ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೈನಲ್‌ಗೆ ಲಿಸಿಕಿ, ಬಾರ್ತೋಲಿ

ವಿಂಬಲ್ಡನ್ ಟೆನಿಸ್: ಪೇಸ್, ಬೋಪಣ್ಣ, ಸಾನಿಯಾಗೆ ನಿರಾಸೆ
Last Updated 4 ಜುಲೈ 2013, 19:59 IST
ಅಕ್ಷರ ಗಾತ್ರ

ಲಂಡನ್ (ರಾಯಿಟರ್ಸ್): ಅಮೋಘ ಪ್ರದರ್ಶನದ ಮೂಲಕ ಮಿಂಚು ಹರಿಸುತ್ತಿರುವ ಜರ್ಮನಿಯ ಸಬೀನ್ ಲಿಸಿಕಿ ವಿಂಬಲ್ಡನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ.

ಆಲ್ ಇಂಗ್ಲೆಂಡ್ ಟೆನಿಸ್ ಕ್ಲಬ್‌ನ ಸೆಂಟರ್ ಕೋರ್ಟ್‌ನಲ್ಲಿ ಗುರುವಾರ ನಡೆದ ಸೆಮಿಫೈನಲ್ ಹೋರಾಟದಲ್ಲಿ ಲಿಸಿಕಿ 6-4, 2-6, 9-7ರಲ್ಲಿ ಪೋಲೆಂಡ್‌ನ ಅಗ್ನಿಸ್ಕಾ ರಾಡ್ವಾಂಸ್ಕಾ ಅವರಿಗೆ ಆಘಾತ ನೀಡಿದರು.

ಹಾಲಿ ಚಾಂಪಿಯನ್ ಸೆರೆನಾ ವಿಲಿಯಮ್ಸ ಅವರನ್ನು ಮಣಿಸಿದ್ದ ಲಿಸಿಕಿಗೆ ಈ ಪಂದ್ಯದಲ್ಲಿ ಭಾರಿ ಪ್ರತಿರೋಧ ವ್ಯಕ್ತವಾಯಿತು. 23ನೇ ಶ್ರೇಯಾಂಕದ ಈ ಆಟಗಾರ್ತಿ ಎರಡನೇ ಸೆಟ್‌ನಲ್ಲಿ ಸೋಲು ಕಂಡು ಒತ್ತಡಕ್ಕೆ ಸಿಲುಕಿದ್ದರು. ಆದರೆ ನಿರ್ಣಾಯಕ ಸೆಟ್‌ನಲ್ಲಿ ಅದ್ಭುತ ಪ್ರದರ್ಶನದ ಮೂಲಕ ತಿರುಗೇಟು ನೀಡಿದರು.

ಎರಡು ವರ್ಷಗಳ ಹಿಂದೆ ಸೆಮಿಫೈನಲ್‌ನಲ್ಲಿ ಮರಿಯಾ ಶರ್ಪೋವಾ ಎದುರು ಸೋಲು ಕಂಡಿದ್ದ ಲಿಸಿಕಿ ಈ ಬಾರಿಯ ಫೈನಲ್‌ನಲ್ಲಿ ಫ್ರಾನ್ಸ್‌ನ ಮರಿಯಾನ್ ಬಾರ್ತೋಲಿ ಎದುರು ಪೈಪೋಟಿ ನಡೆಸಲಿದ್ದಾರೆ. ಲಿಸಿಕಿ ಅವರ ಪಾಲಿಗೆ ವಿಂಬಲ್ಡನ್‌ನಲ್ಲಿ ಇದು ಚೊಚ್ಚಲ ಫೈನಲ್.

ಮತ್ತೊಂದು ಸೆಮಿಫೈನಲ್‌ನಲ್ಲಿ ಬೆಲ್ಜಿಯಂನ ಕರ್ಸ್ಟನ್ ಫ್ಲಿಪ್‌ಕೆನ್ಸ್ ಅವರ ಸವಾಲು ಮೆಟ್ಟಿ ನಿಂತ 15ನೇ ಶ್ರೇಯಾಂಕದ ಬಾರ್ತೋಲಿ ಪ್ರಶಸ್ತಿ ಸುತ್ತು ತಲುಪಿದರು. ಅವರು ನಾಲ್ಕರ ಘಟ್ಟದ ಪಂದ್ಯದಲ್ಲಿ 6-1, 6-2ರಲ್ಲಿ ಸುಲಭವಾಗಿ ಗೆದ್ದಿದ್ದು ವಿಶೇಷ. ಎರಡೂ ಸೆಟ್‌ಗಳಲ್ಲಿ ಕೊಂಚವೂ ಪ್ರತಿರೋಧ ವ್ಯಕ್ತವಾಗಲಿಲ್ಲ.

ಭಾರತದವರಿಗೆ ನಿರಾಸೆ: ಭಾರತದ ರೋಹನ್ ಬೋಪಣ್ಣ ಹಾಗೂ ಲಿಯಾಂಡರ್ ಪೇಸ್ ಸೆಮಿಫೈನಲ್‌ನಲ್ಲಿ ನಿರಾಸೆ ಅನುಭವಿಸಿದರು.

ಪುರುಷರ ಡಬಲ್ಸ್‌ನಲ್ಲಿ ಫ್ರಾನ್ಸ್‌ನ ರೋಜರ್ ವಾಸೆಲಿನ್ ಜೊತೆಗೂಡಿ ಆಡುತ್ತಿರುವ ಬೋಪಣ್ಣ 7-6, 4-6, 3-6, 7-5, 3-6ರಲ್ಲಿ ಅಮೆರಿಕದ ಸಹೋದರರಾದ ಮೈಕ್ ಹಾಗೂ ಬಾಬ್ ಬ್ರಯಾನ್ ಎದುರು ಸೋಲು ಕಂಡರು. ಐದು ಸೆಟ್‌ಗಳ ಮ್ಯಾರಥಾನ್ ಹೋರಾಟ ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸುತ್ತಾ ಹೋಯಿತು.

ಜೆಕ್ ಗಣರಾಜ್ಯದ ರಾಡೆಕ್ ಸ್ಟೆಪನೆಕ್ ಜೊತೆಗೂಡಿ ಆಡುತ್ತಿರುವ ಲಿಯಾಂಡರ್ ಪೇಸ್ ಡಬಲ್ಸ್ ವಿಭಾಗದ ಮತ್ತೊಂದು ನಾಲ್ಕರ ಘಟ್ಟದ ಪಂದ್ಯದಲ್ಲಿ 6-3, 4-6, 1-6, 6-3, 3-6ರಲ್ಲಿ ಕ್ರೊಯೇಷ್ಯಾದ ಇವಾನ್ ಡಾಡಿಗ್ ಹಾಗೂ ಮಾರ್ಸೆಲೊ ಮೆಲೊ ಎದುರು ಪರಾಭವಗೊಂಡರು.

ಮಿಶ್ರ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಜಾ ಹಾಗೂ ರುಮೇನಿಯಾದ ಹೊರಿಯಾ ಟೆಕಾವು ಕ್ವಾರ್ಟರ್ ಫೈನಲ್‌ನಲ್ಲಿ ಪರಾಭವಗೊಂಡರು. ಅವರು 6-7, 6-7ರಲ್ಲಿ ಕೆನಡಾದ ಡೇನಿಯಲ್ ನೆಸ್ಟೋರ್ ಹಾಗೂ ಫ್ರಾನ್ಸ್‌ನ ಕ್ರಿಸ್ಟಿನಾ ಲಾಡೆನ್‌ವಿಕ್ ಎದುರು ನಿರಾಸೆ ಅನುಭವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT