ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆ.15 ರೊಳಗೆ ವೇತನ ಸಮಿತಿ ವರದಿ ನೀಡಲು ಆಗ್ರಹ

Last Updated 24 ಜನವರಿ 2012, 10:40 IST
ಅಕ್ಷರ ಗಾತ್ರ

ಆಲಮಟ್ಟಿ: ರಾಜ್ಯ ಸರಕಾರ ಸರಕಾರಿ ನೌಕರರ ವೇತನ ಪರಿಷ್ಕರಣೆಗೆ ನೇಮಕಗೊಂಡ ಆರನೇ ವೇತನ ಸಮಿತಿಯು ಫೆ.15 ರೊಳಗೆ ರಾಜ್ಯ ಸರಕಾರಕ್ಕೆ ವರದಿ ನೀಡದಿದ್ದಲ್ಲಿ ವೇತನ ಸಮಿತಿಯನ್ನೇ ತಿರಸ್ಕರಿಸಿ, ನೇರ ಕೇಂದ್ರ ಸರಕಾರಿ ಮಾದರಿಯ ವೇತನ ಜಾರಿಗೆ ಆಗ್ರಹಿಸಿ ಹೋರಾಟ ನಡೆಸಲಾಗುವುದು ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ವಿ.ಎಂ. ನಾರಾಯಣಸ್ವಾಮಿ ಹೇಳಿದರು.

ಆಲಮಟ್ಟಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು,  ಕೇಂದ್ರದ ಆರನೇ ವೇತನ ಆಯೋಗದ ವರದಿಯ ಅಧ್ಯಯನ ನಡೆಸಿ, ಪ್ರಸ್ತುತ ರಾಜ್ಯ ಸರಕಾರದ ವೇತನ ಶ್ರೇಣಿಯನ್ನು ನಿಗದಿ ಮಾಡಲು ರಚಿಸಿದ ಈ ಸಮಿತಿ ಇನ್ನೂ ಅಂತಿಮ ವರದಿ  ನೀಡಿಲ್ಲ. ಸಂಘಟನೆಗಳ ಒತ್ತಾಯದ ಮೇರೆಗೆ ರಾಜ್ಯ ಸರಕಾರ ಕೇವಲ 15ರಷ್ಟು ಮಧ್ಯಂತರ ಪರಿಹಾರ ನೀಡಿದೆ. ಫೆ. 15 ರೊಳಗೆ ವರದಿ ನೀಡದಿದ್ದಲ್ಲಿ ರಾಜ್ಯದಾದ್ಯಂತ ಅನಿರ್ದಿಷ್ಟ ಕಾಲ ಮುಷ್ಕರ ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರಿಗೆ  ರೂ. 13,500 ಆರಂಭಿಕ ವೇತನ ನೀಡಬೇಕು.  ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಿಗೆ ಕೇರಳ ಮಾದರಿಯಲ್ಲಿ ಪ್ರತ್ಯೇಕ ವೇತನ ಶ್ರೇಣಿಯನ್ನು ನಿಗದಿಗೊಳಿಸಬೇಕು. ಹಿರಿಯ ಮುಖ್ಯ ಶಿಕ್ಷಕರಿಗೆ ವಿಷಯ ಪರಿವೀಕ್ಷಕ ಹುದ್ದೆಗೆ ಬಡ್ತಿ ನೀಡಬೇಕು, ಗ್ರಾಮಾಂತರ ಪ್ರದೇಶದಲ್ಲಿ  ಸೇವೆ ಸಲ್ಲಿಸುವ ನೌಕರರಿಗೆ ರೂ. 1000  ಗ್ರಾಮೀಣ ಭತ್ಯೆ ನೀಡಬೇಕು. ಗ್ರಾಮೀಣ ಕೃಪಾಂಕ ನೌಕರರ ವೇತನ ಕಡಿತವನ್ನು ತಕ್ಷಣ ರದ್ದುಗೊಳಿಸಿ ಅವರಿಗೆ ಸಂಪೂರ್ಣವಾದ ಸೇವಾ ಜೇಷ್ಠತೆ ನೀಡಬೇಕು, ದೈಹಿಕ ಶಿಕ್ಷಣ ಶಿಕ್ಷಕರಿಗೆ ಕ್ಷೇತ್ರವಾರು ಎರಡು ಹುದ್ದೆಗಳಂತೆ ಪ್ರಾಥಮಿಕ ಪಿ.ಇ.ಓ.ಗಳಾಗಿ ಬಡ್ತಿ ನೀಡಬೇಕು ಎಂದು ಸರಕಾರಕ್ಕೆ ಒತ್ತಾಯಿಸಲಾಗಿದೆ ಎಂದರು.

ವೇತನ ಸಮಿತಿಗೆ ನೀಡಿರುವ ಮನವಿಯಲ್ಲಿ 1:9 ರ ಅನುಪಾತದಲ್ಲಿ ರೂ. 10,000 ದಿಂದ 90,0000 ವರೆಗೆ ರಾಜ್ಯ ಸರಕಾರಿ ನೌಕರರ ವೇತನವನ್ನು ಹೆಚ್ಚಿಸಬೇಕು. ಪ್ರತಿ ವರ್ಷದ ಸೇವೆಗೆ ಅರ್ಧ ಪ್ರತಿಷತ ವೇತನದ ವೇಟೇಜ್‌ನ್ನು ಮೂಲವೇತನಕ್ಕೆ ಸೇರಿಸವಂತೆ  ವಿನಂತಿಸಲಾಗಿದೆ ಎಂದು ಅವರು ತಿಳಿಸಿದರು.
 

2006 ರಿಂದ ಇದುವರೆಗೂ ಕೇಂದ್ರದ ಮಾದರಿ ಗಮನಿಸಿದರೇ ರಾಜ್ಯ ಸರಕಾರಿ ನೌಕರರು ಅನುಭವಿಸಿರುವ ವೇತನ ನಷ್ಟ  3600 ಕೋಟಿ. ಈಗ ನಾವು ಕೇಂದ್ರ ಸರಕಾರಿ ಮಾದರಿಯಲ್ಲಿ ಕೇಳುತ್ತಿರುವ ವೇತವನ್ನು ಜಾರಿಗೆಗೊಳಿಸಿದರೆ  ಸರಕಾರಕ್ಕೆ 2000 ಕೋಟಿ ರೂ ಹೊರೆಯಲಾಗಿದೆ. ಆದರೆ  ರಾಜ್ಯ ಸರಕಾರಿ ನೌಕರರು ಒಂದು ದಿನದ ಮುಷ್ಕರ ನಡೆಸಿದರೇ ಸರಕಾರಕ್ಕೆ ಆಗುವ ನಷ್ಟ 4000 ಕೋಟಿ   ಎಂದು ಹೇಳಿದರು.

ನಿವೃತ್ತಿ ನಂತರ ಸರಕಾರಿ ನೌಕರರಿಗೆ ಸಿಗುವ ಡಿ.ಸಿ.ಆರ್.ಜಿ. ಯನ್ನು ಈಗಿರುವ 33 ವರ್ಷಗಳಿಗೆ ಬದಲು ನೌಕರರ ಸಂಪೂರ್ಣವಾದ ಸೇವೆಗೆ ಲೆಕ್ಕ ಮಾಡಿ ನೀಡಬೇಕು. ಮನೆ ಬಾಡಿಗೆ ಭತ್ಯೆಯನ್ನು ಕೇಂದ್ರ ಸರಕಾರಿ ಮಾದರಿಯಲ್ಲಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಲ್. ಬೈರಪ್ಪನವರ ಹೇಳಿಕೆಯಂತೆ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಸವರಾಜ ಗುರಿಕಾರ ಅವರ ನೇತೃತ್ವದಲ್ಲಿ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳ ಸಿಬ್ಬಂದಿ ಒಕ್ಕೂಟವನ್ನು ರಚಿಸಿಕೊಂಡು 3 ಲಕ್ಷ ಶಿಕ್ಷಕರೊಂದಿಗೆ ಮುಷ್ಕರ ನಡೆಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಶಿಕ್ಷಣ ಸಂಘಟನೆಯ ಪದಾಧಿಕಾರಿಗಳಾದ ಬಸವರಾಜ ಬಾಗೇನವರ, ಚಂದ್ರಶೇಖರ ಎನ್.ಎಸ್, ವಿ.ಎನ್. ಗಂಗಲ್, ಪಿ.ಎಸ್. ಪಮ್ಮೋರ  ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT