ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೈನಲ್ ಕನಸಲ್ಲಿ ಮುಂಬೈ ಇಂಡಿಯನ್ಸ್

Last Updated 7 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): ಮುಂಬೈ ಇಂಡಿಯನ್ಸ್ ಮತ್ತು ಸಾಮರ್ಸೆಟ್ ತಂಡಗಳು ಚಾಂಪಿಯನ್ಸ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಶನಿವಾರ ಪರಸ್ಪರ ಎದುರಾಗಲಿದ್ದು, ಪ್ರಬಲ ಪೈಪೋಟಿಯನ್ನು ನಿರೀಕ್ಷಿಸಲಾಗಿದೆ.


ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದಲ್ಲಿ ಗೆಲುವು ಪಡೆದು ಫೈನಲ್ ಪ್ರವೇಶಿಸುವ ಕನಸನ್ನು ಹರಭಜನ್ ಸಿಂಗ್ ನೇತೃತ್ವದ ಮುಂಬೈ ಇಂಡಿಯನ್ಸ್ ಕಾಣುತ್ತಿದೆ. ಅಲ್ಫೋನ್ಸೊ ಥಾಮಸ್ ನೇತೃತ್ವದ ಇಂಗ್ಲೆಂಡ್‌ನ ಕೌಂಟಿ ತಂಡ ಸಾಮರ್ಸೆಟ್ ಕೂಡಾ ಇದೇ ಗುರಿ ಹೊಂದಿದೆ.

ಮುಂಬೈ ಇಂಡಿಯನ್ಸ್ ತಂಡ ಸಚಿನ್ ತೆಂಡೂಲ್ಕರ್, ಜಹೀರ್ ಖಾನ್ ಮತ್ತು ಮುನಾಫ್ ಪಟೇಲ್ ಅವರಂತಹ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಈ ಟೂರ್ನಿಯಲ್ಲಿ ಆಡುತ್ತಿದೆ. ಆದರೂ ಲೀಗ್ ಹಂತದಲ್ಲಿ ಪ್ರಭಾವಿ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ. ಮಾತ್ರವಲ್ಲ ಚೆನ್ನೈನ ಪರಿಸ್ಥಿತಿಗೆ ಹೊಂದಿಕೊಂಡಿರುವ ಕಾರಣ ಮುಂಬೈ ತಂಡ ಗೆಲುವಿನ `ಫೇವರಿಟ್~ ಎನಿಸಿಕೊಂಡಿದೆ.

ಇಲ್ಲಿನ ಪಿಚ್‌ನಲ್ಲಿ ಬ್ಯಾಟಿಂಗ್ ಕಷ್ಟ ಎಂಬುದು ಕಳೆದ ಕೆಲ ಪಂದ್ಯಗಳಲ್ಲಿ ಸಾಬೀತಾಗಿತ್ತು. ಹರಭಜನ್ ಬಳಗ ಇಲ್ಲಿ ಎರಡು ಪಂದ್ಯಗಳನ್ನು ಆಡಿದೆ. ಆದರೆ ಸಾಮರ್ಸೆಟ್ ತನ್ನ ಪಂದ್ಯಗಳನ್ನು ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ಆಡಿವೆ. ಆದ್ದರಿಂದ ಶನಿವಾರ ಗೆಲುವು ಪಡೆಯಲು ಈ ತಂಡಕ್ಕೆ ಅಸಾಮಾನ್ಯ ಪ್ರದರ್ಶನ ನೀಡುವುದು ಅನಿವಾರ್ಯ.

`ಇಲ್ಲಿನ ಹೊಸ ಪಿಚ್‌ನಲ್ಲಿ ಎರಡು ಪಂದ್ಯಗಳನ್ನು ಆಡಿದ್ದೇವೆ. ಪಿಚ್‌ನ ಗುಣ ಏನೆಂಬುದು ತಿಳಿದಿದೆ. ಇದು ನಮಗೆ ನೆರವಾಗಲಿದೆ~ ಎಂದು ಮುಂಬೈ ಇಂಡದ ಕೋಚ್ ಶಾನ್ ಪೊಲಾಕ್ ಹೇಳಿದ್ದಾರೆ. ಮುಂಬೈ ತಂಡದ ಕೀರನ್ ಪೊಲಾರ್ಡ್ ಅಭ್ಯಾಸದ ವೇಳೆ ಗಾಯಗೊಂಡಿದ್ದರು. ಆದರೆ ವೆಸ್ಟ್ ಇಂಡೀಸ್‌ನ ಈ ಆಲ್‌ರೌಂಡರ್          ಸೆಮಿಫೈನಲ್‌ನಲ್ಲಿ ಕಣಕ್ಕಿಳಿಯುವರು ಎಂಬ ಸೂಚನೆಯನ್ನು ತಂಡದ ಆಡಳಿತ ನೀಡಿದೆ.

ಪೊಲಾರ್ಡ್ ಮತ್ತು ತಂಡದ ಇನ್ನೊಬ್ಬ ಪ್ರಮುಖ ಆಟಗಾರ ಆ್ಯಂಡ್ರ್ಯೂ ಸೈಮಂಡ್ಸ್ ಅವರ ಫಾರ್ಮ್ ಚಿಂತೆಗೆ ಕಾರಣವಾಗಿದೆ. ಇವರಿಬ್ಬರು ಇನ್ನೂ ಲಯ ಕಂಡುಕೊಂಡಿಲ್ಲ. ಲಸಿತ್ ಮಾಲಿಂಗ ಅವರನ್ನೊಳಗೊಂಡ ಈ ತಂಡದ ಬೌಲಿಂಗ್ ವಿಭಾಗ ಸಾಮರ್ಸೆಟ್ ಬ್ಯಾಟ್ಸ್‌ಮನ್‌ಗಳನ್ನು ಕಾಡುವುದು ಖಚಿತ. `ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಲು ತಕ್ಕ ಯೋಜನೆ ರೂಪಿಸಲಾಗಿದೆ~ ಎನ್ನುವ ಮೂಲಕ ಪೊಲಾಕ್ ಸಾಮರ್ಸೆಟ್‌ಗೆ ಎಚ್ಚರಿಕೆ ನೀಡಿದ್ದಾರೆ.

ಅರ್ಹತಾ ಹಂತದಲ್ಲಿ ಆಡಿದ್ದ ಸಾಮರ್ಸೆಟ್ ಬಳಿಕ ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿ ಸೆಮಿಫೈನಲ್ ಪ್ರವೇಶಿಸಲು ಯಶಸ್ವಿಯಾಗಿದೆ. ಪೀಟರ್ ಟ್ರೆಗೊ, ವಾನ್ ಡೆರ್ ಮೆರ್ವ್ ಮತ್ತು ಕ್ರೆಗ್ ಕೀಸ್‌ವೆಟರ್ ಈ ತಂಡದ ಬ್ಯಾಟಿಂಗ್‌ಗೆ ಬಲ ನೀಡಲಿದ್ದಾರೆ. ಟ್ರೆಗೊ ಟೂರ್ನಿಯಲ್ಲಿ ಈಗಾಗಲೇ ಎರಡು ಅರ್ಧಶತಕ ಗಳಿಸಿದ್ದಾರೆ. ಮುರಳಿ ಕಾರ್ತಿಕ್ ಒಳಗೊಂಡಂತೆ ಉತ್ತಮ ಸ್ಪಿನ್ನರ್‌ಗಳು ತಂಡದಲ್ಲಿದ್ದಾರೆ. ನಾಯಕ ಥಾಮಸ್ ಕೂಡಾ ಬೌಲಿಂಗ್‌ನಲ್ಲಿ ಈಗಾಗಲೇ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ.

ಪಂದ್ಯದ ಆರಂಭ: ರಾತ್ರಿ 8.00ಕ್ಕೆ

ನೇರ ಪ್ರಸಾರ: ಸ್ಟಾರ್ ಕ್ರಿಕೆಟ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT