ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್ : ಸಂತೆಯಲ್ಲಿ ಕಂಡ ಮುಖಗಳು

Last Updated 11 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ದೇಶ ಸುತ್ತು ಕೋಶ ಓದು ಎನ್ನುವ ಮಾತಿದೆ. ಮಾಹಿತಿ ತಂತ್ರಜ್ಞಾನ ಪ್ರಭೆಯ ಸಂದರ್ಭದಲ್ಲಿ- `ಫೇಸ್‌ಬುಕ್ ತಿರುವಿಹಾಕು~ ಎನ್ನುವುದನ್ನು ಹಳೆಯ ಮಾತಿಗೆ ಹೊಸತಾಗಿ ಸೇರಿಸಬಹುದು. ಫೇಸ್‌ಬುಕ್ ಎನ್ನುವುದೀಗ ಒಂದು ಜಾಲತಾಣವಾಗಿಯಷ್ಟೇ ಉಳಿದಿಲ್ಲ; ಅದು ಸಮಕಾಲೀನ ಸಮಾಜದ ಕನ್ನಡಿ.
 
ಮುಖ ಮನಸ್ಸಿನ ಪ್ರತಿಬಿಂಬ ಆಗಿರುವಂತೆಯೇ, ಫೇಸ್‌ಬುಕ್ ವ್ಯಕ್ತಿತ್ವದ ಪ್ರತಿಬಿಂಬ ಎನ್ನುವಂತಾಗಿದೆ.ಅಂಕಿಅಂಶಗಳನ್ನೊಮ್ಮೆ ನೋಡಿ. ಹೆಚ್ಚೂಕಡಿಮೆ ವಿಶ್ವದ 70ಕೋಟಿ ಜನ (ವಿಶ್ವದ ಜನಸಂಖ್ಯೆಯಲ್ಲಿ ಅಂದಾಜು ಶೇ.10ರಷ್ಟು ಮಂದಿ) ಫೇಸ್‌ಬುಕ್ ಬಳಕೆದಾರರ ಪಟ್ಟಿಯಲ್ಲಿದ್ದಾರೆ. ಪುರುಷರಿಗೆ ಸರಿಸಮವಾಗಿ, ಕೆಲವೊಮ್ಮೆ ಪುರುಷರಿಗಿಂತಲೂ ಹೆಚ್ಚಾಗಿ ಮಹಿಳೆಯರು ಫೇಸ್‌ಬುಕ್ ಬರೆಯುತ್ತಿದ್ದಾರೆ.
 
ಹೊಸ ತಲೆಮಾರಿನ ನಡುವೆ ಬ್ಯಾಂಕ್ ಖಾತೆಗಿಂತಲೂ ಫೇಸ್‌ಬುಕ್ ಖಾತೆಯೇ ಹೆಚ್ಚು ಜನಪ್ರಿಯವಾಗಿದೆ. ಯುರೋಪ್ ದೇಶಗಳ ಮಾತಿರಲಿ, ಭಾರತದಲ್ಲೇ ನಾಲ್ಕು ಕೋಟಿಗೂ ಹೆಚ್ಚು ಜನ ಫೇಸ್‌ಬುಕ್ ಬಳಕೆದಾರರಿದ್ದಾರೆ. `ಮನುಷ್ಯ ಜಾತಿ ತಾನೊಂದೆ ವಲಂ~ ಎನ್ನುವ ಮಾತು ಫೇಸ್‌ಬುಕ್‌ನಲ್ಲಾದರೂ ಕೊಂಚಮಟ್ಟಿಗೆ ನಿಜವಾಗಿದೆ.

ಫೇಸ್‌ಬುಕ್‌ನ ಜನಪ್ರಿಯತೆಗೆ ಅದರಲ್ಲಿನ ಸಂವಹನದ ಅನುಕೂಲಗಳೇ ಮುಖ್ಯ ಕಾರಣವಾಗಿದೆ. ಬಳಕೆದಾರರು ತಮ್ಮ ಹೆಸರಿನಲ್ಲೊಂದು ಪುಟ ರಚಿಸಲು, ಅದರ ಮೂಲಕ ಗೆಳೆಯರೊಂದಿಗೆ ತಮ್ಮ ವಿಚಾರಗಳನ್ನು ಹಂಚಿಕೊಳ್ಳಲು ಫೇಸ್‌ಬುಕ್ ಅವಕಾಶ ಕಲ್ಪಿಸುತ್ತದೆ. ಸಮಾನ ಆಸಕ್ತರ ಸಂವಹನಕ್ಕೂ, ಹೊಸ ಗೆಳೆಯರ ಸಂಪಾದನೆಗೂ ಅದು ವೇದಿಕೆಯಾಗಿದೆ. ಶಾಲಾಕಾಲೇಜು, ಸಂಘ ಸಂಸ್ಥೆಗಳ ಚಟುವಟಿಕೆಗಳಿಗೆ ನೋಟಿಸ್ ಬೋರ್ಡ್‌ನಂತೆ ಬಳಕೆಯಾಗುತ್ತದೆ.
 
ಉಡುಗೊರೆಗಳನ್ನು ಕಳುಹಿಸಲಿಕ್ಕೆ, ಹರಟೆ ಹೊಡೆಯಲಿಕ್ಕೆ ಇಲ್ಲಿ ಅವಕಾಶವಿದೆ. ಒಟ್ಟಾರೆ ಸಾರಾಂಶ ಇಷ್ಟೇ- ವ್ಯಕ್ತಿಯೊಬ್ಬ ತನ್ನ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲಿಕ್ಕೆ `ಫೇಸ್‌ಬುಕ್~ ಒಂದು ಅಂತರರಾಷ್ಟ್ರೀಯ ವೇದಿಕೆಯಾಗಿದೆ. ಫೇಸ್‌ಬುಕ್ ಪ್ರವೇಶಿಸುವ ಮೂಲಕ, `ತಾನು ಇದ್ದಕ್ಕಿದ್ದಂತೆ ಜಾಗತಿಕ ವ್ಯಕ್ತಿಯಾಗಿಬಿಟ್ಟೆ~ ಎಂದು ನಮ್ಮನ್ನು ನಂಬಿಸುವ ಅದು ಮನುಷ್ಯರ ಭಾವನೆಗಳನ್ನೇ ಬಂಡವಾಳ ಆಗಿಸಿಕೊಂಡಿರುವ ಒಂದು ಸಾಮಾಜಿಕ ಜಾಲತಾಣ.

ಅಂದಹಾಗೆ, ಫೇಸ್‌ಬುಕ್‌ನ ಈ ದೈತ್ಯ ಬೆಳವಣಿಗೆ ಕೇವಲ ಎಂಟು ವರ್ಷಗಳಲ್ಲಿ ಸಾಧ್ಯವಾಗಿದೆ ಎನ್ನುವುದು ಒಂದು ಪವಾಡದಂತೆ ಕಾಣಿಸುತ್ತದೆ. 2004ರ ಫೆಬ್ರುವರಿಯಲ್ಲಿ ಫೇಸ್‌ಬುಕ್ ಆರಂಭಗೊಂಡಾಗ, ಮುಂದೊಂದು ದಿನ ಅದು ಈ ಮಟ್ಟಿಗೆ ವಿಶ್ವವ್ಯಾಪಿಯಾಗಬಹುದು ಎನ್ನುವ ಕಲ್ಪನೆ ಬೇರೆಯವರಿಗಿರಲಿ, ಅದರ ಸ್ಥಾಪಕರಿಗೂ ಇರಲಿಲ್ಲ.

ಮಾರ್ಕ್ ಜುಕರ್‌ಬರ್ಗ್ ಫೇಸ್‌ಬುಕ್ ಜನಕ. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್‌ಸೈನ್ಸ್ ಜೊತೆ ಮನಃಶಾಸ್ತ್ರವನ್ನೂ ಕಲಿಯುತ್ತಿದ್ದ ಕಾಲದಲ್ಲಿ ಜುಕರ್‌ಬರ್ಗ್‌ಗೆ, ಕಂಪ್ಯೂಟರ್ ವ್ಯೋಮ ಹಾಗೂ ಮನುಷ್ಯನ ಮನಸ್ಸಿನ ನಡುವೆ ಯಾವುದೋ ಸಾಮ್ಯತೆ ಹೊಳೆದಿರಬೇಕು. ಆತ ತನ್ನ ಕೆಲವು ಸಹವರ್ತಿಗಳ ನೆರವಿನೊಂದಿಗೆ ಫೇಸ್‌ಬುಕ್‌ಗೆ ಮುನ್ನುಡಿಯ ರೂಪದಲ್ಲಿ 2003ರ ಅಕ್ಟೋಬರ್ 28ರಂದು ಫೇಸ್‌ಮ್ಯಾಶ್ ಎನ್ನುವ ಜಾಲತಾಣ ರೂಪಿಸಿದ್ದ.
 
ಹಾರ್ವರ್ಡ್‌ನ ವಿದ್ಯಾರ್ಥಿಗಳ ದೈನಿಕ `ಹಾರ್ವರ್ಡ್ ಕ್ರಿಮ್ಸನ್~ನ ಪ್ರಕಾರ- ಫೇಸ್‌ಮ್ಯಾಶ್ ಕೆಲವು ಛಾಯಾಚಿತ್ರಗಳನ್ನು ಒಂದರ ಪಕ್ಕ ಇನ್ನೊಂದನ್ನು ಇರಿಸಿ, ಇವುಗಳಲ್ಲಿ ಯಾರದು ಹೆಚ್ಚು `ಪ್ರಖರ ವ್ಯಕ್ತಿತ್ವ~ ಎನ್ನುವುದನ್ನು ಆಯ್ಕೆ ಮಾಡುವ ಅವಕಾಶ ಕಲ್ಪಿಸುತ್ತಿತ್ತು. ಹಾರ್ವರ್ಡ್ ಕಂಪ್ಯೂಟರ್ ಜಾಲದ ಸಂರಕ್ಷಿತ ಪ್ರದೇಶದಿಂದ ಜುಕರ್‌ಬರ್ಗ್ ನೂರಾರು ಫೋಟೊ-ವಿವರಗಳನ್ನು ನಕಲು ಮಾಡಿಕೊಂಡಿದ್ದ.
 
ಸ್ವಲ್ಪ ದಿನಗಳಲ್ಲೇ, ಹಕ್ಕುಸ್ವಾಮ್ಯದ ಹಾಗೂ ಸಂರಕ್ಷಿತ ಪ್ರದೇಶದ ಉಲ್ಲಂಘನೆ ಆರೋಪಗಳನ್ನು ಜುಕರ್‌ಬರ್ಗ್ ಎದುರಿಸಬೇಕಾಯಿತು. ಆದರೆ, ಈ ಆರೋಪಗಳನ್ನು ವಿವಿ ವಾಪಸ್ ಪಡೆಯಿತು.ಜುಕರ್‌ಬರ್ಗ್ ರೂಪಿಸಿದ ಜಾಲತಾಣ ಆರಂಭದಲ್ಲಿ ಹಾರ್ವರ್ಡ್‌ನ ವಿದ್ಯಾರ್ಥಿಗಳಿಗಷ್ಟೇ ಸೀಮಿತವಾಗಿತ್ತು. ಕೆಲವೇ ದಿನಗಳಲ್ಲಿ ಬೋಸ್ಟನ್ ಪ್ರದೇಶದ ಇತರ ಕಾಲೇಜುಗಳಿಗೂ ವಿಸ್ತರಣೆಗೊಂಡಿತು.

ದಿಡ್ಡಿಬಾಗಿಲು ಒಮ್ಮೆ ತೆರೆದಿದ್ದೇ ತಡ, ಕಾಲೇಜುಗಳು - ವಿಶ್ವವಿದ್ಯಾಲಯಗಳು ಅದರ  ತೆಕ್ಕೆಗೆ ಸೇರುತ್ತಲೇ ಹೋದವು. ಫೇಸ್‌ಮ್ಯಾಶ್‌ನ ಮುಂದಿನ ಭಾಗವಾಗಿ, ಜುಕರ್‌ಬರ್ಗ್ ಹಾಗೂ ಗೆಳೆಯರು ಹಾರ್ವರ್ಡ್‌ನ ವಿಶ್ರಾಂತಿ ಕೋಣೆಯಲ್ಲಿ ಕೂತೇ ಫೇಸ್‌ಬುಕ್ ರೂಪಿಸಿದರು. 2004ರ ಫೆಬ್ರುವರಿ 4ರಂದು ಫೇಸ್‌ಬುಕ್ ಅಧಿಕೃತವಾಗಿ ಅನಾವರಣಗೊಂಡಿತು.
 
ಅದಾದ ನಾಲ್ಕು ತಿಂಗಳಿಗೇ ಫೇಸ್‌ಬುಕ್ ಬಳಗ ಕ್ಯಾಲಿಫೋರ್ನಿಯಾದಿಂದ ತನ್ನ ಕಾರ್ಯ ನಿರ್ವಹಣೆ ಪ್ರಾರಂಭಿಸಿತು. `ಪೇಪಾಲ್~ನ ಸಹ ಸಂಸ್ಥಾಪಕ ಪೀಟರ್ ಥೇಲ್ ಬಂಡವಾಳ ತೊಡಗಿಸಿದರು. 2005ರ ಸೆಪ್ಟೆಂಬರ್‌ನಲ್ಲಿ ಫೇಸ್‌ಬುಕ್ ಪ್ರೌಢಶಾಲೆ ಆವೃತ್ತಿಯನ್ನು ಆರಂಭಿಸಿತು. ಆಪಲ್ - ಮೈಕ್ರೊಸಾಫ್ಟ್ ಸೇರಿದಂತೆ ವಿವಿಧ ಕಂಪನಿಗಳ ನೌಕರರಿಗೂ ತನ್ನ ಬಾಗಿಲು ತೆರೆಯಿತು. 2007ರ ಅಕ್ಟೋಬರ್‌ನಲ್ಲಿ, 24 ಕೋಟಿ ಡಾಲರ್‌ಗಳನ್ನು ತೊಡಗಿಸುವ ಮೂಲಕ ಫೇಸ್‌ಬುಕ್‌ನ 1.6% ಷೇರುಗಳನ್ನು ಮೈಕ್ರೊಸಾಫ್ಟ್ ತನ್ನದಾಗಿಸಿಕೊಂಡಿತು.
 
ಹೀಗೆ ತನ್ನ ಕವಲುಗಳನ್ನು ಮತ್ತು ಸಂಪತ್ತನ್ನು ಹೆಚ್ಚಿಸಿಕೊಳ್ಳುತ್ತಾ ಹೋದ ಫೇಸ್‌ಬುಕ್, 2010ರ ವೇಳೆಗೆ ತನ್ನ ಮೌಲ್ಯವನ್ನು 41 ಶತಕೋಟಿ ಡಾಲರ್‌ಗಳಿಗೆ ಹೆಚ್ಚಿಸಿಕೊಂಡಿತು. ಇದರೊಂದಿಗೆ, ಗೂಗಲ್ ಮತ್ತು ಅಮೆಜಾನ್‌ಗಳ ನಂತರ ಅಮೆರಿಕಾದ ಮೂರನೇ ಅತಿದೊಡ್ಡ ವೆಬ್ ಕಂಪನಿ ಎನ್ನುವ ಹೆಗ್ಗಳಿಕೆ ಅದರದಾಯಿತು.

ಈ ಎಲ್ಲ ಯಶಸ್ಸಿನ ಕಾರಣದಿಂದಾಗಿ, ಫೇಸ್‌ಬುಕ್‌ನ ಜುಕರ್‌ಬರ್ಗ್ ವಿಶ್ವದ ಅತಿ ಕಿರಿಯ ಬಿಲಿಯನೇರ್‌ಗಳಲ್ಲಿ ಒಬ್ಬರಾಗಿ ರೂಪುಗೊಂಡರು. 2011ರ ಲೆಕ್ಕಾಚಾರದ ಪ್ರಕಾರ ಆತನ ಒಟ್ಟು ಸಂಪಾದನೆಯ ಅಂದಾಜು ಮೌಲ್ಯ 17.5 ಶತಕೋಟಿ ಡಾಲರ್‌ಗಳಾಗಿತ್ತು.
2009ರ ನಂತರ ಫೇಸ್‌ಬುಕ್‌ಗೆ ಭೇಟಿಕೊಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ.

ಗೂಗಲ್‌ಗಿಂತಲೂ ಫೇಸ್‌ಬುಕ್‌ಗೆ ಭೇಟಿಕೊಡುವವರೇ ಹೆಚ್ಚಾಗಿರುವ ದಿನಗಳೂ ಸಾಕಷ್ಟಿವೆ. ಜೂನ್ 2011ರ ವೇಳೆಗೆ ಫೇಸ್‌ಬುಕ್‌ನ ಸಂದರ್ಶಿತ ಪುಟಗಳ ಸಂಖ್ಯೆ ಒಂದು ಲಕ್ಷ ಕೋಟಿ (ಒಂದು ಟ್ರಿಲಿಯನ್) ಮುಟ್ಟುವುದರೊಂದಿಗೆ, ಅದು ವಿಶ್ವದಲ್ಲಿ ಅತಿ ಹೆಚ್ಚು ಜನ ಭೇಟಿಕೊಟ್ಟ ವೆಬ್‌ಸೈಟ್ ಎನ್ನಿಸಿಕೊಂಡಿತು. ಹದಿನೈದು ದೇಶಗಳಲ್ಲಿ ತನ್ನ ಕಚೇರಿಗಳನ್ನು ಹೊಂದಿರುವ ಫೇಸ್‌ಬುಕ್ ವಿಶ್ವದ ಅನೇಕ ದೇಶಗಳಲ್ಲಿ ತನ್ನ ಛಾಪು ಮೂಡಿಸಿದೆ.
 
ಅಮೆರಿಕದ ಪ್ರತಿಶತ ನಲವತ್ತೆರಡು ಜನ ಫೇಸ್‌ಬುಕ್‌ನೊಂದಿಗೆ ತಮ್ಮನ್ನು ಗುರ್ತಿಸಿಕೊಂಡಿದ್ದಾರೆ. ಹದಿಮೂರು ವರ್ಷದ ಒಳಗಿನವರಿಗೆ ಫೇಸ್‌ಬುಕ್‌ನಲ್ಲಿ ನಿರ್ಬಂಧವಿದೆ. ಆದರೆ ಜಾಲತಾಣದಲ್ಲಿ ಯಾವುದು ತಾನೆ ನಿಷಿದ್ಧ?
ಫೇಸ್‌ಬುಕ್ ತನ್ನ ಬೆಳವಣಿಗೆಯ ಹಾದಿಯಲ್ಲಿ ಅನೇಕ ಕಂಪೆನಿಗಳನ್ನು ಅರಗಿಸಿಕೊಂಡಿದೆ. 85 ಲಕ್ಷ ಡಾಲರ್ ತೆತ್ತು ಎಫ್‌ಬಿ.ಕಾಂ ಎನ್ನುವ ಡೊಮೈನ್ ನೇಮ್ ತನ್ನದಾಗಿಸಿಕೊಂಡಿದ್ದು, ಡೊಮೈನ್‌ಗಳ ಖರೀದಿಗೆ ಸಂಬಂಧಿಸಿದಂತೆ ಒಂದು ದಾಖಲೆ. ಬಳಕೆದಾರರಿಗೆ ಉಚಿತ ಸೇವೆ ಒದಗಿಸುತ್ತಿದ್ದರೂ, ಜಾಹೀರಾತುಗಳ ಮೂಲಕವೇ ಫೇಸ್‌ಬುಕ್‌ನ ಬಹು ದೊಡ್ಡ ಆದಾಯ ಪಡೆಯುತ್ತದೆ.

ತಂತ್ರಜ್ಞಾನದ ಪ್ರವಾಹದಲ್ಲಿ ತನ್ನನ್ನು ತಾನು ನವೀಕರಿಸಿಕೊಳ್ಳುತ್ತಿರುವುದು ಕೂಡ ಫೇಸ್‌ಬುಕ್‌ನ ಯಶಸ್ಸಿಗೆ ಕಾರಣವಾಗಿದೆ. 2008ರಲ್ಲಿ ಐಫೋನ್ ಮತ್ತು ಐಪಾಡ್‌ಗಳಿಗಾಗಿ ರೂಪಿಸಿದ, `ಫೇಸ್‌ಬುಕ್ ಫಾರ್ ಐಫೋನ್~ ಎನ್ನುವ ಉಚಿತ ಅಪ್ಲಿಕೇಷನ್ ಇದಕ್ಕೆ ಉದಾಹರಣೆ.

ಬಳಕೆದಾರರು ತಮ್ಮ ಅಗತ್ಯಾನುಸಾರ ವಿವರಗಳ ಗೋಪ್ಯತೆ ಕಾಪಾಡಿಕೊಳ್ಳಲು ಫೇಸ್‌ಬುಕ್ ಅವಕಾಶ ಕಲ್ಪಿಸಿದೆ. ಅದರ ಜನಪ್ರಿಯತೆಯ ಕಾರಣಗಳಲ್ಲಿ ಒಂದು- ಹೆಚ್ಚು ಫೋಟೊ ಆಲ್ಬಂಗಳನ್ನು ರೂಪಿಸಲು ಅವಕಾಶ ಕಲ್ಪಿಸಿರುವುದು ಹಾಗೂ ಬಳಕೆದಾರರ ಸ್ನೇಹಿಯಾಗಿರುವುದು. ಇಂಗ್ಲಿಷ್ ಮಾತ್ರವಲ್ಲದೆ ಪ್ರಾದೇಶಿಕ ಭಾಷೆಗಳಲ್ಲೂ ಫೇಸ್‌ಬುಕ್ ಸಂವಹನಕ್ಕೆ ಅವಕಾಶ ಕಲ್ಪಿಸಿದೆ.
 
ಅಲ್ಲಿನ `ಗೋಡೆ~ಯ (ವಾಲ್) ಮೇಲೆ ಬಳಕೆದಾರರು ತಮ್ಮ ಚಟುವಟಿಕೆಗಳನ್ನು ಸಚಿತ್ರವಾಗಿ ದಾಖಲಿಸಲು ಅವಕಾಶವಿದೆ. ಆಧುನಿಕ ಜಾನಪದವೊಂದರ ಸೃಷ್ಟಿಗೆ ಕಾರಣವಾಗಿರುವ ಫೇಸ್‌ಬುಕ್‌ನ ಮೋಟುಗೋಡೆಯ ಮೇಲೆ ಬಳಕೆದಾರರ ಖುಷಿ, ಖೇದ, ಏಳುಬೀಳು, ತಿಕ್ಕಲುತನ, ಎಲ್ಲವಕ್ಕೂ ಸ್ಥಾನವಿದೆ. ಈ ಮೋಟುಗೋಡೆಯ ಬೀಸು ಎಷ್ಟರಮಟ್ಟಿಗಿದೆಯೆಂದರೆ, ಫೇಸ್‌ಬುಕ್‌ನಲ್ಲಿ ಇಲ್ಲದವರ ಬಗ್ಗೆ ಕೂಡ ಅಲ್ಲಿ ವಿವರಗಳಿರುತ್ತವೆ.

ಫೇಸ್‌ಬುಕ್‌ನ ಜನಪ್ರಿಯತೆ ಎಷ್ಟರಮಟ್ಟಿಗಿದೆಯೆಂದರೆ, ನ್ಯಾಯಾಲಯದ ನೋಟಿಸ್‌ಗಳನ್ನು ತಲುಪಿಸಲು ಫೇಸ್‌ಬುಕ್ ಸಮರ್ಪಕ ಸಾಧನ ಎಂದು 2008ರಲ್ಲಿ ಆಸ್ಟ್ರೇಲಿಯಾದ ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿತ್ತು.

ಜನಪ್ರಿಯತೆಯ ಜೊತೆಜೊತೆಗೆ ವಿವಾದಗಳೂ ಫೇಸ್‌ಬುಕ್‌ಗೆ ತಗುಲಿಹಾಕಿಕೊಂಡಿವೆ. ಖಾಸಗಿತನದ ಕಳ್ಳನೋಟ, ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶದಂತಹ ಆರೋಪಗಳನ್ನು ಫೇಸ್‌ಬುಕ್ ಎದುರಿಸಬೇಕಾಗಿದೆ. ಫೇಸ್‌ಬುಕ್ ಮೂಲಕ `ಸೋಡಾಚೀಟಿ~ಗಳು ವಿನಿಮಯಗೊಳ್ಳುತ್ತಿವೆ ಎನ್ನುವ ಮಾತೂ ಇದೆ. ಬೇರೆ ಬೇರೆ ಕಾರಣಗಳನ್ನು ನೀಡಿ, ಚೀನಾ, ಇರಾನ್, ಪಾಕಿಸ್ತಾನ ಸೇರಿದಂತೆ ಕೆಲವು ದೇಶಗಳು ಫೇಸ್‌ಬುಕ್‌ಗೆ ನಿಷೇಧ ಹೇರಿವೆ. ಕೆಲಸದ ಅವಧಿಯಲ್ಲಿ ಬಳಸದಂತೆ ಕೆಲವು ಕಾರ್ಪೊರೇಟ್ ಕಂಪೆನಿಗಳು ನೀತಿಸಂಹಿತೆ ರೂಪಿಸಿವೆ.


ಅನೇಕ ಮಂದಿಯ ಪಾಲಿಗೆ ಫೇಸ್‌ಬುಕ್ ಎನ್ನುವುದು ತಮ್ಮ ಅಂತರಾಳವನ್ನು ತೋಡಿಕೊಳ್ಳುವ ಅಭಿವ್ಯಕ್ತಿಯ ಮಾಧ್ಯಮವಾಗಿದೆ. ವ್ಯಕ್ತಿಗಳ ಕೀಳರಿಮೆಯನ್ನು ಮೀರಲಿಕ್ಕೆ ಸಾಧ್ಯವಾಗಿರುವ ಈ ಜಾಲತಾಣ, ಸುಪ್ತ ಮನಸ್ಸಿನ ವಿಕೃತಿಗಳ ಪ್ರದರ್ಶನಕ್ಕೂ ವೇದಿಕೆಯಾಗಿದೆ. ಪ್ರತಿರೋಧಗಳ ನಡುವೆಯೂ ಫೇಸ್‌ಬುಕ್ ಜಗತ್ತು ಹೆಚ್ಚುತ್ತಿರುವುದು ಗಮನಾರ್ಹ. ಸಂತೆಯಲ್ಲಿನ ಮುಖಗಳು ಹೆಚ್ಚಾಗಿರುವುದರ ಜೊತೆಗೆ, ಸಂತೆಯ ಪರಿಕಲ್ಪನೆಯೂ ಬದಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT