ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆ. 4, 5ರಂದು ಕೃಷಿ ಮೇಳ

Last Updated 6 ಜನವರಿ 2012, 8:30 IST
ಅಕ್ಷರ ಗಾತ್ರ

ಚಿಕ್ಕೋಡಿ: ಕೃಷಿಕರ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಕೃಷಿ, ಆರೋಗ್ಯ ಮತ್ತು  ಶಿಕ್ಷಣ ಕ್ಷೇತ್ರಗಳ ಕುರಿತು ಅಗತ್ಯ ಮಾಹಿತಿಗಳನ್ನು ಒದಗಿಸುವ ನಿಟ್ಟಿನಲ್ಲಿ ಇಲ್ಲಿನ ದೂಧಗಂಗಾ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯು  ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಹಕಾರದೊಂದಿಗೆ ಈ ಭಾಗದಲ್ಲಿಯೇ ಪ್ರಥಮವಾಗಿ ಉತ್ತರ ಕರ್ನಾಟಕ ಮತ್ತು ದಕ್ಷಿಣ ಮಹಾರಾಷ್ಟ್ರ ಮಟ್ಟದ ಭವ್ಯ ಕೃಷಿ ಮೇಳವನ್ನು ಫೆ.4 ಮತ್ತು 5 ರಂದು ಹಮ್ಮಿಕೊಂಡಿದೆ ಎಂದು ವಿಧಾನ ಪರಿಷತ್ ಸದಸ್ಯರೂ ಆಗಿರುವ ಕಾರ್ಖಾನೆ ಅಧ್ಯಕ್ಷ ಮಹಾಂತೇಶ ಕವಟಗಿಮಠ ಇಂದಿಲ್ಲಿ ತಿಳಿಸಿದರು.

ಕಾರ್ಖಾನೆ ಸಭಾಗೃಹದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಚಿಕ್ಕೋಡಿ-ಅಂಕಲಿ ರಸ್ತೆಗೆ ಹೊಂದಿಕೊಂಡು 50 ಎಕರೆಗೂ ಹೆಚ್ಚಿನ ವಿಸ್ತಾರದಲ್ಲಿ ಕೃಷಿ ಮೇಳ ನಡೆಯಲಿದ್ದು, ದೇಶದ  ಕೃಷಿ ಕ್ಷೇತ್ರಕ್ಕೆ ಸಂಬಂಧಪಟ್ಟ ವಿವಿಧ ಕಂಪೆನಿಗಳು ಪಾಲ್ಗೊಳ್ಳಲಿವೆ.
 
400 ರಿಂದ 500 ಮಳಿಗೆಗಳು ಸೇರುವ ನಿರೀಕ್ಷೆ ಇದೆ ಎಂದರು. ಮೇಳದಲ್ಲಿ ಕಬ್ಬು ಬೆಳೆ ಆಧಾರಿತ ಸಮಗ್ರ ಕೃಷಿ ಪದ್ಧತಿಗಳು, ಕಬ್ಬು ಬೆಳೆಗೆ ಪರ್ಯಾಯವಾಗಿ ಅರಿಶಿಣ, ದ್ರಾಕ್ಷಿ, ಹಾಗೂ ಇತರ ತೋಟಗಾರಿಕೆ ಬೆಳೆಗಳ ಮಾಹಿತಿ, ಸವಳು-ಜವಳು ಭೂಮಿ ನಿರ್ವಹಣೆ, ಕೋಯ್ಲೋತ್ತರ ತಂತ್ರಜ್ಞಾನ, ಆಹಾರ ಸಂಸ್ಕರಣ ಪದ್ಧತಿ, ಜೈವಿಕ ತಂತ್ರಜ್ಞಾನ, ಬೀಜ, ಸಸಿ ಮಾರಾಟ ಹಾಗೂ ಸಂಸ್ಕರಣೆ, ಅತ್ಯಾಧುನಿಕ ಕೃಷಿ ಉಪಕರಣ ಹಾಗೂ ಕೀಟನಾಶಕಗಳು, ಕೃಷಿ ಸಾಧಕರು ಮತ್ತು ತಜ್ಞರೊಂದಿಗೆ ಸಂವಾದ, ಅತಿ ಕಡಿಮೆ ಖರ್ಚಿನ ಕೃಷಿ ತಂತ್ರಜ್ಞಾನ, ಆಹಾರ ಮತ್ತು ದಿನ ಬಳಕೆ ವಸ್ತುಗಳು, ಖಾದಿ ಹಾಗೂ ಗ್ರಾಮೋದ್ಯೋಗ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ ಎಂದು ತಿಳಿಸಿದರು.

ನೈಸರ್ಗಿಕ ಏರುಪೇರು, ಹಳೆ ಕೃಷಿ ಪದ್ದತಿ ಅಳವಡಿಕೆ, ಅಸಮರ್ಪಕ ನೀರಿನ ನಿರ್ವಹಣೆ ಮುಂತಾದ ಹಲವು ಕಾರಣಗಳಿಂದಾಗಿ ರೈತ ಕೃಷಿಯಲ್ಲಿ ನಷ್ಟ ಅನುಭವಿಸುತ್ತಿದ್ದಾನೆ. ಈ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಅಗತ್ಯವಾದ ಮಾರ್ಗದರ್ಶನ ನೀಡುವ ಉದ್ದೇಶದಿಂದ ಕೃಷಿ ಮೇಳವನ್ನು ಆಯೋಜಿಸಲಾಗಿದೆ.

ಇದು ಕೇವಲ ಕೃಷಿ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗದೇ ರೈತನ ಮಕ್ಕಳಿಗೆ ಶಿಕ್ಷಣದ ಕುರಿತಾಗಿ ಮಾರ್ಗದರ್ಶನ, ಬ್ಯಾಂಕಿಂಗ್ ಯೋಜನೆಗಳ ಮಾಹಿತಿ, ಆಹಾರ ಪದ್ದತಿ ಕುರಿತಾಗಿಯೂ ಮಾರ್ಗದರ್ಶನ ನೀಡಲಾಗುವುದು.

ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ಹಾಗೂ ಜೆಎನ್‌ಎಂಸಿಗಳ ಸಹ ಯೋಗದಲ್ಲಿ ಆರೋಗ್ಯ ಶಿಬಿರವನ್ನೂ ಹಮ್ಮಿಕೊಳ್ಳಲಾಗಿದ್ದ, ಉಚಿತವಾಗಿ ಪ್ರಾಥಮಿಕ ಆರೋಗ್ಯ ತಪಾಸಣೆ ಯನ್ನೂ ಮಾಡಲಾಗುತ್ತದೆ ಎಂದು ಹೇಳಿದರು. ಹೆಚ್ಚಿನ ಮಾಹಿತಿಗಾಗಿ ಕಾರ್ಖಾನೆಯ ಕಾರ್ಮಿಕ ಕಲ್ಯಾಣ ಅಧಿಕಾರಿ ಎಸ್.ಎಲ್.ಹಕಾರೆ ಅಥವಾ ಪರಿಸರ ಅಭಿಯಂತರ ಪಟ್ಟಣಶೆಟ್ಟಿ ಅವರನ್ನು ಸಂಪರ್ಕಿಸಬಹುದಾಗಿದೆ.

ರಾಜ್ಯಸಭೆ ಸದಸ್ಯ ಡಾ.ಪ್ರಭಾಕರ ಕೋರೆ ಅವರ ಮಾರ್ಗದರ್ಶನದಲ್ಲಿ ಕಾರ್ಖಾನೆಯ ಆಡಳಿತ ಮಂಡಳಿಯು ಕೇವಲ ಕಬ್ಬು ನುರಿಸಿ ಸಕ್ಕರೆ ಉತ್ಪಾದನೆ ಕಾರ್ಯಕ್ಕೆ ಮಾತ್ರ ಸೀಮಿತಗೊಳ್ಳದೇ ರೈತ ಸಂಪರ್ಕ ಸಭೆ, ಆರೋಗ್ಯ ಶಿಬಿರ, ರೈತ ಸದಸ್ಯರಿಗೆ ಆರೋಗ್ಯ ವಿಮೆ ಮುಂತಾದ ರೈತಪರ ಯೋಜನೆಗಳನ್ನು ಜಾರಿಗೊಳಿಸುತ್ತಾ ಬಂದಿದ್ದು, ಇದೀಗ ಈ ಭಾಗದ ಕೃಷಿಕರ ಜೀವನಮಟ್ಟ ಸುಧಾರಣೆಗೆ ಅಗತ್ಯವಾದ ಕೃಷಿ ಹಾಗೂ ಕೃಷಿಯೇತರ ವಿಷಯಗಳ ಕುರಿತು ಮಾಹಿತಿ ಒದಗಿಸುವ ಉದ್ದೇಶದಿಂದ ಬೃಹತ್ ಕೃಷಿ ಮೇಳವನ್ನು ಆಯೋಜಿಸಿದೆ. ಕೇಂದ್ರದ ಕೃಷಿ ಸಚಿವ ಶರದ ಪವಾರ, ಮುಖ್ಯಮಂತ್ರಿ ಸದಾನಂದಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯ ಕೃಷಿ ಸಚಿವ ಉಮೇಶ ಕತ್ತಿ ಮುಂತಾದವರನ್ನು ಆಹ್ವಾನಿಸಲಾಗುವದು ಎಂದು ಮಹಾಂತೇಶ ಕವಟಗಿಮಠ ಹೇಳಿದರು.

ಕಾರ್ಖಾನೆ ಉಪಾಧ್ಯಕ್ಷ ಅಜೀತ ದೇಸಾಯಿ, ನಿರ್ದೇಶಕರಾದ ಕೆ.ಕೆ.ಮೈಶಾಳೆ, ಅಮೀತ ಕೋರೆ, ಪ್ರಕಾಶ ಪಾಟೀಲ, ಭರತೇಶ ಬನವಣೆ, ಟಿ.ಡಿ.ಕಾಟೆ, ಮಲ್ಲಿಕಾರ್ಜುನ ಹಿರೇಮಠ, ದತ್ತು ಸಪ್ತಸಾಗರೆ, ವ್ಯವಸ್ಥಾಪಕ ನಿರ್ದೇಶಕ ಎಸ್. ಬಿ.ಉಮರಾಣಿ ಮುಂತಾದವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT