ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋರ್ಸ್ ಇಂಡಿಯಾಕ್ಕೆ ನಾಲ್ಕು ಅಂಕ

ಚೈನೀಸ್ ಗ್ರ್ಯಾನ್ ಪ್ರಿ ಫಾರ್ಮುಲಾ ಒನ್: ಅಲೊನ್ಸೊಗೆ ಅಗ್ರಸ್ಥಾನದ ಸಂಭ್ರಮ
Last Updated 14 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಶಾಂಘೈ (ರಾಯಿಟರ್ಸ್‌/ ಐಎಎನ್‌ಎಸ್): ಸಹಾರಾ ಫೋರ್ಸ್ ಇಂಡಿಯಾ ತಂಡದ ಚಾಲಕ ಪೌಲ್ ಡಿ ರೆಸ್ಟಾ ಭಾನುವಾರ ಇಲ್ಲಿ ನಡೆದ ಚೈನೀಸ್ ಗ್ರ್ಯಾನ್ ಪ್ರಿ ಫಾರ್ಮುಲಾ ಒನ್ ರೇಸ್‌ನಲ್ಲಿ ಎಂಟನೇ ಸ್ಥಾನ ಪಡೆದು, ನಾಲ್ಕು ಪಾಯಿಂಟ್ ಗಿಟ್ಟಿಸಿಕೊಂಡರು.

ರೆಸ್ಟಾ ಹನ್ನೊಂದನೆಯವರಾಗಿ ಸ್ಪರ್ಧೆ ಆರಂಭಿಸಿದ್ದರು. ಆ ಬಳಿಕ ಗಮನಾರ್ಹ ಪ್ರದರ್ಶನ ತೋರಿ ಅಗ್ರ ಹತ್ತರಲ್ಲಿ ಕಾಣಿಸಿಕೊಂಡರು. ಈ ತಂಡದ ಇನ್ನೊಬ್ಬ ಚಾಲಕ ಅಡ್ರಿಯಾನ್ ಸುಟಿಲ್ ಸ್ಪರ್ಧೆ ಕೊನೆಗೊಳಿಸಲು ವಿಫಲರಾದರು. ನಾಲ್ಕನೇ ಲ್ಯಾಪ್‌ನಲ್ಲಿ ಸೌಬೆರ್ ತಂಡದ ಎಸ್ಟೆಬಾನ್ ಗುಟೆರೆಜ್ ಅವರ ಕಾರು ಸುಟಿಲ್ ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆಯಿತು. ಇದರಿಂದ ಸುಟಿಲ್ ಸ್ಪರ್ಧೆಯಿಂದ ಹಿಂದೆ ಸರಿದರು.

ಅಲೊನ್ಸೊಗೆ ಅಗ್ರಸ್ಥಾನ: ಫೆರಾರಿ ತಂಡದ ಫೆರ್ನಾಂಡೊ ಅಲೊನ್ಸೊ ಈ ರೇಸ್ ಗೆದ್ದುಕೊಂಡರು. ಫೆರಾರಿ ತಂಡಕ್ಕೆ ಪ್ರಸಕ್ತ ಋತುವಿನಲ್ಲಿ ಒಲಿದ ಮೊದಲ ಪ್ರಶಸ್ತಿ ಇದಾಗಿದೆ. 56 ಲ್ಯಾಪ್‌ಗಳ ರೇಸ್ (ಒಟ್ಟು 305 ಕಿ.ಮೀ) ಪೂರೈಸಲು ಅಲೊನ್ಸೊ ಒಂದು ಗಂಟೆ 36 ನಿಮಿಷ ಹಾಗೂ 26.945 ಸೆಕೆಂಡ್‌ಗಳನ್ನು ತೆಗೆದುಕೊಂಡರು.

ಇದಕ್ಕಿಂತ 10 ಸೆಕೆಂಡ್‌ಗಳನ್ನು ಹೆಚ್ಚುವರಿಯಾಗಿ ತೆಗೆದುಕೊಂಡು ಲೋಟಸ್ ತಂಡದ ಕಿಮಿ ರೈಕೊನೆನ್ ಎರಡನೇ ಸ್ಥಾನ ಪಡೆದರು. ಮರ್ಸಿಡಿಸ್ ತಂಡದ ಲೂಯಿಸ್ ಹ್ಯಾಮಿಲ್ಟನ್ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡರು. ಅಲೊನ್ಸೊ ಮೂರನೆಯವರಾಗಿ ಸ್ಪರ್ಧೆ ಆರಂಭಿಸಿದ್ದರು. ಆ ಬಳಿಕ ಅದ್ಭುತ ಚಾಲನಾ ಕೌಶಲ ಮೆರೆದು ಮೊದಲಿಗರಾಗಿ ಗುರಿ ತಲುಪಿದರು. ಸ್ಪೇನ್‌ನ ಈ ಚಾಲಕನಿಗೆ ಚೈನೀಸ್ ಗ್ರ್ಯಾನ್ ಪ್ರಿನಲ್ಲಿ ದೊರೆತ ಎರಡನೇ ಪ್ರಶಸ್ತಿ ಇದು. ಈ ಮೊದಲು 2005 ರಲ್ಲಿ ಅವರು ಇಲ್ಲಿ ಅಗ್ರಸ್ಥಾನ ಪಡೆದಿದ್ದರು.

ಹ್ಯಾಮಿಲ್ಟನ್ `ಪೋಲ್ ಪೊಸಿಷನ್'ನಿಂದ ಸ್ಪರ್ಧೆ ಆರಂಭಿಸಿದ್ದರೂ ಮೂರನೇ ಸ್ಥಾನಕ್ಕೆ ಕುಸಿತ ಕಂಡರು. ರೆಡ್‌ಬುಲ್ ತಂಡದ ಸೆಬಾಸ್ಟಿಯನ್ ವೆಟೆಲ್, ಮೆಕ್‌ಲಾರೆನ್‌ನ ಜೆನ್ಸನ್ ಬಟನ್, ಫೆರಾರಿಯ ಫಿಲಿಪ್ ಮಾಸಾ ಮತ್ತು ಟೊರೊ ರೊಸೊ ತಂಡದ ಡೇನಿಯಲ್ ರಿಕಾರ್ಡೊ ಕ್ರಮವಾಗಿ ನಾಲ್ಕರಿಂದ ಏಳನವರೆಗಿನ ಸ್ಥಾನ ಪಡೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT