ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಲೆಕ್ಸ್ ತೆರವು ಕಾರ್ಯಾಚರಣೆ ; ಸದಸ್ಯರಿಂದಲೇ ಅಡ್ಡಿ!

Last Updated 15 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಹಬ್ಬ- ಹರಿದಿನ, ಉತ್ಸವಗಳು, ಸಾಂದರ್ಭಿಕ ಆಚರಣೆಗಳ ಸಂದರ್ಭದಲ್ಲಿ ಜನಪ್ರತಿನಿಧಿಗಳು ಜನತೆಗೆ ಶುಭಾಶಯ ಕೋರುವ ಫಲಕಗಳು ಎಲ್ಲೆಡೆ ರಾರಾಜಿಸುತ್ತವೆ. ರಸ್ತೆ, ವೃತ್ತ, ಜಂಕ್ಷನ್, ಉದ್ಯಾನ, ಆಟದಮೈದಾನ... ಹೀಗೆ ಕಂಡ ಕಡೆಯೆಲ್ಲಾ ಫಲಕಗಳನ್ನು ಹಾಕಲಾಗುತ್ತದೆ. ಇದಕ್ಕೆಲ್ಲಾ ಕಡಿವಾಣ ಹಾಕುವಂತೆ ಕೌನ್ಸಿಲ್ ಸಭೆಯಲ್ಲಿ ಒತ್ತಾಯಿಸುವ ಪಾಲಿಕೆ ಸದಸ್ಯರೇ ತೆರೆಮರೆಯಲ್ಲಿ ಅವುಗಳ `ರಕ್ಷಣೆ~ ಗೆ ನಿಲ್ಲುವ ಪ್ರವೃತ್ತಿ ಮುಂದುವರಿಸಿದ್ದಾರೆ!

ನಗರದ ಯಾವುದೇ ಪ್ರಮುಖ ರಸ್ತೆ, ಜಂಕ್ಷನ್‌ಗಳಲ್ಲಿ ಬೃಹತ್ ಫ್ಲೆಕ್ಸ್‌ಗಳನ್ನು ಕಾಣಬಹುದು. ರಾಜಕಾರಣಿಗಳ ಶುಭಾಶಯ ಸಂದೇಶ ಹೊತ್ತ ಫಲಕಗಳು ಎಲ್ಲೆಡೆ ಕಾಣುತ್ತವೆ. ಅದರೊಂದಿಗೆ ಸ್ಥಳೀಯ ಮುಖಂಡರು, `ಸಮಾಜ ಸೇವಕರು~, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪೈಪೋಟಿಗೆ ಬಿದ್ದವರಂತೆ ಫ್ಲೆಕ್ಸ್ ಅಳವಡಿಸಿರುವುದನ್ನು ಕಾಣಬಹುದು.

ನಗರದಲ್ಲಿ ಫ್ಲೆಕ್ಸ್‌ಗಳ ಹಾವಳಿ ಬಗ್ಗೆ ಪಾಲಿಕೆಯ ಡಿಸೆಂಬರ್ ಮಾಸಿಕ ಸಭೆಯಲ್ಲಿ ಚರ್ಚೆ ನಡೆಯಿತು. ಆಡಳಿತ ಪಕ್ಷದ ನಾಯಕ ಬಿ.ಆರ್. ನಂಜುಂಡಪ್ಪ ಅವರೇ ಈ ವಿಷಯ ಪ್ರಸ್ತಾಪಿಸಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತ ಎಂ.ಕೆ. ಶಂಕರಲಿಂಗೇಗೌಡ, ಅನಧಿಕೃತ ಫ್ಲೆಕ್ಸ್ ತೆರವು ಕಾರ್ಯ ಕೈಗೊಳ್ಳುವುದಾಗಿ ಪ್ರಕಟಿಸಿದರು. ಈ ಕಾರ್ಯಾಚರಣೆಗೆ ಸಹಕರಿಸಲು ಕೋರಿದಾಗ ಪಾಲಿಕೆ ಸದಸ್ಯರು ಬೆಂಬಲ ನೀಡುವ ಭರವಸೆ ನೀಡಿದ್ದರು.

ಆದರೆ ಫ್ಲೆಕ್ಸ್ ತೆರವು ಕಾರ್ಯ ತೀವ್ರಗೊಳ್ಳುತ್ತಿದ್ದಂತೆ ಕೆಲ ಪಾಲಿಕೆ ಸದಸ್ಯರೇ ತೆರವಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇನ್ನೂ ಕೆಲವೆಡೆ ಸಿಬ್ಬಂದಿಯ ಮೇಲೆ ಹಲ್ಲೆ ನಡೆದ ಘಟನೆಗಳೂ ಸಂಭವಿಸಿವೆ.

`ಆಯುಕ್ತರ ಸೂಚನೆ ಮೇರೆಗೆ ಫ್ಲೆಕ್ಸ್ ತೆರವು ಕಾರ್ಯ ಆರಂಭಿಸಲಾಯಿತು. ಆದರೆ ಉತ್ತರಹಳ್ಳಿ, ದಾಸರಹಳ್ಳಿಯ ಹೆಸರಘಟ್ಟ, ಬಾಣಸವಾಡಿ ಸೇರಿದಂತೆ ಹಲವೆಡೆ ಫ್ಲೆಕ್ಸ್ ತೆರವಿಗೆ ಕೆಲವರು ಅಡ್ಡಿಪಡಿಸಿದ್ದಾರೆ. ಉತ್ತರಹಳ್ಳಿ ಮತ್ತು ಹೆಸರಘಟ್ಟದಲ್ಲಿ ಸಿಬ್ಬಂದಿ ಮೇಲೆ ಹಲ್ಲೆ ಕೂಡ ನಡೆದಿದೆ. ಆದರೆ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿಲ್ಲ~ ಎಂದು ಪಾಲಿಕೆಯ ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

`ಇನ್ನೂ ಕೆಲವೆಡೆ ಒಂದು ಪಕ್ಷದ ಕಾರ್ಯಕರ್ತರು ಮತ್ತೊಂದು ಪಕ್ಷದ ಮುಖಂಡರ ಭಾವಚಿತ್ರವಿರುವ ಫ್ಲೆಕ್ಸ್‌ಗಳನ್ನು ಮೊದಲು ತೆಗೆಯುವಂತೆ ಒತ್ತಾಯಿಸುತ್ತಾರೆ. ಇದರಿಂದ ತೆರವು ಕಾರ್ಯಕ್ಕೆ ಅಡ್ಡಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪಾಲಿಕೆ ಸದಸ್ಯರು ಸಿಬ್ಬಂದಿಯ ಬೆಂಬಲಕ್ಕೆ ಬರುತ್ತಿಲ್ಲ. ಕೆಲ ಸದಸ್ಯರ ಬೆಂಬಲಿಗರೇ ತೆರವು ಕಾರ್ಯಕ್ಕೆ ಅಡ್ಡಿಪಡಿಸಿದ್ದಾರೆ~ ಎಂದು ಹೇಳಿದರು.

ಪೊಲೀಸರಿಗೆ ದೂರು: `ನಗರದಲ್ಲಿ ಅನಧಿಕೃತ ಫ್ಲೆಕ್ಸ್ ತೆರವು ಕಾರ್ಯವನ್ನು ತೀವ್ರಗೊಳಿಸುವಂತೆ ಸೂಚಿಸಲಾಗಿದೆ. ತೆರವುಗೊಳಿಸುವ ಸಿಬ್ಬಂದಿಯ ಮೇಲೆ ಯಾರಾದರೂ ಹಲ್ಲೆ ನಡೆಸಿದರೆ ತಕ್ಷಣವೇ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು. ಬಿಎಂಟಿಎಫ್ ಪೊಲೀಸರ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಬೇಕು ಎಂಬುದಾಗಿ ಸೂಚನೆ ನೀಡಲಾಗಿದೆ~ ಎಂದು ಪಾಲಿಕೆ ಆಯುಕ್ತ ಎಂ.ಕೆ. ಶಂಕಲಿಂಗೇಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT