ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆಲಿಕ್ಸ್ ವಿಶ್ವ ದಾಖಲೆ

Last Updated 15 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಲಂಡನ್ (ಐಎಎನ್‌ಎಸ್): ಬಿಸಿಗಾಳಿ ಬಲೂನಿನಲ್ಲಿ 39 ಕಿ.ಮೀ. ಎತ್ತರಕ್ಕೇರಿ ಆಗಸದಿಂದ ಮತ್ತೆ ಭೂಮಿಗೆ ಧುಮುಕುವ ಮೂಲಕ ಆಸ್ಟ್ರಿಯಾದ ಸ್ಕೈಡೈವರ್ ಫೆಲಿಕ್ಸ್ ಬಾಮ್‌ಗಾರ್ಟ್ನರ್ ಹೊಸ ವಿಶ್ವ ದಾಖಲೆಯೊಂದನ್ನು ಬರೆದರು.

ಅವರನ್ನು ಹೊತ್ತ ಬಲೂನು ಮೆಕ್ಸಿಕೊದ ರೋಸ್‌ವೆಲ್ ನೆಲೆಯಿಂದ ಭಾನುವಾರ ಭಾರತೀಯ ಕಾಲಮಾನ ರಾತ್ರಿ 9 ಗಂಟೆಗೆ ಗಗನದತ್ತ ಹೊರಟು ಎರಡು ಗಂಟೆಗಳ ನಂತರ ವಾಯುಮಂಡಲದ ನಿಗದಿತ ಸ್ಥಳ (ಸ್ಟ್ರಾಟೋ ಸ್ಪಿಯರ್) ತಲುಪಿತು. ಅಲ್ಲಿಂದ ಜಿಗಿದ 43 ವರ್ಷದ ಫೆಲಿಕ್ಸ್, ಕೇವಲ 10 ನಿಮಿಷಗಳಲ್ಲಿ ಮರುಭೂಮಿಯಲ್ಲಿ ಸುರಕ್ಷಿತವಾಗಿ ಇಳಿದರು. ಅತ್ಯಂತ ವೇಗವಾಗಿ ಗುರಿಯನ್ನು ತಲುಪುವ ಉದ್ದೇಶದಿಂದ ಭೂಮಿಯ ಮೇಲ್ಮೈಯಿಂದ ಕೆಲವೇ ದೂರದಲ್ಲಿರುವಾಗ ಪ್ಯಾರಾಶೂಟ್ ಬಳಸಿದರು.

1,28,000 ಅಡಿ ಎತ್ತರದಿಂದ ಧುಮುಕಿದ ಫೆಲಿಕ್ಸ್, ರಭಸವಾಗಿ ಬೀಸುತ್ತಿದ್ದ ಗಾಳಿಯನ್ನು ಭೇದಿಸಿ ವಾತಾವರಣದಲ್ಲಿ ಶಬ್ದಕ್ಕಿಂತ ವೇಗವಾಗಿ ಮುನ್ನುಗ್ಗಿ ಮತ್ತೊಂದು ದಾಖಲೆಯನ್ನೂ ನಿರ್ಮಿಸಿದರು. ಆದರೆ, ಅಂತರರಾಷ್ಟ್ರೀಯ ವೈಮಾನಿಕ ಒಕ್ಕೂಟ ಈ ಎರಡೂ ದಾಖಲೆಗಳನ್ನು ಇನ್ನೂ ದೃಢಪಡಿಸಬೇಕಿದ್ದು ನಂತರ ಅಧಿಕೃತವಾಗಿ ಘೋಷಿಸುವ ನಿರೀಕ್ಷೆ ಇದೆ ಎಂದು ಬಿಬಿಸಿ ಸುದ್ದಿವಾಹಿನಿ ತಿಳಿಸಿದೆ.

ಫೆಲಿಕ್ಸ್ ಅವರ ಎದೆಯ ಭಾಗದಲ್ಲಿ ಅಳವಡಿಸಲಾಗಿದ್ದ ಚೆಕ್‌ಪ್ಯಾಕ್‌ನಲ್ಲಿದ್ದ   ಜಿಪಿಎಸ್ ಮೈರ್ಕೊಕಾರ್ಡ್ ಯಂತ್ರದಲ್ಲಿ ದಾಖಲಾಗಿರುವ ಗಾಳಿಯ ವೇಗ, ವೇಗೋತ್ಕರ್ಷ ಮತ್ತು ಕ್ರಮಿಸಿದ ದೂರಗಳ ಕುರಿತಾದ ಅಂಕಿ-ಅಂಶಗಳನ್ನು ಒಕ್ಕೂಟದ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

1960ರಲ್ಲಿ ಜೋಸೆಫ್ ಕಿಟ್ಟಿಂಜರ್ ಎಂಬ ಸ್ಕೈಡೈವರ್ 1,02,500 ಅಡಿ ಎತ್ತರದಿಂದ ಜಿಗಿದು ದಾಖಲೆ ನಿರ್ಮಿಸಿದ್ದರು. ಅದನ್ನು ಈಗ ಫೆಲಿಕ್ಸ್ ಮುರಿದಿದ್ದಾರೆ.

ಬಾಹ್ಯಾಕಾಶ ನೌಕೆ ವಾಯುಮಂಡಲವನ್ನು ಭೇದಿಸಿ ಚಿಮ್ಮುವ ಅಥವಾ ಉಪಗ್ರಹಗಳು ರಾಕೆಟ್‌ನಿಂದ ಬೇರ್ಪಟ್ಟು ಕಕ್ಷೆಗೆ ಸೇರುವ ತುರ್ತು ಸಂದರ್ಭದಲ್ಲಿ ಅನುಸರಿಸಬೇಕಾದ ಸುರಕ್ಷಿತ ಕ್ರಮಗಳಿಗೆ ಫೆಲಿಕ್ಸ್ ಅವರ ಸಾಹಸ ಹೊಸ ಯೋಚನೆಗಳನ್ನು ಒದಗಿಸಲಿದೆ. ಬೋಯಿಂಗ್‌ನಂತ ಪ್ರಯಾಣಿಕ ವಿಮಾನಗಳು ಭೂಮಿಯಿಂದ ಹತ್ತು ಕಿ.ಮೀ. ಎತ್ತರದಲ್ಲಿ ಹಾರಾಟ ನಡೆಸುತ್ತವೆ. 39 ಕಿ.ಮೀ. ಎತ್ತರದಿಂದ ಜಿಗಿದ ಈ ಸಾಹಸ ಬಾಹ್ಯಾಕಾಶ ಯಾತ್ರಿಗಳು ಎದುರಿಸುವ ತೊಂದರೆಗಳ ಬಗ್ಗೆಯೂ ಬೆಳಕು ಚೆಲ್ಲಲಿದೆ. 

`ನಿರೀಕ್ಷೆಗಿಂತ ಕಠಿಣವಾಗಿತ್ತು~
ವಾಷಿಂಗ್ಟನ್: `ಈ ಪಯಣ ನನ್ನ ನಿರೀಕ್ಷೆ, ಊಹೆಗಿಂತ ಬಹಳ ಕಠಿಣವಾದ ಸವಾಲಾಗಿತ್ತು... ಇದೊಂದು ಸೂಪರ್‌ಸಾನಿಕ್ ಫಾಲ್ (ಶಬ್ದಕ್ಕಿಂತ ವೇಗವಾದ ಚಲನೆ)~. - ಇದು ಹೊಸ ದಾಖಲೆ ನಿರ್ಮಿಸಿದ ಆಸ್ಟ್ರಿಯಾದ ಸ್ಕೈಡೈವರ್ ಫೆಲಿಕ್ಸ್ ಅವರ ತಕ್ಷಣದ ಪ್ರತಿಕ್ರಿಯೆ. 

 `ನಮ್ಮ ಯೋಜನೆಯಂತೆಯೇ ಇಂದಿನ ಪಯಣ ಕೂಡಾ ಸಾಕಷ್ಟು ಅಡೆತಡೆಗಳಿಂದ ಕೂಡಿತ್ತು~ ಎಂಬ ಅವರ ಹಾಸ್ಯ ಮಿಶ್ರಿತ ಪ್ರತಿಕ್ರಿಯೆಯನ್ನು ವೆಬ್‌ಸೈಟ್‌ವೊಂದು ಪ್ರಕಟಿಸಿದೆ.

`ಬಿಸಿಗಾಳಿ ಬಲೂನಿನ ಬುಟ್ಟಿಯಿಂದ ಕೆಳಕ್ಕೆ ನೆಗೆದಾಗ ಆರಂಭದಲ್ಲಿ ಎಲ್ಲವೂ ನಿರೀಕ್ಷೆಯಂತೆಯೇ ನಡೆಯಿತು. ಆದರೆ, ನಂತರ ರಭಸವಾಗಿ ಬೀಸುತ್ತಿದ್ದ ಗಾಳಿಯಲ್ಲಿ ನಿಯಂತ್ರಣ ಕಳೆದುಕೊಂಡ ನನ್ನ ದೇಹ ಅತ್ತಿತ್ತ ವಾಲತೊಡಗಿತ್ತು. ನಿಧಾನವಾಗಿ ಸಾವರಿಸಿಕೊಂಡು ಗಾಳಿಯನ್ನು ಭೇದಿಸಿಕೊಂಡು ವೇಗವಾಗಿ ಮುನ್ನುಗ್ಗುತ್ತಿದ್ದಾಗ ನಿಜವಾಗಿಯೂ ಭಯವಾಗಿತ್ತು~ ಎಂದು ಫೆಲಿಕ್ಸ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

“ಗಾಳಿಯಲ್ಲಿ ಅತ್ತಿಂದಿತ್ತ ತೇಲಾಡುತ್ತಿದ್ದ ನನ್ನ ದೇಹವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಯತ್ನದಲ್ಲಿ ಶಬ್ದಕ್ಕಿಂತ ವೇಗವಾಗಿ ಭೂಮಿಯತ್ತ ಬೀಳುತ್ತಿದ್ದೇನೆ ಎನ್ನುವ ಯಾವುದೇ ಅನುಭವ ಆಗಲಿಲ್ಲ. ಅದು ನನ್ನ ಗಮನಕ್ಕೂ ಬರಲಿಲ್ಲ. ಒಂದು ವೇಳೆ ಶಬ್ದಾತೀತ ವೇಗದಲ್ಲಿ ಚಲಿಸಿದ್ದರೆ ನಿಜವಾಗಿಯೂ ನನ್ನ ಪಾಲಿಗೆ ಅದೊಂದು ಮಹತ್ವದ ಸಾಧನೆಯೇ ಸರಿ” ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಹೀಗಿತ್ತು ಜಿಗಿತ
ಹೆಸರು: ಫೆಲಿಕ್ಸ್ ಬಾಮ್‌ಗಾರ್ಟ್ನರ್ (43)
ದೇಶ:  ಆಸ್ಟ್ರಿಯಾ, ಸಾಹಸ ಆರಂಭಿಸಿದ್ದು ಮೆಕ್ಸಿಕೊದಿಂದ
ಬಳಸಿದ ಯಂತ್ರ: ಬಿಸಿಗಾಳಿ ಬಲೂನ್ ಬುಟ್ಟಿ
ದಿನ: ಭಾನುವಾರ ಭಾರತೀಯ ಕಾಲಮಾನ ರಾತ್ರಿ 9 ಗಂಟೆ,
ಆಕಾಶದ ನಿಗದಿತ ಸ್ಥಳ ತಲುಪಲು ಬಲೂನು ತೆಗೆದುಕೊಂಡ ಅವಧಿ: 2 ಗಂಟೆ 17 ನಿಮಿಷ
ಎತ್ತರ: 39 ಕಿ.ಮೀ. (1,28,000 ಅಡಿ)
ಭೂಮಿ ತಲುಪಲು ತೆಗೆದುಕೊಂಡ ಸಮಯ: 10 ನಿಮಿಷ
ಬೋಯಿಂಗ್ ವಿಮಾನಗಳು ಹಾರಾಡುವ ಎತ್ತರ: 10 ಕಿ.ಮೀ.
ಶಬ್ದಾತೀತ ವೇಗದಲ್ಲಿ ಭೂಮಿಯತ್ತ ಪಯಣ (ಶಬ್ದದ ವೇಗ ಸೆಕೆಂಡ್‌ಗೆ 1126 ಅಡಿ ಅಥವಾ ತಾಸಿಗೆ 1,236 ಕಿ.ಮೀ.)
ಹಿಂದಿನ ದಾಖಲೆ: 1960
ಸ್ಕೈಡೈವರ್: ಜೋಸೆಫ್ ಕಿಟ್ಟಿಂಜರ್  
ಎತ್ತರ: 1,02,500 ಅಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT