ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಲಾದ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸದ ಕಾರ್ಯಾಗಾರ

Last Updated 20 ಜೂನ್ 2011, 8:25 IST
ಅಕ್ಷರ ಗಾತ್ರ

ಮೂಡಲಗಿ: ಇಲ್ಲಿಯ ಕೆ.ಎಚ್. ಸೋನವಾಲ್ಕರ್ ಕಲ್ಯಾಣ ಮಂಟಪದಲ್ಲಿ ಈಚೆಗೆ ನೂರಾರು ವಿದ್ಯಾರ್ಥಿಗಳು ಸೇರಿದ್ದರು. ಅವರೆಲ್ಲ ಕಳೆದ ಮಾರ್ಚ್‌ದಲ್ಲಿ ಜರುಗಿದ  ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿಗಳು. ಹೀಗಾಗಿ ಅಲ್ಲಿ ಭಾಗವಹಿಸಿದ್ದ ಮಕ್ಕಳಲ್ಲಿ ಒಂದಿಷ್ಟು ನಾಚಿಕೆ, ಹಿಂಜರಿಕೆ, ಖಿನ್ನತೆ ಕಾಡುತಿತ್ತು. ಅಂಥ ಫೇಲಾದ ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ನೀಡಿದ ಕಾರ್ಯಾಗಾರ ಅದಾಗಿತ್ತು.

ಕ್ರಿಕೆಟ್ ಪಟು ಸಚಿನ್ ತೆಂಡೂಲ್ಕರ್ ಪರೀಕ್ಷೆಯಲ್ಲಿ ಫೇಲಾಗಿದ್ದು, ಇಂದು ವಿಶ್ವ ವಿಖ್ಯಾತ ಕ್ರಿಕೆಟಿಗ, ಬಿಲ್ ಗೇಟ್ಸ್, ಬಿಲ್ ಕ್ಲಿಂಟನ್ ಇವರು ಕಾಲೇಜು ಪರೀಕ್ಷೆಯಲ್ಲಿ ಫೇಲಾಗಿ ಮತ್ತೆ ಉತ್ತೀರ್ಣರಾಗಿ ಅವರು ವಿಶ್ವವಿಖ್ಯಾತರಾದರು. ಅಷ್ಟೇ ಏಕೆ, ಥಾಮಸ್ ಅಲ್ವಾ ಎಡಿಸನ್, ನ್ಯೂಟನ್, ಐನ್‌ಸ್ಟಿನ್ ಇವರೆಲ್ಲ ಕಾಲೇಜು ಪರೀಕ್ಷೆಯಲ್ಲಿ ಡುಮಕಿ ಹಾಕಿದವರೇ. ಆದರೇನಂತೆ ಅವರ ಹೆಸರು ಅಜರಾಮರ.

ಇಂಥ ಅದ್ಭುತ ಉದಾಹರಣೆಗಳನ್ನು ಶಾಂತಚಿತ್ತದಿಂದ ಆಲಿಸಿದ, ಸೋತು ಸುಣ್ಣವಾಗಿದ್ದ ಮುಖಗಳಲ್ಲಿ ಅಂದು ಮತ್ತೆ ಮಂದಹಾಸ ಮೂಡಿತು, ಫೇಲಾದ ಮಕ್ಕಳಲ್ಲಿ ಮತ್ತೆ ಉತ್ಸಾಹ ಬರುವಂತಾಯಿತು. ತಾವು ಮತ್ತೆ ಪ್ರಯತ್ನ ಮಾಡಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಆತ್ಮವಿಶ್ವಾಸವು ಅವರಲ್ಲಿ ಚೇತರಿಸಿಕೊಂಡಿತು.
ಈ ಬಾರಿ ಫೇಲಾದರೇನು ಜೀವನವೇ ಅಂತ್ಯವಲ್ಲ. ಮುಂದಿವೆ ಅವಕಾಶಗಳೆಂದು ಮನಗಂಡರು. ಜೊತೆಗೆ ಆತ್ಮವಿಶ್ವಾಸ ತುಂಬಿದ ಶಿಕ್ಷಕರರಿಗೆ ಕೃತಜ್ಞತೆ ಹೇಳಿದರು.

ಮೂಡಲಗಿ ವಲಯದಲ್ಲಿ ಅನುತ್ತೀರ್ಣರಾದ 327 ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಪ್ರೇರಣಾ ಶಿಬಿರದಲ್ಲಿ ವಿಜ್ಞಾನ ವಿಷಯವನ್ನು ರಮೇಶ ಅಳಗುಂಡಿ, ಗಣಿತವನ್ನು ಪಿ.ಬಿ. ಮದಭಾವಿ, ಸಮಾಜ ವಿಜ್ಞಾನವನ್ನು ಸುಭಾಷ ಭಾಗೋಜಿ, ಇಗ್ಲಿಂಷನ್ನು ಎಂ.ಎ. ಮಗದುಮ್ ಮತ್ತು ಕನ್ನಡವನ್ನು ಡಿ.ಪಿ. ದಾಸನ್ನವರ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಗೋವಿಂದರಾಜು ಮತ್ತು ಉಪನಿರ್ದೇಶಕ ಕೆ.ಸಿ. ಕೃಷ್ಣಶೆಟ್ಟಿ ಅವರು ವಿಶೇಷ ಗಮನ ನೀಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ಇದು ವಿದ್ಯಾರ್ಥಿಗಳಿಗೆ ಹೆಚ್ಚು ಉಪಯೋಗವಾಗಿದೆ ಎಂದು ಕಾರ್ಯಾಗಾರವನ್ನು ಸಂಘಟಿಸಿರುವ ಬಿಇಒ ಅಜಿತ್ ಮನ್ನಿಕೇರಿ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT