ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಲಿಪ್‌ಕಾರ್ಟ್: ಆನ್‌ಲೈನ್ ಹೆಜ್ಜೆ ಗುರುತು

Last Updated 4 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಕಡು ನೀಲಿ ಜೀನ್ಸ್, ಅದರ ಮೇಲೆ ಗಾಢ ನೀಲಿ ಬಣ್ಣದ ಟೀ ಶರ್ಟ್. ಗಮನಸೆಳೆಯುವ ಹಳದಿ ಕಾಲರ್. ಬೆನ್ನಿಗೊಂದು ನೀಲಿ ಬ್ಯಾಗ್,  ಈ ದಿರಿಸಿನಲ್ಲಿ `ನೀಲಿ ಯೋಧ~ರಂತೆ ಕಾಣಿಸುವ  ಈ ಹುಡುಗರು ಬೆಂಗಳೂರಿನಲ್ಲಿ ಇತ್ತೀಚೆಗೆ ಗಮನಸೆಳೆಯುತ್ತಿದ್ದಾರೆ.

ಸಿಗ್ನಲ್ ಬಿದ್ದಾಗ, ರಸ್ತೆ ದಾಟುವಾಗ ಮಿಂಚಿನಂತೆ ಕಂಡು ಮರೆಯಾಗುವ ಇವರು `ಫ್ಲಿಪ್ ಕಾರ್ಟ್~ ಹುಡುಗರು. ಹೌದು. ಬೆಂಗಳೂರು ಮೂಲದ ಇ-ವಾಣಿಜ್ಯ ತಾಣ `ಪ್ಲಿಫ್‌ಕಾರ್ಟ್‌ಡಾಟ್‌ಕಾಂನ ಡೆಲಿವರಿ ಬಾಯ್ಸ ಇವರು.

`ಪ್ಲಿಫ್‌ಕಾರ್ಟ್ ಡೆಲಿವರಿ ಹುಡುಗರ ಬೈಕ್‌ಗಳನ್ನು ಹಿಂಬಾಲಿಸಿದರೆ ಅದು ಸೀದಾ ಕೋರಮಂಗಲದ ಬಳಿ ಇರುವ  ಕಟ್ಟಡವೊಂದನ್ನು (ವೇರ್‌ಹೌಸ್) ಒಂದನ್ನು ತಲುಪುತ್ತದೆ.  ಅಲ್ಲಿಗೆ ಮತ್ತೊಂದು ಕಥೆ ಪ್ರಾರಂಭವಾಗುತ್ತದೆ.

ಮೂಲ ಕಥೆಗೆ ಬರೋಣ. ಬೆಂಗಳೂರು ಮೂಲದ `ಫ್ಲಿಪ್‌ಕಾರ್ಟ್‌ಡಾಟ್‌ಕಾಂ~ (http://www.flipkart.com/) ತಾಣವನ್ನು ಹುಟ್ಟುಹಾಕಿದ್ದು ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್ (ಸಹೋದರರಲ್ಲ) ಎಂಬ ಇಬ್ಬರು `ಐಐಟಿ~ ಪದವೀಧರರು. 2007ರಲ್ಲಿ.
 
ಆಗಿನ್ನೂ ದೇಶದಲ್ಲಿ ಆನ್‌ಲೈನ್ ವಹಿವಾಟು ಕಣ್ಣುಬಿಡುತ್ತಿದ್ದ ಕಾಲ. ಆನ್‌ಲೈನ್ ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸುವುದೇ ಆಗ ದೊಡ್ಡ ಸಂಗತಿಯಾಗಿತ್ತು. ಇಂತಹ ಸಂದರ್ಭದಲ್ಲಿ ಈ ಯುವಕರಿಬ್ಬರು ಆನ್‌ಲೈನ್ ಮೂಲಕ ಪುಸ್ತಕ ವಹಿವಾಟಿಗೆ ಮುಂದಾದರು.
 
ಮುಂಚೂಣಿ ಆನ್‌ಲೈನ್ ವಹಿವಾಟು ತಾಣ `ಅಮೇಜಾನ್‌ಡಾಟ್‌ಕಾಂ~ನಲ್ಲಿ ಕೆಲ ಕಾಲ ತಂತ್ರಾಂಶ ಅಭಿವೃದ್ಧಿಕಾರರಾಗಿ ಕೆಲಸ ಮಾಡಿದ ಅನುಭವ ಇಬ್ಬರ ಬೆನ್ನಿಗಿತ್ತು. ಅದನ್ನು ಬಿಟ್ಟರೆ ಈ ಯುವ ಉದ್ಯಮಿಗಳ ಕೈಯಲ್ಲಿ ಇದ್ದದ್ದು ಭಾರತೀಯ ಗ್ರಾಹಕರ ನಾಡಿಮಿಡಿತ.

ನಾಲ್ಕು ವರ್ಷಗಳ ಹಿಂದಕ್ಕೆ ಹೋಗೋಣ. ಪುಸ್ತಕ ಪ್ರೇಮಿಗಳ ಆನ್‌ಲೈನ್ ಸಮುದಾಯ `ವಿ-ರೀಡ್~  (we­Read)  ಕುರಿತು ನೀವು ಕೇಳಿರಬಹುದು. ವಿ-ರೀಡ್ ಪ್ರಾರಂಭವಾಗಿದ್ದು 2007ರಲ್ಲಿ. ಸುಮಾರು 3.1 ದಶಲಕ್ಷ ಸಕ್ರಿಯ ಸದಸ್ಯರು `ವಿ-ರೀಡ್~ ಸಮುದಾಯದಲ್ಲಿದ್ದರು.
 
ಉತ್ತಮ ಪುಸ್ತಕಗಳ ಕುರಿತು ಆರೋಗ್ಯಕರ ಚರ್ಚೆ, ವಿಶ್ಲೇಷಣೆ, ವಿಮರ್ಶೆ ಈ ಸಮುದಾಯದಲ್ಲಿ ನಡೆಯುತ್ತಿತ್ತು. ಅಷ್ಟೇ ಅಲ್ಲ ಪುಸ್ತಕಗಳನ್ನು ಆನ್‌ಲೈನ್ ಮೂಲಕ ಓದಬಹುದಾಂತ ಸೌಲಭ್ಯವನ್ನೂ `ವಿ-ರೀಡ್~ ಅಭಿವೃದ್ಧಿಪಡಿಸಿತ್ತು. `ವಿ-ರೀಡ್~ನ ಸಾಧ್ಯತೆಗಳನ್ನು ಅರ್ಥಮಾಡಿಕೊಂಡ `ಫ್ಲಿಪ್‌ಕಾರ್ಟ್‌ಡಾಟ್‌ಕಾಂ~ ಇದನ್ನು 2010ರಲ್ಲಿ ಸ್ವಾಧೀನಪಡಿಸಿಕೊಂಡಿತು.

ಈ ಸ್ವಾಧೀನದೊಂದಿಗೆ `ಫ್ಲಿಪ್‌ಕಾರ್ಟ್~ನ ಮಾರುಕಟ್ಟೆ ಪಥವೇ ಬದಲಾಯಿತು. ಸದ್ಯ ಕಂಪೆನಿ ವಾರ್ಷಿಕ 50 ಕೋಟಿ ವಹಿವಾಟು ನಡೆಸುವ ಉದ್ಯಮ. ಪುಸ್ತಕ ಮಾತ್ರವಲ್ಲ ಸಿಡಿ, ಡಿವಿಡಿ, ವಿಡಿಯೊ ಗೇಮ್ಸ, ಕಂಪ್ಯೂಟರ್, ಲ್ಯಾಪ್‌ಟಾಪ್, ಮೊಬೈಲ್  ಸೇರಿದಂತೆ ಎಲ್ಲ ರೀತಿಯ ಆಹಾರೇತರ ಸರಕುಗಳನ್ನು ಈ `ಇ-ವಾಣಿಜ್ಯ~ ತಾಣ ಮಾರಾಟ ಮಾಡುತ್ತದೆ.

ಪ್ರತಿ ದಿನ 24 ಸಾವಿರಕ್ಕೂ ಹೆಚ್ಚು  ಸರಕುಗಳು `ಫ್ಲಿಪ್‌ಕಾರ್ಟ್~ನಲ್ಲಿ ಮೂಲಕ ಗ್ರಾಹಕರು ಖರೀದಿಸುತ್ತಾರೆ.  ರೂ.100 ಮೇಲಿರುವ ಯಾವುದೇ ಸರಕುಗಳನ್ನು ಗ್ರಾಹಕರು `ಫ್ಲಿಪ್‌ಕಾರ್ಟ್ ತಾಣದ ಮೂಲಕ ಖರೀದಿಸಬಹುದು. 3 ದಿನಗಳ ಒಳಗೆ ಮನೆ ಬಾಗಿಲಿಗೆ ಸರಕು ವಿಲೇವಾರಿಯಾಗುತ್ತದೆ.
 
ಸರಕುಗಳಲ್ಲಿ ದೋಷವಿದ್ದರೆ, 30 ದಿನಗಳ ಒಳಗೆ ವಿನಿಯಮ ಮಾಡಿಕೊಡಲಾಗುತ್ತದೆ. 24x7 ಮಾದರಿಯಲ್ಲಿ ಕಾರ್ಯನಿರ್ವಹಿಸುವ ಗ್ರಾಹಕ ಸೇವಾ ಕೇಂದ್ರ ಮತ್ತು ದೇಶದಾದ್ಯಂತ 13 ಮೆಟ್ರೊ ನಗರಗಳಲ್ಲಿ ಪೂರೈಕೆ ಸರಪಣಿಯನ್ನು ಕಂಪೆನಿ ಹೊಂದಿದೆ.

ಮಾರುಕಟ್ಟೆ ಗುಟ್ಟು: ಫ್ಲಿಪ್‌ಕಾರ್ಟ್‌ನ ಮಾರುಕಟ್ಟೆ ಗುಟ್ಟು `ಕ್ಯಾಷ್ ಆನ್ ಡೆಲಿವರಿ (ಸಿಒಡಿ). ಹೌದು. ಭಾರತೀಯ ಗ್ರಾಹಕರ ಮನೋಧರ್ಮವೇ ಅಂತದ್ದು. ಆನ್‌ಲೈನ್‌ನಲ್ಲಿ ಸರಕುಗಳನ್ನು ಖರೀದಿಸುವ ಅನೇಕರು ಹಣ ಪಾವತಿಗಾಗಿ ತಮ್ಮ  ಕ್ರೆಡಿಟ್ ಕಾರ್ಡ್ ಮಾಹಿತಿಗಳನ್ನು ನೀಡಲು ಹಿಂದೇಟು ಹಾಕುತ್ತಾರೆ. ಪಾಸ್‌ವರ್ಡ್ ಗೋಪ್ಯತೆ, ಸುರಕ್ಷತೆ ಸಮಸ್ಯೆ ಇತ್ಯಾದಿ ಕಾರಣಗಳಿಂದ ಆನ್‌ಲೈನ್‌ನಲ್ಲಿ ಸರಕುಗಳನ್ನು ಖರೀದಿಸುವ ಪ್ರವೃತ್ತಿ ಭಾರತೀಯರಲ್ಲಿ ಕಡಿಮೆ.

ಸರಕು ಖರೀದಿಸಲು ಮುಂದಾದರೂ,  ಈ ಸರಕುಗಳು ನಿಗದಿತ ಸಮಯದಲ್ಲಿ ವಿಲೇವಾರಿಯಾಗುತ್ತವೆಯೇ? ಹೀಗೆ ಬರುವ ಬರುವ ಪಾರ್ಸಲ್‌ನಲ್ಲಿ ಬೇಡಿಕೆ ಸಲ್ಲಿಸಿದ ಅಸಲಿ ಸರಕೇ ಇರುತ್ತದೆ ಎನ್ನುವುದಕ್ಕೆ ಏನು ಖಾತ್ರಿ? ಹಣ ಕೊಟ್ಟು ಮೋಸ ಹೋದರೆ ಎನ್ನುವ ಭಯ.  ಈ ಎಲ್ಲ ಸಂಗತಿಗಳನ್ನು ಅಧ್ಯಯನ ಮಾಡಿದ `ಫ್ಲಿಪ್‌ಕಾರ್ಟ್~ ಮೊದಲ ಬಾರಿಗೆ ಭಾರತದಲ್ಲಿ `ಕ್ಯಾಷ್ ಅನ್ ಡೆಲಿವರಿ~ ವ್ಯವಸ್ಥೆ  ಜಾರಿಗೆ ತಂದಿತು.

ಪಾರ್ಸ್‌ಲ್ ಸ್ವೀರಿಸಿದ ನಂತರ ಗ್ರಾಹಕ ಸರಕಿಗೆ ಹಣ ನೀಡಿದರಾಯಿತು. ಇದರಿಂದ ಸಂಸ್ಥೆಯ ವಿಶ್ವಾಸಾರ್ಹತೆ ಬೆಳೆಯಿತು. ನೋಡು ನೋಡುತ್ತಿದ್ದಂತೆ ಉದ್ಯಮವೂ ಬೆಳೆಯಿತು. ಸದ್ಯ ಪ್ರತಿ ದಿನ ನಿಮಿಷಕ್ಕೆ 10 ಸರಕಿನಂತೆ, ಫ್ಲಿಪ್‌ಕಾರ್ಟ್‌ನಲ್ಲಿ ರೂ.1.5 ಕೋಟಿ ಮೌಲ್ಯದ ಸರಕುಗಳು ಬುಕ್ ಆಗುತ್ತವೆ ಎನ್ನುತ್ತಾರೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಬನ್ಸಾಲ್.

ಹಾಗೆ ನೋಡಿದರೆ ಸಂಸ್ಥೆ ಆರಂಭದಲ್ಲಿ  ಅನುಸರಿಸಿದ್ದು, ಬಾಯಿ ಮಾತಿನ ಪ್ರಚಾರ. ಒಬ್ಬರಿಂದ ಒಬ್ಬರಿಗೆ ಬಾಯಿ ಮಾತಿನ ಮೂಲಕ ಹರಡಿ ಅಲ್ಲೊಂದು ಮಾರುಕಟ್ಟೆ ಸರಪಣಿಯೇ ನಿರ್ಮಾಣವಾಯಿತು.
 
ಸಾಮಾಜಿಕ ಸಂವಹನ ತಾಣ  ಗಳನ್ನೂ ಕಂಪೆನಿ ಅತ್ಯುತ್ತಮ ಮಾರುಕಟ್ಟೆ ವೇದಿಕೆಗಳನ್ನಾಗಿ  ಬಳಸಿಕೊಂಡಿತು. ಈಗ ಫ್ಲಿಪ್‌ಕಾರ್ಟ್  ಮುಂಚೂಣಿ ಆನ್‌ಲೈನ್ ತಾಣ `ಇ-ಬೆ~ಗೆ ತೀವ್ರ ಪೈಪೋಟಿ ಒಡ್ಡುತ್ತಿದೆ.

ಸುಮಾರು 7 ದಶಲಕ್ಷಕ್ಕೂ ಹೆಚ್ಚಿನ ಪುಸ್ತಕಗಳೇ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದೆ. 2015ರ ವೇಳೆಗೆ 1 ಶತಕೋಟಿ ಡಾಲರ್ ತಲುಪುವ ಗುರಿ ಹೊಂದಿದ್ದೆವು, ಆದರೆ, ಮುಂದಿನ ಎರಡು ವರ್ಷಗಳಲ್ಲೇ ಈ  ಗುರಿ ತಲುಪುವ ನಿರೀಕ್ಷೆ ಇದೆ ಎನ್ನುತ್ತಾರೆ  ಮುಖ್ಯ ಆಡಳಿತ ನಿರ್ವಹಣೆ  ಅಧಿಕಾರಿ ಬಿನ್ನಿ ಬನ್ಸಾಲ್.

ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ ದೇಶದ `ಇ-ವಾಣಿಜ್ಯ~ ಮಾರುಕಟ್ಟೆ ಶೇ 47ರಷ್ಟು ಪ್ರಗತಿ ದಾಖಲಿಸಲಿದ್ದು, ರೂ.46,520 ಕೋಟಿ ವಹಿವಾಟು ದಾಖಲಿಸುವ ನಿರೀಕ್ಷೆ ಇದೆ ಎನ್ನುತ್ತದೆ ಭಾರತೀಯ ಇಂಟರ್‌ನೆಟ್ ಮತ್ತು ಮೊಬೈಲ್ ಒಕ್ಕೂಟದ ವರದಿ.

ಪ್ರಯಾಣ, ಟಿಕೆಟ್ ಬುಕ್ಕಿಂಗ್ ಅನ್ನು ಹೊರತುಪಡಿಸಿದ ದೇಶದ ಆನ್‌ಲೈನ್ ಚಿಲ್ಲರೆ ವಹಿವಾಟು ಕೂಡ  ರೂ.2,700 ಕೋಟಿ ವಹಿವಾಟು ದಾಖಲಿಸಲಿದೆ. 2015ರ ಅಂತ್ಯದ ವೇಳೆಗೆ ಒಟ್ಟು ಮಾರುಕಟ್ಟೆ 10 ಶತಕೋಟಿ ಡಾಲರ್‌ಗಳಿಗೆ ಏರಿಕೆ ಕಾಣಲಿದೆ.

ದೇಶದಲ್ಲಿ ಇಂಟರ್‌ನೆಟ್ ಬಳಕೆದಾರರ ಸಂಖ್ಯೆ ಹೆಚ್ಚುತ್ತಿರುವುದು ಮತ್ತು ಬ್ರಾಡ್‌ಬ್ಯಾಂಡ್ ಸೇವಾ ವಿಸ್ತರಣೆ, 3ಜಿ ಸೌಲಭ್ಯ ಆನ್‌ಲೈನ್ ವಹಿವಾಟು ಪ್ರಗತಿಗೆ ಮುಖ್ಯ ಕಾರಣ ಎನ್ನುತ್ತಾರೆ ಸಚಿನ್ ಬನ್ಸಾಲ್. 

ಉಳಿದ  ಆನ್‌ಲೈನ್ ವಹಿವಾಟು ತಾಣಗಳಿಗೆ ಹೋಲಿಸಿದರೆ `ಫ್ಲಿಪ್‌ಕಾರ್ಟ್~ನಲ್ಲಿ ಯಾವುದೇ ಹೆಚ್ಚುವರಿ ಸೇವಾ ಶುಲ್ಕ ಇಲ್ಲ. ಉದಾಹರಣೆಗೆ ಅಮೇಜಾನ್‌ನಲ್ಲಿ ರೂ.100 ಮೌಲ್ಯದ ಪುಸ್ತಕಕ್ಕೆ ಬೇಡಿಕೆ ಸಲ್ಲಿಸಿದರೆ ರೂ.150 ಹೆಚ್ಚುವರಿ ಸೇವಾ ಶುಲ್ಕ ಪಾವತಿಸಬೇಕು. 

ಸದ್ಯ ಬೆಂಗಳೂರಿನಲ್ಲಿ ತಂತ್ರಾಂಶ ಅಭಿವೃದ್ಧಿ ಘಟಕವನ್ನು ಮಾತ್ರ ಹೊಂದಿರುವ ಪ್ರಪಂಚದ ಮುಂಚೂಣಿ ಆನ್‌ಲೈನ್ ವಹಿವಾಟು ತಾಣ `ಅಮೆಜಾನ್‌ಡಾಟ್‌ಕಾಂ~ ಕೂಡ ಭಾರತದಲ್ಲಿ ಆನ್‌ಲೈನ್ ಮಾರುಕಟ್ಟೆ ವಿಸ್ತರಿಸುವ ಗುರಿ ಯೋಜನೆ ಹೊಂದಿದ್ದು, ಹೊಸ ಉದ್ಯೋಗಿಗಳ ನೇಮಕಾತಿ ನಡೆಸುತ್ತಿದೆ ಎಂದು ಆನ್‌ಲೈನ್ ತಾಣವೊಂದು ವರದಿ ಮಾಡಿದೆ. ಅಮೇಜಾನ್ ಭಾರತದಲ್ಲಿ ಅಸ್ತಿತ್ವಕ್ಕೆ ಬಂದರೆ ಇಲ್ಲಿ ಮತ್ತೊಂದು ಮಾರುಕಟ್ಟೆ ಸಮರ ಪ್ರಾರಂಭವಾಗಲಿದೆ.

ಆನ್‌ಲೈನ್ ವಹಿವಾಟು
ಆನ್‌ಲೈನ್ ವಹಿವಾಟಿನ ಕಲ್ಪನೆ ರೂಪಗೊಂಡದ್ದು 1994ರಲ್ಲಿ. ಪಿಜ್ಜಾ ಹಟ್ ಮೊದಲ ಬಾರಿಗೆ `ಪಿಜ್ಜಾ~ ಡೆಲಿವರಿಗಾಗಿ `ಆನ್‌ಲೈನ್ ಮಾರುಕಟ್ಟೆ~ ಬಳಸಿಕೊಂಡಿತು. ಇದು ಯಶಸ್ವಿಯಾದ ಬೆನ್ನಲ್ಲೇ 1994ರಲ್ಲಿ ಜರ್ಮನಿ ಮೂಲದ ಇ-ವಾಣಿಜ್ಯ ತಾಣ ಇಂಟರ್ ಶಾಪ್ ಅಸ್ತಿತ್ವಕ್ಕೆ ಬಂತು. 

1995ರಲ್ಲಿ ಅಮೇಜಾನ್‌ಡಾಟ್‌ಕಾಂ, 1996ರಲ್ಲಿ ಇ-ಬೆ ತಾಣಗಳು ಪ್ರಾರಂಭವಾದವು. ಇಂಡಿಯಾ ವಾರ್ತಾಡಾಟ್‌ಕಾಂ, ಹೋಮ್‌ಶಾಪ್18.ಕಾಂ, ಪ್ಯೂಚರ್ ಬಜಾರ್‌ಡಾಟ್‌ಕಾಂ, ಶಾಪಿಂಗ್ ಇಂಡಿಯಾಟೈಮ್ಸ  ಮೇಕ್‌ಮೈಟ್ರಿಪ್‌ಡಾಟ್‌ಕಾಂ, ಸೇರಿದಂತೆ 15ಕ್ಕೂ ಹೆಚ್ಚು ಆನ್‌ಲೈನ್‌ವಹಿವಾಟು ತಾಣಗಳು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿವೆ.

`ಇ-ಸಂದರ್ಶನ~
* ದೇಶಿ ಆನ್‌ಲೈನ್ ಮಾರುಕಟ್ಟೆ ಬೆಳವಣಿಗೆ ಮತ್ತು ಹೊಸ ಅವಕಾಶಗಳು ಹೇಗಿವೆ?
ಇಂಟರ್‌ನೆಟ್ ಎನ್ನುವುದೇ ಜಾಗತಿಕ ಮಾರುಕಟ್ಟೆ. ಇಲ್ಲಿ ವಿಪುಲ ಅವಕಾಶಗಳಿವೆ. ನಾವೊಂದು ಸಣ್ಣ ಕಣ ಮಾತ್ರ. ಸದ್ಯ ದೇಶದಲ್ಲಿ 100 ದಶಲಕ್ಷಕ್ಕಿಂತಲೂ ಹೆಚ್ಚಿನ ಇಂಟರ್‌ನೆಟ್ ಬಳಕೆದಾರರಿದ್ದು,  10 ದಶಲಕ್ಷಕಿಂತ ಹೆಚ್ಚಿನ ಆನ್‌ಲೈನ್ ಗ್ರಾಹಕರಿದ್ದಾರೆ.
 
ಈ ಸಂಖ್ಯೆ ದ್ವಿಗುಣ ವೇಗದಲ್ಲಿ ಬೆಳೆಯುತ್ತಿದೆ. ಜನರ ಜೀವನಶೈಲಿ, ಗ್ರಾಹಕ ಮನೋಧರ್ಮ ಬದಲಾಗಿದೆ. ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ ದೇಶದ ಆನ್‌ಲೈನ್ ವಹಿವಾಟು ಶೇ 47ರಷ್ಟು ಪ್ರಗತಿ ದಾಖಲಿಸುವ ನಿರೀಕ್ಷೆ ಇದೆ. ಇಡೀ ಜಗತ್ತೇ ಭಾರತದ ಇ-ವಾಣಿಜ್ಯ ಮಾರುಕಟ್ಟೆಯತ್ತ ಕಣ್ಣು ನೆಟ್ಟಿದೆ.

* ಕ್ಯಾಶ್ ಆನ್ ಡೆಲಿವರಿ ವ್ಯವಸ್ಥೆ ಹೇಗಿದೆ?
ದೇಶದ ಶೇ 90ರಷ್ಟು ಆನ್‌ಲೈನ್‌ಚಿಲ್ಲರೆ ವಹಿವಾಟು ಕ್ಯಾಷ್ ಆನ್ ಡೆಲಿವರಿ (ಇಈ) ಮೂಲಕ ನಡೆಯುತ್ತದೆ. ಭಾರತೀಯ ಗ್ರಾಹಕರು ಕ್ರೆಡಿಟ್ ಕಾರ್ಡ್‌ಗಿಂತಲೂ ನೇರ ನಗದು ಪಾವತಿಯಲ್ಲಿ ಹೆಚ್ಚಿನ ವಿಶ್ವಾಸ  ಹೊಂದಿದ್ದಾರೆ.

ಇದು ಪಕ್ಕಾ ಭಾರತೀಯ ಗ್ರಾಹಕ ಮನೋಧರ್ಮ. `ಸಿಒಡಿ~  ಕಂಪೆನಿಯ ವಿಶ್ವಾಸಾರ್ಹತೆ ಹೆಚ್ಚಿಸಿದೆ. ರೂ.50 ಸಾವಿರ ಮೊತ್ತದ ವರೆಗಿನ ಬೇಡಿಕೆಗಳನ್ನು `ಸಿಒಡಿ~  ಮೂಲಕ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ.

* ಫ್ಲಿಪ್‌ಕಾರ್ಟ್‌ನ ಮುಂದಿನ ಯೋಜನೆಗಳು
ಮಾರುಕಟ್ಟೆ ವಿಸ್ತರಣೆ, ತಂತ್ರಜ್ಞಾನ ಅಭಿವೃದ್ಧಿ ಮತ್ತು ಪೂರೈಕೆ ಸರಪಣಿ ಬಲಪಡಿಸಲು ದೊಡ್ಡ ಮಟ್ಟದ ಹೂಡಿಕೆ ಮಾಡುವ ಯೋಜನೆ ಇದೆ. ಸದ್ಯ ಫ್ಲಿಪ್‌ಕಾರ್ಟ್‌ನಲ್ಲಿ 1 ದಶಲಕ್ಷ ನೋಂದಾಯಿತ ಗ್ರಾಹಕರಿದ್ದಾರೆ.

ಇದುವರೆಗೆ ಸುಮಾರು 2.5 ದಶಲಕ್ಷ ಸರಕುಗಳನ್ನು ಮಾರಾಟ ಮಾಡಿದ್ದೇವೆ. ಮುಂದಿನ ವರ್ಷದೊಳಗೆ ದೇಶದ 25ನಗರಗಳಿಗೆ ಪೂರೈಕೆ ಜಾಲ ವಿಸ್ತರಿಸಲಿದ್ದೇವೆ. 2008-09ರಲ್ಲಿ ರೂ.2.5 ಕೋಟಿ ಇದ್ದ ಕಂಪೆನಿ 2010-11ರ ವೇಳೆಗೆ ರೂ.50 ಕೋಟಿ ವಹಿವಾಟು ದಾಖಲಿಸಿದೆ.

`ಇ-ಬೆ~ ಸಮೀಕ್ಷೆ
ಮುಂಚೂಣಿ ಆನ್‌ಲೈನ್ ತಾಣ `ಇ-ಬೆ~ ಇತ್ತೀಚೆಗೆ ದೇಶಿ ಆನ್‌ಲೈನ್ ಗ್ರಾಹಕರ ಕುರಿತು ಹೊಸ ಸಮೀಕ್ಷೆ ವರದಿ ಬಿಡುಗೆ ಮಾಡಿದೆ. `ಇ-ಬೆ~ ಸಮೀಕ್ಷೆಯಂತೆ ದೇಶದ ಆನ್‌ಲೈನ್ ಶಾಪಿಂಗ್‌ನಲ್ಲಿ ಬೆಂಗಳೂರು ಮೂರನೆಯ ಸ್ಥಾನದಲ್ಲಿದೆ.

ನಗರದ ಗ್ರಾಹಕರು ಆನ್‌ಲೈನ್ ಮೂಲಕ ತಂಪು ಕನ್ನಡಕ, ಹೆಲ್ಮೆಟ್, ಜೀವನ ಶೈಲಿಗೆ ಸಂಬಂಧಪಟ್ಟ ಸರಕುಗಳನ್ನು ಖರೀದಿಲು ಹೆಚ್ಚು ಆಸಕ್ತಿ ಹೊಂದಿದ್ದರೆ, ಗ್ರಾಮೀಣ ಪ್ರದೇಶದ ಗ್ರಾಹಕರು ಡ್ಯುಯೆಲ್ ಸಿಮ್ ಮೊಬೈಲ್ ಖರೀಸಲು ಹೆಚ್ಚಿನ ಒಲವು ಹೊಂದಿದ್ದಾರೆ. 

 `ಇ-ಬೆ~ ದೇಶದಲ್ಲಿ  2.7 ದಶಲಕ್ಷ ನೋಂದಾಯಿತ ಗ್ರಾಕರನ್ನು ಹೊಂದಿದ್ದು, 3,296 ಸಾವಿರ ನಗರಗಳಲ್ಲಿ ಕಾರ್ಯಾಚರಣೆ ಹೊಂದಿದೆ ಎನ್ನುತ್ತಾರೆ `ಇ-ಬೆ  ಇಂಡಿಯಾ~ ತಾಣದ ಪಾಲುದಾರಿಕೆ ವಿಭಾಗದ ಮುಖ್ಯಸ್ಥೆ ದೀಪಾ ಥಾಮಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT