ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಲಾದವರೆಲ್ಲ ದಡ್ಡರಲ್ಲ

Last Updated 2 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಯ ಪ್ರತಿಭೆಯನ್ನು ಅಳೆಯಲು ಪರೀಕ್ಷೆಯೊಂದೇ ಮಾನದಂಡವಾದಂತಿದೆ. ಪರೀಕ್ಷೆಯಲ್ಲಿ ತೋರಿಸುವ ಸಾಧನೆ, ಪಡೆಯುವ ಅಂಕ ವಿದ್ಯಾರ್ಥಿಯ ಬುದ್ಧಿಮತ್ತೆಯ ಪ್ರತೀಕ ಎಂದು ಭಾವಿಸಲಾಗುತ್ತಿದೆ.

ಆದ್ದರಿಂದಲೇ ಉತ್ತಮ ಅಂಕಗಳೊಂದಿಗೆ ಪರೀಕ್ಷೆ ಪಾಸು ಮಾಡಿದವರನ್ನು ಸಮಾಜ ಗೌರವಿಸುತ್ತದೆ. ಜತೆಗೆ ಕಡಿಮೆ ಅಂಕ ಪಡೆದವರು, ನಪಾಸಾದವರು ದಡ್ಡರು ಎಂದು ಗುರುತಿಸಿಕೊಳ್ಳುತ್ತಾರೆ. ಆದರೆ ವಾಸ್ತವ ಬೇರೆಯೇ ಇದೆ. ನಪಾಸಾದವರೆಲ್ಲ ದಡ್ಡರು ಎಂಬುದು ಶುದ್ಧ ಸುಳ್ಳು.


ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ನಪಾಸಾಗಲು ಕಾರಣ ಹಲವು. ಅದರಲ್ಲಿ ಕೆಲವು ವೈಯಕ್ತಿಕ ಕಾರಣಗಳಿರಬಹುದು, ಮನೆಯ ವಾತಾವರಣವಿರಬಹುದು, ವಿಷಯದ  ಆಯ್ಕೆಯಲ್ಲಿ  ಆಗಿರುವ ಗೊಂದಲಗಳಿರಬಹುದು, ಹುಡುಗಾಟಿಕೆಯಿರಬಹುದು... ಹೀಗೆ ಬೇರೆ ಬೇರೆ ಕಾರಣಗಳಿಂದಾಗಿ ಪರೀಕ್ಷೆಯಲ್ಲಿ ಸೋಲುವವರನ್ನು ದಡ್ಡರ ಸಾಲಿಗೆ ಸೇರಿಸುವುದು ತಪ್ಪಾಗುತ್ತದೆ.

ಒಂದೊಮ್ಮೆ ನಾವು ಅವರನ್ನು ದಡ್ಡರ ಸಾಲಿಗೆ ಸೇರಿಸಿ  ಕಡೆಗಣಿಸುವುದು, ಅವರ ಬಗ್ಗೆ  ನಿರ್ಲಕ್ಷ್ಯ ತೋರಿಸುವುದು, ಯಾವುದಕ್ಕೂ ಸಲ್ಲದವ ಎಂದು ಅವಹೇಳನ ಮಾಡುವುದು, ಹಿಂಸೆ ನೀಡುವುದು...ಮುಂತಾದವುಗಳನ್ನು ಮಾಡಿದರೆ ಮಾತ್ರ ಅವರ ಭವಿಷ್ಯ ಮತ್ತಷ್ಟು  ದುರ್ಭರವಾದೀತು. ಅವರು ಸಮಾಜಘಾತಕ ಶಕ್ತಿಗಳಾಗಬಹುದು ಅಥವಾ ಕೀಳರಿಮೆ ಬೆಳೆಸಿಕೊಂಡು ನಿಜವಾದ ದಡ್ಡರಾಗಿ ಪರಿವರ್ತನೆಯಾಗುವ ಅಪಾಯವೂ ಇದೆ.

ಬೆಂಬಲ ಬೇಕು
ನಿಜ ಹೇಳುವುದಾದರೆ ನಾವು ಪರೀಕ್ಷೆಯಲ್ಲಿ  ಅತೀ ಹೆಚ್ಚಿನ ಅಂಕಗಳೊಂದಿಗೆ ತೇರ್ಗಡೆಯಾಗುವ ಮಕ್ಕಳಿಗೆ ನೀಡುವುದಕ್ಕಿಂತ ಸ್ವಲ್ಪ ಹೆಚ್ಚು ಪ್ರಾಧಾನ್ಯತೆ, ಬೆಂಬಲ, ಪ್ರೋತ್ಸಾಹವನ್ನು ನಪಾಸಾದವರಿಗೆ ನೀಡಬೇಕು. ಅವರಿಗೆ ಮಾನಸಿಕವಾಗಿ ಧೈರ್ಯ ತುಂಬಬೇಕು.
 
ಆ ಧೈರ್ಯ, ಪ್ರೋತ್ಸಾಹದಿಂದಲೇ ಅವರ ಜೀವನ ಬದಲಾಗುವ ಸಾಧ್ಯತೆ ತುಂಬಾ ಹೆಚ್ಚಿದೆ. ತಾವು ಮತ್ತೊಮ್ಮೆ ಎಡವಿ ಬೀಳದಂತೆ ಜಾಗ್ರತೆ ವಹಿಸುತ್ತಾರೆ. ಹುಡುಗಾಟಿಕೆ ತೊರೆದು ಗಂಭೀರವಾಗಿ ಕಲಿಕೆಯತ್ತ ಗಮನ ಹರಿಸುತ್ತಾರೆ.

ಒಂದು ಬಾರಿ ನಪಾಸಾಗಿ ಮುಂದೆ ಶ್ರಮ ವಹಿಸಿ ಕಲಿತು ಉನ್ನತ ಪದವಿಗೇರಿ ದೊಡ್ಡ ಹುದ್ದೆಗೇರಿದವರ ಸಂಖ್ಯೆ ಈ ಸಮಾಜದಲ್ಲಿ  ಭಾರೀ  ದೊಡ್ಡದಿದೆ.
 
ಅವರು ಒಮ್ಮೆ ನಪಾಸಾಗಿದ್ದುದೇ ಅವರ ಈ ರೀತಿಯ ಅಭಿವೃದ್ಧಿಗೆ ಕಾರಣವಾಗಿರುತ್ತದೆ. ನಪಾಸಾಗಲು ನನ್ನಲ್ಲಿರುವ  ಬುದ್ಧಿಯ ಕೊರತೆ ಕಾರಣವಲ್ಲ, ಅತಿಯಾದ ಹುಡುಗಾಟಿಕೆಯೇ ಕಾರಣ ಎಂಬ ಸತ್ಯ ಅವರಿಗೆ ತಿಳಿದು ಬರುತ್ತದೆ.
 
ಮತ್ತೊಮ್ಮೆ ಆ ತಪ್ಪು ಆವರ್ತನವಾಗದಂತೆ ನೋಡಿಕೊಳ್ಳುತ್ತಾರೆ. ವ್ಯಕ್ತಿತ್ವವನ್ನೇ ಬದಲಾಯಿಸಿಕೊಳ್ಳುತ್ತಾರೆ. ಕಾಲೇಜಿನಲ್ಲಿ `ಅವನನ್ನು ತುಂಟ ಹುಡುಗ~ ಎಂದೇ ಗುರುತಿಸಿಕೊಂಡಿದ್ದ ಉಪನ್ಯಾಸಕರೇ ಬೆರಗಾಗುವಂತೆ ಬದಲಾಗಿರುತ್ತದೆ ಅಂಥವರ ಸ್ವಭಾವ.

ಕಾಲೇಜು ಜೀವನದ ಬಗ್ಗೆ ಇರುವ `ಜಾಲಿ~ ಮನೋಭಾವನೆಯೇ ಹೆಚ್ಚಾಗಿ ಮಕ್ಕಳನ್ನು ದಾರಿ ತಪ್ಪಿಸುತ್ತದೆ. ಅವರ ವಿವೇಕವನ್ನು ಮಸುಕಾಗಿಸುತ್ತದೆ. ಕಾಲೇಜು ಎಂದರೆ ಅಲ್ಲಿ ಗರಿಷ್ಠ ಪ್ರಮಾಣದಲ್ಲಿ ಜಾಲಿಯಾಗಿರಬೇಕು, ತರಗತಿಗೆ ಚಕ್ಕರ್ ಹೊಡೆಯುತ್ತಿರಬೇಕು, ಕ್ಲಾಸ್ ನಡೆಯುತ್ತಿರುವಾಗ ಕೀಟಲೆ ಮಾಡಿ ಶಿಕ್ಷಕರಿಂದ ಗೆಟೌಟ್  ಶಿಕ್ಷೆ ಅನುಭವಿಸಬೇಕು.... ಹೀಗೆಲ್ಲ ಭಾವಿಸಿಕೊಳ್ಳುವ ಮಕ್ಕಳು ಸಾಕಷ್ಟು ಮಂದಿಯಿದ್ದಾರೆ. ಅವರು ಯಾವತ್ತೂ ತರಗತಿಯ ಪಾಠವನ್ನು ಗಂಭೀರವಾಗಿ ಪರಿಗಣಿಸುವುದೇ ಇಲ್ಲ.

ಟ್ಯೂಷನ್ ಸೆಂಟರ್ ತರಗತಿಯನ್ನೇ ಆಪದ್ಭಾಂದವನಂತೆ ಭಾವಿಸಿಕೊಳ್ಳುತ್ತಾರೆ. ಅವರು ಮೊದಲು ಎಡವುವುದೇ ಇಲ್ಲಿ. ಕ್ಲಾಸಿನಲ್ಲಿ ಸಿಗುವ ಪಾಠದ ರಸ ಟ್ಯೂಷನ್ ಕ್ಲಾಸ್‌ನಲ್ಲಿ ಸಿಗುತ್ತದೆ ಎಂದು ಹೇಳಲಾಗುವುದಿಲ್ಲ. ಕೆಲವರಿಗೆ ಟ್ಯೂಷನ್ ಎಂಬುದು ಒಂದು ಫ್ಯಾಷನ್, ಪ್ರತಿಷ್ಠೆಯ ವಿಷಯವಾಗಿರುತ್ತದೆ.
 
ನಾವು ಟ್ಯೂಷನ್ ಪಾಠದಿಂದಲೇ ಪರೀಕ್ಷೆ ಪಾಸು ಮಾಡುತ್ತೇವೆ. ಹಾಗಿರುವಾಗ ಕಾಲೇಜಿನಲ್ಲಿ ಆದಷ್ಟು ಮೋಜು ಅನುಭವಿಸೋಣ ಎಂಬ ಭಾವನೆ ಅವರಲ್ಲಿ ದಟ್ಟವಾಗಿರುವುದು ಅವರು ಪರೀಕ್ಷೆಯಲ್ಲಿ ಸೋಲಲು ಮುಖ್ಯ ಕಾರಣ. ಪರೀಕ್ಷೆಯಲ್ಲಿ ಗೆಲ್ಲುವ ಬಗ್ಗೆ ಅವರಲ್ಲಿ ಕಿಂಚಿತ್ ಸಂಶಯವೂ ಇರುವುದಿಲ್ಲ.

ಅತಿಯಾದ ಆತ್ಮವಿಶ್ವಾಸ ಹೊಂದಿರುತ್ತಾರೆ. ಒಂದೊಮ್ಮೆ ಶೇಕಡಾ1ರಷ್ಟಾದರೂ ಸಂಶಯ ಇದ್ದಿದ್ದರೆ ಅವರು ಇಷ್ಟು ಹುಡುಗಾಟಿಕೆ ತೋರಿಸುತ್ತಿರಲಿಲ್ಲ. ಅವರಿಗೆ ಸತ್ಯದರ್ಶನವಾಗುವುದು ಫಲಿತಾಂಶ ಬಂದ ಬಳಿಕವೇ. ನಪಾಸು ಎಂದಾಗ ಒಮ್ಮೆ ಎದೆ ಝಲ್ಲೆನ್ನುತ್ತದೆ.  ಶಿಕ್ಷಕರ ಮಾತು ನೆನಪಾಗುವುದೂ ಆಗಲೇ.  ಛೇ, ಶಿಕ್ಷಕರ ಮಾತಿಗೆ ಬೆಲೆ ಕೊಡದೆ ಸೋತೆವಲ್ಲಾ ಎಂದು ಕೈಕೈ ಹೊಸಕಿಕೊಳ್ಳುತ್ತಾರೆ.

 
ಅಲ್ಲಿ ಅನುತ್ತೀರ್ಣವಾದ ಬಳಿಕ ಅವರಲ್ಲಿ ದೊಡ್ಡ ಬದಲಾವಣೆ ಕಂಡು ಬರುತ್ತದೆ. ಹುಡುಗಾಟಿಕೆಗೆ ದೊಡ್ಡ ವಿರಾಮ ಹಾಕುತ್ತಾರೆ. ಮತ್ತೆ ಗಂಭೀರವಾಗಿ ಕಲಿಕೆಯತ್ತ ಗಮನ ಹರಿಸುತ್ತಾರೆ. ಎಲ್ಲರೂ ಆಶ್ಚರ್ಯ ಪಡುವ ರೀತಿಯಲ್ಲಿ ಪರೀಕ್ಷೆ ಪಾಸು ಮಾಡುತ್ತಾರೆ. ಹೀಗಿರುವಾಗ ಇವರು ದಡ್ಡರ ಸಾಲಿಗೆ ಸೇರುವುದು  ಹೇಗೆ ಸಾಧ್ಯ?

ಇನ್ನು ಕೆಲವರಿಗೆ ಮನೆಯಲ್ಲಿ ಕಲಿಕೆಗೆ ಪೂರಕವಾದ ವಾತಾವರಣ ಇರುವುದಿಲ್ಲ. ಮನೆಯವರ ಸಮಸ್ಯೆಯ ಗಾಳಿ ಇವರನ್ನೂ ಸೋಂಕದೆ ಬಿಡುವುದಿಲ್ಲ. ಮನೆಯಲ್ಲಿ ಅತಿಯಾಗಿ ದುಡಿಯಬೇಕಾದ ಅನಿವಾರ್ಯತೆ, ಅಗತ್ಯ ವಸ್ತುಗಳನ್ನು ಕೊಳ್ಳಲಾಗದ ಕಷ್ಟ, ಓದಿಗೆ ಸಿಗದ ಸಮಯ...ಈ ಎಲ್ಲಾ ಕಾರಣಗಳಿಂದಾಗಿ ಅವರು ಪರೀಕ್ಷೆಯಲ್ಲಿ ಗೆಲ್ಲುವುದು  ಸಾಧ್ಯವಾಗುವುದಿಲ್ಲ.
 
ಇಂಥವರನ್ನು ದಡ್ಡರ ಸಾಲಿಗೆ ಸೇರಿಸಿದರೆ ನಾವು ಅವರ ಮನಸ್ಸಿನೊಳಗೆ ಕೊರೆಯುತ್ತಿರುವ ನೋವನ್ನು ಹೆಚ್ಚಿಸಲು ಕಾರಣವಾದಂತಾಗುತ್ತದೆ.
ವಿಷಯದ ಆಯ್ಕೆ ಮತ್ತೊಂದು ಕಾರಣ. ಚಿಂತಕರು ಹೇಳುತ್ತಾರೆ - ಪ್ರತಿಯೊಂದು ಮಗುವೂ ಒಂದೊಂದು ವಿಷಯದಲ್ಲಿ ಹುಟ್ಟಿನಿಂದಲೇ ಪ್ರತಿಭಾನ್ವಿತವಾಗಿರುತ್ತದೆ.
 
ಆದರೆ ನಾವು ಆ ಪ್ರತಿಭೆಯನ್ನು ಗುರುತಿಸಲು, ಗೌರವಿಸಲು ವಿಫಲವಾಗುವುದೇ ಆ ಮಗುವಿನ ಸೋಲಿಗೆ ಮುಖ್ಯ ಕಾರಣ ಎಂದು. ಯಾರದ್ದೋ ಮನಸ್ಸಿನ ಆಸೆಯನ್ನು ಈಡೇರಿಸಿಕೊಡಲು ಮಕ್ಕಳಿಗೆ ಇಷ್ಟವಿಲ್ಲದ, ಆಸಕ್ತಿಯಿಲ್ಲದ ವಿಷಯವನ್ನು ಅವರ ಮೇಲೆ ಹೇರುವುದರಿಂದ ಅವರು ಪರೀಕ್ಷೆಯಲ್ಲಿ ಸೋಲುವಂತಾಗುತ್ತದೆ.

ಕೆಲವರಿಗೆ ಅವರು ಬಯಸಿದ ಕೋರ್ಸ್ ಸಿಗದ ಕಾರಣ ಅನಿವಾರ್ಯವಾಗಿ ಯಾವುದಾದರೂ ಒಂದು ಕೋರ್ಸ್‌ಗೆ  ಸೇರುತ್ತಾರೆ. ಇದರಿಂದಲೂ ಅವರು ಸೋಲುತ್ತಾರೆ. ಆದರೆ ಅವರು ಬೇರೆ ಎಲ್ಲ ವಿಷಯಗಳಲ್ಲೂ ಗೆದ್ದಿರುತ್ತಾರೆ. ಹಾಗಿರುವಾಗ ಅವರನ್ನು ದಡ್ಡರು ಎಂದು ಹೇಳುವುದು  ಸರಿಯಾದೀತೇ?

ಪ್ರೀತಿ-ಪ್ರೇಮ
ಇನ್ನು ಪ್ರೀತಿ-ಪ್ರೇಮದ ವಿಷಯ. ಇದು ಕಾಲೇಜು ಜೀವನದ ಒಂದು ಮುಖ್ಯ ದೌರ್ಬಲ್ಯ. ಕೌಮಾರಾವಸ್ಥೆಯಲ್ಲಿ ಅತಿಯಾಗಿರುವ ವಿರುದ್ಧ ಲಿಂಗಿ ಆಕರ್ಷಣೆಗೆ ಪ್ರೀತಿಯ ಮುಖವಾಡ ಹಚ್ಚಿ ಅದರ ಬೆನ್ನ ಹಿಂದೆ ಬೀಳುವುದರಿಂದ ಕಲಿಕೆಯಲ್ಲಿ  ಹಿಂದುಳಿಯುವವರೂ ಸಾಕಷ್ಟು ಮಂದಿ. ಕೆಲವರು ಮತ್ತಷ್ಟು ಮುಂದುವರಿದು ದುಶ್ಚಟಗಳಿಗೆ ಶರಣಾಗುತ್ತಾರೆ. ಮತ್ತೆ ಕೆಲವರು ಇನ್ನೂ ಒಂದು ಹೆಜ್ಜೆ ಮುಂದುವರಿದು ಆತ್ಮಹತ್ಯೆ ಮಾಡಿಕೊಳ್ಳುವುದೂ ಇದೆ.

ಹೈಸ್ಕೂಲ್, ಪಿಯುಸಿವರೆಗೆ ಅಷ್ಟು ಬುದ್ಧಿವಂತನಾಗಿದ್ದ. ಒಮ್ಮೆಲೇ ನಪಾಸಾಗುವಷ್ಟು ಕೆಳಕ್ಕಿಳಿದದ್ದು ಹೇಗೆ ಎಂದು ಕೆಲವರು ಕೇಳುವುದುಂಟು. ಅದಕ್ಕೆ ಕಾರಣ ಇಂಥ ಪ್ರಣಯ ವ್ಯವಹಾರಗಳೇ. ಇದರ ಬಗ್ಗೆ ಮನೆಯವರು ಜಾಗೃತಿ ವಹಿಸದಿದ್ದರೆ ಅಪಾಯದ ಪ್ರಮಾಣ ಹೆಚ್ಚಾಗಿರುತ್ತದೆ.

ಹೀಗೆ ಬೇರೆ ಬೇರೆ ಕಾರಣಗಳಿಂದಾಗಿ ಪರೀಕ್ಷೆಯಲ್ಲಿ ನಪಾಸಾಗುವವರನ್ನೆಲ್ಲ ಹೆಡ್ಡರ ಸಾಲಿಗೆ ಸೇರಿಸಬೇಡಿ. ಅವರು ನಪಾಸಾಗಲು ಕಾರಣ ಏನು ಎಂಬುದನ್ನು ಪತ್ತೆ ಹಚ್ಚಬೇಕು. ಆ ಕಾರಣವನ್ನು ದುರ್ಬಲಗೊಳಿಸಬೇಕು.
 
ಅದರ ಸಹವಾಸದಿಂದ ನಮ್ಮ ಮಕ್ಕಳನ್ನು ದೂರವಿಡೋಣ. ಪ್ರತಿಯೊಂದು ಮಗುವನ್ನೂ ಮಹಾನ್  ಬುದ್ಧಿವಂತರಾಗಿಸೋಣ. ಭವಿಷ್ಯದ ಭಾರತಕ್ಕೆ ಇದರ ಅಗತ್ಯ ತುಂಬಾ ಇದೆ. ಮಕ್ಕಳೂ ಇದನ್ನು ತಿಳಿದಿರಬೇಕಾಗಿದೆ. ಜಾರಿ ಬೀಳದಂತೆ ಜಾಗರೂಕರಾಗಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT