ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೈನಲ್‌ಗೆ ಸೆರೆನಾ, ಅಜರೆಂಕಾ

ಅಮೆರಿಕ ಓಪನ್‌ ಟೆನಿಸ್‌: ಲೀ ನಾ, ಪೆನೆಟಾಗೆ ನಿರಾಸೆ
Last Updated 7 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ (ಎಎಫ್‌ಪಿ): ಹಾಲಿ ಚಾಂಪಿಯನ್‌ ಅಮೆರಿಕದ ಸೆರೆನಾ ವಿಲಿಯಮ್ಸ್‌ ಹಾಗೂ ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ ಅವರ ಗೆಲುವಿನ ನಾಗಾಲೋಟ ಮುಂದುವರಿದಿದೆ. ಇವರಿಬ್ಬರೂ ಅಮೆರಿಕ ಓಪನ್‌ ಟೆನಿಸ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ ಫೈನಲ್‌ ತಲುಪಿದ್ದಾರೆ.
ಆರ್ಥರ್‌ ಆ್ಯಷ್‌ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಸೆರೆನಾ 6–0, 6–3ರಲ್ಲಿ ಚೀನಾದ ಲೀ ನಾ ಅವರನ್ನು ಪರಾಭವಗೊಳಿಸಿದರು. ಈ ಪಂದ್ಯ ಗೆಲ್ಲಲು ಅವರು ಕೇವಲ 87 ನಿಮಿಷ ತೆಗೆದುಕೊಂಡರು.


17ನೇ ಗ್ರ್ಯಾಂಡ್‌ ಸ್ಲಾಮ್‌ ಸಿಂಗಲ್ಸ್‌ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಅಗ್ರ ರಾ್ಯಂಕ್‌ನ ಆಟಗಾರ್ತಿ ಸೆರೆನಾ ಈ ಪಂದ್ಯದಲ್ಲಿ ಪೂರ್ಣ ಪಾರುಪತ್ಯ ಮೆರೆದರು. ಮೊದಲ ಸೆಟ್‌ನಲ್ಲಿ ಚೀನಾದ ಆಟಗಾರ್ತಿ ಒಂದೂ ಗೇಮ್‌ ಗೆಲ್ಲಲು ಸಾಧ್ಯವಾಗಲಿಲ್ಲ. 29 ನಿಮಿಷಗಳಲ್ಲಿ ಈ ಸೆಟ್‌ ಮುಗಿದು ಹೋಯಿತು. ಮೊದಲ ಬಾರಿ ಈ ಟೂರ್ನಿಯ ಸೆಮಿಫೈನಲ್‌ ತಲುಪಿದ್ದ ಐದನೇ ಶ್ರೇಯಾಂಕದ ಲೀ ನಾ ತುಂಬಾ ಒತ್ತಡಕ್ಕೆ ಒಳಗಾದವರಂತೆ ಕಂಡುಬಂದರು. ಸೆರೆನಾ ಈ ಸೆಟ್‌ನಲ್ಲಿ ಮೂರು ಬಾರಿ ಎದುರಾಳಿಯ ಸರ್ವ್‌ ಬ್ರೇಕ್‌ ಮಾಡಿದರು.

ಎರಡನೇ ಸೆಟ್‌ನಲ್ಲೂ ಸೆರೆನಾ ಆಕ್ರಮಣಕಾರಿ ಆಟ ಪ್ರದರ್ಶಿಸಿದರು. 2011ರಲ್ಲಿ ಫ್ರೆಂಚ್‌ ಓಪನ್‌ ಚಾಂಪಿಯನ್‌ ಆಗಿದ್ದ ಲೀ ನಾ ಮತ್ತೊಂದು ಗ್ರ್ಯಾಂಡ್‌ ಸ್ಲಾಮ್‌ ಪ್ರಶಸ್ತಿ ಜಯಿಸುವ ಕನಸಿನೊಂದಿಗೆ ಕ್ವಾರ್ಟರ್‌ ಫೈನಲ್‌ವರೆಗೆ ಅತ್ಯುತ್ತಮ ಪ್ರದರ್ಶನ ತೋರಿದ್ದರು. ಆದರೆ ಈ ಪಂದ್ಯದಲ್ಲಿ ಅದೇ ಮಟ್ಟದ ಪ್ರದರ್ಶನ ತೋರುವಲ್ಲಿ ಅವರು ವಿಫಲರಾದರು.

ಈ ಕ್ರೀಡಾಂಗಣದಲ್ಲಿಯೇ ಸೆರೆನಾ ನಾಲ್ಕು ಬಾರಿ ಗ್ರ್ಯಾಂಡ್‌ಸ್ಲಾಮ್‌ ಚಾಂಪಿಯನ್‌ ಆಗಿದ್ದಾರೆ. ‘ಈ ಪಂದ್ಯದ ವೇಳೆ ನನಗೆ ಪ್ರೇಕ್ಷಕರಿಂದ ಅತ್ಯುತ್ತಮ ಬೆಂಬಲ ಲಭಿಸಿತು. ಅವರು ನನ್ನ ಹೆಸರನ್ನು ಜೋರಾಗಿ ಕೂಗುತ್ತಿದ್ದರು. ಅದು ನನ್ನಲ್ಲಿ ಮತ್ತಷ್ಟು ಸ್ಫೂರ್ತಿ ತುಂಬಿತು. ಇದೊಂದು ವಿಶೇಷ ಅನುಭವ’ ಎಂದು ಅವರು ನುಡಿದರು.

‘ಸುಧಾರಣೆ ಕಾಣಲು ಇನ್ನೂ ಅವಕಾಶವಿದೆ. ಅದಕ್ಕಾಗಿ ನಾನು ಹೆಚ್ಚು ಅಭ್ಯಾಸ ನಡೆಸಬೇಕು. ನಾನು ಹೆಚ್ಚು ಒತ್ತಡಕ್ಕೆ ಒಳಗಾಗಬಾರದಿತ್ತು. ಏಕೆಂದರೆ ಗ್ರ್ಯಾಂಡ್‌ ಸ್ಲಾಮ್‌ ಟೂರ್ನಿಯಲ್ಲಿ ನಾನು ಇದೇ ಮೊದಲ ಬಾರಿ ಸೆಮಿಫೈನಲ್‌ ಆಡುತ್ತಿಲ್ಲ’ ಎಂದು ಲೀ ನಾ ನಿರಾಸೆ ವ್ಯಕ್ತಪಡಿಸಿದರು.

31 ವರ್ಷ ವಯಸ್ಸಿನ ಸೆರೆನಾ ಫೈನಲ್‌ನಲ್ಲಿ ಅಜರೆಂಕಾ ಅವರ ಸವಾಲು ಎದುರಿಸಲಿದ್ದಾರೆ. 2012ರಲ್ಲಿ ಸೆರೆನಾ ಬೆಲಾರಸ್‌ನ ಈ ಆಟಗಾರ್ತಿಯನ್ನು ಮಣಿಸಿ ಚಾಂಪಿಯನ್‌ ಆಗಿದ್ದರು. ಆ ಸೇಡು ತೀರಿಸಿಕೊಳ್ಳಲು ಎರಡನೇ ಶ್ರೇಯಾಂಕದ ಅಜರೆಂಕಾ ಕಾದಿದ್ದಾರೆ. ಆದರೆ ಈ ಹೋರಾಟದಲ್ಲಿ ಸೆರೆನಾ ನೆಚ್ಚಿನ ಆಟಗಾರ್ತಿ. ಇದುವರೆಗಿನ ಪೈಪೋಟಿಯಲ್ಲಿ ಅಮೆರಿಕದ ಈ ಆಟಗಾರ್ತಿ 12–3ರಲ್ಲಿ ಮುಂದಿದ್ದಾರೆ.

ಫ್ಲಶಿಂಗ್‌ ಮಿಡೋಸ್‌ನಲ್ಲಿ ನಡೆದ ಮತ್ತೊಂದು ಸೆಮಿಫೈನಲ್‌ನಲ್ಲಿ ಅಜರೆಂಕಾ 6–4, 6–2ರಲ್ಲಿ ಇಟಲಿಯ ಫ್ಲೇವಿಯಾ ಪೆನೆಟಾ ಅವರನ್ನು ಮಣಿಸಿ ಅಂತಿಮ ಘಟ್ಟ ತಲುಪಿದರು. ಈ ಹೋರಾಟ 94 ನಿಮಿಷ ನಡೆಯಿತು.

83ನೇ ರಾ್ಯಂಕ್‌ನ ಪೆನೆಟಾ ಮೊದಲ ಸೆಟ್‌ನಲ್ಲಿ ತೀವ್ರ ಪ್ರತಿರೋಧವೊಡ್ಡಿದರು. ಆದರೆ ಎರಡನೇ ಸೆಟ್‌ನಲ್ಲಿ ಸುಲಭವಾಗಿ ಶರಣಾದರು. ಬಲಿಷ್ಠ ಸರ್ವ್‌ಗಳ ಮೂಲಕ ಮಿಂಚು ಹರಿಸಿದ ಆಸ್ಟ್ರೇಲಿಯಾ ಓಪನ್‌ ಚಾಂಪಿಯನ್‌ ಅಜರೆಂಕಾ ಎದುರಾಳಿ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು.

‘ಈ ಟೂರ್ನಿಯಲ್ಲಿ ಮತ್ತೆ ಫೈನಲ್‌ ತಲುಪಿದ್ದೇನೆ. ಇದು ಖುಷಿಯ ವಿಚಾರ. ಪ್ರಶಸ್ತಿಗಾಗಿ ಮತ್ತೊಮ್ಮೆ ಪೈಪೋಟಿ ನಡೆಸಲು ಅವಕಾಶ ಸಿಕ್ಕಿದೆ’ ಎಂದು ಅಜರೆಂಕಾ ತಿಳಿಸಿದರು.

ಮಿರ್ನಿ–ಲವೊಕೊವಾಗೆ ಪ್ರಶಸ್ತಿ: ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಬೆಲಾರಸ್‌ನ ಮ್ಯಾಕ್ಸ್‌ ಮಿರ್ನಿ ಹಾಗೂ ಜೆಕ್‌ ಗಣರಾಜ್ಯದ ಆ್ಯಂಡ್ರಿಯಾ ಲವೊಕೊವ್‌ ಚಾಂಪಿಯನ್‌ ಆದರು. ಅವರು ಫೈನಲ್‌ನಲ್ಲಿ 7–6, 6–3ರಲ್ಲಿ ಅಮೆರಿಕದ ಅಬಿಗೇಲ್‌ ಸ್ಪಿಯಾ ಹಾಗೂ ಮೆಕ್ಸಿಕಾದ ಸ್ಯಾಂಟಿಯಾಗೊ ಗೊನ್ಜಲೇಜ್‌ ಎದುರು ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT