ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇವರಿಟ್ ಮೇಲೆ ಹೆಚ್ಚಿನ ಒತ್ತಡ: ಕ್ಯಾಲಿಸ್

Last Updated 22 ಫೆಬ್ರುವರಿ 2011, 18:50 IST
ಅಕ್ಷರ ಗಾತ್ರ

ನವದೆಹಲಿ: “ಭಾರತ ತಂಡ ಈ ವಿಶ್ವ ಕಪ್ ಗೆಲ್ಲುತ್ತದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಆ ತಂಡವೇ ನಂ-1 ಫೇವರಿಟ್ ಎಂಬ ಅಭಿಪ್ರಾಯ ಇದೆ. ಆದರೆ ಸ್ವದೇಶದ ಜನರ ಬೆಂಬಲವೇ ತಂಡದ ಮೇಲೆ ಒತ್ತಡ ಹೇರುತ್ತದೆ. ಜನರ ನಿರೀಕ್ಷೆಗಳಿಗೆ ತಕ್ಕಂತೆ ಆಡುವುದು ಕಷ್ಟ. ನಾಕ್‌ಔಟ್ ಹಂತದಲ್ಲಿ ಏನೂ ಆಗಬಹುದು. ಪೈಪೋಟಿ ಜೋರಾಗಿದೆ” ಎಂದು ದಕ್ಷಿಣ ಆಫ್ರಿಕ ತಂಡದ ಅಗ್ರಮಾನ್ಯ ಆಲ್‌ರೌಂಡರ್ ಜ್ಯಾಕ್ ಕ್ಯಾಲಿಸ್ ಅಭಿಪ್ರಾಯಪಟ್ಟರು.

ಮಂಗಳವಾರ ಮಧ್ಯಾಹ್ನ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಪತ್ರಕರ್ತರೊಡನೆ ಮಾತನಾಡಿದ ಅವರು, ‘ದಕ್ಷಿಣ ಆಫ್ರಿಕ ಈ ಸಲ ಎಲ್ಲೂ ಮುಗ್ಗರಿಸುವುದಿಲ್ಲ’ ಎಂದೂ ಹೇಳಿದರು. ದಕ್ಷಿಣ ಆಫ್ರಿಕ ಗುರುವಾರ ‘ಬಿ’ ಗುಂಪಿನ ಲೀಗ್‌ನ ತನ್ನ ಮೊದಲ ಪಂದ್ಯದಲ್ಲಿ ವೆಸ್ಟ್‌ಇಂಡೀಸ್ ತಂಡವನ್ನು ಎದುರಿಲಿದೆ.

“ಫೇವರಿಟ್ ಎಂಬ ಹಣೆಪಟ್ಟಿ ಒಮ್ಮೊಮ್ಮೆ ಉಲ್ಟಾ ಹೊಡೆಯುತ್ತದೆ. ಅದು ಆಟಗಾರರ ಮೇಲೆ ವಿಪರೀತ ಒತ್ತಡ ಹೇರಬಹುದು. ಆದರೆ ಒಮ್ಮೊಮ್ಮೆ ಇದು ವಿಶ್ವಾಸವನ್ನೂ ಹೆಚ್ಚಿಸಬಹುದು. 2003 ರಲ್ಲಿ ದಕ್ಷಿಣ ಆಫ್ರಿಕದಲ್ಲಿ ವಿಶ್ವ ಕಪ್ ಟೂರ್ನಿ ನಡೆದಾಗ ನಮ್ಮ ತಂಡವೂ ಗೆಲ್ಲುತ್ತದೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ನಾವು ಗೆಲ್ಲಲಿಲ್ಲ. ಈಗ ವಿಶ್ವ ಕಪ್ ಇನ್ನೂ ದೊಡ್ಡದಾಗಿದೆ. ನಮಗೆ ಫೈನಲ್ ವರೆಗೆ ಹೋಗುವ ವಿಶ್ವಾಸ ಇದೆ’ ಎಂದೂ ಅವರು ನುಡಿದರು.

“ವೆಸ್ಟ್‌ಇಂಡೀಸ್ ತಂಡವನ್ನು ಸುಲಭವಾಗಿ ಪರಿಗಣಿಸುವಂತಿಲ್ಲ. ಆ ತಂಡದಲ್ಲಿ ಉತ್ತಮ ಆಟಗಾರರಿದ್ದಾರೆ. ಗುರುವಾರದ ಪಂದ್ಯದಲ್ಲಿ ಉತ್ತಮ ಹೋರಾಟ ಕಂಡುಬರಲಿದೆ. ನಮ್ಮ ತಂಡದಲ್ಲಿ ಬಹಳಷ್ಟು ಮಂದಿ ಆಟಗಾರರು ಮೊದಲ ಬಾರಿಗೆ ವಿಶ್ವ ಕಪ್‌ನಲ್ಲಿ ಆಡುತ್ತಿದ್ದಾರೆ. ಚೆನ್ನಾಗಿ ಆಡಬೇಕೆಂಬ ಉತ್ಸಾಹ ಅವರಲ್ಲಿದೆ. ಅಲ್ಲದೇ ಉತ್ತಮ ಸ್ಪಿನ್ನರುಗಳೂ ತಂಡದಲ್ಲಿದ್ದಾರೆ.

ಲೆಗ್‌ಸ್ಪಿನ್ನರ್ ಇಮ್ರಾನ್ ತಾಹಿರ್ ಅವರಿಂದ ನಮ್ಮ ಸ್ಪಿನ್ ದಾಳಿಗೆ ಬಲ ಬಂದಿದೆ. ನಮ್ಮ ವೇಗದ ದಾಳಿಯಂತೂ ಅತ್ಯುತ್ತಮವಾಗಿದೆ. ನಾವು ಪೂರ್ಣ ತಯಾರಿಯೊಂದಿಗೇ ಬಂದಿದ್ದೇವೆ” ಎಂದು ಅವರು ವಿಶ್ವಾಸದಿಂದ ಹೇಳಿದರು.

“ಫಿರೋಜ್ ಷಾ ಕೋಟ್ಲಾದ ಪಿಚ್ ಮೊದಲಿನಂತೆ ಇರಲಿಕ್ಕಿಲ್ಲ. ಆದರೂ ಇದು 350 ರನ್ ಹೊಡೆಯಬಹುದಾದ ಪಿಚ್‌ನಂತೆ ಕಾಣುವುದಿಲ್ಲ” ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT