ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೈನಲ್ ಪ್ರವೇಶಿಸಿದ ಭಾರತ ತಂಡ

ಕ್ರಿಕೆಟ್: 19 ವರ್ಷ ವಯಸ್ಸಿನೊಳಗಿನವರ ಟೂರ್ನಿ, ಮಿಂಚಿದ ವಿಜಯ್ ಜೋಲ್
Last Updated 8 ಜುಲೈ 2013, 19:59 IST
ಅಕ್ಷರ ಗಾತ್ರ

ಡಾರ್ವಿನ್ (ಪಿಟಿಐ): ಭಾರತ 19 ವರ್ಷ ವಯಸ್ಸಿನೊಳಗಿನ ತಂಡದವರು ಇಲ್ಲಿ ನಡೆಯುತ್ತಿರುವ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯಲ್ಲಿ ಸತತ ಮೂರನೇ ಗೆಲುವು ಪಡೆದು ಫೈನಲ್ ಪ್ರವೇಶಿಸಿದರು.

ಸೋಮವಾರ ನಡೆದ ತನ್ನ ಮೂರನೇ ಲೀಗ್ ಪಂದ್ಯದಲ್ಲಿ ಭಾರತ ಏಳು ವಿಕೆಟ್‌ಗಳಿಂದ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಮಣಿಸಿತು. ಮರಾರಾ ಓವಲ್ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 191 ರನ್ ಪೇರಿಸಿದರೆ, ವಿಜಯ್ ಜೋಲ್ ನೇತೃತ್ವದ ಭಾರತ 45.4 ಓವರ್‌ಗಳಲ್ಲಿ 3 ವಿಕೆಟ್‌ಗೆ 192 ರನ್ ಗಳಿಸಿ ಜಯ ಸಾಧಿಸಿತು.

ಸೋಲು ಅನುಭವಿಸಿದ ಕಾರಣ ಆಸೀಸ್ ತಂಡದ ಫೈನಲ್ ಪ್ರವೇಶದ ಕನಸಿಗೆ ಬಲವಾದ ಹೊಡೆತ ಬಿದ್ದಿದೆ. ಆಡಿದ ಎಲ್ಲ ಮೂರೂ ಪಂದ್ಯಗಳಲ್ಲಿ ಗೆಲುವು ಪಡೆದಿರುವ ಭಾರತ ಅಗ್ರಸ್ಥಾನದಲ್ಲಿದೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಲಾ ನಾಲ್ಕು ಪಾಯಿಂಟ್‌ಗಳನ್ನು ಹೊಂದಿದೆ. ಆದರೆ ಉತ್ತಮ ರನ್‌ರೇಟ್ ಹೊಂದಿರುವ ಕಾರಣ ಆಸೀಸ್ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ಬುಧವಾರ ನಡೆಯುವ ಕೊನೆಯ ಲೀಗ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಭಾರತವನ್ನು ಎದುರಿಸಲಿದೆ. ಇದರಲ್ಲಿ ಕಿವೀಸ್ ಗೆದ್ದರೆ, ಆಸೀಸ್ ತಂಡವನ್ನು ಹಿಂದಿಕ್ಕಿ ಫೈನಲ್ ಪ್ರವೇಶಿಸಲಿದೆ. ಸೋಮವಾರ ನಡೆದ ಪಂದ್ಯದಲ್ಲಿ ಭಾರತ ಆಲ್‌ರೌಂಡ್ ಪ್ರದರ್ಶನ ನೀಡಿತು. ಶಿಸ್ತಿನ ಬೌಲಿಂಗ್ ಪ್ರದರ್ಶಿಸಿದ ಜೋಲ್ ಬಳಗ ಎದುರಾಳಿ ತಂಡವನ್ನು 200 ರನ್‌ಗಳ ಒಳಗೆ ನಿಯಂತ್ರಿಸುವಲ್ಲಿ ಯಶ ಕಂಡಿತು. 25 ರನ್‌ಗಳಿಗೆ ಮೂರು ವಿಕೆಟ್ ಪಡೆದ ಅಮೀರ್ ಗನಿ ಭಾರತದ ಪರ ಯಶಸ್ವಿ ಬೌಲರ್ ಎನಿಸಿಕೊಂಡರು.

ಸುಲಭ ಗುರಿಯನ್ನು ಬೆನ್ನಟ್ಟಿದ ಭಾರತ ಯಾವ ಹಂತದಲ್ಲೂ ಒತ್ತಡಕ್ಕೆ ಒಳಗಾಗಲಿಲ್ಲ. ಅಖಿಲ್ ಹೆರ್ವಾಡ್ಕರ್ (60, 82 ಎಸೆತ, 6 ಬೌಂ) ಹಾಗೂ ನಾಯಕ ಜೋಲ್ 64 (93 ಎಸೆತ, 7 ಬೌಂ) ಅರ್ಧಶತಕ ಗಳಿಸಿ ತಂಡದ ಗೆಲುವನ್ನು ಸುಲಭಗೊಳಿಸಿದರು. ಅಂಕುಶ್ ಬೈನ್ಸ್ (20) ಮತ್ತು ಅಖಿಲ್ ಮೊದಲ ವಿಕೆಟ್‌ಗೆ ಏಳು ಓವರ್‌ಗಳಲ್ಲಿ 38 ರನ್‌ಗಳನ್ನು ಸೇರಿಸಿದರು. ಆ ಬಳಿಕ ಜೊತೆಯಾದ ಅಖಿಲ್ ಹಾಗೂ ಜೋಲ್ ಎರಡನೇ ವಿಕೆಟ್‌ಗೆ 107 ರನ್‌ಗಳನ್ನು ಕಲೆಹಾಕಿದರು. ಈ ಹಿಂದಿನ ಪಂದ್ಯಗಳಲ್ಲೂ ಮಿಂಚಿದ್ದ ಜೋಲ್ ಆಸೀಸ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಇವರಿಬ್ಬರು ಒಂದು ರನ್ ಅಂತರದಲ್ಲಿ ಪೆವಿಲಿಯನ್ ಸೇರಿದರು.

ಸಂಜು ಸ್ಯಾಮ್ಸನ್ (24, 36 ಎಸೆತ) ಮತ್ತು ಮೊಹಮ್ಮದ್ ಸೈಫ್ (21, 40 ಎಸೆತ) ಮುರಿಯದ ನಾಲ್ಕನೇ ವಿಕೆಟ್‌ಗೆ 46 ರನ್‌ಗಳನ್ನು ಸೇರಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ತ್ರಿಕೋನ ಏಕದಿನ ಸರಣಿಯ ಫೈನಲ್ ಶುಕ್ರವಾರ ನಡೆಯಲಿದೆ. 

ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ: 50 ಓವರ್‌ಗಳಲ್ಲಿ 6 ವಿಕೆಟ್‌ಗೆ 191 (ಮ್ಯಾಥ್ಯೂ ಶಾರ್ಟ್ 34, ಜಾಕ್ ಡೊರನ್ ಅಜೇಯ 41, ಕ್ಯಾಮರನ್ ವ್ಯಾಲೆಂಟ್ ಔಟಾಗದೆ 28, ಅಮೀರ್ ಗನಿ 25ಕ್ಕೆ 3, ಮೊಹಮ್ಮದ್ ಸೈಫ್ 16ಕ್ಕೆ 1) ಭಾರತ: 45.4 ಓವರ್‌ಗಳಲ್ಲಿ 3 ವಿಕೆಟ್‌ಗೆ 192 (ಅಖಿಲ್ ಹೆರ್ವಾಡ್ಕರ್ 60, ವಿಜಯ್ ಜೋಲ್ 64, ಸಂಜು ಸ್ಯಾಮ್ಸನ್ ಔಟಾಗದೆ 24, ಮೊಹಮ್ಮದ್ ಸೈಫ್ ಔಟಾಗದೆ 21) ಫಲಿತಾಂಶ: ಭಾರತ ತಂಡಕ್ಕೆ ಏಳು ವಿಕೆಟ್ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT