಪಾಲ್ಗೊಂಡಿವೆ. ಸುಮಾರು 2,500 ಮಂದಿ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗುವುದು. ಮಹಿಳೆಯರು, ಮಕ್ಕಳಿಗೆ ಸ್ಥಳ ಮೀಸಲಿಡಲಾಗುವುದು. ವಿಜಯಪುರ ಬಸವ ಕಲ್ಯಾಣ ಮಠದ ಮಹದೇವ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ವಿ.ನಾಗರಾಜರಾವ್, ವಕೀಲ ರವೀಂದ್ರನಾಥ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಶಾಶ್ವತ ನೀರಾವರಿಗೆ ಆಗ್ರಹ

ಚಿಕ್ಕಬಳ್ಳಾಪುರ: ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಮುಂದಾಗಬೇಕು ಮತ್ತು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಅನುದಾನ ಮೀಸಲಿಡಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.ನಗರದ ಕೆ.ವಿ.ಕ್ಯಾಂಪಸ್‌ನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಪರಿಷತ್ತಿನ ಸದಸ್ಯರು, ‘ನೀರಾವರಿ ಯೋಜನೆ ಜಾರಿಗೆ ತರಲು ಸರ್ಕಾರ ನಿರಾಸಕ್ತಿ ತೋರಬಾರದು. ಈ ಸಂಬಂಧ ಶೀಘ್ರ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ನೀರಾವರಿ ತಜ್ಞ ಡಾ.ಜಿ.ಎಸ್.ಪರಮಶಿವಯ್ಯ ವರದಿ ಆಧರಿಸಿ ಇಸ್ರೋ ಸಂಸ್ಥೆ ಈಗಾಗಲೇ ಪಶ್ಚಿಮ ಘಟ್ಟದಲ್ಲಿ ಸಮೀಕ್ಷೆ ನಡೆಸಿದೆ. ಸರ್ಕಾರ ಸಮೀಕ್ಷೆ ಖರ್ಚುವೆಚ್ಚ ಪಾವತಿಸುವ ಮೂಲಕ ಪರಮಶಿವಯ್ಯ ವರದಿಯನ್ನು ತರಿಸಿಕೊಳ್ಳಬೇಕು. ವರದಿಯ ಅನುಷ್ಠಾನಕ್ಕಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಎಬಿವಿಪಿ ಪದಾಧಿಕಾರಿಗಳಾದ ಎನ್.ಮಂಜುನಾಥ ರೆಡ್ಡಿ, ಕೆ.ಹರೀಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
‘ಹಿರಿಯರ ಪಾತ್ರ ಮಹತ್ತರ’
ಚಿಂತಾಮಣಿ: ಅನಕ್ಷರತೆ ನಿರ್ಮೂಲನೆಯಲ್ಲಿ ಹಿರಿಯ ನಾಗರಿಕರು ಮಹತ್ತರ ಪಾತ್ರ ವಹಿಸಬಹುದು ಎಂದು ಇಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆ ವ್ಯವಸ್ಥಾಪಕ ಕಲ್ಲೇಶ್ ಮೂರ್ತಿ ಅಭಿಪ್ರಾಯಪಟ್ಟರು.
ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲ್ಲೂಕು ನಿವೃತ್ತ ಸರ್ಕಾರಿ ನೌಕರರ ಸಂಘ ಈಚೆಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ಅನಕ್ಷರತೆ ದೇಶದ ಪ್ರಗತಿಗೆ ಮಾರಕವಾಗಿದೆ. ಸರ್ಕಾರ ಹಾಗೂ ಬ್ಯಾಂಕಿಂಗ್ ಕ್ಷೇತ್ರದಿಂದ ಸಿಗುವ ವಿವಿಧ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಲು ಸಹ ಅನಕ್ಷರತೆ ಅಡ್ಡಿಯಾಗಿದೆ. ಹಿರಿಯ ನಾಗರಿಕರು ವಿಶ್ರಾಂತ ಜೀವನದಲ್ಲಿರುವುದರಿಂದ ಅನಕ್ಷರಸ್ಥರಿಗೆ ಅಕ್ಷರಜ್ಞಾನ ನೀಡುವ ಮೂಲಕ ತಮ್ಮ ಸಮಯ ಸದುಪಯೋಗ ಪಡಿಸಿಕೊಳ್ಳಬಹುದು ಎಂದರು.
ನಿವೃತ್ತ ಜಿಲ್ಲಾ ವೈದ್ಯಾಧಿಕಾರಿ ಡಾ.ವರದರಾಜನ್ ಮಾತನಾಡಿ, 2014ರ ಒಳಗೆ ಹಿರಿಯ ನಾಗರಿಕರಿಗೆ ಸೌಲಭ್ಯ ಕಲ್ಪಿಸಲು ಸರ್ಕಾರ ಹಲವು ಯೋಜನೆ ರೂಪಿಸುತ್ತಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕಾಗತಿ ವೆಂಕಟರತ್ನಂ ಮಾತನಾಡಿ, ಸಂಘ ಹಮ್ಮಿಕೊಂಡಿರುವ ಹಲವು ಕಾರ್ಯಕ್ರಮಗಳ ವಿವರ ನೀಡಿ, ಮುಂದಿನ ದಿನಗಳಲ್ಲಿ ಸಂಘವು ಹಿರಿಯ ನಾಗರಿಕರ ವೇದಿಕೆ ಸಹಯೋಗದೊಂದಿಗೆ ಮತ್ತಷ್ಟು ಯೋಜನೆ ರೂಪಿಸುವುದಾಗಿ ಆಶ್ವಾಸನೆ ನೀಡಿದರು.
ಬೊಗ್ಗರಂ ರಾಮಾಂಜನೇಯ ಗುಪ್ತ ಅವರನ್ನು ಹಿರಿಯ ನಾಗರಿಕ ವೇದಿಕೆ ಉಪಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಹಾಸ್ಯ ಕಲಾವಿದ ಮೈಲಾಂಡ್ಲಹಳ್ಳಿ ಅಶ್ವತ್ಥನಾರಾಯಣ ಹಾಸ್ಯ ಚಟಾಕಿ ಹಾರಿಸಿ ರಂಜಿಸಿದರು. ಕೆ.ಎಸ್.ಅಪ್ಪಾಜಿರೆಡ್ಡಿ, ವೀರಪ್ಪರೆಡ್ಡಿ, ವೆಂಕಟರಮಣ ಮತ್ತಿತರ ಹಿರಿಯರು ಭಾಗವಹಿಸಿದ್ದರು.
19ರಂದು ಧರಣಿ
ಚಿಂತಾಮಣಿ: ರಾಜ್ಯದ ಪ್ರೌಢಶಾಲಾ ಸಹ ಶಿಕ್ಷಕರ ನ್ಯಾಯಯುತ ಬೇಡಿಕೆಗಳನ್ನು  ಈಡೇರಿಸುವಂತೆ ಒತ್ತಾಯಿಸಿ ಇದೇ 19ರಂದು ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಿ ಮನವಿ ಸಲ್ಲಿಸಲಾಗುವುದು ಎಂದು ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ವೆಂಕಟರಮಣರೆಡ್ಡಿ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮತನಾಡಿ, ಪ್ರೌಢಶಾಲಾ ಶಿಕ್ಷಕರ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಶಿಕ್ಷಣ ಸಚಿವರು ಹಾಗೂ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು        ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT