ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆ.7ಕ್ಕೆ ದೆಹಲಿ ಚುನಾವಣೆ

ಬಿಜೆಪಿ, ಎಎಪಿ ನಡುವೆ ನೇರ ಹಣಾಹಣಿ
Last Updated 12 ಜನವರಿ 2015, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರಾಜಧಾನಿ ದೆಹಲಿಯಲ್ಲಿ ಕೊನೆಗೂ ವಿಧಾನಸಭೆ ಚುನಾವಣೆ ಘೋಷಣೆ­ಯಾಗಿದ್ದು,  ಫೆಬ್ರುವರಿ ೭ರಂದು ಮತ­ದಾನ ನಡೆಯಲಿದೆ. ೧೦ರಂದು ಫಲಿತಾಂಶ ಹೊರಬೀಳಲಿದೆ.

ವರ್ಷದಿಂದ ದೆಹಲಿಯಲ್ಲಿ ಇದ್ದ ರಾಜಕೀಯ ಅತಂತ್ರ ಸ್ಥಿತಿ ಇದರಿಂದಾಗಿ ಕೊನೆಗೊಳ್ಳುವ ಭರವಸೆ ಮೂಡಿದೆ.  ಲೋಕಸಭೆ ಚುನಾವಣೆಯಲ್ಲಿ ಅಭೂತ­­ಪೂರ್ವ ಗೆಲುವು ಸಾಧಿಸಿರುವ ಬಿಜೆಪಿ ಹಾಗೂ 2013ರ ವಿಧಾನಸಭೆ ಚುನಾವ­ಣೆಯಲ್ಲಿ ಅಚ್ಚರಿಯ ಸಾಧನೆ ಮಾಡಿದ್ದ ಆಮ್‌ ಆದ್ಮಿ ಪಕ್ಷದ (ಎಎಪಿ) ನಡುವೆ ನೇರ ಹಣಾಹಣಿ ನಡೆಯುವ ಎಲ್ಲ ಸೂಚನೆಗಳು ಇವೆ.

ತಕ್ಷಣದಿಂದಲೇ  ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ.  ಒಟ್ಟು ೭೦ ಕ್ಷೇತ್ರಗ­ಳಲ್ಲಿ
೧ ಕೋಟಿ 30 ಲಕ್ಷ  ಮತ­ದಾ­­ರರು ಹಕ್ಕು ಚಲಾಯಿ­ಸಲಿ­ದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತ  ವಿ.ಎಸ್‌.­ಸಂಪತ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ದೆಹಲಿ ವಿಧಾನಸಭೆ ವಿಸರ್ಜನೆಗೆ ರಾಷ್ಟ್ರಪತಿ ಹೊರಡಿಸಿದ್ದ ಆದೇಶವು ಫೆ.೧೫ರಂದು ಕೊನೆಗೊ­ಳ್ಳಲಿ­­ರುವು­ದರಿಂದ ಇಷ್ಟರೊಳಗೆ ಚುನಾವಣೆ ನಡೆಸಿ ಹೊಸದಾಗಿ ಜನಾದೇಶ ಪಡೆಯುವುದು ಅನಿರ್ವಾಯವಾಗಿತ್ತು.

ಹಿನ್ನೋಟ: ೨೦೧೩ರ ಡಿಸೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ೩೧ ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ೨೮ ಸ್ಥಾನ ಗೆದ್ದಿದ್ದ ಎಎಪಿ ಎರಡನೇ ಸ್ಥಾನದಲ್ಲಿ ಇತ್ತು. ಬಿಜೆಪಿ ಸರ್ಕಾರ ರಚಿಸಲು ಹಿಂದೇಟು ಹಾಕಿತ್ತು.

ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿ­ವಾಲ್‌ ಅವರಿಗೆ ಕಾಂಗ್ರೆಸ್‌ ಷರತ್ತುಬದ್ಧ ಬೆಂಬಲ ನೀಡಿತ್ತು. ಮತದಾರರಿಗೆ ವಚನ ನೀಡಿ­ದಂತೆ ವಿಧಾನಸಭೆ­ಯಲ್ಲಿ ಜನಲೋಕಪಾಲ ಮಸೂದೆ ಅಂಗೀಕರಿ­ಸಲು ವಿಫಲವಾಗಿದ್ದರಿಂದ ಕೇವಲ ೪೯ ದಿನದ ನಂತರ (೨೦೧೪, ಫೆ.೧೪) ಕೇಜ್ರಿವಾಲ್‌ ಸಿ.ಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಬಿಜೆಪಿ, ಕಾಂಗ್ರೆಸ್‌ ಹಾಗೂ ಎಎಪಿಗೆ ಸರ್ಕಾರ ರಚಿಸಲು ಬೇಕಾದ ಸಂಖ್ಯಾಬಲ ಇಲ್ಲದ ಕಾರಣ ಕಳೆದ ವರ್ಷದ ಫೆಬ್ರುವರಿ 17ರಂದು ರಾಷ್ಟ್ರಪತಿ ಆಡ­ಳಿತ ಹೇರಲಾಗಿತ್ತು. ಯಾವ ಪಕ್ಷವೂ ಸರ್ಕಾರ ರಚನೆಗೆ ಮುಂದಾಗಲಿಲ್ಲ. ಅಂತಿಮವಾಗಿ ವಿಧಾನಸಭೆ­ಯನ್ನು ವಿಸರ್ಜಿಸಲಾಗಿತ್ತು.

ಬಿಜೆಪಿಗೆ ಮೋದಿ ಮಂತ್ರದಂಡ: ಚುನಾವಣೆ ಘೋಷಣೆ­ಯಾಗುತ್ತಿ­ದ್ದಂತೆಯೇ ಬಿಜೆಪಿ ತಾನು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಹೆಸರಿಸುವುದಿಲ್ಲ ಎಂದು ಹೇಳಿಕೊಂಡಿದೆ.

‘ ಈ ಬಾರಿ ನಾವು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಚುನಾವಣೆ ಎದುರಿ­ಸುತ್ತೇವೆ’ ಎಂದು ದೆಹಲಿ ಬಿಜೆಪಿ ಅಧ್ಯಕ್ಷ ಸತೀಶ್‌ ಉಪಾಧ್ಯಾಯ ತಿಳಿಸಿದ್ದಾರೆ.

ಅರವಿಂದ ಕೇಜ್ರಿವಾಲ್‌ ಅವರಿಗೆ ಸರಿಸಾ­ಟಿಯಾಗುವಂತಹ ವ್ಯಕ್ತಿಯನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಹೆಸರಿಸುವಂತೆ ಬಿಜೆಪಿಗೆ ಎಎಪಿ ಸವಾಲು ಹಾಕಿದೆ.

ಮಾಕನ್‌ ಸಾರಥ್ಯ: ಕಾಂಗ್ರೆಸ್‌ ಪಕ್ಷವು ತನ್ನ ಪ್ರಧಾನ ಕಾರ್ಯದರ್ಶಿ ಅಜಯ್‌ ಮಾಕನ್‌ ಅವರಿಗೆ ಚುನಾವಣಾ ಪ್ರಚಾರ ಸಮಿತಿಯ ಸಾರಥ್ಯ ವಹಿಸುವ ಸಾಧ್ಯತೆ ಇದೆ.

***
ನೀತಿ ಸಂಹಿತೆ ಉಲ್ಲಂಘಿಸು­ವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುತ್ತದೆ. ಯಾವುದೇ ಕಾರಣಕ್ಕೂ ‘ದ್ವೇಷ ಭಾಷಣ’ ಸಹಿಸುವುದಿಲ್ಲ
– ವಿ.ಎಸ್‌.ಸಂಪತ್‌,ಮುಖ್ಯಚುನಾವಣಾ ಆಯುಕ್ತ

ಬಿಜೆಪಿಗೆ ಹೆಚ್ಚು ಸ್ಥಾನ?
ದೆಹಲಿ ಚುನಾವಣೆಗೆ ಸಂಬಂಧಿಸಿ ಹೆಡ್‌­ಲೈನ್ಸ್‌ ಟುಡೆ ವಾಹಿನಿ– ಸಿಸೆರೊ ಜನವರಿ ಮೊದಲ ವಾರ ನಡೆಸಿದ ಸಮೀಕ್ಷೆ­ಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನ ಗಳಿಸಲಿದೆ ಎಂಬ ಅಭಿಪ್ರಾಯ ಮೂಡಿಬಂದಿದೆ.

ಬಿಜೆಪಿ ಶೇ 40ರಷ್ಟು ಮತ ಗಳಿಸಲಿದ್ದು, 34ರಿಂದ 40 ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆ­ಯಿದೆ.  ಆಮ್‌ ಆದ್ಮಿ ಪಕ್ಷ ಶೇ 36ರಷ್ಟು ಮತ ಗಳಿಸುವ ಸಾಧ್ಯತೆಯಿದ್ದು, 25ರಿಂದ 31 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ನಿರೀಕ್ಷೆ­ಯಿದೆ. ಕಾಂಗ್ರೆಸ್‌ನ ಮತ ಗಳಿಕೆ ಪ್ರಮಾಣ ಶೇ 16ಕ್ಕೆ ಕುಸಿಯಲಿದ್ದು, ಆ ಪಕ್ಷ ಹೆಚ್ಚೆಂದರೆ 3ರಿಂದ 5 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ.

ಮುಖ್ಯಮಂತ್ರಿ ಅಭ್ಯರ್ಥಿಗಳ ಪೈಕಿ ಅರವಿಂದ್‌ ಕೇಜ್ರಿವಾಲ್‌ ಅತಿ ಜನಪ್ರಿಯ­ರಾಗಿದ್ದು, ಶೇ 35ರಷ್ಟು ಜನಬೆಂಬಲ ಪಡೆದಿ­ದ್ದಾರೆ. ಬಿಜೆಪಿಯ ಹರ್ಷವರ್ಧನ್‌ ಅವರನ್ನು ಶೇ 19ರಷ್ಟು ಜನ ಬೆಂಬಲಿಸಿದ್ದಾರೆ. ಮೂರು ಅವಧಿಗೆ ದೆಹಲಿಯ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್‌ ಅವರನ್ನು ಶೇ 6ರಷ್ಟು ಮಂದಿ ಮಾತ್ರ ಬೆಂಬಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT