ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಫ್ಯಾಷನ್ನೇ ಉಸಿರು'

Last Updated 1 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಊರು? ಹವ್ಯಾಸ?
ಕೇರಳ ನನ್ನ ಹುಟ್ಟೂರು. ಹಲವು ವರ್ಷ ಓಮನ್‌ನಲ್ಲಿದ್ದೆ. ಹೆಚ್ಚಿನ ವಿದ್ಯಾಭ್ಯಾಸ ಮುಗಿಸಿದ್ದು ಅಲ್ಲೇ. ಇತ್ತೀಚೆಗಷ್ಟೇ ಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿಯಲ್ಲಿ ಡಿಗ್ರಿ ಮುಗಿಸಿದ್ದೇನೆ. ಸದ್ಯ ವೃತ್ತಿಯಲ್ಲಿ ಫ್ರೀಲಾನ್ಸ್ ಡಿಸೈನರ್. ಪೇಂಟಿಂಗ್ ಹವ್ಯಾಸ ಮೊದಲಿನಿಂದಲೂ ಅಂಟಿಕೊಂಡ ನಂಟು. ಸಮಕಾಲೀನ ಹಾಗೂ ಶಾಸ್ತ್ರೀಯ ನೃತ್ಯಗಳನ್ನು ಅಭ್ಯಸಿಸಿದ್ದೇನೆ. 

ಮಾಡೆಲಿಂಗ್ ಕ್ಷೇತ್ರದಲ್ಲಿ ಆಸಕ್ತಿ ಹೇಗೆ?
ಎಲ್ಲವನ್ನೂ ವಿಭಿನ್ನವಾಗಿ ಮಾಡುವ ಬಯಕೆ ಮೊದಲಿನಿಂದಲೂ ಇತ್ತು. ಡಿಸೈನರ್ ಆಗಿದ್ದ ನನಗೆ ರ್‍ಯಾಂಪ್ ಮೋಹ ಬೆಳೆಯಿತು. ವಿಧವಿಧದ ಉಡುಗೆ ತೊಟ್ಟು ಮ್ಯೂಸಿಕ್‌ಗೆ ಹೆಜ್ಜೆ ಹಾಕುತ್ತಾ ಮಿಂಚುವ ಲಲನೆಯರನ್ನು ಕಂಡು ಖುಷಿ ಎನಿಸುತ್ತಿತ್ತು. ನಾನೂ ಯಾಕೆ ಆಗಬಾರದು ಎನಿಸಿತು. ಮಾಡೆಲ್ ಆದೆ. ಡಿಸೈನರ್ ಆಗಿ ಕಠಿಣ ಪರಿಶ್ರಮ, ಆತಂಕ, ಹೊಸತನವನ್ನು ಇಷ್ಟಪಟ್ಟು ಹೇಗೆ ನಿಭಾಯಿಸುತ್ತೇನೋ ಹಾಗೇ ಮಾಡೆಲ್ ಆಗಿ ರ್‍ಯಾಂಪ್ ಮೇಲೆ ನಡೆಯುವ ಖುಷಿಯನ್ನು ಅನುಭವಿಸುತ್ತೇನೆ. ವಿನ್ಯಾಸಕರು ರೂಪಿಸಿದ ದಿರಿಸು ತೊಟ್ಟು ರ್‍ಯಾಂಪ್ ಮೇಲೆ ಹೆಜ್ಜೆ ಇಟ್ಟು ಎಲ್ಲರನ್ನು ಥಟ್ಟನೆ ಆಕರ್ಷಿಸುವುದಿದೆಯಲ್ಲ, ಆ ಕ್ಷಣದ ಸಂತೋಷ ನೆನೆಸಿಕೊಂಡಷ್ಟೂ ಖುಷಿ ಕೊಡುತ್ತದೆ.

ನೀವು ಓದುವ ಫ್ಯಾಷನ್ ನಿಯತಕಾಲಿಕೆ, ಬ್ಲಾಗ್?
ವೋಗ್‌ನ ಇಂಡಿಯನ್ ಮತ್ತು ಇಟಾಲಿಯನ್ ಪುರವಣಿಯನ್ನು ತಪ್ಪದೆ ಓದುತ್ತೇನೆ. ಅದೇ ನನ್ನ ಫ್ಯಾಷನ್ ಬೈಬಲ್. ಭಾರತೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಫ್ಯಾಷನ್ ಟ್ರೆಂಡ್‌ಗಳ ಬಗ್ಗೆ ತಿಳಿಯಲು ಇದು ಉತ್ತಮ ಮಾರ್ಗ. `ದಿ ಸಾರ್ಟೋರಿಯಾಲಿಸ್ಟ್', `ಫೇಸ್ ಹಂಟರ್' ಬ್ಲಾಗ್ ನನಗಿಷ್ಟ. ಬದಲಾಗುತ್ತಿರುವ ಟ್ರೆಂಡ್ ಬಗ್ಗೆ ಮಾಹಿತಿ ಇದ್ದರೆ ಮಾತ್ರ ಫ್ಯಾಷನ್ ಲೋಕದಲ್ಲಿ ಉಳಿಗಾಲ.

ನಿಮ್ಮ ಫಿಟ್‌ನೆಸ್ ಮಂತ್ರ?
ಎಲ್ಲರೂ ಅವರವರ ದೇಹವನ್ನು ಪ್ರೀತಿಸಬೇಕು. ಹಾಗೂ ಆರೋಗ್ಯ ಲಕ್ಷಣಕ್ಕೆ ಸರಿಹೊಂದುವ ಆಹಾರ ಸೇವನೆ ಮಾಡಬೇಕು. ಆಹಾರ ಸೇವಿಸಿದ್ದಕ್ಕೆ ತಕ್ಕಮಟ್ಟಿನ ವರ್ಕ್‌ಔಟ್ ಮಾಡಬೇಕು. ಕಣ್ಣಿನ ಸುತ್ತ ಕಪ್ಪಿಡಬಾರದು ಎಂಬ ಕಾರಣಕ್ಕೆ ಬೇಗ ಮಲಗಿ ಬೇಗ ಏಳುವುದನ್ನು ರೂಢಿಸಿಕೊಂಡಿದ್ದೇನೆ.

ಯಾವ ರೀತಿಯ ಡ್ರೆಸ್ ನಿಮಗಿಷ್ಟ?
ನಾನು ತೊಡುವ ದಿರಿಸಿನಲ್ಲಿ ಸ್ವಲ್ಪ ಮಟ್ಟಿನ ಸೆಕ್ಸಿನೆಸ್ ಇರಬೇಕು. ಹೀಗಾಗಿ ಶಾರ್ಟ್ ಟಾಪ್, ಸ್ಕಾರ್ವ್ಸ್, ಲೆಗಿಂಗ್ಸ್, ನೆರಿಗೆ ಇರುವ ಮೇಲಂಗಿ, ಡೀಪ್ ನೆಕ್ ಟಾಪ್, ಶಾರ್ಟ್ ಟಾಪ್ ಧರಿಸುತ್ತೇನೆ. ಮೇಲಿಂದ ಜಾಕೆಟ್ ಕೂಡಾ ಧರಿಸುವುದು ನನ್ನ ಸ್ಟೈಲ್. ಒಟ್ಟಿನಲ್ಲಿ ದಿರಿಸು ಸೌಂದರ್ಯ ಹೆಚ್ಚಿಸುವಂತಿರಬೇಕು.

ಶಾಪಿಂಗ್ ಸ್ಥಳ?
ಜರಾ, ವೆರೊ ಮೊಡಾ, ಲೀ ಕೂಪರ್‌ನಲ್ಲಿ ದೊರೆಯುವ ಉಡುಪುಗಳು ಇಷ್ಟ. ಆದರೆ ಇವೆಲ್ಲಕ್ಕಿಂತ ಹೆಚ್ಚು ಸಮಾಧಾನ ಕೊಡೋದು ಸ್ಟ್ರೀಟ್ ಶಾಪಿಂಗ್. ಇಲ್ಲಿ ಬಹು ಆಯ್ಕೆ ಇರುತ್ತದೆ. ದೆಹಲಿ ಹಾಗೂ ಮುಂಬೈನಲ್ಲಿ ಇದು ಹೆಚ್ಚಿನ ಮಜಾ ಕೊಡುತ್ತದೆ. ಬೆಂಗಳೂರಿನಲ್ಲಿ ಆಯ್ಕೆ ಕಡಿಮೆ. ಕೆಲವೊಮ್ಮೆ ಮನಸ್ಸಿಗೆ ಒಪ್ಪುವ ವಸ್ತು ಸಿಗುವುದೇ ಇಲ್ಲ. ಅಲ್ಲದೆ ವಸ್ತುವಿಗೂ ಅದರ ಬೆಲೆಗೂ ಅಜಗಜಾಂತರ. ಬೆಂಗಳೂರು ಉತ್ತಮ ಶಾಪಿಂಗ್ ಸ್ಥಳ ನಿಜ. ಆದರೆ ಅಭಿವೃದ್ಧಿ ಹೊಂದುವುದಕ್ಕೆ ಸಾಕಷ್ಟು ಅವಕಾಶಗಳಿವೆ.

ನಿಮ್ಮ ದೃಷ್ಟಿಯಲ್ಲಿ ಫ್ಯಾಷನ್ ಎಂದರೆ?
ನನ್ನ ಉಸಿರು.

ಫ್ಯಾಷನ್ ಲೋಕದ ಒಳಿತು, ಕೆಡುಕು?
ಮಾಡೆಲ್‌ಗಳು ಯಾವಾಗಲೂ ಸಮಯಕ್ಕೆ ಆದ್ಯತೆ ಕೊಡಬೇಕು. ಸಮಯ ತಪ್ಪಿದರೆ ಆ ಕ್ಷೇತ್ರದ ನಂಟು ತಪ್ಪುವ ಅಪಾಯವಿದೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಬಾಹ್ಯ ಸೌಂದರ್ಯಕ್ಕೆ ಹೆಚ್ಚಿನ ಆದ್ಯತೆ. ಅದರ ಬಗ್ಗೆ ತುಸು ಹೆಚ್ಚೇ ಕಾಳಜಿ ಇರಬೇಕು. ಮಾಡುವ ಕೆಲಸವನ್ನು ಆಸ್ಥೆ ವಹಿಸಿ ಮಾಡಿದರೆ ಎಲ್ಲಾ ಕ್ಷೇತ್ರದಲ್ಲಿ ಯಶಸ್ಸು ಇದೆ ಎಂಬುದು ನನ್ನ ನಂಬಿಕೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT