ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್‌ನ ಇನ್ನೊಂದು ಮುಖ!

Last Updated 3 ಜುಲೈ 2012, 19:30 IST
ಅಕ್ಷರ ಗಾತ್ರ

ಸಾಮಾಜಿಕ ತಾಣಗಳಿಗೆ ಸದಸ್ಯರಾಗುವುದು ಎಂದರೆ `ಸಂತೆಯಲ್ಲಿ ಬಟ್ಟೆ ಬಿಚ್ಚಿ ನಿಂತಂತೆ~ ಎಂಬ ಮಾತಿದೆ. ಖಾಸಗಿ-ವೈಯಕ್ತಿಕ ಮಾಹಿತಿ ನಡುವಿನ ವ್ಯತ್ಯಾಸವೇ ಇಲ್ಲದೆ ಎಲ್ಲವನ್ನೂ ಇಂತಹ ತಾಣಗಳ ಗೋಡೆಗಳ (wall post) ಮೇಲೆ ಬರೆದು ಜಗಜ್ಜಾಹೀರುಗೊಳಿಸಿದರೆ ಅದರಿಂದ ಅಪಾಯ ಕಟ್ಟಿಟ್ಟ ಬುತ್ತಿ.

`ನಿಮ್ಮ ಬಾಸ್ ವಿರುದ್ಧ ನಿಮಗೆ ದ್ವೇಷ ಇದೆಯೇ? ಮಾದಕ ವಸ್ತುಗಳನ್ನು ತೆಗೆದುಕೊಳ್ಳುವ ಚಟ ಇದೆಯೇ? ನಿಮ್ಮ ಹೆಂಡತಿ ಮೇಲೆ ನಿಮಗೆ ತೀವ್ರ ಅಸಹನೆ ಇದೆಯೇ? ಹೀಗೆ ನಿಮಗೆ ನೂರೆಂಟು ಸಮಸ್ಯೆಗಳಿದ್ದರೂ ಅವನ್ನೆಲ್ಲ ಫೇಸ್‌ಬುಕ್‌ನ ವಾಲ್ ಮೇಲೆ ಮಾತ್ರ ದಯವಿಟ್ಟು ಬರೆಯಲೇಬೇಡಿ.

ಮೈ ಮೇಲೆ ಎಚ್ಚರವಿಲ್ಲದಂತೆ ಹೀಗೆ ಮಾಹಿತಿಗಳನ್ನೆಲ್ಲ ಹರಿಯಬಿಟ್ಟರೆ ನಾನು ನಿಮ್ಮ ಜಾತಕ ಬಯಲು ಮಾಡುತ್ತೇನೆ~ ಎಂಬ ಎಚ್ಚರಿಕೆಯೊಂದಿಗೇ ಇಂಗ್ಲೆಂಡ್‌ನ ನ್ಯಾಟಿಂಗ್‌ಹ್ಯಾಂನ ಕ್ಯಾಲಂ ಹೇವುಡ್ ಎಂಬ 18ರ ತಂಟೆಕೋರ ಯುವಕ ಸವಾಲು ಹಾಕಿದ್ದಾನೆ.

ಸಾಮಾಜಿಕ ತಾಣಗಳು ಬಳಕೆದಾರ ದಾಖಲಿಸುವ ಖಾಸಗಿ ಮಾಹಿತಿಗಳನ್ನು ಆತನ ಅರಿವಿಗೇ ಬಾರದಂತೆ ಮೂರನೇ ಸಂಸ್ಥೆ/ವ್ಯಕ್ತಿಗಳಿಗೆ ಮಾರಾಟ ಮಾಡುತ್ತವೆ ಎನ್ನುವುದು ಕ್ಯಾಲಂನ ದೂರು. ಅದಕ್ಕೆ ಈತ ನಿಮ್ಮ ಖಾಸಗಿ ಮಾಹಿತಿ ಮೇಲೆ ನಿಮಗೆ ನಿಯಂತ್ರಣ ಇರಲಿ ಎನ್ನುತ್ತಾನೆ. ತೆರದ ಪುಸ್ತಕದಂತಿರುವ `ಫೇಸ್‌ಬುಕ್~ನ ಗೋಡೆಯ ಮೇಲೆ ನೀವು ಏನು ಬರೆದರೂ ಅದು ಕ್ಷಣಾರ್ಥದೊಳಗೆ ಇಡೀ ಪ್ರಪಂಚಕ್ಕೇ  ಗೊತ್ತಾಗಿ ಬಿಡುತ್ತದೆ. ಇಲ್ಲಿ ನೀವು ಏನು ಮಾಡಿದರೂ ಅದು ಮೈಕ್ ಮುಂದೆ ನಿಂತು ಪಿಸುಗುಟ್ಟಿದಂತೆ.

ಸಾರ್ವಜನಿಕವಾಗಿ ನೀವು ಬಹಿರಂಗಗೊಳಿಸುವ ವಿಷಯಗಳು, ನಿಮ್ಮ ಭಾವಚಿತ್ರ, ದೂರವಾಣಿ ಸಂಖ್ಯೆ ಹೀಗೆ ಎಲ್ಲ ಮಾಹಿತಿಗಳೂ ಬಯಲಾಗುತ್ತವೆ. ಆದ್ದರಿಂದ ಕ್ಷಣ ಕ್ಷಣದ ನಿಮ್ಮ ಯೋಚನೆಗಳು ನಿಮ್ಮ ತಲೆಯಲ್ಲೇ ಇರಲಿ, ಸಾಮಾಜಿಕ ತಾಣಗಳಲ್ಲಿ ಹರಿಯಬಿಡದಿರಿ ಎನ್ನುವುದು ಕ್ಯಾಲಂನ ಕಳಕಳಿಯ ನುಡಿ.

ಆದರೆ, ಈತನ ಈ ಕಾಳಜಿಯ ಮಾತಿಗೆ ಫೇಸ್‌ಬುಕ್ ಬಳಕೆದಾರರು ಕವಡೆಯಷ್ಟು ಕಿಮ್ಮತ್ತನ್ನೂ ನೀಡಲಿಲ್ಲ. ನೋಡಿ ನೋಡಿ ಬೇಸೆತ್ತ ಕ್ಯಾಲಂ ಕೊನೆಗೊಂದು ದಿನ ಗಟ್ಟಿ ನಿರ್ಧಾರಕ್ಕೆ ಬಂದ. ಫೇಸ್‌ಬುಕ್‌ಗೆ ಪರ್ಯಾಯವಾಗಿ ವೆಬ್ ತಾಣವೊಂದನ್ನು ಸೃಷ್ಟಿಸಿದರೆ ಹೇಗೆ? ಆತ ಇದರಲ್ಲಿ ಯಶಸ್ವಿಯೂ ಆದ. `

ವಿ ನೊ ವಾಟ್ ಯೂ ಆರ್ ಡೂಯಿಂಗ್ (ಓಗ್ಗಈ) ಎನ್ನುವುದು ಈ ತಾಣದ ಹೆಸರು. ಇದನ್ನು ಕ್ಯಾಲಂ ಹೇವುಡ್‌ನ ಫೇಸ್‌ಬುಕ್ ಅಂತಲೂ ಕರೆಯುತ್ತಾರೆ. ವೆಬ್ ತಾಣದ ವಿಳಾಸ http://www.weknowwhatyouredoing.com/

ಫೇಸ್‌ಬುಕ್‌ನಲ್ಲಿ ಯಾರು ಬೇಕಾಬಿಟ್ಟಿಯಾಗಿ ಮಾಹಿತಿ ಹಾಕಿದ್ದಾರೋ (ಪಬ್ಲಿಕ್ ಪ್ರೊಫೈಲ್) ಅಂತಹ ವ್ಯಕ್ತಿಚಿತ್ರಗಳನ್ನು ಕದ್ದು ಕ್ಯಾಲಂ ತನ್ನ ಹೊಸ ವೆಬ್ ತಾಣದಲ್ಲಿ ಹಾಕಿ ಜಾತಕ ಬಯಲು ಮಾಡುತ್ತಾನೆ. `ಸಾಮಾಜಿಕ ತಾಣಗಳ ಖಾಸಗೀತನ ಪರೀಕ್ಷೆ~ ಎಂದು ತನ್ನ ಪ್ರಯೋಗವನ್ನು ಬಣ್ಣಿಸಿದ್ದಾನೆ.

ಖಾಸಗಿ ಮಾಹಿತಿಯ ಮೇಲೆ ಯಾವುದೇ ನಿರ್ಬಂದವಿಲ್ಲ. ಇಲ್ಲಿರುವ ಬಳಕೆದಾರರ ಪ್ರೊಫೈಲ್‌ಗಳನ್ನು ನಾಲ್ಕು ವಿಭಾಗಗಳಲ್ಲಿ ವಿಂಗಡಿಸಿದ್ದಾನೆ. ನಿಮಗೆ ಸ್ನೇಹಿತರು ಬೇಕೇ? (ತಮ್ಮ ಕೆಲಸ ಮತ್ತು  ಬಾಸ್‌ಗಳನ್ನು ದ್ವೇಷಿಸುವವರ  ವಿಭಾಗ) ನಿಮಗೆ ಮಾದಕ ವಸ್ತುಗಳು ಬೇಕೇ?

(ಮಾದಕ ವ್ಯಸನಿಗಳ ಪ್ರೊಪೈಲ್) ನಿಮಗೆ ಹೊಸ ಫೋನ್ ನಂಬರ್ ಬೇಕೇ? (ಕದ್ದ ದೂರವಾಣಿ ಸಂಖ್ಯೆಗಳ ಹರಾಜು)  ಹೀಗೆ ಹಲವು ವಿಶೇಷತೆಗಳಿಂದ ಕೂಡಿದೆ ಈ ತಾಣ. ಬಳಕೆದಾರರ ಖಾಸಗಿ ಮಾಹಿತಿಗಳನ್ನು ಹೀಗೆ ಬಟಾಬಯಲುಗೊಳಿಸುವ ಇಂತಹ ತಾಣದ ಮೇಲೆ ಯಾರೂ ಕ್ರಮ ಕೈಗೊಂಡಿಲ್ಲವೇ ಎಂದು ನೀವು ಕೇಳಬಹುದು.

ಆದರೆ, ಸೃಷಿಕರ್ತ ಕ್ಯಾಲಂ ಹೇವುಡ್ ವಿವರಣೆಯೇ ಬೇರೆ. ಫೇಸ್‌ಬುಕ್ ಮತ್ತಿತರ ತಾಣಗಳಲ್ಲಿ ಖಾಸಗಿ ಮಾಹಿತಿಗಳನ್ನು ಬೇಕಾಬಿಟ್ಟಿಯಾಗಿ ಹರಿಬಿಡುವ ಬೇಜವಾಬ್ದಾರಿ ಬಳಕೆದಾರರಿಗೆ ಪಾಠ ಕಲಿಸಲು ತಾನು ಈ ತಾಣ ಪ್ರಾರಂಭಿಸಿರುವುದಾಗಿ ಹೇಳುತ್ತಾನೆ.
ಬಳಕೆದಾರರು ತಮ್ಮ ಖಾಸಗಿ ಮಾಹಿತಿಗಳನ್ನು ಹಂಚಿಕೊಳ್ಳುವ ವಿಚಾರದಲ್ಲಿ ಸ್ವಯಂ ನಿಯಂತ್ರಣ ವಿಧಿಸಿಕೊಳ್ಳಲಿ. ಮಾಹಿತಿ ಬಹಿರಂಗಪಡಿಸುವುದಕ್ಕೆ ಮುನ್ನ ಸೆಟ್ಟಿಂಗ್ಸ್ ಆಯ್ಕೆಯಲ್ಲಿ `ಪಬ್ಲಿಕ್~ ಬದಲು `ಪ್ರೈವೇಟ್~ ಎನ್ನುವುದನ್ನು ಆಯ್ಕೆ ಮಾಡಿಕೊಳ್ಳಲಿ ಎನ್ನುವ ಸದುದ್ದೇಶವೇ ಇದರ ಹಿಂದಿನದು ಎಂದು ಪ್ರತಿಪಾದಿಸುತ್ತಾನೆ.

`ಅಸಲಿಗೆ ಫೇಸ್‌ಬುಕ್‌ನ ಪ್ರೈವೆಸಿ ಸೆಟಿಂಗ್ಸ್ ತುಂಬಾ ಚೆನ್ನಾಗಿದೆ. ಆದರೆ, ಬಳೆದಾರರೇ ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುತ್ತಿಲ್ಲ. ಖಾಸಗಿ ಮಾಹಿತಿ ಸುರಕ್ಷತೆ ಬಗ್ಗೆ ಯಾರೂ ಯೋಚಿಸುತ್ತಿಲ್ಲ~ ಎನ್ನುವುದು ಈತನ ಆರೋಪ. 

`ನೀನು ಐದು ನಿಮಿಷಗಳ ಮುಂಚೆ ಏನು ಮಾಡಿದೆ ಎನ್ನುವುದನ್ನು ನಾನು ಬ್ಲ್ಲಲೆ~ ಎನ್ನುವ ಸಾಕ್ಷ್ಯ ಚಿತ್ರವೊಂದನ್ನು ಕ್ಯಾಲಂ ಇತ್ತೀಚೆಗೆ ನೋಡಿದ. ಇದರಿಂದ ಪ್ರೇರಣೆಗೊಂಡು ಈ ವೆಬ್ ತಾಣವನ್ನು ವಿನ್ಯಾಸಗೊಳಿಸಿರುವುದಾಗಿ ಹೇಳುತ್ತಾನೆ. 

ಈ ತಾಣ ಅಸ್ತಿತ್ವಕ್ಕೆ ಬಂದ ಮೊದಲ 27 ಗಂಟೆಯಲ್ಲಿ 1 ಲಕ್ಷ ಜನರು ಈ ತಾಣಕ್ಕೆ ಭೇಟಿ ನೀಡಿದ್ದಾರೆ.ಪ್ರಪಂಚ ದಿನೇ ದಿನೇ ಹೆಚ್ಚು ವಾಣಿಜ್ಯ ಸ್ವರೂಪ ಪಡೆದುಕೊಳ್ಳುತ್ತಿದೆ. ಫೇಸ್‌ಬುಕ್‌ಗೆ ಲಾಗಿನ್ ಆದ ಕೂಡಲೇ ನಿಮ್ಮ ಪ್ರೈವೆಸಿ ಸೆಟ್ಟಿಂಗ್ಸ್ ನೋಡಿ ಖಾತರಿಪಡಿಸಿಕೊಳ್ಳಿ. `

ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿ ಏನು ಉಪಯೋಗ~ ಎನ್ನುವುದು ಹೇವುಡ್‌ನ ಎಚ್ಚರಿಕೆಯ ಮಾತು. ಹೇವುಡ್‌ನ ಫೇಸ್‌ಬುಕ್ ಪುಟಕ್ಕೆ  http://en-gb.facebook.com /callum. haywood..96

ಸಿಟಿ ಫೈನಾನ್ಸ್ ವರದಿ
ಜನಪ್ರಿಯ ಸಾಮಾಜಿಕ ತಾಣ ಫೇಸ್‌ಬುಕ್ ಬಳಕೆದಾರರ ಖಾಸಗಿ ಮಾಹಿತಿ ಗೋಪ್ಯತೆ ರಕ್ಷಿಸುವಲ್ಲಿ ವಿಫಲವಾಗಿದೆ ಎಂದು ಸಂಸ್ಥೆಯೊಂದು ಗಂಭೀರ ಆರೋಪ ಮಾಡಿದೆ. ಫೇಸ್‌ಬುಕ್‌ಗೆ ಇಂತಹ ಆರೋಪಗಳು ಹೊಸತಲ್ಲ. ಬಳಕೆದಾರರನ ವೈಯಕ್ತಿಕ ಮಾಹಿತಿಗಳನ್ನು ಜಾಹೀರಾತು ಸಂಸ್ಥೆಗಳಿಗೆ ಮಾರಾಟ ಮಾಡಿದ ಆರೋಪವೂ ಕಂಪೆನಿ ಮೇಲಿದೆ.

ಬಳಕೆದಾರರನ್ನು ಸಾಮಾಜಿಕ ತಾಣಗಳು ದುರ್ಬಲರನ್ನಾಗಿ ಮಾಡುತ್ತವೆ ಎನ್ನುವುದು ಜಾಗತಿಕ ಹಣಕಾಸು ಸಂಸ್ಥೆ ಸಿಟಿ ಗ್ರೂಪ್‌ನ ಆರೋಪ. ಫೇಸ್‌ಬುಕ್‌ನ ವಿಪರೀತ ಬಳಕೆಯಿಂದ ಬಳಕೆದಾರರಲ್ಲಿ ಹೆಚ್ಚು ದಣಿವು ಕಾಣಿಸಿಕೊಳ್ಳುತ್ತಿದೆ. ಇದು ಅವರ ವೃತ್ತಿಯ ಮೇಲೆಯೂ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಸಿಟಿ ಗ್ರೂಪ್ ಹೇಳಿದೆ.

ಪ್ರಪಂಚದ ಅತಿ ದೊಡ್ಡ ಇಂಟರ್‌ನೆಟ್ ಮಾರುಕಟ್ಟೆಯಾಗಿರುವ ಚೀನಾದಲ್ಲಿ ಇದರ ಪರಿಣಾಮಗಳು ಹೆಚ್ಚು ಕಂಡುಬಂದಿವೆ. ಚೀನಾದ ಉದ್ಯಮ ವಲಯ ಸಾಮಾಜಿಕ ತಾಣಗಳ ವ್ಯತಿರಿಕ್ತ ಪರಿಣಾಮಗಳನ್ನು ಎದುರಿಸುತ್ತಿವೆ. ಇದೇ ಕಾರಣಕ್ಕೆ ಅಲ್ಲಿ ಹೊಸ ಹೂಡಿಕೆಗಳು ಕಡಿಮೆಯಾಗಿವೆ. ಮಾನವ ಸಂಪನ್ಮೂಲ ಸಮರ್ಪಕ ಬಳಕೆಯೇ ಕುಂಠಿತಗೊಂಡಿದೆ ಎಂದಿದೆ.

ಚೀನಾದ ಅರ್ಥಶಾಸ್ತ್ರಜ್ಞರು, ನೀತಿ ನಿರೂಪಕರು ಫೇಸ್‌ಬುಕ್ ಬಳಕೆ ನಿಷೇಧಕ್ಕೆ ಒತ್ತಡ ಹೇರುತ್ತಿದ್ದಾರೆ. ಇದು ದೇಶದ ಅರ್ಥವ್ಯವಸ್ಥೆಗೆ ಹಾನಿಕಾರಕ ಎಂದೂ ದೂರಿದ್ದಾರೆ. ಆದರೆ,  ಫೇಸ್‌ಬುಕ್‌ಗೆ ಹೆಚ್ಚು ವರಮಾನ ಬರುತ್ತಿರುವುದು ಚೀನಾಮಾರುಕಟ್ಟೆಯಿಂದಲೆ! ಆದ್ದರಿಂದಲೇ ಅದು ಹೊಸ ಮಾರುಕಟ್ಟೆ ತಂತ್ರಗಳನ್ನು ಅನುಸರಿಸುತ್ತಿದೆ.
 ವಿವಿಧ ಮೂಲಗಳಿಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT