ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಷನ್ ಸಂಯೋಜನೆಯ ಹಾದಿ...

Last Updated 16 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು ಫ್ಯಾಷನ್‌ಗೆ ಹೆಸರುವಾಸಿ. ಇಲ್ಲಿ ಫ್ಯಾಷನ್‌ ಶೋಗಳ ಅಬ್ಬರ ಕೇಳುತ್ತಲೇ ಇರುತ್ತದೆ. ಮಾಡೆಲಿಂಗ್‌ ಬದುಕಿಗೆ ಕಾಲಿಟ್ಟು ಹೊಸ ಅವಕಾಶಗಳಿಗೆ ತೆರೆದುಕೊಳ್ಳುವವರ ಸಂಖ್ಯೆಯೂ ಏರುತ್ತಿದೆ, ಜೊತೆಗೆ ಫ್ಯಾಷನ್ ಶೋಗಳನ್ನು ಸಂಯೋಜಿಸುವವರೂ ಹೆಚ್ಚುತ್ತಿದ್ದಾರೆ. ಅಂಥವರಲ್ಲಿ ಅಗ್ರಗಣ್ಯರಾಗಿ ನಿಲ್ಲುವವರು 1993ರಿಂದ ವೃತ್ತಿ ಜೀವನ ಪ್ರಾರಂಭಿಸಿ, 800ಕ್ಕೂ ಹೆಚ್ಚು ಪ್ರತಿಷ್ಠಿತ ಶೋಗಳನ್ನು ನಡೆಸಿಕೊಟ್ಟಿರುವ ಗೌತಮ್‌ ಪಾವಟೆ.

ಫ್ಯಾಷನ್‌ ಕ್ಷೇತ್ರದಲ್ಲಿನ ಗ್ಲಾಮರ್‌ ಇವರನ್ನು ಆಕರ್ಷಿಸಿದ್ದು. ಅದೂ ಅಲ್ಲದೆ ಮಾಡೆಲ್‌ ಆಗಿ ಹೆಸರು ಮಾಡಬೇಕು ಎಂಬ ಆಸೆಯಿಂದ ಈ ಕ್ಷೇತ್ರವನ್ನು ಪ್ರವೇಶಿಸಿದವರು ಇದೀಗ ಫ್ಯಾಷನ್‌ ಶೋ ಸಂಯೋಜಕರಾಗಿ ಹೆಸರು ಮಾಡಿದ್ದಾರೆ. ವೃತ್ತಿ ಬದುಕಿನ ಆಗು–ಹೋಗುಗಳ ಬಗ್ಗೆ ‘ಮೆಟ್ರೊ’ ಜೊತೆ  ಅವರು ಮಾತನಾಡಿದ್ದಾರೆ.

ಫ್ಯಾಷನ್‌ ಸಂಯೋಜಕರಿಗೆ ಇರಬೇಕಾದ ಅರ್ಹತೆ ಏನು?
ಫ್ಯಾಷನ್‌ ಭಾಷೆಯನ್ನು ಸರಿಯಾಗಿ ಅರ್ಥೈಸಿಕೊಂಡಿರಬೇಕು. ಜಾಗತಿಕ ಟ್ರೆಂಡ್‌ಗಳ ಸೂಕ್ತ ಮಾಹಿತಿ ಹೊಂದಿರಬೇಕು. ಇವು ಸಂಯೋಜಕನ ಯಶಸ್ಸನ್ನು ನಿರ್ಧರಿಸುತ್ತವೆ.

ಫ್ಯಾಷನ್‌ ಶೋ ಸಂಯೋಜನೆಯ ಪ್ರಕ್ರಿಯೆಗಳೇನು?
ಮಾಡೆಲ್‌ಗಳ ಚಲನವಲನವನ್ನು ನಿರ್ಧರಿಸುವುದು ಮೊದಲ ಕೆಲಸ. ನಾನು ಸಂಯೋಜಕ ಎನ್ನುವುದಕ್ಕಿಂತ ಶೋ ನಿರ್ದೇಶಕನಂತೆ ಕೆಲಸ ಮಾಡಲು ಹೆಚ್ಚು ಇಷ್ಟಪಡುತ್ತೇನೆ. ಸಂಯೋಜನೆ ನಿರ್ದೇಶನದ ಒಂದು ಭಾಗವಷ್ಟೆ. ಇಡೀ ಕಾರ್ಯಕ್ರಮದ ರೂಪುರೇಷೆಯನ್ನು ನಿರ್ಧರಿಸಿ ವಿನ್ಯಾಸಗೊಳಿಸುವವರು ನಾವೇ. ಆಸನಗಳ ವ್ಯವಸ್ಥೆ ಹೇಗಿರಬೇಕು, ವೇದಿಕೆ ವಿನ್ಯಾಸ ಹೇಗಿರಬೇಕು, ಮಾಡೆಲ್‌ಗಳು ಯಾವ ಪರಿಕಲ್ಪನೆ ಆಧಾರದಲ್ಲಿ ನಡೆದು ಬರಬೇಕು ಎಂಬೆಲ್ಲವನ್ನೂ ಸಂಯೋಜಕನೇ ನಿರ್ಧರಿಸಬೇಕು. ಜೊತೆಗೆ ಮೂಡ್‌ ನಿರ್ಮಾಣ ಹಾಗೂ ಶೋ ಪರಿಣಾಮಕಾರಿಯಾಗಿ ಮೂಡಿ ಬರುವಂತೆ ಮಾಡಲು ಉತ್ತಮ ಆಡಿಯೊ ವಿಶ್ಯುವಲ್‌ ಅಳವಡಿಸುವುದೂ ಮುಖ್ಯ ಕೆಲಸ.

ಈ ಕ್ಷೇತ್ರದಲ್ಲಿ ನಿಮಗೆ ಯಾವುದು ಹೆಚ್ಚು ಇಷ್ಟವಾಗುತ್ತದೆ?
ಫ್ಯಾಷನ್‌ ಎಂದರೆ ನನಗೆ ತುಂಬಾ ಪ್ರೀತಿ. ಅದೂ ಅಲ್ಲದೆ ಸಂಯೋಜನೆ ಎಂದರೆ ಒಂದು ರೀತಿಯಲ್ಲಿ ನೇರ ಜಾಹೀರಾತು ಪ್ರಸರಣ ಮಾಡಿದಂತೆ. ಆಯಾ ಕಾಲ ಹಾಗೂ ವಿನ್ಯಾಸದ ಪರಿಕಲ್ಪನೆ ಆಧರಿಸಿ ವಿಭಿನ್ನ ಸಂಯೋಜನೆ ಮಾಡುವುದು ಸವಾಲಿನ ಕೆಲಸ. ಹೀಗಾಗಿ ಹೆಚ್ಚು ಇಷ್ಟವಾಗುತ್ತದೆ.

ಮಾಡೆಲಿಂಗ್‌ ಕ್ಷೇತ್ರಕ್ಕೆ ಪದಾರ್ಪಣೆ ಮಾಡುವವರಿಂದ ಏನನ್ನು ನಿರೀಕ್ಷಿಸುತ್ತೀರಿ?
ದಿಢೀರನೆ ಇನ್ನೊಂದು ಮನಸ್ಥಿತಿಗೆ ಬದಲಾಗುವ ಸಾಮರ್ಥ್ಯ ಹೊಂದಿರಬೇಕು. ಅಂದರೆ ರನ್‌ವೇಗೆ ಕಾಲಿಟ್ಟಾಕ್ಷಣ ಆತ ಬೇರೆಯದೇ ವ್ಯಕ್ತಿ ಆಗಬೇಕು. ರನ್‌ವೇ ಪ್ರವೇಶಿಸಿದಾಗಿನಿಂದ ಕೊನೆಯ ತನಕವೂ ನಡಿಗೆಯಲ್ಲಿ ಠೀವಿ ಇರುವಂತೆ ನೋಡಿಕೊಳ್ಳಬೇಕು.

ಇಂದಿನವರಲ್ಲಿ ನೀವು ಕಂಡ ಧನಾತ್ಮಕ ಅಂಶ ಯಾವುದು?
ಹೊಸ ಮುಖಗಳಲ್ಲಿ ಉದ್ಯಮಶೀಲತೆ ಹಾಗೂ ದೃಢತೆ ಕಾಣುತ್ತಿದೆ. ಸ್ವಂತ ಶೈಲಿಯನ್ನು ರೂಢಿಸಿಕೊಂಡಿರುತ್ತಾರೆ. ಕಡಿಮೆ ಸಮಯದಲ್ಲೇ ವೃತ್ತಿಪರತೆಯನ್ನು ಮೆರೆಯುತ್ತಿರುವುದರಿಂದ ಉತ್ತಮ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಬ್ರಾಂಡ್‌ ಹಾಗೂ ಉತ್ಪನ್ನವನ್ನು ಸರಿಯಾದ ರೀತಿ ಪ್ರದರ್ಶಿಸುವ ಜಾಣ್ಮೆ ಅವರಿಗಿದೆ. ರನ್‌ವೇ ಮಾಡೆಲ್‌ಗಳೆಂದರೆ ಫ್ಯಾಷನ್‌ ಮ್ಯಾನಿಕಿನ್‌ ಥರ ಇರಬೇಕು. ಹೆಚ್ಚಿನವರು ಹಾಗೆಯೇ ಇದ್ದಾರೆ.

ಉತ್ಪನ್ನವನ್ನು ಪರಿಣಾಮಕಾರಿಯಾಗಿ ಪ್ರದರ್ಶಿಸುವಲ್ಲಿ ಸಂಯೋಜನೆ ಎಷ್ಟು ಮುಖ್ಯ?
ನಿಜ ಹೇಳಬೇಕೆಂದರೆ ಹೆಚ್ಚೇನೂ ಇಲ್ಲ. ಇಂದಿನ ವಿನ್ಯಾಸಕರಿಗೆ ಅವರಿಗೇನು ಬೇಕು ಎಂಬುದರ ಸ್ಪಷ್ಟತೆ ಇರುತ್ತದೆ. ಹೀಗಾಗಿ ಉತ್ಪನ್ನಗಳ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಳ್ಳುವುದು ಹಾಗೂ ಅರ್ಥೈಸಿಕೊಳ್ಳುವುದು ಮುಖ್ಯ. ಪ್ರತಿಯೊಬ್ಬ ವಿನ್ಯಾಸಕ ಕಲಾವಿದನಾಗಿರುತ್ತಾನೆ. ಹೀಗಾಗಿ ಶೋಗೆ ಮೊದಲು ಕಲೆ ಹಾಗೂ ವಿನ್ಯಾಸಗಳನ್ನು ಅರ್ಥೈಸಿಕೊಳ್ಳಬೇಕಾಗುತ್ತದೆ.

ಹಿನ್ನೆಲೆ ಸಂಗೀತದ ಆಯ್ಕೆ ಪ್ರಕ್ರೀಯೆ ಹೇಗೆ?
ಪ್ರದರ್ಶನದಲ್ಲಿ ಮೂಡ್‌ ನಿರ್ಮಾಣ ಮಾಡುವುದೇ ಹಿನ್ನೆಲೆ ಸಂಗೀತ. ಅನೇಕ ಸಂದರ್ಭಗಳಲ್ಲಿ ವಿಷಯಕ್ಕನುಗುಣವಾಗಿ ಹಾಡುಗಳನ್ನು ಎಡಿಟ್‌ ಮಾಡುವ ಹಾಗೂ ರೀಮಿಕ್ಸ್‌ ಮಾಡುವ ಕೆಲಸವನ್ನೂ ನಾವೇ ನಿರ್ವಹಿಸುತ್ತೇವೆ.

ಶೋ ನಡೆಯುವುದಕ್ಕೂ ಮೊದಲು ಮಾಡೆಲ್‌ಗಳಿಗೆ ಆಪ್ತ ಸಮಾಲೋಚನೆಯ ಅವಶ್ಯಕತೆ ಇರುತ್ತದೆಯೇ?
ಇಲ್ಲ. ಯಾಕೆಂದರೆ, ನಾವು ಆಯಾ ಸಂದರ್ಭಕ್ಕೆ ತಕ್ಕಂತೆ ಮಾಡೆಲ್‌ಗಳನ್ನು ಮಾಡುತ್ತೇವೆ. ಬೇಸಿಗೆ ಸಂಗ್ರಹಕ್ಕೆ ಮಂಕಾಗಿ, ಚಳಿಗಾಲದಲ್ಲಿ ಬಾಡಿದಂತೆ ಹಾಗೂ ಸಾಂಪ್ರದಾಯಿಕ ಉಡುಪುಗಳಿದ್ದಾಗ ಅವುಗಳಿಗೆ ತಕ್ಕಂತೆ ಕಾಣಿಸಿಕೊಳ್ಳಬೇಕಾಗುತ್ತದೆ. ಇಂದಿನ ಮಾಡೆಲ್‌ಗಳಿಗೆ ಅದು ಚೆನ್ನಾಗಿ ತಿಳಿದಿದೆ. ಆಯ್ಕೆಯಾಗಿಲ್ಲ ಎಂದರೆ ಬೇಸರಪಡುತ್ತಾ ಕುಳಿತುಕೊಳ್ಳುವ ಮನಸ್ಥಿತಿಯನ್ನೇನೂ ಅವರು ಬೆಳೆಸಿಕೊಂಡಿಲ್ಲ.

ನಿಮ್ಮ ಪ್ರಾರಂಭದ ವೃತ್ತಿ ಜೀವನಕ್ಕೂ ಈಗಿನ ಸನ್ನಿವೇಶಕ್ಕೂ ಏನು ವ್ಯತ್ಯಾಸವಿದೆ?
ಇಲ್ಲಿ ಸ್ಪರ್ಧೆಯೇನೂ ಬಿರುಸಾಗಿಲ್ಲ. ಅನುಭವ ಸಿಕ್ಕಂತೆ ಹಿರಿತನದ ಪಟ್ಟ ದೊರೆಯುತ್ತಾ ಹೋಗುತ್ತದೆ. ನಾನು ಸೇರಿದ ಪ್ರಾರಂಭದಲ್ಲಿ ಅದು ಮನರಂಜನೆಯ ಮಾಧ್ಯಮವಾಗಿತ್ತು. ಫ್ಯಾಷನ್ ಸಂಯೋಜನೆ ಕಷ್ಟಕರವಾಗಿತ್ತು. ಇಂದಿಗೆ ತಂತ್ರಜ್ಞಾನ ಬದಲಾಗಿದೆ ಹಾಗೂ ಬ್ರಾಂಡ್‌ ಮತ್ತು ಉತ್ಪನ್ನಗಳ ಆಧಾರದ ಮೇಲೆ ಶೋಗಳನ್ನು ಸಂಯೋಜಿಸಲಾಗುತ್ತದೆ. ಮಾರ್ಗದರ್ಶನ, ಮೂಡ್‌ ಉಳಿಯುವಂತೆ ನೋಡಿಕೊಳ್ಳುವುದಷ್ಟೇ  ಸಂಯೋಜಕನ ಜವಾಬ್ದಾರಿ.

ನೀವು ತುಂಬಾ ನೆನಪಿನಲ್ಲಿಟ್ಟುಕೊಳ್ಳುವ ಸಂದರ್ಭ?
ನಾನು ಮೊದಲ ಬಾರಿಗೆ ಮಾಡೆಲಿಂಗ್‌ ಮಾಡಿದ್ದು. ಅಲ್ಲಿ ನೃತ್ಯ ಕೂಡ ಮಾಡಬೇಕಿತ್ತು!

ಫ್ಯಾಷನ್‌ ಬಿಟ್ಟರೆ ಇನ್ಯಾವ ಕ್ಷೇತ್ರ ಇಷ್ಟ?
ನಾನು ಏರ್‌ಕ್ರಾಫ್ಟ್‌ ಮೇಂಟೇನೆನ್ಸ್‌ ಎಂಜಿನಿಯರ್‌. ಹೀಗಾಗಿ 747 ಅನ್ನು ನಿರ್ವಹಿಸುವುದು ಇಂದಿಗೂ ಇಷ್ಟ.

ನಿಮ್ಮ ಪ್ರಕಾರ ಸೌಂದರ್ಯ ಎಂದರೆ ಏನು?
ಸೌಂದರ್ಯದಿಂದ ಉಂಟಾಗುವ ಪರಿಣಾಮ ಏನು ಎಂಬುದರ ಮೇಲೆ ಸೌಂದರ್ಯ ನಿರ್ಧರಿತವಾಗುತ್ತದೆ. ಆದರೆ ಅನೇಕರು ಬಾಹ್ಯ ಸೌಂದರ್ಯದ ಬಗ್ಗೆ ಹೆಚ್ಚು ಜಾಗೃತರಾಗಿ ಮಾರುಕಟ್ಟೆಯಲ್ಲಿ ದೊರೆಯುವ ಎಲ್ಲಾ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಆತ್ಮವಿಶ್ವಾಸವೇ ಆಂತರಿಕ ಸೌಂದರ್ಯವನ್ನು ಬೆಳಗಿಸುತ್ತದೆ.
– ಸಂದರ್ಶನ: ಸುರೇಖಾ ಹೆಗಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT