ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋನ್ ಕಳೆದುಹೋದರೆ ಸ್ಮಾರ್ಟ್ ರಕ್ಷಣೆ

Last Updated 19 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಉದ್ಯಮಿಯೊಬ್ಬರು ವಿಮಾನ ಏರುವ ತರಾತುರಿಯಲ್ಲಿದ್ದಾಗ ತಮ್ಮ ಸ್ಮಾರ್ಟ್‌ಫೋನ್ ಕಳೆದುಕೊಂಡರು.
ಬಹಳ ಅಮೂಲ್ಯ ಮಾಹಿತಿಗಳಿದ್ದ, ಮಹತ್ವದ ಡೇಟಾ(ದತ್ತಾಂಶ)ಗಳನ್ನು ಸಂಗ್ರಹಿಸಿಟ್ಟಿದ್ದ, ಮುಖ್ಯವಾದ ನೂರಾರು ಮಂದಿಯ ಸಂಪರ್ಕದ ವಿವರಗಳಿದ್ದ ಮೊಬೈಲ್ ಫೋನ್ ಕಳೆದುಹೋಗಿದ್ದು ಅವರ ಪಾಲಿಗೆ ದೊಡ್ಡ ಸಮಸ್ಯೆಯೇ ಆಗಿದ್ದಿತು.

ವಿಮಾನ ವೇರಿ ನಿಗದಿತ ಆಸನದಲ್ಲಿ ಕೂರುವಾಗಲಷ್ಟೇ ಸ್ಮಾರ್ಟ್‌ಫೋನ್ ಕಳೆದುಕೊಂಡ ಅಂಶ ಅವರಿಗೆ ತಿಳಿದುಬಂದಿತು.
ಒಮ್ಮೆಲೇ ಆತಂಕ, ಒತ್ತಡ, ದೇಹದಲ್ಲಿ ಸಣ್ಣಗೆ ನಡುಕ... ಭಾರಿ ಬೆಲೆಯ ಸ್ಮಾರ್ಟ್‌ಫೋನ್ ಕಳೆದುಹೋಗಿದ್ದಕ್ಕಲ್ಲ. ಅದರಲ್ಲಿದ್ದ ಅಮೂಲ್ಯ ಮಾಹಿತಿ ಮತ್ತು ದತ್ತಾಂಶಗಳು ಕೈತಪ್ಪಿಹೋಗಿದ್ದಕ್ಕೆ...

ರೂ. 33,000 ಬೆಲೆಯ ಸ್ಮಾರ್ಟ್‌ಫೋನ್ ಕಳೆದುಹೋದರೂ ಅವರು ಅದಕ್ಕಿಂತಲೂ ಹೆಚ್ಚು ಬೆಲೆಯ ಇನ್ನೊಂದು ಸ್ಮಾರ್ಟ್‌ಫೋನ್ ಖರೀದಿಸಬಲ್ಲರು. ಆದರೆ, ತಮ್ಮ ಫೋನ್ ಬೇರೊಬ್ಬರ ಕೈಗೆ ಸಿಕ್ಕರೆ ಏನೇನಾಗಬಹುದೋ ಎಂಬ ಆತಂಕ ಅವರನ್ನು ಹೆಚ್ಚು ಚಿಂತಿತರನ್ನಾಗಿಸಿತ್ತು. ಅವರು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಶೇಖರಿಸಿಟ್ಟುಕೊಂಡಿದ್ದ ಬಹಳಷ್ಟು ಮುಖ್ಯ ಮಾಹಿತಿ, ತಮ್ಮ ನಿತ್ಯದ ಕಂಪೆನಿ ವಹಿವಾಟಿಗೆ ಸಂಬಂಧಿಸಿದ ದತ್ತಾಂಶಗಳು ಅವರಿಗೆ ಬಹಳ ಮುಖ್ಯವಾದವಾಗಿದ್ದವು. ಅದೆಲ್ಲವೂ ಕಿಡಿಗೇಡಿಗಳ ಕೈಗೆ ಸಿಕ್ಕರೆ ಅವರಿಗೆ ಬಹಳವಾಗಿ ಆರ್ಥಿಕ ನಷ್ಟವಾಗಬಹುದಿತ್ತು, ಅವರ ಕಂಪೆನಿಯ ವಹಿವಾಟು, ಗ್ರಾಹಕರ ಜತೆಗಿನ ನಂಟು, ವಿಶ್ವಾಸಕ್ಕೆ ಧಕ್ಕೆ ಆಗಬಹುದು...

ಇದೇ ಚಿಂತೆಯಲ್ಲಿದ್ದಾಗ ಅವರಿಗೆ ತಕ್ಷಣ ನೆನಪಾಗಿದ್ದು ತಮ್ಮ ಸ್ಮಾರ್ಟ್‌ಫೋನನ್ನು ಬ್ಲಾಕ್ ಮಾಡಿಸುವುದು. ಅಂದರೆ ಸ್ಮಾರ್ಟ್‌ಫೋನ್ ಯಾರ ಕೈಗೆ ಸಿಕ್ಕಿದ್ದರೂ ಅದರಲ್ಲಿರುವ ಮುಖ್ಯ ಮಾಹಿತಿಗಳು, ದತ್ತಾಂಶಗಳು ಅನ್ಯರ ಕಣ್ಣಿಗೆ ಬೀಳದಂತೆ ಸ್ಮಾರ್ಟ್‌ಫೋನನ್ನು ದೂರನಿಯಂತ್ರಣದ ಮೂಲಕ ಬ್ಲಾಕ್ ಮಾಡಿಸುವ ಆಲೋಚನೆ ಬಂದಿತು. ತಕ್ಷಣವೇ ಅವರು ಪಕ್ಕದಲ್ಲಿದ್ದ ಸಹ ಪ್ರಯಾಣಿಕರೊಬ್ಬರಿಂದ ಮೊಬೈಲ್ ಫೋನ್ ಕೇಳಿಪಡೆದು `ಒನ್ ಅಸಿಸ್ಟ್' ಸಂಸ್ಥೆಗೆ ಕರೆ ಮಾಡಿ ತಮ್ಮ .... ಸಂಖ್ಯೆಯ ಸ್ಮಾರ್ಟ್‌ಫೋನ್ ಕಳುವಾಗಿದೆ ಎಂದು ಮಾಹಿತಿ ನೀಡಿ ಫೋನ್ ಬ್ಲಾಕ್ ಮಾಡುವಂತೆ ಕೋರಿದರು.

ಒನ್ ಅಸಿಸ್ಟ್‌ನ ಸಿಬ್ಬಂದಿ ತಮ್ಮಲ್ಲಿ ನೋಂದಾಯಿತವಾದ ಮೊಬೈಲ್ ಫೋನ್ ಸಂಖ್ಯೆಯ ಗ್ರಾಹಕರು ಇವರೇ ಎಂಬುದನ್ನು ಹಲವು ಪ್ರಶ್ನೆಗಳ ಮೂಲಕ ಖಾತರಿಪಡಿಸಿಕೊಂಡ ನಂತರ ಕಾರ್ಯಪ್ರವೃತ್ತರಾದರು.

ಮರುಕ್ಷಣವೇ ಉದ್ಯಮಿಯು ವಿಮಾನ ನಿಲ್ದಾಣದಲ್ಲಿ ಕಳೆದುಕೊಂಡಿದ್ದ ಸ್ಮಾರ್ಟ್‌ಫೋನನ್ನು ಅಂತರ್ಜಾಲದ ಮೂಲಕವೇ ಬ್ಲಾಕ್ ಮಾಡಲಾಯಿತು. ಅಲ್ಲಿಗೆ ಆ ಫೋನ್ ಯಾರ ಕೈಗೆ ಸಿಕ್ಕರೂ ಅವರು ಅದನ್ನು ಚಾಲನೆಗೊಳಿಸಲಾಗಲೀ, ಅದರಲ್ಲಿರುವ ದತ್ತಾಂಶಗಳನ್ನು ಕದಿಯಲಾಗಲೀ ಸಾಧ್ಯವಿರದು.

ಈ ಮೇಲಿನ ಪ್ರಸಂಗವನ್ನು ವಿವರಿಸಿದವರು ಒನ್ ಅಸಿಸ್ಟ್‌ನ ಸಂಸ್ಥಾಪಕರಲ್ಲೊಬ್ಬರಾದ ಸುಬ್ರತ್ ಪಾಣಿ.
ಈ ಮೊದಲು 18 ವರ್ಷಗಳ ಕಾಲ ರಿಟೇಲ್ ಬ್ಯಾಂಕಿಂಗ್, ಗ್ರಾಹಕ ಬಳಕೆ ವಸ್ತುಗಳ ವಹಿವಾಟು ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿ ಅನುಭವ ಪಡೆದಿರುವ ಪಾಣಿ, ಗಗನ್ ಮೈನಿ ಜತೆಗೂಡಿ ರೂ. 35 ಲಕ್ಷ ಬಂಡವಾಳದಲ್ಲಿ 2011ರಲ್ಲಿ ಒನ್ ಅಸಿಸ್ಟ್ ಕನ್ಸ್ಯೂಮರ್ ಸಲ್ಯೂಷನ್ಸ್ ಪ್ರೈ.ಲಿ. ಸಂಸ್ಥೆ ಆರಂಭಿಸಿದರು.

ಒಮ್ಮೆ ಪರಿಚಿತರ ಪರ್ಸ್ ಕಳೆದುಹೋದಾಗ ಅದರಲ್ಲಿದ್ದ ಕ್ರೆಡಿಟ್‌ಕಾರ್ಡನ್ನು ಬಳಸಿ ಕಿಡಿಗೇಡಿಗಳು ಬಹಳಷ್ಟು ಕಡೆ ಷಾಪಿಂಗ್ ಮಾಡಿದ್ದರು. ಪರಿಚಿತರಿಗೆ ಲಕ್ಷ ರೂಪಾಯಿವರೆಗೂ ನಷ್ಟವಾಗಿದ್ದಿತು. ಆಗಲೇ ಈ `ಒನ್       ಅಸಿಸ್ಟ್' ಆಲೋಚನೆ ಬಂದಿತು ಎಂದು ಕಂಪೆನಿ ಆರಂಭದ ಕ್ಷಣವನ್ನು ವಿವರಿಸಿದರು ಪಾಣಿ.

`ಮೊಬೈಲ್ ಫೋನ್ ಕಳೆದುಹೋಗುವುದು ಅಥವಾ ಕಳವಾಗುವುದು ಇತ್ತೀಚಿನ ದಿನಗಳಲ್ಲಿ ಮಾಮೂಲಿ ಎಂಬಂತಾಗಿಬಿಟ್ಟಿದೆ. ಮೊಬೈಲ್ ಫೋನ್ ಎಂದರೆ ತಮ್ಮ ದೇಹದ ಒಂದು ಭಾಗವೇ ಎಂದುಕೊಂಡಿರುವವರಿಗೆ ಅದುವೇ ಕಳೆದುಹೋದರೆ ಹೇಗಾಗಬೇಡ'!

`ಎಲ್ಲ ಮೊಬೈಲ್‌ಗಳಲ್ಲಿಯೂ ಈಗ ಕ್ಯಾಮೆರಾ ಇದ್ದೇ ಇರುತ್ತದೆ. ಬಂಧು-ಮಿತ್ರರ ದೂರವಾಣಿ ಸಂಖ್ಯೆಯಷ್ಟೇ ಅಲ್ಲ, ಆಪ್ತರ ಜತೆಗಿನ, ಪ್ರವಾಸದ ಕ್ಷಣದ ಫೋಟೊಗಳು ಸಹ ಮೊಬೈಲ್‌ಗಳಲ್ಲಿ ಸಂಗ್ರಹಿಸಿಟ್ಟುಕೊಳ್ಳುವ ರೂಢಿ ಇದೆ. ಫೇಸ್‌ಬುಕ್ ಅಕೌಂಟ್, ಟ್ವಿಟರ್ ಮತ್ತು ಇ-ಮೇಲ್ ಖಾತೆಗಳೆಲ್ಲದರ ಮಾಹಿತಿಯೂ ಮೊಬೈಲ್ ಫೋನ್‌ಗಳಲ್ಲಿ ಸ್ಟೋರ್ ಆಗಿರುತ್ತದೆ'.

`ಬಹಳಷ್ಟು ಮಂದಿ ಉದ್ಯೋಗಿಗಳು ತಮ್ಮ ಕೆಲಸದ ಅಥವಾ ಉದ್ಯಮದ ಅಥವಾ ವ್ಯಾಪಾರ ವಹಿವಾಟಿನ ತಕ್ಷಣಕ್ಕೆ ಬೇಕಾಗುವ ಕೆಲವು ಮಾಹಿತಿ-ವಿವರಗಳನ್ನು ಮೊಬೈಲ್‌ನಲ್ಲಿಯೇ ಸಂಗ್ರಹಿಸಿಟ್ಟುಕೊಂಡಿರುತ್ತಾರೆ. ಅಂತಹವರಿಗೆ ಮೊಬೈಲ್ ಫೋನ್ ಕಳೆದುಹೋಗುವುದೆಂದರೆ ದೊಡ್ಡ ನಷ್ಟ ಜತೆಗೇ ಸಮಸ್ಯೆ ಎದುರಾದಂತೆಯೇ ಸರಿ. ಅಂತಹವರಿಗೆ ನೆರವಾಗಲೆಂದೇ `ಮೊಬೈಲ್ ಅಸಿಸ್ಟ್' ಎಂಬ ಸೇವೆಯನ್ನು(ರೂ. 1499 ವಾರ್ಷಿಕ ಶುಲ್ಕ) ನಮ್ಮ ಸಂಸ್ಥೆ ಆರಂಭಿಸಿದೆ' ಎನ್ನುತ್ತಾರೆ ಪಾಣಿ.

ಈ ಸೇವೆಗೆ ನೋಂದಾಯಿಸಿಕೊಂಡವರು ಒಂದೊಮ್ಮೆ ತಮ್ಮ ಮೊಬೈಲ್ ಫೋನ್ ಕಳೆದುಕೊಂಡರೆ ತಕ್ಷಣ ನಮ್ಮ ಸಂಸ್ಥೆ ಫೋನ್, ಮೆಸೇಜ್ ಅಥವಾ ಇ-ಮೇಲ್ ಮೂಲಕ ಮಾಹಿತಿ ರವಾನಿಸಿದರಾಯಿತು. ಆ ಮಾಹಿತಿಯ ಸತ್ಯಾಸತ್ಯತೆ ಖಚಿತಪಡಿಸಿಕೊಂಡು ತಕ್ಷಣವೇ ಕಳೆದುಹೋದ ಮೊಬೈಲ್ ಫೋನನ್ನು ನಮ್ಮ ಸಂಸ್ಥೆ ಬ್ಲಾಕ್ ಮಾಡಿಸುತ್ತದೆ.

ಮೊಬೈಲ್ ಫೋನ್‌ನಿಂದ ಯಾವುದೇ ಮಾಹಿತಿ, ದತ್ತಾಂಶ ಸೋರಿಕೆ ಅಥವಾ ಕಳುವಾಗದಂತೆ ತಕ್ಷಣವೇ ಈ ಕ್ರಮ ಕೈಗೊಳ್ಳಲಾಗುತ್ತದೆ(ಗ್ರಾಹಕರ ಕೋರಿಕೆ ಮೇರೆಗೆ ಎಲ್ಲ ದತ್ತಾಂಶ-ಫೋಟೊಗಳನ್ನೂ ಡಿಲಿಟ್ ಸಹ ಮಾಡಲಾಗುತ್ತದೆ). ಜತೆಗೆ ಆ ಮೊಬೈಲ್‌ನ ಸಿಮ್ ಕಾರ್ಡ್ ದುರ್ಬಳಕೆ ಆಗದಂತೆ `ರಿಮೋಟ್ ಅಲಾರ್ಮ್' ಅಪ್ಲಿಕೇಷನ್ ಚಾಲನೆಯಲ್ಲಿಡಲಾಗುತ್ತದೆ.

ಮೊಬೈಲ್ ಫೋನ್ ಸಿಕ್ಕವರು ಅದರಲ್ಲಿದ್ದ ಸಿಮ್ ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಿದರೆ ಈ ಅಲರಾಂ ಎಚ್ಚರಿಕೆ ಗಂಟೆ ಬಾರಿಸಲಾರಂಭಿಸುತ್ತದೆ. ಅಲ್ಲದೆ, ಆ ಸಿಮ್‌ನಿಂದ ಯಾವುದೇ ಕರೆ-ಮೆಸೇಜ್ ಸೇವೆ ಪಡೆದುಕೊಳ್ಳಲು ಅವಕಾಶವನ್ನೂ ನೀಡುವುದಿಲ್ಲ.

ಈ ಸೇವೆಯಡಿ ಮೊಬೈಲ್‌ನಲ್ಲಿನ ಅಮೂಲ್ಯ ಮಾಹಿತಿ ಮತ್ತು ದತ್ತಾಂಶದ ರಕ್ಷಣೆಯಷ್ಟೇ ಅಲ್ಲ, ಅವೆಲ್ಲವನ್ನೂ ತನ್ನ ಬಳಿ ಸುರಕ್ಷಿತವಾಗಿಟ್ಟುಕೊಂಡಿರುತ್ತದೆ (ಡೇಟಾ ಸಿಂಕ್ರೊನೈಸ್ ಸೌಲಭ್ಯ). ಗ್ರಾಹಕ ಹೊಸ ಫೋನ್ ಖರೀದಿಸಿದಾಗ ಹಿಂದಿನ ಹ್ಯಾಂಡ್‌ಸೆಟ್‌ನಲ್ಲಿದ್ದ ಈ ಎಲ್ಲ ಮಾಹಿತಿ ಮತ್ತು ದತ್ತಾಂಶವನ್ನೂ `ಒನ್ ಅಸಿಸ್ಟ್' ಹೊಸ ಮೊಬೈಲ್ ಫೋನ್‌ಗೆ ವರ್ಗಾಯಿಸಿಕೊಡುತ್ತದೆ ಎಂದು ಪಾಣಿ, ತಮ್ಮ ಸಂಸ್ಥೆಯಲ್ಲಿ ಲಭ್ಯವಿರುವ ಸೇವೆಯ ವಿವರ ನೀಡಿದರು.

ಇದೇ ರೀತಿಯಲ್ಲಿ `ವ್ಯಾಲೆಟ್ ಅಸಿಸ್ಟ್'(ವರ್ಷಕ್ಕೆ ರೂ. 1599 ಶುಲ್ಕ) ಸೇವೆಯೂ ಇದೆ. ಪರ್ಸ್ ಕಳುವಾದರೆ ಅದರಲ್ಲಿದ್ದ ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್, ಡೆಬಿಟ್ ಕಾರ್ಡ್, ಪಾಸ್ ಪೋರ್ಟ್ ದುರ್ಬಳಕೆ ಆಗದಂತೆ ತಡೆಯುವ ಸೇವೆ ಇದಾಗಿದೆ. `ಟ್ರಿಪ್ ಅಸಿಸ್ಟ್'(ಒಂದು ಬಾರಿಗೆ ರೂ. 599 ಶುಲ್ಕ) ಮತ್ತು `ಎವೆರಿಡೇ ಅಸಿಸ್ಟ್'(ರೂ. 2199) ಸೇವೆಗಳನ್ನೂ ಪರಿಚಯಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಡಿಡಿಡಿ.ಟ್ಞಛಿಜಿಠಿ.ಜ್ಞಿ ವೆಬ್‌ಸೈಟ್ ವೀಕ್ಷಿಸಬಹುದು ಎಂದರು ಸುಬ್ರತ್ ಪಾಣಿ.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT