ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆ.3ಕ್ಕೆ ಹಿಂದುಳಿದ ವರ್ಗ ಪ್ರತಿನಿಧಿಗಳ ಸಭೆ

Last Updated 14 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹಿಂದುಳಿದ ವರ್ಗಗಳ ಮೀಸಲಾತಿ ಕೋಟಾದಲ್ಲಿ ಅಲ್ಪಸಂಖ್ಯಾತರಿಗೆ ಶೇ 4.5 ರಷ್ಟು ಮೀಸಲಾತಿ ಒಳಗೊಂಡ ಉಪಕೋಟಾ ವ್ಯವಸ್ಥೆ ಒದಗಿಸಿರುವ ಕೇಂದ್ರ ಸರ್ಕಾರದ ಕ್ರಮದ ಬಗ್ಗೆ ಚರ್ಚಿಸಲು ರಾಜ್ಯ ಬಿಜೆಪಿಯು ಹಿಂದುಳಿದ ವರ್ಗಗಳಿಗೆ ಸೇರಿದ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳ ಸಭೆಯನ್ನು ಫೆಬ್ರುವರಿ 3ರಂದು ನಗರದಲ್ಲಿ ಕರೆದಿದೆ.

  ಬಿಜೆಪಿಯ ರಾಜ್ಯ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಪಿ.ಸಿ.ಮೋಹನ್ ಸಮ್ಮುಖದಲ್ಲಿ ಶನಿವಾರ ನಡೆದ ಸಭೆಯ ನಂತರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

 ಅರಮನೆ ಮೈದಾನದಲ್ಲಿ ಈ ಸಭೆ ಕರೆಯುವ ಉದ್ದೇಶ ಇದೆ. ಪಕ್ಷಾತೀತವಾಗಿ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ ಸಂಘಗಳ ಪ್ರತಿನಿಧಿಗಳನ್ನು ಸಭೆಗೆ ಆಹ್ವಾನಿಸಲಾಗುವುದು ಎಂದರು.

  ಕೇಂದ್ರ ಸರ್ಕಾರದ ಈ ತೀರ್ಮಾನದ ವಿರುದ್ಧ ಯಾವ ರೀತಿಯ ಹೋರಾಟ ನಡೆಸಬೇಕು? ಕೇಂದ್ರದ ಮೇಲೆ ಒತ್ತಡ ಹೇರಲು ಏನೆಲ್ಲ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಅಂದಿನ ಸಭೆಯಲ್ಲಿ ಚರ್ಚಿಸಲಾಗುವುದು.  ನಂತರ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದರು.

 ಈ ಪ್ರಯತ್ನಕ್ಕೂ ಕೇಂದ್ರ ಸರ್ಕಾರ ಬಗ್ಗದಿದ್ದರೆ ಬೃಹತ್ ಬಹಿರಂಗ ಸಮಾವೇಶ ಆಯೋಜಿಸುವ ಉದ್ದೇಶ ಇದೆ. 10 ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಿ, ಕೇಂದ್ರ ಸರ್ಕಾರದ ವಿರುದ್ಧ ದೊಡ್ಡ ಹೋರಾಟವನ್ನೇ ಮಾಡಲು ತೀರ್ಮಾನಿಸಲಾಗಿದೆ ಎಂದೂ ಅವರು ವಿವರಿಸಿದರು.
 
ಮುಂದಿನ ವರ್ಷದ ಬಜೆಟ್‌ನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಹೆಚ್ಚಿನ ಹಣ ಮೀಸಲಿಡುವಂತೆ ಮುಖ್ಯಮಂತ್ರಿಯನ್ನು ಕೋರಲಾಗುವುದು. ಈ ಕುರಿತು ಸದ್ಯದಲ್ಲೇ ಮಾತುಕತೆ ನಡೆಸಲಾಗುವುದು ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT